ಸೌಜನ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇಡೀ ದೇಶದ ಪೊಲೀಸರಿಗೆ ಮಾರ್ಗದರ್ಶನ ನೀಡುವ ರೀತಿಯ ‘REPORTABLE’ ತೀರ್ಪು ನೀಡಿದೆ. ಈಗ ಈ ತೀರ್ಪನ್ನು ದೇಶದ ಯಾವುದೇ ಲೈಂಗಿಕ ದೌರ್ಜನ್ಯ, ‘ಅತ್ಯಾಚಾರ-ಕೊಲೆ’ ಪ್ರಕರಣಗಳಿಗೆ ಉಲ್ಲೇಖಿಸಬಹುದು. ಇಂತಹ ಮಹತ್ವದ ತೀರ್ಪಿನಲ್ಲಿ ಯಾರೂ ಗಮನಿಸದ ಕೆಲ ಮುಖ್ಯ ಅಂಶಗಳಿವೆ.
ಸುಪ್ರೀಂ ಕೋರ್ಟ್ ತೀರ್ಪಿನ ಪ್ಯಾರಾ 13ರಲ್ಲಿ ಟ್ರಯಲ್ ಕೋರ್ಟ್ ನ್ಯಾಯಾಧೀಶರ ತೀರ್ಪಿನ ಅಂಶಗಳನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಅದು ಹೀಗೆ ಹೇಳುತ್ತದೆ:
“ಸಾಕ್ಷಿಗಳು ಅಪರಾಧ ಎಸಗಿದ ವ್ಯಕ್ತಿಗಳ ಹೆಸರುಗಳನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೆ, CBI ಆ ನಿರ್ದಿಷ್ಟ ಅಂಶದ ಬಗ್ಗೆ ಸಮರ್ಪಕವಾಗಿ ತನಿಖೆ ನಡೆಸಿಲ್ಲ. ಅಷ್ಟೇ ಅಲ್ಲದೆ, ಸುಮಾರು ಒಂದು ವರ್ಷದವರೆಗೆ ಪ್ರತಿಭಟನೆಗಳು ಮುಂದುವರಿದಿದ್ದವು. ಈ ಅಂಶವನ್ನೂ CBI ಪರಿಗಣಿಸಿಲ್ಲ. ಒಂದು ವೇಳೆ ಅನುಮಾನಿಸಲ್ಪಟ್ಟ ಈ ವ್ಯಕ್ತಿಗಳ ವಿರುದ್ಧ ಏನೂ ಇರಲಿಲ್ಲ ಎಂದಾದರೆ, ನ್ಯಾಯಕ್ಕಾಗಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕೂಗು ಮತ್ತು ಪ್ರತಿಭಟನೆಗಳು ಏಕೆ ನಡೆದವು? ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಈ ಪ್ರಕರಣದಲ್ಲಿ ಮೇಲ್ಕಂಡ ಎಲ್ಲಾ ಅಂಶಗಳೂ ಸೇರಿ, CBI ಸರಿಯಾದ ರೀತಿಯಲ್ಲಿ ತನಿಖೆ ನಡೆಸಿಲ್ಲ ಎಂಬುದನ್ನು ತೋರಿಸುತ್ತವೆ.”
ಈ ಅಂಶವನ್ನು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ದಾಖಲಿಸಿರುವುದು ಬಹಳ ಮಹತ್ವದ್ದು. ಏಕೆಂದರೆ ಇಲ್ಲಿ ನ್ಯಾಯಾಲಯ ಕೇವಲ ಹಿಂದಿನ ತನಿಖೆಯಲ್ಲಿ ನಡೆದಿರುವ ಸಣ್ಣಪುಟ್ಟ ಲೋಪಗಳ ಬಗ್ಗೆ ಮಾತನಾಡುತ್ತಿಲ್ಲ. ಅಪರಾಧದ ಬಗ್ಗೆ ಸಾಕ್ಷಿಗಳು ನಿರ್ದಿಷ್ಟ ವ್ಯಕ್ತಿಗಳ ಹೆಸರುಗಳನ್ನು ಹೇಳಿದ್ದರೂ, ಆ ನಿರ್ದಿಷ್ಟ ಆರೋಪಗಳ ಬಗ್ಗೆ ತನಿಖೆ ನಡೆಸಲಾಗಿಲ್ಲ ಎಂಬುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ.
