ದೂರು, ಆದೇಶವೇ ಇಲ್ಲದೇ ಸೌಜನ್ಯ ಪರ ಹೋರಾಟಗಾರರ ವಿರುದ್ಧ ಸ್ವಯಂ ತನಿಖೆ ನಡೆಸಿದ್ದ ಎನ್. ಶಶಿಕುಮಾರ್!

ಸೌಜನ್ಯ ಪರ ಹೋರಾಟಗಾರರ ವಿರುದ್ಧ ಸ್ವಯಂ ತನಿಖೆ ನಡೆಸಿದ್ದ ಎನ್. ಶಶಿಕುಮಾರ್

ಸುಪ್ರೀಂ ಕೋರ್ಟ್ ತೀರ್ಪಿನ ‘associated’ ಪದದ ವ್ಯಾಪ್ತಿಗೆ ಎಸ್‌ಐಟಿ SIT ಮುಖ್ಯಸ್ಥರು ಒಳಪಡುತ್ತಾರೆಯೇ?

–          ನವೀನ್ ಸೂರಿಂಜೆ

ಸೌಜನ್ಯ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಲ್ಲಿ ಹೊಸ ಎಸ್​ಐಟಿ ಹೇಗಿರಬೇಕು  ಎಂದು ಸ್ಪಷ್ಟ ಆದೇಶ ನೀಡಿದೆ. ಹೊಸದಾಗಿ ರಚಿಸಲ್ಪಡುವ Special Investigation Team ಹೇಗಿರಬೇಕು, ಹಿಂದಿನ ತನಿಖೆಯೊಂದಿಗೆ ಸಂಬಂಧ ಹೊಂದಿದ್ದ ಅಧಿಕಾರಿಗಳ ಪಾತ್ರವೇನು ಮತ್ತು ಹೊಸ ತನಿಖೆಯ ಸ್ವಾತಂತ್ರ್ಯವನ್ನು ಹೇಗೆ ಕಾಪಾಡಬೇಕು ಎಂಬುದರ ಬಗ್ಗೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸ್ಪಷ್ಟವಾದ ಆದೇಶ ನೀಡಿದೆ. ಸುಪ್ರಿಂ ಕೋರ್ಟ್ ತೀರ್ಪಿನಂತೆ ರಾಜ್ಯ ಸರ್ಕಾರವು ಹೊಸ ಎಸ್​ಐಟಿ ರಚಿಸಿದೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್  ಆಗಿ  ವರ್ಗಾವಣೆಗೊಂಡು ಹುದ್ದೆ ಇಲ್ಲದೇ ಇದ್ದ ಎನ್ ಶಶಿಕುಮಾರ್ ಅವರನ್ನು ಎಸ್​ಐಟಿ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಆದರೆ ಈ ನೇಮಕಾತಿಯಲ್ಲಿ ಸುಪ್ರಿಂ ಕೋರ್ಟ್ ತೀರ್ಪನ್ನು ಉಲ್ಲಂಘಿಸಲಾಗಿದೆ.

ಸುಪ್ರಿಂ  ಕೋರ್ಟ್ ತೀರ್ಪಿನ  ಬಹುಮುಖ್ಯ ಭಾಗವೆಂದರೆ 61 ನೇ ಪ್ಯಾರಾ. ಆ ಪ್ಯಾರವೇ ನಿಜವಾದ ನೇರ ಫೈನಲ್ ತೀರ್ಪು. 61 (iv) ನೇ ಪ್ಯಾರಾ ದಲ್ಲಿ ಹೀಗೆ ಬರೆಯಲಾಗಿದೆ. ”no officer who was part of the investigation teams of the Belthangady Police Station, CID or CBI. who had been associated with the earlier investigation shall be part of the Special Investigation Team” ಅಂದರೆ, ಬೆಳ್ತಂಗಡಿ ಪೊಲೀಸ್ ಠಾಣೆ, CID ಅಥವಾ CBIಯ ಹಿಂದಿನ ತನಿಖಾ ತಂಡಗಳ ಭಾಗವಾಗಿದ್ದ ಮತ್ತು ಹಿಂದಿನ ತನಿಖೆಯೊಂದಿಗೆ ಸಂಬಂಧ ಹೊಂದಿದ್ದ ಯಾವುದೇ ಪೊಲೀಸ್ ಅಧಿಕಾರಿಯನ್ನು ಈ ವಿಶೇಷ ತನಿಖಾ ತಂಡದ (SIT) ಭಾಗವಾಗಿ ನೇಮಿಸಬಾರದು.

