– ನವೀನ್ ಸೂರಿಂಜೆ
ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣವು 2016ರ ಅಕ್ಟೋಬರ್ 16ರಂದು ಬೆಂಗಳೂರು ನಗರದ ಶಿವಾಜಿನಗರದ ಕಮರ್ಷಿಯಲ್ ಸ್ಟ್ರೀಟ್ ಬಳಿ ನಡೆದಿತ್ತು. ಆರ್‌ಎಸ್‌ಎಸ್ ಪಥಸಂಚಲನ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ರುದ್ರೇಶ್ ಅವರನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿದರು. ಸ್ಥಳೀಯ ಪೊಲೀಸರು ನಡೆಸುತ್ತಿದ್ದ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (NIA) ವಹಿಸಿಕೊಂಡಿದ್ದು, ಇದು ಭಯೋತ್ಪಾದನಾ ಕೃತ್ಯ ಹಾಗೂ ದೊಡ್ಡ ಸಂಚು ಎಂದು ಆರೋಪಿಸಿದೆ.
ಒಂದು ಕೊಲೆಯನ್ನು ‘ಭಯೋತ್ಪಾದನಾ ಕೃತ್ಯ’ ಎಂದು ಘೋಷಿಸಿ ಎನ್ಐಎ ಯಂತಹ ರಾಷ್ಟ್ರೀಯ ಭದ್ರತೆಗೆ ಮೀಸಲಾದ ಪಡೆಯನ್ನು ತನಿಖೆಗೆ ಬಳಸುವುದು ಸರಿಯೇ ? ಈ ರೀತಿ ಎನ್ಐಎಯನ್ನು ಬಳಸಬೇಕಾದರೆ ಭಯೋತ್ಪಾಧನೆ, ರಾಷ್ಟ್ರೀಯ ಭದ್ರತೆಗಿರುವ ಅಪಾಯಗಳ ಬಗ್ಗೆ ಸೂಕ್ತ ಪ್ರಾಥಮಿಕ ಸಾಕ್ಷ್ಯ ಬೇಕಾಗುತ್ತದೆ. ಆದರೆ ರುದ್ರೇಶ್ ಕೊಲೆ ಪ್ರಕರಣದಲ್ಲಿ ಕೊಲೆ ನಡೆಸಿದ ‘ಮಚ್ಚು’ ಇತ್ತೋ ಇಲ್ವೋ ಎಂಬ ಪ್ರಶ್ನೆ ಎದ್ದಿದೆ. ಎನ್ಐಎ ತನಿಖಾಧಿಕಾರಿಯನ್ನು ಹಿರಿಯ ವಕೀಲ ಎಸ್ ಬಾಲನ್ಅವರು ನಡೆಸಿದ ಕ್ರಾಸ್ ಎಕ್ಸಾಮಿನೇಶನ್ ನ ಸಾರಾಂಶ ಇಲ್ಲಿದೆ.
ಬಾಲನ್: ರುದ್ರೇಶ್ ಕೊಲೆಗೆ ಬಳಸಲಾದ ಮಚ್ಚು ಎಂದು ಗುರುತಿಸಿರುವ ಆಯುಧದ ಸಂಪೂರ್ಣ ಉದ್ದ, ಮರದ ಹಿಡಿಯ ಉದ್ದ ಮತ್ತು ಲೋಹದ ಭಾಗದ ಅಗಲ ನಿಮಗೆ ಚಾರ್ಜ್‌ಶೀಟ್ ನೋಡಿದರೆ ಹೇಳಲು ಸಾಧ್ಯವೇ?
ತನಿಖಾಧಿಕಾರಿ : ಹೌದು. ಸಂಪೂರ್ಣ ಉದ್ದ, ಮರದ ಭಾಗದ ಉದ್ದ ಮತ್ತು ಲೋಹದ ಭಾಗದ ಅಗಲ ಹೇಳಬಹುದು.