ಹಾಗಾಗಿ ಈಗ ರಚನೆಯಾಗಿರುವ ಹೊಸ SITಯ ಮುಂದೆ ಇರುವ ಪ್ರಮುಖ ಪ್ರಶ್ನೆಗಳಲ್ಲಿ ಇದೂ ಒಂದು. ಹಿಂದಿನ ತನಿಖೆಯಲ್ಲಿ ಸಾಕ್ಷಿಗಳು ಯಾರ ಹೆಸರುಗಳನ್ನು ಹೇಳಿದ್ದಾರೆ? ಅವರನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದರೆ ?:ಆ ಹೇಳಿಕೆಗಳು ಯಾವ ದಾಖಲೆಗಳಲ್ಲಿ ದಾಖಲಾಗಿವೆ? ಆ ವ್ಯಕ್ತಿಗಳ ಬಗ್ಗೆ ತನಿಖೆ ನಡೆದಿದೆಯೇ? ನಡೆದಿದ್ದರೆ ಯಾವ ರೀತಿಯಲ್ಲಿ ನಡೆದಿದೆ? ಅವರ ಮೊಬೈಲ್ ದಾಖಲೆಗಳು, ಸ್ಥಳದ ವಿವರಗಳು, ಸಂಬಂಧಿತ CCTV ದೃಶ್ಯಗಳು, ವೈಜ್ಞಾನಿಕ ಸಾಕ್ಷ್ಯಗಳು, ಅವರ ಹೇಳಿಕೆಗಳು ಹಾಗೂ ಇತರ ಸಾಕ್ಷಿಗಳ ಹೇಳಿಕೆಗಳನ್ನು ಪರಸ್ಪರ ಹೋಲಿಕೆ ಮಾಡಲಾಗಿದೆಯೇ? ಎಂಬುದನ್ನು ಹೊಸ ತನಿಖೆ ಪರಿಶೀಲಿಸಬೇಕಾಗುತ್ತದೆ.
ಅದರಲ್ಲೂ ಸೌಜನ್ಯಳ ತಾಯಿ ಕುಸುಮಾವತಿಯವರು ತಮ್ಮ ಹೇಳಿಕೆಗಳಲ್ಲಿ ಅಥವಾ ಹಿಂದಿನ ಹಂತದ ತನಿಖೆಯಲ್ಲಿ ಅನುಮಾನ ವ್ಯಕ್ತಪಡಿಸಿರುವ ವ್ಯಕ್ತಿಗಳು ಮತ್ತು ತನಿಖೆಗೆ ಸಂಬಂಧಿಸಿದಂತೆ ಅವರು ನೀಡಿರುವ ಮಾಹಿತಿಯು ಹೊಸ SIT ಗಮನಿಸಬೇಕು. ಕುಸುಮಾವತಿಯವರು ಈ ಪ್ರಕರಣದಲ್ಲಿ ಸಾಕ್ಷಿದಾರರೂ ಆಗಿರುವುದರಿಂದ, ಅವರು ನೀಡಿರುವ ಮಾಹಿತಿಯನ್ನು ಕೇವಲ ಕುಟುಂಬದ ಆರೋಪವೆಂದು ಬದಿಗೊತ್ತದೆ, ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ತನಿಖೆಯ ಭಾಗವಾಗಬೇಕಾಗುತ್ತದೆ.
