ಕರಾವಳಿ ಜನಪ್ರತಿನಿಧಿಗಳ ನಿಷ್ಠೆ ಯಾರ ಪರ ? ದಾಖಲೆಗಳು ಹೇಳುವ ಕಾಂಗ್ರೆಸ್-ಬಿಜೆಪಿ ಮೆಡಿಕಲ್ ಮಾಫಿಯಾ ಮೈತ್ರಿ ಕತೆ !

– ನವೀನ್ ಸೂರಿಂಜೆ

ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯು ‘ಜಯದೇವದ ಹೃದ್ರೋಗ ಆಸ್ಪತ್ರೆ ಘಟಕ ಮತ್ತು ಕಿದ್ವಾಯಿಯ ಕಾನ್ಸರ್ ಆಸ್ಪತ್ರೆಯ ಘಟಕ’ ವನ್ನು ಕರಾವಳಿ ಜಿಲ್ಲೆಯಲ್ಲಿ ಪ್ರಾರಂಭಿಸಬೇಕು ಎಂಬ ಹೋರಾಟ ಕೈಗೆತ್ತಿಕೊಂಡಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಶಾಸಕರು ಮತ್ತು ಉಡುಪಿಯ ನಾಲ್ವರು ಶಾಸಕರು ಈವರೆಗೂ ರಾಜ್ಯ ಸರ್ಕಾರಕ್ಕೆ ಆಸ್ಪತ್ರೆ ಬೇಡಿಕೆಯ ಪ್ರಸ್ತಾವನೆಯನ್ನೇ ಕಳುಹಿಸಿಲ್ಲ. ಇದು ಜಿಲ್ಲಾಡಳಿತ ಮತ್ತು ಶಾಸಕರು ಮೆಡಿಕಲ್ ಮಾಫಿಯಾ ಜೊತೆ ಕೈ ಜೋಡಿಸಿರುವುದಕ್ಕೆ ಸಾಕ್ಷಿಯಾಗಿದೆ.

ಒಂದು ಕಡೆ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗಾಗಿ, ಜಯದೇವ ಹೃದ್ರೋಗ ಆಸ್ಪತ್ರೆಗಾಗಿ ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯು ಹೋರಾಟ ನಡೆಸುತ್ತಿದ್ದರೆ, ಇನ್ನೊಂದೆಡೆ ರಾಜ್ಯ ಸರ್ಕಾರವು ಬೆಳ್ತಂಗಡಿ ತಾಲೂಕು ಆಸ್ಪತ್ರೆ ಹಾಗು ಮೂಡಬಿದ್ರೆ ಸಮುದಾಯ ಆಸ್ಪತ್ರೆಯನ್ನು ಆಳ್ವಾಸ್ ಹೆಲ್ತ್​​ ಸೆಂಟರ್​ ಗೆ ವಹಿಸಿದೆ. ವಿಟ್ಲ ಸರ್ಕಾರಿ ಸಮುದಾಯ ಆಸ್ಪತ್ರೆಯನ್ನು ಯೆನಪೋಯ ವೈದ್ಯಕೀಯ ಕಾಲೇಜಿಗೆ ನೀಡಲಾಗಿದೆ. ಬಂಟ್ವಾಳ ತಾಲೂಕು ಆಸ್ಪತ್ರೆಯನ್ನು ಎ ಜೆ ವೈದ್ಯಕೀಯ ಕಾಲೇಜಿಗೆ ಒಪ್ಪಿಸುವ ಒಪ್ಪಂದ ಮಾಡಿಕೊಳ್ಳಲಾಗಿದೆ. ಕರಾವಳಿ ಜಿಲ್ಲೆಯ ಬಡವರಿಗೆ ಆಶಾಕಿರಣವಾಗಿದ್ದ ವೆನ್ಲಾಕ್ ಜಿಲ್ಲಾಸ್ಪತ್ರೆ ಈಗಾಗಲೇ ಕೆಎಂಸಿ ಪಾಲಾಗಿದೆ. ಮಾಜಿ ಆರೋಗ್ಯ ಸಚಿವರ ಕ್ಷೇತ್ರವಾದ ಉಳ್ಳಾಲದ ಸಮುದಾಯ ಆಸ್ಪತ್ರೆಯು ಯೆನಪೋಯಆಸ್ಪತ್ರೆಗೆ ವಹಿಸಲಾಗಿದೆ. ಕರಾವಳಿಯ ಪೂರ್ತಿ ಆರೋಗ್ಯ ವ್ಯವಸ್ಥೆಯನ್ನು ಖಾಸಗಿಯವರಿಗೆ ವಹಿಸಲಾಗಿದೆ.