ಬಾಲನ್ : ಮಚ್ಚಿನ shaft length ಚಾರ್ಜ್‌ಶೀಟ್‌ನಲ್ಲಿ ಇದೆಯೇ?
ತನಿಖಾಧಿಕಾರಿ: ಇಲ್ಲ
ಬಾಲನ್ : ಮಚ್ಚುವಿನ curvature/ಆಕಾರವನ್ನು ನೀವು ದಾಖಲಿಸಿದ್ದೀರಾ?
ತನಿಖಾಧಿಕಾರಿ: ಇಲ್ಲ.
ಬಾಲನ್ : ವೈದ್ಯರು ಮಚ್ಚುವನ್ನು ಅಳೆದು ನೀಡಿದ ಯಾವುದೇ ಲಿಖಿತ ದಾಖಲೆ ಇದೆಯೇ?
ತನಿಖಾಧಿಕಾರಿ: ಇಲ್ಲ. ವೈದ್ಯರು ಅಳೆದಿದ್ದಾರೆ. ಆದರೆ ಲಿಖಿತ ದಾಖಲೆ ಇಲ್ಲ. 20.03.2017ರ ಮಹಜರ್‌ನ ವೀಡಿಯೊಗ್ರಾಫ್‌ನಲ್ಲಿ ವೈದ್ಯರು ಅಳೆಯುತ್ತಿರುವುದು ಕಾಣುತ್ತದೆ.
ಬಾಲನ್: “43 ಸೆಂ.ಮೀ. ಉದ್ದ, 13 ಸೆಂ.ಮೀ. ಮರದ ಹಿಡಿ, ಮಧ್ಯದಲ್ಲಿ 6 ಸೆಂ.ಮೀ. ಅಗಲ, ಒಂದು ಬದಿ ಹರಿತ ಹಾಗೂ ರಕ್ತದ ಕಲೆ” ಎಂದು ಚಾರ್ಜ್ ಶೀಟ್ ನಲ್ಲಿ ಬರೆಯಲಾಗಿದೆ. ಇವೆಲ್ಲ ವೈದ್ಯರು ಲಿಖಿತವಾಗಿ ನೀಡಿದ ಅಭಿಪ್ರಾಯವೇ?
ತನಿಖಾಧಿಕಾರಿ : ಇಲ್ಲ.
ಬಾಲನ್ : ಮಚ್ಚುವಿನ ಮೇಲಿನ ರಕ್ತದ ಕಲೆಗಳ ಬಗ್ಗೆ ಡಾ. ದಿಲೀಪ್ ಕುಮಾರ್ ಯಾವುದೇ ಅಭಿಪ್ರಾಯ ನೀಡಿದ್ದಾರೆಯೇ?
ತನಿಖಾಧಿಕಾರಿ : ಇಲ್ಲ.
ಬಾಲನ್ : ಮಚ್ಚು ಬಗ್ಗೆ ಅಭಿಪ್ರಾಯ ನೀಡುವಂತೆ ಡಾ ದಿಲೀಪ್ ಕುಮಾರ್ ಅವರಿಗೆ ನೀವು ಯಾವುದಾದರೂ ಪತ್ರ ಬರೆದಿದ್ದೀರಾ?
ತನಿಖಾಧಿಕಾರಿ : ಇಲ್ಲ.
ಬಾಲನ್ : ನಿಮಗಿಂತ ಹಿಂದಿನ ತನಿಖಾಧಿಕಾರಿಯಾದ್ದವರು ಕೂಡಾ ವೈದ್ಯರಿಂದ ಮಚ್ಚು ಕುರಿತು ಅಭಿಪ್ರಾಯ ಪಡೆಯಲು ಮನವಿ ಕಳುಹಿಸಿರಲಿಲ್ಲ ಅಲ್ಲವೇ?
ತನಿಖಾಧಿಕಾರಿ : ಹೌದು.