ಅದೇ ರೀತಿ ಸೌಜನ್ಯ ಪರವಾಗಿ ಹೋರಾಟ ನಡೆಸುತ್ತಿರುವವರು ಅಥವಾ ಪ್ರಕರಣದ ಕುರಿತು ಮಾಹಿತಿ ನೀಡಿರುವ ಇತರ ವ್ಯಕ್ತಿಗಳು ನಿರ್ದಿಷ್ಟ ವ್ಯಕ್ತಿಗಳ ಬಗ್ಗೆ ಅನುಮಾನ ಅಥವಾ ಆರೋಪಗಳನ್ನು ಮುಂದಿಟ್ಟಿದ್ದರೆ, ಅವುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದೂ ಸರಿಯಲ್ಲ. ಅವುಗಳ ಹಿಂದಿರುವ ವಾಸ್ತವಾಂಶಗಳನ್ನು ಪರಿಶೀಲಿಸುವುದು ತನಿಖೆಯ ಕರ್ತವ್ಯ. ಸುಪ್ರೀಂ ಕೋರ್ಟ್ ತೀರ್ಪಿನ ಮೂಲ ಆಶಯವೂ ಇದೇ ಆಗಿದೆ.
‘ಮೌನ ಸಾಕ್ಷಿ’ಗಳ ವಿಚಾರಣೆ
ಸುಪ್ರೀಂ ಕೋರ್ಟ್ ಹೊಸ SITಗೆ ಇನ್ನೊಂದು ಸವಾಲನ್ನು ನೀಡಿದೆ. ಅದು ‘ಮೌನ ಸಾಕ್ಷಿ’ಗಳ ತನಿಖೆ! ಎಲ್ಲವನ್ನೂ ಹೇಳುವ ಸಾಮರ್ಥ್ಯವಿದ್ದರೂ ಮಾತನಾಡದ, ಮನುಷ್ಯರಂತೆ ಬಾಯಿ ತೆರೆದು ಹೇಳಿಕೆ ನೀಡದ, ಆದರೆ ಅಪರಾಧ ನಡೆದ ಸ್ಥಳದ ಸತ್ಯವನ್ನು ತಮ್ಮೊಳಗೆ ದಾಖಲಿಸಿಕೊಂಡಿರುವ ಸಾಕ್ಷ್ಯಗಳ ತನಿಖೆ. ಅಪರಾಧ ತನಿಖೆಯ ಭಾಷೆಯಲ್ಲಿ ಇವುಗಳನ್ನು ‘silent evidence’ ಎಂದು ಕರೆಯಲಾಗುತ್ತದೆ.
ಸುಪ್ರೀಂ ಕೋರ್ಟ್ ತೀರ್ಪಿನ ಪ್ಯಾರಾ 96ರಲ್ಲಿ ಹೀಗೆ ಹೇಳುತ್ತದೆ: “ಮೌನ ಸಾಕ್ಷ್ಯವು ನ್ಯಾಯಾಲಯದಲ್ಲಿ ತನ್ನದೇ ಆದ ಕಥೆಯನ್ನು ಹೇಳುತ್ತದೆ. ಅದು ತನ್ನದೇ ಆದ ಪ್ರದರ್ಶಕ ಸ್ವರೂಪದ ಮೂಲಕವಾಗಲಿ ಅಥವಾ ಅದರ ವೈಜ್ಞಾನಿಕ ಪರೀಕ್ಷೆಯಲ್ಲಿ ತೊಡಗಿರುವ ತಜ್ಞ ಸಾಕ್ಷಿದಾರರ ಸಾಕ್ಷ್ಯದ ಮೂಲಕವಾಗಲಿ ಒಂದು ವಿಷಯವನ್ನು ಮೌನವಾಗಿಯೇ ಹೇಳುತ್ತದೆ. ಅಪರಾಧ ನಡೆದ ಸಂದರ್ಭಗಳ ಸಂಪೂರ್ಣ ಸತ್ಯವನ್ನು ಹುಡುಕುವ ತಮ್ಮ ಜವಾಬ್ದಾರಿಯ ವಿಸ್ತರಣೆಯ ಭಾಗವಾಗಿ, ಪೊಲೀಸರು ಪತ್ತೆಹಚ್ಚಿ ವಿಚಾರಣೆ ನಡೆಸಿದ ಸಾಕ್ಷಿದಾರರ ಮೌಖಿಕ ಸಾಕ್ಷ್ಯಕ್ಕೆ ಬದಲಾಗಿ ಅಥವಾ ಅದನ್ನು ದೃಢೀಕರಿಸುವ ಸಾಕ್ಷ್ಯವಾಗಿ ಇಂತಹ ಸಾಕ್ಷ್ಯವು ಕಾರ್ಯನಿರ್ವಹಿಸಬಹುದು.”