ಕರಾವಳಿಯ ಮೆಡಿಕಲ್ ವ್ಯವಹಾರವನ್ನು ಖಾಸಗಿಯವರಿಗೆ ವಹಿಸಿರುವ ಕಾಂಗ್ರೆಸ್​ ನಿಲುವಿನ ಬಗ್ಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿಲ್ಲ. ಮೆಡಿಕಲ್ ಮಾಫಿಯಾ ವಿಷಯದಲ್ಲಿ ಎರಡೂ ಪಕ್ಷಗಳೂ ಒಂದೇ ನಿಲುವು ಹೊಂದಿದೆ. ಮೂಡಬಿದ್ರೆಯ ಸರ್ಕಾರಿ ಆಸ್ಪತ್ರೆಯನ್ನು ಆಳ್ವಾಸ್ ಹೆಲ್ತ್ ಸೆಂಟರ್ ಎಂಬ ಖಾಸಗಿ ಮೆಡಿಕಲ್/ಶಿಕ್ಷಣ ವ್ಯಾಪಾರದಂಗಡಿಗೆ ಹಸ್ತಾಂತರ ಮಾಡಿದ ಬಗ್ಗೆ ಬಿಜೆಪಿ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡುತ್ತಿಲ್ಲ. ಬೆಳ್ತಂಗಡಿ ತಾಲೂಕು ಆಸ್ಪತ್ರೆಯನ್ನು ರಾಜ್ಯ ಸರ್ಕಾರವು ಖಾಸಗಿಯವರಿಗೆ ವಹಿಸುತ್ತಿರುವ ಬಗ್ಗೆ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಸುಮ್ಮನಿದ್ದಾರೆ. ಬಂಟ್ವಾಳ ತಾಲೂಕು ಆಸ್ಪತ್ರೆ ಎಜೆ ವೈದ್ಯಕೀಯ ಸಂಶೋಧನಾ ಕೇಂದ್ರ ಎಂಬ ಖಾಸಗಿ ದುಬಾರಿ ಆಸ್ಪತ್ರೆಗೆ ಹಸ್ತಾಂತರ ಮಾಡುತ್ತಿರುವ ಕಾಂಗ್ರೆಸ್ಸಿನ ಬಗ್ಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್​ ತುಟಿಬಿಚ್ಚಿಲ್ಲ. ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್​ ರೈಯವರು ಈಗಾಗಲೇ ತನ್ನ ಕ್ಷೇತ್ರ ವ್ಯಾಪ್ತಿಯ ವಿಟ್ಲ ಸಮುದಾಯ ಆಸ್ಪತ್ರೆಯನ್ನು ಯೆನಪೋಯ ಆಸ್ಪತ್ರೆಗೆ ವಹಿಸಿರುವುದನ್ನುಬಹಿರಂಗವಾಗಿ ಸ್ವಾಗತಿಸಿದ್ದಾರೆ. ಹಿಂದೂ ಮುಸ್ಲಿಂ ವಿಷಯದಲ್ಲಿ, ಬ್ರಹ್ಮಕಲಶೋತ್ಸವ ವಿಷಯದಲ್ಲಿ ಕಚ್ಚಾಡುವ ಕಾಂಗ್ರೆಸ್ – ಬಿಜೆಪಿ ಪಕ್ಷಗಳು ಮೆಡಿಕಲ್ ಮಾಫಿಯಾ ವಿಷಯದಲ್ಲಿ ಒಂದಾಗಿವೆ.