ಬಾಲನ್ : ಹಾಗಾದರೆ ಮಚ್ಚು ಈ ಗಾಯವನ್ನು ಮಾಡಬಲ್ಲದು ಎಂಬ ವೈದ್ಯರ ಅಭಿಪ್ರಾಯವನ್ನು ಲಿಖಿತವಾಗಿ ಪಡೆಯಲಾಗಿಲ್ಲವೇ?ತನಿಖಾಧಿಕಾರಿ : ಲಿಖಿತವಾಗಿ ಕೇಳಿಲ್ಲ. ವೈದ್ಯರು ಹೇಳಿಕೆ ನೀಡಿದ್ದಾರೆ.
ಬಾಲನ್ : ವೈದ್ಯರ ಹೇಳಿಕೆಯಲ್ಲಿ ಕುತ್ತಿಗೆಯ ಮುಂಭಾಗದ ಬಲಭಾಗದಲ್ಲಿ ಕುಯ್ದಿರುವ ಗಾಯ ಇದೆ ಎಂದು ಹೇಳಲಾಗಿದೆ. ಅದರ ಅಳತೆ ದಾಖಲಾಗಿದೆಯೇ?
ತನಿಖಾಧಿಕಾರಿ: ಆ ಹೇಳಿಕೆಯಲ್ಲಿ ಅಳತೆ ಇಲ್ಲ.
ಬಾಲನ್ : ಕುತ್ತಿಗೆಯ ಹಿಂಭಾಗದ ಬಲಭಾಗದ ಗಾಯದ ಅಳತೆಯೂ 161 ಹೇಳಿಕೆಯಲ್ಲಿ ಇಲ್ಲ ಅಲ್ಲವೇ?
ತನಿಖಾಧಿಕಾರಿ : ಇಲ್ಲ.
ಬಾಲನ್ : “single and continuous oblique wound” ಎಂಬ ಪದಗಳು ವೈದ್ಯರ 161 ಹೇಳಿಕೆಯಲ್ಲಿ ಇದೆಯೇ?
ತನಿಖಾಧಿಕಾರಿ : “obliquely” ಇದೆ. “single and continuous” ಇಲ್ಲ.
ಬಾಲನ್ : ಇದೇ “single and continuous” ಎಂಬ ಪದಗಳು Post-Mortem Reportನಲ್ಲೂ ಇಲ್ಲ ಅಲ್ಲವೇ?
ತನಿಖಾಧಿಕಾರಿ: ನಿಜ. ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲೂ ದಾಖಲಾಗಿಲ್ಲ.
ಬಾಲನ್ : ಹಾಗಾದರೆ ಮುಂಭಾಗದಿಂದ ಹಿಂಭಾಗದವರೆಗೆ ಇರುವ ಗಾಯ ಒಂದೇ ಗಾಯವೇ ಅಥವಾ ಎರಡು ಗಾಯವೇ ಎಂದು ವೈದ್ಯರಿಂದ ಲಿಖಿತ ಅಭಿಪ್ರಾಯ ಕೇಳಿದ್ದೀರಾ?
ತನಿಖಾಧಿಕಾರಿ : ಇಲ್ಲ.
ಬಾಲನ್: ಆ ಗಾಯದ ಅಳತೆ ಎಷ್ಟು?
ತನಿಖಾಧಿಕಾರಿ : 23 ಸೆಂ.ಮೀ. × 1 ಸೆಂ.ಮೀ.
ಬಾಲನ್ : ಗಾಯ ಎಷ್ಟು ಆಳವಾಗಿತ್ತು ಎಂದು ವೈದ್ಯರನ್ನು ಕೇಳಿದ್ದೀರಾ?
ತನಿಖಾಧಿಕಾರಿ : ಆಳದ ಬಗ್ಗೆ ಕೇಳಿಲ್ಲ. ಗಾಯ ಮಾರಕವೇ ಎಂದು ಮೌಖಿಕವಾಗಿ ಕೇಳಿ, ವೈದ್ಯರ ಹೇಳಿಕೆಯನ್ನು ದಾಖಲಿಸಿದ್ದೇನೆ.