ಯಾವೆಲ್ಲಾ ಪೊಲೀಸ್ ಅಧಿಕಾರಿಗಳು ಹೊಸ ಎಸ್​ಐಟಿ ಭಾಗವಾಗಿರಬಾರದು ಎಂಬುದಕ್ಕೆ  ಸುಪ್ರಿಂ ಕೋರ್ಟ್ ಪೊಲೀಸರನ್ನು​ ಸ್ಪಷ್ಟವಾಗಿ ಎರಡು ಭಾಗವಾಗಿ ವಿಂಘಡಿಸಿದೆ. ಮೊದಲನೆಯ ಭಾಗ: ಈ ಹಿಂದೆ ತನಿಖೆ ನಡೆಸಿದ್ದ ಬೆಳ್ತಂಗಡಿ ಪೊಲೀಸ್ ಠಾಣೆ, CID ಅಥವಾ CBIಯ ತನಿಖಾ ತಂಡಗಳ ಭಾಗವಾಗಿದ್ದ ಪೊಲೀಸರು. ಎರಡನೆಯ ಭಾಗ : ತನಿಖೆಯೊಂದಿಗೆ ಸಂಬಂಧ ಹೊಂದಿದ್ದ ಯಾವುದೇ ಪೊಲೀಸ್ ಅಧಿಕಾರಿ. ಎರಡನೇ ವಿಭಾಗಕ್ಕೆ ಸೇರಿದ ಅಧಿಕಾರಿಗಳು ಬೆಳ್ತಂಗಡಿ ಪೊಲೀಸ್, ಸಿಐಡಿ, ಸಿಬಿಐ ತನಿಖಾ ತಂಡದಲ್ಲಿ ಅಧಿಕೃತವಾಗಿ ಕೆಲಸ ಮಾಡಿರಬೇಕಿಲ್ಲ. ಅವರು ಯಾವುದಾದರೊಂದು ರೀತಿಯಲ್ಲಿ ತನಿಖೆಗೆ ಸಂಬಂಧ ಹೊಂದಿದ್ದರೂ ಹೊಸ ಎಸ್​ಐಟಿಯಲ್ಲಿ ಸೇರುವಂತಿಲ್ಲ. 