ಈ ಒಂದು ಅಂಶವೇ ಹೊಸ SIT ತನಿಖೆಯ ದಿಕ್ಕನ್ನು ಬದಲಿಸುತ್ತದೆ. ಮಾತನಾಡುವ ಸಾಕ್ಷಿದಾರರು ಮಾತ್ರ ಸಾಕ್ಷ್ಯವಲ್ಲ. ಒಂದು ಸ್ಥಳದಲ್ಲಿರುವ ಮಣ್ಣು, ರಕ್ತದ ಕಲೆ, ಕೂದಲು, ಬಟ್ಟೆಯ ನಾರು, ಪಾದದ ಗುರುತು, ಬೆರಳಚ್ಚು, DNA, ಮೊಬೈಲ್ ಫೋನ್‌ನ ಸ್ಥಳದ ಮಾಹಿತಿ, CCTV ದೃಶ್ಯ, ಮಳೆಯಿಂದ ಒದ್ದೆಯಾಗಬೇಕಿದ್ದ ವಸ್ತು ಒದ್ದೆಯಾಗದಿರುವುದು, ಸ್ಥಳದಲ್ಲಿ ಇರಬೇಕಾಗಿದ್ದ ವಸ್ತು ಕಾಣೆಯಾಗಿರುವುದು, ಒಂದು ವಸ್ತು ಮತ್ತೊಂದು ಸ್ಥಳದಲ್ಲಿ ಪತ್ತೆಯಾಗಿರುವುದು ಇವೆಲ್ಲವೂ ತಮ್ಮದೇ ಆದ ರೀತಿಯಲ್ಲಿ “ಮಾತನಾಡುವ” ಸಾಕ್ಷ್ಯಗಳು. ಅದರಲ್ಲೇ ಸೌಜನ್ಯ ಪ್ರಕರಣದಲ್ಲಿ ‘ಮೌನ ಸಾಕ್ಷಿ’ಗಳೂ ಇವೆ.
ಉದಾಹರಣೆಗೆ, ಸೌಜನ್ಯಳ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಭಾರೀ ಮಳೆಯಾಗಿತ್ತು ಎಂಬುದು ದಾಖಲೆಗಳಿಂದ ಬರುತ್ತದೆ. ಆದರೆ ಆಕೆಯ ಶಾಲಾ ಬ್ಯಾಗ್ ಮತ್ತು ಪುಸ್ತಕಗಳು ಒದ್ದೆಯಾಗಿರಲಿಲ್ಲ ಎಂಬ ಅಂಶವನ್ನು ಸೆಷನ್ಸ್ ನ್ಯಾಯಾಲಯ ಗಮನಿಸಿದೆ. ಮೃತದೇಹ ಪತ್ತೆಯಾದ ಸ್ಥಳದಲ್ಲಿಯೇ ಅತ್ಯಾಚಾರ ಮತ್ತು ಕೊಲೆ ನಡೆದಿದ್ದರೆ, ಮಳೆಯ ಪರಿಣಾಮವಾಗಿ ಕೆಲವು ವಸ್ತುಗಳ ಮೇಲೆ ಅದರ ಗುರುತು ಇರಬೇಕಾಗಿತ್ತು ಎಂಬ ಪ್ರಶ್ನೆ ನ್ಯಾಯಾಲಯದ ಮುಂದೆ ಬಂದಿತ್ತು.