ಬಾಲನ್ : ಮಚ್ಚು (machete) ಅಥವಾ billhook/sickle ಎಂಬುದನ್ನು ನಿರ್ಧರಿಸಲು ಯಾವುದೇ weapon expertನ ಅಭಿಪ್ರಾಯ ಪಡೆದಿದ್ದೀರಾ?
ತನಿಖಾಧಿಕಾರಿ : ಇಲ್ಲ.
ಬಾಲನ್ : ಹಾಗಾದರೆ ಮಚ್ಚು ಎಂಬ ವರ್ಗೀಕರಣಕ್ಕೆ ಯಾವುದೇ weapon expertನ ಲಿಖಿತ ಅಭಿಪ್ರಾಯ ಇಲ್ಲವೇ?
ತನಿಖಾಧಿಕಾರಿ : ಇಲ್ಲ.
ಬಾಲನ್ : ಮಚ್ಚು ಅನ್ನು ಮೊದಲಿಗೆ ವಶಪಡಿಸಿಕೊಂಡವರು ಯಾರು?
ತನಿಖಾಧಿಕಾರಿ : ರವಿಕುಮಾರ್ ಅವರು.
ಬಾಲನ್ : ಮಚ್ಚನ್ನು ಎಲ್ಲಿಂದ ಖರೀದಿಸಲಾಯಿತು ಅಥವಾ ಅದರ ಮೂಲವೇನು ಎಂಬ ಬಗ್ಗೆ ತನಿಖೆ ನಡೆದಿದೆಯೇ?
ತನಿಖಾಧಿಕಾರಿ : ಖರೀದಿಸಲಾಗಿದೆ ಎಂಬ ಮಾಹಿತಿ ಸಿಕ್ಕಿತ್ತು. ಆದರೆ ಆ ಬಗ್ಗೆ ತನಿಖೆ ನಡೆದಿಲ್ಲ.
ಬಾಲನ್ : ಮಚ್ಚುಗೆ ಯಾವುದೇ identification number ಇರಲಿಲ್ಲವೇ?
ತನಿಖಾಧಿಕಾರಿ : ಇರಲಿಲ್ಲ.
ಬಾಲನ್ : ಆ ಗುರುತು ಸಂಖ್ಯೆ ಇಲ್ಲದಿರುವ ಬಗ್ಗೆ ನೀವು ಪ್ರತ್ಯೇಕವಾಗಿ ಯಾವುದೇ ದಾಖಲೆಯನ್ನು ಮಾಡಿದ್ದೀರಾ?
ತನಿಖಾಧಿಕಾರಿ : ಇಲ್ಲ.
ಗಾಯದ ಬಗ್ಗೆ ಅನುಮಾನಗಳು
ಬಾಲನ್ : ಮೆಡಿಕೋ ಲೀಗಲ್ ರಿಜಿಸ್ಟ್ರಿ (medico-legal register)ನಲ್ಲಿ ಗಾಯದ ಅಳತೆ ಎಷ್ಟು?
ತನಿಖಾಧಿಕಾರಿ : 15 ಸೆಂ.ಮೀ. × 5 ಸೆಂ.ಮೀ.
ಬಾಲನ್ : ಪೋಸ್ಟ್ ಮಾರ್ಟಂ ರಿಪೋರ್ಟ್ (Post-Mortem Report)ನಲ್ಲಿ ಅದೇ ಗಾಯದ ಅಳತೆ ಎಷ್ಟು?
ತನಿಖಾಧಿಕಾರಿ : 23 ಸೆಂ.ಮೀ. × 1 ಸೆಂ.ಮೀ.
ಬಾಲನ್ : ಎರಡೂ ವೈದ್ಯರು MBBS ಪದವಿ ಪಡೆದವರೇ?
ತನಿಖಾಧಿಕಾರಿ : ಹೌದು. ಎರಡನೇ ವೈದ್ಯರು ಫೊರೆನ್ಸಿಲ್ ಸರ್ಜನ್ (Forensic Surgeon.)