‘2025-26ರ ಅವಧಿಯಲ್ಲಿ ಜಿಲ್ಲೆಯ ಖಾಸಗೀ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಬಾಯಿ ಕ್ಯಾನ್ಸರ್, ಸ್ತನ, ಗರ್ಭಾಶಯ ಹಾಗೂ ಇತರ ಕ್ಯಾನ್ಸರ್ ರೋಗಕ್ಕೆ ಒಳಗಾಗಿ ಚಿಕಿತ್ಸೆ ಪಡೆಯಲು ( ಹೊರ ಜಿಲ್ಲೆಯವರೂ ಸೇರಿ) ದಾಖಲಾದವರ ಸಂಖ್ಯೆ 13322 ಮಂದಿ. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 4111 ಮಂದಿಗಳಾದರೆ ಇನ್ನುಳಿದ 9211 ಮಂದಿ ಹೊರ ಜಿಲ್ಲೆಗಳಿಂದ ಬಂದವರು. ದ.ಕ ಜಿಲ್ಲೆಯ ಕ್ಯಾನ್ಸರ್ ರೋಗಿಗಳನ್ನೇ ಲೆಕ್ಕ ಹಾಕಿದರೆ 4111 ಕ್ಯಾನ್ಸರ್ ರೋಗಿಗಳಲ್ಲಿ 3421 ಮಂದಿ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿರುತ್ತಾರೆ. ಕಳೆದ 11 ತಿಂಗಳ ಅವಧಿಯಲ್ಲಿ 129 ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. 11 ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿ ಖಾಸಗೀ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಒಟ್ಟು 4052 ಮಂದಿ ಚಿಕಿತ್ಸೆ ಪಡೆದಿರುತ್ತಾರೆ. ಅದರಲ್ಲಿ 129 ಮಂದಿ ಮೃತರಾಗಿದ್ದಾರೆ. ಲಿಂಗಾನುಪಾತದಲ್ಲಿ ನೋಡಿದರೆ ಚಿಕಿತ್ಸೆ ಪಡೆದವರಲ್ಲಿ 2805 ಪುರುಷರು, 1247 ಮಹಿಳೆಯರು ಮೃತರಾದವರಲ್ಲಿ 78 ಪುರುಷರು, 51ಮಹಿಳೆಯರು’ ಎಂದು ಕರಾವಳಿಯಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಮತ್ತು ಜಯದೇವ ಹೃದ್ರೋಗ ಆಸ್ಪತ್ರೆಗಾಗಿ ಹೋರಾಟ ನಡೆಸುತ್ತಿರುವ ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯು ಲೆಕ್ಕ ನೀಡಿದೆ. ಆದರೆ ಈವರೆಗೆಗೂ ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಲೀ, ಕರಾವಳಿಯ 12 ಶಾಸಕರ ಪೈಕಿ ಯಾರೊಬ್ಬರಾಗಲೀ ರಾಜ್ಯ ಸರ್ಕಾರಕ್ಕೆ ಕಿದ್ವಾಯಿ, ಜಯದೇವ ಆಸ್ಪತ್ರೆ ಘಟಕದ ಬೇಡಿಕೆಯ ಪ್ರಸ್ತಾವನೆಯನ್ನೇ ಸಲ್ಲಿಸಿಲ್ಲ ! ಇದು ಜಿಲ್ಲಾಡಳಿತ ಮತ್ತು ಕರಾವಳಿ ಜಿಲ್ಲೆಯ ಜನಪ್ರತಿನಿಧಿಗಳ ಬದ್ಧತೆಯನ್ನು ತೋರಿಸುತ್ತದೆ. ಅವರ ನಿಷ್ಠೆ ಯಾರ ಪರವಾಗಿದೆ ಎಂಬುದನ್ನು ಸರ್ಕಾರದ ದಾಖಲೆಗಳು ಸ್ಪಷ್ಟವಾಗಿ ಹೇಳುತ್ತಿವೆ.

ಕರಾವಳಿ ಭಾಗಕ್ಕೊಂದು ಸೂಪರ್ ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆ ಬೇಕು ಎನ್ನುವುದು ಕರಾವಳಿ ಹೋರಾಟಗಾರರ ಬಹುಕಾಲದ ಬೇಡಿಕೆ. ಆದರೆ ಈವರೆಗೂ ರಾಜ್ಯ ಸರ್ಕಾರಕ್ಕೆ ಜಿಲ್ಲಾಡಳಿತ ಮತ್ತು ಜಿಲ್ಲಾ ಜನಪ್ರತಿನಿದಿಗಳಿಂದ ಪ್ರಸ್ತಾವನೆಯೇ ಕಳುಹಿಸಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವರು ಹೇಳಿದ್ದಾರೆ‌. ಕರಾವಳಿ ಎಂಟು ಪ್ಲಸ್ ನಾಲ್ಕು ಶಾಸಕರುಗಳು ಏನು ಮಾಡುತ್ತಿದ್ದಾರೆ ?

ಈಗಾಗಲೇ ಕರಾವಳಿಯಲ್ಲಿ ಶಿಕ್ಷಣ ಕ್ಷೇತ್ರ ಸಂಪೂರ್ಣ ಖಾಸಗಿಯವರ ಹಿಡಿತದಲ್ಲಿದೆ. ರಸ್ತೆಯನ್ನು ಖಾಸಗಿ ಸಂಸ್ಥೆಗಳಿಗೆ ನೀಡಿ ಟೋಲ್ ವಸೂಲಿ ಮಾಡಲಾಗುತ್ತಿದೆ. ವೆನ್ಲಾಕ್ ನಂತಹ ದೊಡ್ಡ ಆಸ್ಪತ್ರೆಯನ್ನೂ ಖಾಸಗಿಗೆ ನೀಡಲಾಗಿದೆ. ಈಗ ಸಣ್ಣ ಸಣ್ಣ ಸಮುದಾಯ ಆಸ್ಪತ್ರೆಯನ್ನೂ ಖಾಸಗಿಗೆ ವಹಿಸಲಾಗಿದೆ. ಎಲ್ಲವೂ ಖಾಸಗಿಕರಣಗೊಂಡ ನಂತರ ಕರಾವಳಿಯಲ್ಲಿ ಶಾಸಕರಿಗೇನು ಕೆಲಸ ? ಧರ್ಮಗಳ ಮಧ್ಯೆ ಬೆಂಕಿ ಹಚ್ಚುವುದೇ ?