ದೂರು, ಆದೇಶವೇ ಇಲ್ಲದೇ ಸೌಜನ್ಯ ತನಿಖೆಯ ಭಾಗವಾಗಿದ್ದ ಶಶಿಕುಮಾರ್ : ಸೌಜನ್ಯ ಕೊಲೆ ಅತ್ಯಾಚಾರದ ಪ್ರಕರಣ ಬೇರೆ ಬೇರೆ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿತ್ತು. ಮತ್ತೊಂದೆಡೆ ರಾಜ್ಯವ್ಯಾಪಿ ಪ್ರಜ್ಞಾವಂತರು ಸೌಜನ್ಯ ಪರಹೋರಾಟಕ್ಕಿಳಿದಿದ್ದರು. ಬೇರೆ ಬೇರೆ ಜಿಲ್ಲೆಗಳಿಂದ ಬೇರೆ ಬೇರೆ ಸಂಘಟನೆಯ ಪದಾಧಿಕಾರಿಗಳು ಸೌಜನ್ಯ ಮನೆಯವರನ್ನು ಭೇಟಿ ಮಾಡಿ ದೈರ್ಯ ತುಂಬುತ್ತಿದ್ದರು. ಅಪರಿಚಿತ ಸಂಘಟನೆಯ ಪದಾಧಿಕಾರಿಗಳೂ ಸೌಜನ್ಯ ಪರ ಹೋರಾಟಗಾರರನ್ನು ಭೇಟಿ ಮಾಡಿ ಬೆಂಬಲ ಸೂಚಿಸುತ್ತಿದ್ದರು. 2025 ಆಗಸ್ಟ್ 24 ರಂದು ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟೆಣ್ಣನವರ್ ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಈ  ಸಂದರ್ಭದಲ್ಲಿ “ಅಂತರಾಷ್ಟ್ರೀಯ ಮಾನವ ಹಕ್ಕುಗಳ ಭ್ರಷ್ಟಾಚಾರಿ ವಿರೋಧಿ ಸಾಮಾಜಿಕ ನ್ಯಾಯ ಆಯೋಗ” ಎಂಬ  ಸಂಘಟನೆಯ ಪದಾಧಿಕಾರಿಯಾಗಿರುವ  ಮದನ್ ಬುಗುಡಿಯವರು ಗಿರೀಶ್ ಮಟ್ಟೆಣ್ಣನವರ್​​ಗೆ ಪರಿಚಯಿಸಿಕೊಂಡರು. 

ಆ ಬಳಿಕ ಗಿರೀಶ್​ ಮಟ್ಟೆಣ್ಣನವರ್ ಮಾಧ್ಯಮದ ಜೊತೆ ಮಾತನಾಡುತ್ತಿದ್ದಾಗ ಅನೌಪಚಾರಿಕವಾಗಿ, ”ನಮ್ಮ ಜೊತೆ ಮಾನವ ಹಕ್ಕು ಆಯೋಗದ ಅಧಿಕಾರಿಯಾಗಿರುವ ಮದನ್ ಬುಗುಡಿಯವರು ಇದ್ದಾರೆ” ಎಂದು ಪರಿಚಯಿಸಿಕೊಂಡರು. ಇದೊಂದು  ಬಾಯ್ತಪ್ಪಿನಿಂದ ಆದ ತಪ್ಪು. “ಅಂತರಾಷ್ಟ್ರೀಯ ಮಾನವ ಹಕ್ಕುಗಳ ಭ್ರಷ್ಟಾಚಾರಿ ವಿರೋಧಿ ಸಾಮಾಜಿಕ ನ್ಯಾಯ ಆಯೋಗ” ಎಂಬ ಸಂಘಟನೆಯ ಹೆಸರಿನಲ್ಲಿ ‘ಮಾನವ ಹಕ್ಕು’, ‘ಆಯೋಗ’ ಎಂಬುದು ಇರುವುದರಿಂದ ಮಾತಿನ ಭರದಲ್ಲಿ ಮಾನವ ಹಕ್ಕು ಆಯೋಗದ ಅಧಿಕಾರಿ (ಪದಾಧಿಕಾರಿ ಬದಲು) ಎಂದು ಉಚ್ಚರಿಸಿದ್ದಾರೆ. 