ಬಾಲನ್ : ಡಾ. ದಿಲೀಪ್ ಕುಮಾರ್ Forensic Medicine ವಿಭಾಗದ Assistant Professor ಆಗಿದ್ದಾರೆ ಎಂಬುದು PM reportನ sealನಲ್ಲಿ ಕಾಣುತ್ತದೆಯೇ?
ತನಿಖಾಧಿಕಾರಿ : ಹೌದು.
ಬಾಲನ್ : ರುದ್ರೇಶ್ ಮೃತದೇಹವನ್ನು ಮೊದಲು Bowring Hospitalಗೆ ತೆಗೆದುಕೊಂಡು ಹೋಗಲಾಗಿತ್ತೇ?
ತನಿಖಾಧಿಕಾರಿ : ಹೌದು.
ಬಾಲನ್ : ನಂತರ Victoria Hospitalಗೆ ಸ್ಥಳಾಂತರಿಸಲಾಯಿತೇ?
ತನಿಖಾಧಿಕಾರಿ : ಹೌದು.
ಬಾಲನ್ : Bowring Hospitalನಲ್ಲಿ ಶವಾಗಾರ ಮತ್ತು ಪೋಸ್ಟ್ ಮಾರ್ಟಂ ನಡೆಸಬಲ್ಲ ವೈದ್ಯರು ಇರಲಿಲ್ಲವೇ?
ತನಿಖಾಧಿಕಾರಿ : ಅಲ್ಲಿ ಇದ್ದರೂ Victoria Hospitalನಲ್ಲಿ ಹೆಚ್ಚು ಫೊರೆನ್ಸಿಕ್ ತಜ್ಞರು ಇದ್ದಾರೆ.
ಬಾಲನ್ : ಮೃತದೇಹ Bowring Hospitalನಲ್ಲಿದ್ದಾಗ ಅದರ ಫೋಟೋ ತೆಗೆದುಕೊಳ್ಳಲಾಗಿತ್ತೇ?
ತನಿಖಾಧಿಕಾರಿ : ಇಲ್ಲ. Victoria Hospitalನಲ್ಲಿ ಫೋಟೋ ತೆಗೆದುಕೊಳ್ಳಲಾಯಿತು.
ಮೃತ ರುದ್ರೇಶ್ ಬಟ್ಟೆಯ ಬಗೆಗೂ ಅನುಮಾನ
ಬಾಲನ್ : ಮೃತ ರುದ್ರೇಶ್ ಧರಿಸಿದ್ದ ಬಟ್ಟೆಗಳ ಬಗ್ಗೆ ತನಿಖೆಯಲ್ಲಿ ಏನು ದಾಖಲಾಗಿದೆ?
ತನಿಖಾಧಿಕಾರಿ : ಬಿಳಿ ಶರ್ಟ್, ಬಿಳಿ ಬನಿಯನ್ ಮತ್ತು ಖಾಕಿ ಪ್ಯಾಂಟ್ ಧರಿಸಿದ್ದರು.
ಬಾಲನ್ : ಆ ಬಟ್ಟೆಗಳನ್ನು DNA ಪರೀಕ್ಷೆಗೆ ಕಳುಹಿಸಿದ್ದೀರಾ?
ತನಿಖಾಧಿಕಾರಿ : ಹೌದು.
ಬಾಲನ್ : ಯಾವ ದಾಖಲೆಗಳಲ್ಲಿ ಅವುಗಳ ವಿವರ ಇದೆ?
ತನಿಖಾಧಿಕಾರಿ : Ex.P.181ರಲ್ಲಿ ಐಟಂ ನಂ.3 ಮತ್ತು 5.
ಬಾಲನ್ : ಅವುಗಳ DNA ಪರೀಕ್ಷೆಯ ಫಲಿತಾಂಶ ಎಲ್ಲಿದೆ?
ತನಿಖಾಧಿಕಾರಿ : Ex.P.183ರಲ್ಲಿ.
ಬಾಲನ್ : RFSL ಮೈಸೂರಿನಲ್ಲೇ DNA ಪರೀಕ್ಷೆ ನಡೆಯಿತೇ?