ಇದು ಕೇವಲ ಒಂದು ಸಣ್ಣ ಅನುಮಾನವಲ್ಲ. ಕೃತ್ಯವನ್ನು ಒಂದು ಕಡೆ ಮಾಡಿ ಮೃತದೇಹವನ್ನು ಬೇರೆಡೆಗೆ ಕೊಂಡೊಯ್ದು ಅಲ್ಲಿ ಎಸೆಯಲಾಗಿತ್ತೇ ಎಂಬ ತನಿಖಾ ಸಾಧ್ಯತೆಯನ್ನು ಇದು ಹುಟ್ಟುಹಾಕುತ್ತದೆ. ಹಾಗಿದ್ದರೆ ಅಪರಾಧ ನಡೆದ ನಿಜವಾದ ಸ್ಥಳ ಯಾವುದು? ಆ ಸ್ಥಳದಲ್ಲಿ ಇನ್ನೇನು ಸಾಕ್ಷ್ಯ ಉಳಿದಿದೆ? ಆ ಸ್ಥಳವನ್ನು ಹಿಂದೆ ಗುರುತಿಸಲಾಗಿತ್ತೇ? ಅಲ್ಲಿನ CCTV, ಮೊಬೈಲ್ ಡೇಟಾ, ವಾಹನಗಳ ಚಲನವಲನ, ಮಣ್ಣಿನ ಮಾದರಿ ಅಥವಾ ಇತರ ವೈಜ್ಞಾನಿಕ ಸಾಕ್ಷ್ಯಗಳನ್ನು ಪರಿಶೀಲಿಸಲಾಗಿದೆಯೇ? ಎಂಬ ಪ್ರಶ್ನೆಗಳು ಎದುರಾಗುತ್ತವೆ. ಇದೇ ‘ಮೌನ ಸಾಕ್ಷಿ’ಯ ತನಿಖೆ.
ಸೌಜನ್ಯಳ ಮೃತದೇಹದೊಂದಿಗೆ ಸಂಬಂಧಿಸಿದ ಬಟ್ಟೆಗಳಲ್ಲಿದ್ದ ಕೂದಲಿನ ಸಾಕ್ಷ್ಯವೂ ಇಲ್ಲಿ ಅತ್ಯಂತ ಮಹತ್ವದ್ದು. DNA ತಜ್ಞ PW-18 ಆಗಿರುವ ವಿನೋದ್ ಜೆ. ಲಕ್ಕಪ್ಪನ್ ಅವರ ಸಾಕ್ಷ್ಯದ ಆಧಾರದ ಮೇಲೆ, ಸೌಜನ್ಯಳ ಚೂಡಿದಾರ್ ಮೇಲಂಗಿಯಲ್ಲಿ ಆರೋಪಿಗೆ ಸೇರದ ಮತ್ತೊಬ್ಬ ಪುರುಷನ ಕೂದಲು ಕಂಡುಬಂದಿರುವುದನ್ನು ಸುಪ್ರೀಂ ಕೋರ್ಟ್ ಗಮನಿಸಿದೆ. ಅನುಮಾನಿತ ವ್ಯಕ್ತಿಗಳನ್ನು ಪತ್ತೆಹಚ್ಚಿದರೆ ಅವರ ರಕ್ತದ ಮಾದರಿಯನ್ನು ಪಡೆದು ಆ ಕೂದಲಿನ DNAಯೊಂದಿಗೆ ಹೋಲಿಕೆ ಮಾಡಬಹುದು ಎಂಬ ಸಾಧ್ಯತೆಯನ್ನೂ ನ್ಯಾಯಾಲಯ ದಾಖಲಿಸಿದೆ. ಇಲ್ಲಿ ಒಂದು ಕೂದಲು ಕೇವಲ ಕೂದಲಲ್ಲ. ಅದು ಒಂದು ‘ಮೌನ ಸಾಕ್ಷಿ’. ಅದು ಮಾತನಾಡುವುದಿಲ್ಲ. ಆದರೆ ವಿಜ್ಞಾನ ಅದನ್ನು ಮಾತನಾಡಿಸಬಹುದು.