ಇದು ಮಾಧ್ಯಮಗಳಲ್ಲಿ ಚರ್ಚೆಯ ವಿಷಯವಾಗುತ್ತಿದ್ದಂತೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾಗಿದ್ದ ಎನ್ ಶಶಿಕುಮಾರ್ ಅವರು ಸ್ವಯಂ ಪ್ರೇರಿತರಾಗಿ ಮಧ್ಯಪ್ರವೇಶಿಸುತ್ತಾರೆ. ಯಾರ ದೂರೂ ಇಲ್ಲದೇ, ಯಾವುದೇ ಸರ್ಕಾರಿ ಆದೇಶವೂ ಇಲ್ಲದೇ, ಮದನ್ ಬುಗುಡಿಯವರ ಬಗ್ಗೆ ಮತ್ತು ಸೌಜನ್ಯ ಕುಟುಂಬಕ್ಕೆ ಬೆಂಬಲ ನೀಡಿದ ಅವರ ಸಂಘಟನೆಯ  ಬಗ್ಗೆ ತನಿಖೆ ಕೈಗೆತ್ತಿಕೊಳ್ಳುತ್ತಾರೆ. ಮದನ್ ಬುಗುಡಿಯವರು ರೌಡಿಶೀಟರ್ ಆಗಿದ್ದರು/ದ್ದಾರೆ ಎಂಬ ಕಾರಣಕ್ಕಾಗಿ ಅವರು ಸಂಘಟನೆಯ ಪದಾಧಿಕಾರಿಯಾಗಿ, ಸಾಮಾಜಿಕ ಕಾರ್ಯಕರ್ತರಾಗಿ ಕೆಲಸ ಮಾಡಬಾರದೆಂದಿಲ್ಲ. ಅವರು ಸೌಜನ್ಯ ಮನೆಗೆ ಸಂಘಟನೆಯ ಪದಾಧಿಕಾರಿಯಾಗಿ ಭೇಟಿ ಮಾಡಿದ ಹಿನ್ನಲೆಯಲ್ಲಿ ಅವರ ಸಂಘಟನೆಯ ಬಗ್ಗೆ ಅಧಿಕೃತ ದೂರುಗಳಿಲ್ಲದೇ ತನಿಖೆ ನಡೆಸುವಂತಿಲ್ಲ. 

‘ಮದನ್ ಬುಗುಡಿ ಮೇಲೆ ಇಂದಿಗೂ ರೌಡಿಶೀಟ್​ ಇದೆ. ಆತ ಯಾವುದೇ ಮಾನವ ಹಕ್ಕು ಅಧಿಕಾರಿಯಲ್ಲ. ಆತನ ಸಂಘಟನೆ ಬಗ್ಗೆ ಮಾಹಿತಿ ಪಡೆಯುವ ಕೆಲಸ ಮಾಡುತ್ತೇವೆ’ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾಗಿ TV9 ವಾಹಿನಿಯು 2025 ಆಗಸ್ಟ್ 28 ರಂದು ವರದಿ ಮಾಡಿತ್ತು. ವಿಶ್ವವಾಣಿ ಪತ್ರಿಕೆಯಲ್ಲೂ ಈ ಬಗ್ಗೆ ವರದಿ ಪ್ರಕಟವಾಗಿದೆ. 

ಈ ಬಗ್ಗೆ ಮದನ್ ಬುಗುಡಿಯವರು ಪ್ರತಿಕ್ರಿಯೆ ನೀಡುತ್ತಾ, ‘ಸೌಜನ್ಯ ಕುಟುಂಬಕ್ಕೆ ನ್ಯಾಯ ಕೊಡಿಸುವ ಉದ್ದೇಶದಿಂದ ಧರ್ಮಸ್ಥಳಕ್ಕೆ ಹೋಗಿದ್ದೆ. ಆ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ನಾನು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಭ್ರಷ್ಟಾಚಾರಿ ವಿರೋಧಿ ಸಾಮಾಜಿಕ ನ್ಯಾಯ ಆಯೋಗ ಎಂಬ ಸಂಘಟನೆಯ ಪದಾಧಿಕಾರಿಯೇ ಹೊರತು, ಆಯೋಗದ ಅಧಿಕಾರಿಯಲ್ಲ’ ಎಂದು ಸ್ಪಷ್ಟಪಡಿಸಿದ್ದರು. ಇದು 2025 ಆಗಸ್ಟ್ 25 ರ ನ್ಯೂಸ್18 ವಾಹಿನಿಯಲ್ಲಿ ವರದಿಯಾಗಿತ್ತು. 

ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ಇಲ್ಲದೆ, ಯಾವುದೇ ನಿರ್ದಿಷ್ಟ ತನಿಖಾ ಆದೇಶವಿಲ್ಲದೆ, ಸೌಜನ್ಯ ಕುಟುಂಬದ ಪರವಾಗಿ ಧರ್ಮಸ್ಥಳಕ್ಕೆ ತೆರಳಿದ್ದ ವ್ಯಕ್ತಿ ಮತ್ತು ಅವರ ಸಂಘಟನೆಯ ಕುರಿತು ಪೊಲೀಸ್ ಕಮಿಷನರ್ ಮಟ್ಟದ ಅಧಿಕಾರಿಯೊಬ್ಬರು ಮಾಹಿತಿ ಸಂಗ್ರಹಿಸುವ ಕ್ರಮ ಕೈಗೊಂಡಿದ್ದರೆ, ಆ ಕ್ರಮವನ್ನು ಕೇವಲ ಸಾಮಾನ್ಯ ಪೊಲೀಸ್ ಮಾಹಿತಿ ಸಂಗ್ರಹಣೆ ಎಂದು ಪರಿಗಣಿಸಬೇಕೇ? ಅಥವಾ ಅದು ಸೌಜನ್ಯ ಪ್ರಕರಣದ ಸುತ್ತಲಿನ ಹಿಂದಿನ ತನಿಖಾ ಪ್ರಕ್ರಿಯೆಯೊಂದಿಗೆ ಒಂದು ರೀತಿಯ ಅಧಿಕೃತ ಸಂಪರ್ಕವೆಂದು ಪರಿಗಣಿಸಬಹುದೇ? 

ಶಶಿಕುಮಾರ್ ಅವರಿಗೆ ಈ ಕುರಿತು ಯಾವುದೇ ಅಧಿಕೃತ ತನಿಖಾ ಆದೇಶ ನೀಡಲಾಗಿತ್ತೇ? ಯಾರು ದೂರು ನೀಡಿದ್ದರು ? ಯಾರು ಆದೇಶ ನೀಡಿದ್ದರು? ಶಶಿಕುಮಾರ್ ನಡೆಸಿದ ತನಿಖೆಯ ಮಾಹಿತಿ ಯಾವ ಪ್ರಕರಣದ ದಾಖಲೆಗಳಲ್ಲಿ ಸೇರಿತು? ಅದು ಸೌಜನ್ಯ ಕೊಲೆ ಸಂಬಂಧಿಸಿದ ಪೊಲೀಸ್ ತನಿಖೆಯ ಭಾಗವಾಗಿತ್ತೇ? ಅಥವಾ ಅದು ಸಂಪೂರ್ಣವಾಗಿ ಬೇರೆ ರೀತಿಯ ಪೊಲೀಸ್ ಮಾಹಿತಿ ಸಂಗ್ರಹಣೆಯಾಗಿತ್ತೇ? ಈ ದಾಖಲೆಗಳು ಬಹಿರಂಗವಾಗಬೇಕಿದೆ. 

ಹಾಗಾಗಿ, ಸೌಜನ್ಯ ಪ್ರಕರಣಕ್ಕೆ ‘ಜೋಡಿಸಿಕೊಂಡಿದ್ದ’ (associated) ಎನ್ ಶಶಿಕುಮಾರ್ ಅವರು ಎಸ್​ಐಟಿ ಮುಖ್ಯಸ್ಥರಾಗುವುದು ಸುಪ್ರಿಂಕೋರ್ಟ್ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಸುಪ್ರಿಂ  ಕೋರ್ಟ್ ತೀರ್ಪಿನಲ್ಲಿ “no officer who was part of the investigation teams of the Belthangady Police Station, CID or CBI” ಎಂದು ಹೇಳಿರುವುದರಿಂದ ಬೆಳ್ತಂಗಡಿ ಪೊಲೀಸ್, ಸಿಐಡಿ, ಸಿಬಿಐ ತನಿಖಾ ತಂಡದಲ್ಲಿದ್ದ ಯಾರೂ ಕೂಡಾ ಎಸ್​ಐಟಿಯಲ್ಲಿರುವಂತಿಲ್ಲ. ಮುಂದುವರೆದು, ”who had been associated with the earlier investigation shall be part of the Special Investigation Team” ಎಂದು ಹೇಳಿರುವುದರಿಂದ ಸೌಜನ್ಯ ತನಿಖೆಯಲ್ಲಿ ದೂರು, ಆದೇಶಗಳಿಲ್ಲದೇ ಹೋರಾಟದ ಸಂಘಟನೆಯ ತನಿಖೆ ನಡೆಸಿದ್ದ ಎನ್ ಶಶಿಕುಮಾರ್ ಎಸ್​ಐಟಿಯ ಮುಖ್ಯಸ್ಥರಾಗುವಂತಿಲ್ಲ. 