ತನಿಖಾಧಿಕಾರಿ : ಇಲ್ಲ. ಆ ಸಮಯದಲ್ಲಿ ಅಲ್ಲಿ DNA ಪರೀಕ್ಷೆ ಸಾಧ್ಯವಾಗಿರಲಿಲ್ಲ. ಆದ್ದರಿಂದ ಹೈದರಾಬಾದ್ ಲ್ಯಾಬ್‌ಗೆ ಕಳುಹಿಸಲಾಯಿತು.
ಬಾಲನ್ : ರಕ್ತದ ಕಲೆ ಪುರುಷನದೋ ಅಥವಾ ಮಹಿಳೆಯದೋ ಎಂದು ಪ್ರತ್ಯೇಕವಾಗಿ ಕೇಳಿದ್ದೀರಾ?
ತನಿಖಾಧಿಕಾರಿ : DNA analysisಗೆ ಕಳುಹಿಸಲಾಗಿತ್ತು. DNA ದೊರೆತರೆ sex determination ಸಾಧ್ಯ. ಆದರೆ ಪ್ರತ್ಯೇಕವಾಗಿ “sex determination” ಎಂದು requisitionನಲ್ಲಿ ಬರೆಯಲಾಗಿಲ್ಲ.
CCTVಯಲ್ಲಿ ಮಚ್ಚು ಕಾಣಿಸಿತೇ?
ಬಾಲನ್ : ಮಚ್ಚು ಯಾವುದಾದರೂ CCTV ದೃಶ್ಯದಲ್ಲಿ ಕಾಣಿಸಿತೇ?
ತನಿಖಾಧಿಕಾರಿ : ಕಂಡುಬಂದಿಲ್ಲ. ಆದರೆ ಒಂದು bag CCTVಯಲ್ಲಿ ಕಾಣಿಸಿದೆ.
ಬಾಲನ್ : PW-1, PW-2 ಮತ್ತು PW-3 ಅವರು ಮಚ್ಚಿನ ಬಣ್ಣ, ಆಕಾರ, ಅಗಲ, ಉದ್ದ ಅಥವಾ ಮರದ ಹಿಡಿಯ ವಿವರ ನೀಡಿದ್ದಾರೆಯೇ?
ತನಿಖಾಧಿಕಾರಿ : ಇಲ್ಲ.
ಬಾಲನ್ : ಹಾಗಿದ್ದರೆ ಮಚ್ಚುವನ್ನು PW-1ರಿಂದ PW-3ರವರೆಗಿನ ಸಾಕ್ಷಿಗಳು ಗುರುತಿಸುವಂತೆ ಮಾಡಲಾಗಿತ್ತೇ?
ತನಿಖಾಧಿಕಾರಿ : ಇಲ್ಲ.
ಬಾಲನ್ : ತನಿಖೆಯ ಅವಧಿಯಲ್ಲಿ PW-1, PW-2, PW-3 ಎಂದು ನಮೂದಿಸಿರುವ ಸಾಕ್ಷಿಗಳಿಗೆ ಮಚ್ಚು ತೋರಿಸಿದ್ದೀರಾ?
ತನಿಖಾಧಿಕಾರಿ : ಇಲ್ಲ.
ಆರೋಪಿಗಳ ನಿಖರ ಪಾತ್ರದ ಬಗ್ಗೆ ತನಿಖೆಯಲ್ಲಿ ಏನು ದಾಖಲಾಗಿದೆ?
ಬಾಲನ್ : ಪ್ರತಿ ಆರೋಪಿಯ ನಿರ್ದಿಷ್ಟ overt act ಅನ್ನು ತನಿಖೆಯಲ್ಲಿ ಪ್ರತ್ಯೇಕವಾಗಿ ದಾಖಲಿಸಿದ್ದೀರಾ?