ಹೊಸ SIT ಸ್ವತಂತ್ರವಾಗಿರಬೇಕು, ಹಿಂದಿನ ತನಿಖೆಯಿಂದ ಪ್ರಭಾವಿತರಾಗಬಾರದು ಎಂಬುದು ತೀರ್ಪಿನ ಒಟ್ಟಾರೆ ಆಶಯ. 61(iii)ರಲ್ಲಿ “efficient investigators” ಮತ್ತು ಆಧುನಿಕ ತನಿಖಾ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿದ ಅಧಿಕಾರಿಗಳನ್ನು ಆಯ್ಕೆ ಮಾಡಲು ಹೇಳಲಾಗಿದೆ. 61(iv)ರಲ್ಲಿ ಹಿಂದಿನ ತನಿಖಾ ತಂಡಗಳಲ್ಲಿ ಇದ್ದ ಅಧಿಕಾರಿಗಳು  ಮತ್ತು ತನಿಖೆಯ ತಂಡದಲ್ಲಿ ಇಲ್ಲದೇ ಇದ್ದರೂ ತನಿಖೆಯಲ್ಲಿ ಸಂಬಂಧ ಹೊಂದಿದ್ದ ಅಧಿಕಾರಿಗಳನ್ನು ಹೊರಗಿಡಲಾಗಿದೆ. 

 52ನೇ ಪ್ಯಾರಾದಲ್ಲಿ, fair investigation ಎನ್ನುವುದು Article 21ರ ಅಡಿಯಲ್ಲಿ ದೊರೆಯುವ ಸಾಂವಿಧಾನಿಕ ಹಕ್ಕಿನ ಭಾಗವಾಗಿದೆ ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ. ತನಿಖೆ fair, transparent ಮತ್ತು judicious ಆಗಿರಬೇಕು. ತನಿಖಾ ಸಂಸ್ಥೆ tainted ಅಥವಾ biased ರೀತಿಯಲ್ಲಿ ತನಿಖೆ ನಡೆಸಲು ಅವಕಾಶವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಇವೆಲ್ಲದರ ಉತ್ತುಂಗ ಸ್ಥಿತಿ ಪ್ಯಾರಾ 59ರಲ್ಲಿದೆ. ”17 ವರ್ಷದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ವಿವಿಧ ತನಿಖಾ ಸಂಸ್ಥೆಗಳು ತನಿಖೆ ನಡೆಸಿದ ರೀತಿಯೇ ನ್ಯಾಯಾಲಯದ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸುವಂತಿದೆ. ತನಿಖೆಯ ವಿಧಾನದಿಂದ ಸಂತ್ರಸ್ತೆಗೆ ಅನ್ಯಾಯವಾಗಿದೆ ಮತ್ತು ನೈಜ ಆರೋಪಿಗಳು ತನಿಖೆಯನ್ನು ಪ್ರಭಾವಿತಗೊಳಿಸಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ’ ಎಂದು ಹೇಳಿದೆ.