ತನಿಖಾಧಿಕಾರಿ : ನಿರ್ದಿಷ್ಟವಾಗಿ ಇಲ್ಲ. ಅವರು ಎರಡು ಬೈಕ್‌ಗಳಲ್ಲಿ ಬಂದರು ಮತ್ತು ಒಬ್ಬ pillion rider ರುದ್ರೇಶ್ ಮೇಲೆ ಅಟ್ಯಾಕ್ ಮಾಡಿದನು.
ಬಾಲನ್ : ದಾಳಿ ನಡೆದಾಗ ಪ್ರತಿಯೊಬ್ಬ ಆರೋಪಿ ಯಾವ ಸ್ಥಾನದಲ್ಲಿದ್ದನು ಎಂಬುದನ್ನು ನಿರ್ದಿಷ್ಟವಾಗಿ ದಾಖಲಿಸಿದ್ದೀರಾ?
ತನಿಖಾಧಿಕಾರಿ : ಅಂತಹ ನಿರ್ದಿಷ್ಟ ವಿವರ ಅವರ ಹೇಳಿಕೆಗಳಲ್ಲಿ ಇಲ್ಲ.
ಬಾಲನ್ : ದಾಳಿಕೋರರು ಆಯುಧವನ್ನು ಬಲಗೈಯಲ್ಲಿ ಹಿಡಿದಿದ್ದರೋ ಎಡಗೈಯಲ್ಲಿ ಹಿಡಿದಿದ್ದರೋ ಎಂದು PW-1ರಿಂದ PW-3ರವರೆಗಿನ ಸಾಕ್ಷಿಗಳಲ್ಲಿ ವಿಚಾರಿಸಿದ್ದೀರಾ?
ತನಿಖಾಧಿಕಾರಿ : ಇಲ್ಲ.
ಬಾಲನ್ : ಆಯುಧವನ್ನು ಮೇಲಿನಿಂದ ಕೆಳಗೆ ಬೀಸಿದ್ರಾ ? ಕೆಳಗಿನಿಂದ ಮೇಲಕ್ಕೆ ಬೀಸಿದ್ರಾ ಎಂದು ವಿಚಾರಿಸಿದ್ದೀರಾ?
ತನಿಖಾಧಿಕಾರಿ : ಇಲ್ಲ.
‘ಹನುಮಾನ್ ದೇವಸ್ಥಾನ’ದ ಮಾಹಿತಿ ಸಾಕ್ಷಿಗಳ ಹೇಳಿಕೆಯಲ್ಲೇ ಇರಲಿಲ್ಲವೇ?
ಬಾಲನ್ : ನಿಮ್ಮ ಪ್ರಕಾರ ದಾಳಿಕೋರರು ದಕ್ಷಿಣದಿಂದ ಉತ್ತರದ ಕಡೆಗೆ ಬರುತ್ತಿದ್ದರು ಮತ್ತು ರುದ್ರೇಶ್ ಪೂರ್ವ ಕಡೆ ಮುಖಮಾಡಿದ್ದರು. ಈ ಮಾಹಿತಿಯನ್ನು ನೀವು ಹೇಗೆ ನಿರ್ಧರಿಸಿದ್ದೀರಿ?
ತನಿಖಾಧಿಕಾರಿ : PW-1ರಿಂದ PW-3ರವರೆಗಿನ ಸಾಕ್ಷಿಗಳು ಹೇಳಿಕೆ ನೀಡುವಾಗ ರುದ್ರೇಶ್ ಅವರು ತಮ್ಮ ಕಡೆಗೆ ಮುಖಮಾಡಿದ್ದರು ಮತ್ತು ಅವರು ಹನುಮಾನ್ ದೇವಸ್ಥಾನದ ಬಳಿ ಇದ್ದರು. ಆರೋಪಿಗಳು ಕಾಮರಾಜ ರಸ್ತೆಯಿಂದ ಬಂದರು ಎಂದು ಹೇಳಿದ್ದಾರೆ.
ಬಾಲನ್ : ಆದರೆ PW-1, PW-2 ಮತ್ತು PW-3ರ 161 ಹೇಳಿಕೆಗಳಲ್ಲಿ “ಹನುಮಾನ್ ದೇವಸ್ಥಾನ” ಎಂಬ ಉಲ್ಲೇಖ ಇದೆಯೇ?
ತನಿಖಾಧಿಕಾರಿ : ಇಲ್ಲ.
ಬಾಲನ್ : ಹಾಗಾದರೆ ನೀವು ಹೇಳಿದ “ಹನುಮಾನ್ ದೇವಸ್ಥಾನ”ದ ವಿವರ ಆ 161 ಹೇಳಿಕೆಗಳಲ್ಲಿ ನೇರವಾಗಿ ದಾಖಲಾಗಿಲ್ಲ ತಾನೆ ?
ತನಿಖಾಧಿಕಾರಿ : ಹೌದು. ದಾಖಲಾಗಿಲ್ಲ.
ಭಯೋತ್ಪಾದನಾ ಕೃತ್ಯದ ತನಿಖೆಯನ್ನು ಮಾಡಿದ ಎನ್ಐಎ ತನಿಖಾ ವೈಖರಿ ಪ್ರಶ್ನಾರ್ಹವಾಗಿದೆ. ರುದ್ರೇಶ್ ಕೊಲೆ ಪ್ರಕರಣ ಒಂದು ಕ್ರೈಂ ಅಷ್ಟೆ. ಅದನ್ನು ಭಯೋತ್ಪಾದನಾ ಕೃತ್ಯ ಎಂದು ಘೊಷಿಸಿದವರು ಕನಿಷ್ಠ ಕೊಲೆಗೆ ಕಾರಣವಾದ ಮುಖ್ಯ ವಸ್ತುವಾದ ‘ಮಚ್ಚು’ ಬಗ್ಗೆಯೇ ಸರಿಯಾದ ತನಿಖೆ ನಡೆಸಿಲ್ಲ. ರುದ್ರೇಶ್ ಕೊಲೆಯನ್ನು ಭಯೋತ್ಪಾಧನಾ ಕೃತ್ಯ ಎಂದು ಘೋಷಿಸಿದರೆ ಆಗುವ ರಾಜಕೀಯ ಲಾಭ ಮಾತ್ರ ಮುಖ್ಯವೇ ಹೊರತು ವ್ಯಕ್ತಿಯೊಬ್ಬನ ಸಾವಿನ ನಿಜವಾದ ತನಿಖೆಯಲ್ಲ ಎಂಬುದು ಈ ಕ್ರಾಸ್ ಎಕ್ಸಾಮೀನೇಶನ್ ಹೇಳುತ್ತದೆ.
(ಗಮನಿಸಿ : ಈ ವರದಿಯು ರುದ್ರೇಶ್ ಕೊಲೆ ಪ್ರಕರಣದ ಸತ್ಯಾಸತ್ಯತೆಯ ಬಗೆಗಿನ ಯಾವುದೇ ಅಭಿಪ್ರಾಯ ಅಲ್ಲ. ಭಯೋತ್ಪಾದನಾ ಕೃತ್ಯದ ತನಿಖೆಯನ್ನು ಹೀಗೆ ಮಾಡಬಹುದೇ ? ಎಂಬ ಬಗೆಗಿನ ಪ್ರಶ್ನೆಯಷ್ಟೆ. ಇದಕ್ಕೂ ಕೇಸ್ ನ ಮೆರಿಟ್ ಗೂ, ಅಂತಿಮ ತೀರ್ಪಿಗೂ ಈ ವರದಿಗೂ ಸಂಬಂಧವಿಲ್ಲ. ಈ ಕ್ರಾಸ್ ಎಕ್ಸಾಮಿನೇಶನ್ ವರದಿಯನ್ನು ಅಧ್ಯಯನದ ಭಾಗವಾಗಿ ವರದಿ ಮಾಡಲಾಗಿದೆ – ನವೀನ್ ಸೂರಿಂಜೆ)


Leave a Reply