ಅದೇ ಪ್ಯಾರಾದ ಕೊನೆಯ ವಾಕ್ಯ ಇನ್ನಷ್ಟು ಮಹತ್ವದ್ದಾಗಿದೆ. “Such lax and improper investigation gives premium to the Investigating Officers who failed to do their job correctly and diligently.” ಅಂದರೆ, ಸಡಿಲ ಮತ್ತು ಅಸಮರ್ಪಕ ತನಿಖೆ ತಮ್ಮ ಕರ್ತವ್ಯವನ್ನು ಸರಿಯಾಗಿ ಹಾಗೂ ಶ್ರದ್ಧೆಯಿಂದ ನಿರ್ವಹಿಸದ ತನಿಖಾಧಿಕಾರಿಗಳಿಗೆ ‘ಪ್ರೀಮಿಯಂ’ ಒದಗಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ಹಿನ್ನೆಲೆಯಲ್ಲಿ 61(iv)ರ ನಿರ್ದೇಶನವನ್ನು ನೋಡಿದಾಗ, ಹೊಸ SITಗೆ ಹಿಂದಿನ ತನಿಖೆಯೊಂದಿಗೆ ಯಾವುದೇ ರೀತಿಯಿಂದಲೂ ಸಂಬಂಧ ಹೊಂದಿರುವ ಅಧಿಕಾರಿಗಳನ್ನು ಸೇರಿಸದಿರುವುದು ಕೇವಲ ಸಹಜ ಸೂಚನೆಯಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹೊಸ ತನಿಖೆ ಹಿಂದಿನ ತನಿಖೆಯ ತಪ್ಪುಗಳು, ಕೊರತೆಗಳು ಅಥವಾ ಅದರ ಪೂರ್ವನಿರ್ಧರಿತ ದಿಕ್ಕಿನಿಂದ ಪ್ರಭಾವಿತವಾಗಬಾರದು ಎಂಬುದೇ ಆ ನಿರ್ದೇಶನದ ಉದ್ದೇಶವೆಂದು ತೀರ್ಪಿನ ಒಟ್ಟಾರೆ ಓದಿನಿಂದ ಅರ್ಥವಾಗುತ್ತದೆ.

ಆದ್ದರಿಂದ, ಸುಪ್ರೀಂ ಕೋರ್ಟ್‌ನ 61(iv) ನಿರ್ದೇಶನದ ಅಡಿಯಲ್ಲಿ, ಹೊಸ SITಯ ಸದಸ್ಯರ ಹಿಂದಿನ ಸೇವಾ ದಾಖಲೆ, ಅವರು ಯಾವ ತನಿಖಾ ತಂಡದಲ್ಲಿ ಇದ್ದರು, ಯಾವ ಹಂತದಲ್ಲಿ ಪ್ರಕರಣದೊಂದಿಗೆ ಸಂಪರ್ಕ ಹೊಂದಿದ್ದರು ಮತ್ತು ಅವರು ಹಿಂದಿನ ತನಿಖೆಯೊಂದಿಗೆ “associated” ಆಗಿದ್ದರೇ ಎಂಬುದನ್ನು ಪರಿಶೀಲಿಸುವುದು ಅತ್ಯಂತ ಮಹತ್ವದ್ದಾಗಿದೆ.  “ದೂರು ಮತ್ತು ಆದೇಶವೇ ಇಲ್ಲದೇ ವ್ಯಾಪ್ತಿ ಮೀರಿ ಸ್ವಯಂ ಆಸಕ್ತಿಯಿಂದ ಸೌಜನ್ಯ ಪರ ಹೋರಾಟಗಾರನನ್ನು ಮತ್ತು  ಆತನ ಸಂಘಟನೆಯನ್ನು ತನಿಖೆ ಮಾಡಿದ್ದ ಎನ್ ಶಶಿಕುಮಾರ್” ರನ್ನು ಎಸ್​ಐಟಿ ಮುಖ್ಯಸ್ಥರನ್ನಾಗಿ ನೇಮಿಸಿರುವುದು ಸುಪ್ರಿಂ ಕೋರ್ಟ್ ತೀರ್ಪಿನ ಉಲ್ಲಂಘನೆಯಾಗಿದೆ.

ನವೀನ್ ಸೂರಿಂಜೆ
ನವೀನ್ ಸೂರಿಂಜೆ

Leave a Reply

Your email address will not be published.