ಅದೇ ರೀತಿ ಅತ್ಯಾಚಾರ ಪ್ರಕರಣದಲ್ಲಿ vaginal swab ಅತ್ಯಂತ ನಿರ್ಣಾಯಕ ವೈಜ್ಞಾನಿಕ ಸಾಕ್ಷಿಯಾಗಬಹುದಿತ್ತು. ಆದರೆ ಸರಿಯಾದ ರೀತಿಯಲ್ಲಿ ಸಂರಕ್ಷಣೆ ಮಾಡದ ಕಾರಣ ಅದರ DNA ಫಲಿತಾಂಶ ದೊರೆಯಲಿಲ್ಲ ಎಂದು ತಜ್ಞರ ಸಾಕ್ಷ್ಯದಲ್ಲಿ ದಾಖಲಾಗಿದೆ. ಇದು ಕೂಡ ‘ಮೌನ ಸಾಕ್ಷಿ’ಯನ್ನು ಸರಿಯಾಗಿ ಸಂರಕ್ಷಿಸದಿರುವ ಪರಿಣಾಮ. ಒಂದು ವಸ್ತು ಮಾತನಾಡದಿದ್ದರೂ ಅದು ಅಪರಾಧದ ಬಗ್ಗೆ ಸತ್ಯ ಹೇಳುವ ಸಾಮರ್ಥ್ಯ ಹೊಂದಿದ್ದರೆ, ಅದನ್ನು ಪತ್ತೆ ಹಚ್ಚುವುದು ತನಿಖಾಧಿಕಾರಿಯ ಕರ್ತವ್ಯ. ಆ ಸಾಕ್ಷ್ಯವನ್ನು ಸಂಗ್ರಹಿಸದೇ ಬಿಟ್ಟ ನಂತರ “ಈಗ ಸಾಕ್ಷ್ಯ ಸಿಗುವುದಿಲ್ಲ” ಎಂದು ಹೇಳುವ ತನಿಖೆಯ ವೈಫಲ್ಯವನ್ನು ನ್ಯಾಯದ ವೈಫಲ್ಯವಾಗಿ ಸುಪ್ರಿಂ ಕೋರ್ಟ್ ನೋಡಿದೆ.
ಸೌಜನ್ಯ ಕುರಿತಾದ ಸುಪ್ರಿಂ ತೀರ್ಪು ಇಂದಿನ ಕಾಲದ ಅಪರಾಧ ತನಿಖೆಗೆ ಬಹಳ ದೊಡ್ಡ ಪಾಠ. ಒಬ್ಬ ಸಾಕ್ಷಿದಾರ “ನಾನು ನೋಡಿದೆ” ಎಂದು ಹೇಳಬಹುದು. ಇನ್ನೊಬ್ಬ ಸಾಕ್ಷಿದಾರ “ನಾನು ಕೇಳಿದೆ” ಎಂದು ಹೇಳಬಹುದು. ಆದರೆ ಮೊಬೈಲ್ ಫೋನ್ “ನಾನು ಆ ಸಮಯದಲ್ಲಿ ಎಲ್ಲಿದ್ದೆ” ಎಂದು ಹೇಳಬಹುದು. CCTV “ಯಾರು ಯಾವ ದಿಕ್ಕಿನಲ್ಲಿ ಹೋದರು” ಎಂದು ಹೇಳಬಹುದು. DNA “ಈ ಜೈವಿಕ ವಸ್ತು ಯಾರಿಗೆ ಸೇರಿದೆ” ಎಂಬ ಪ್ರಶ್ನೆಗೆ ಉತ್ತರಿಸಬಹುದು. ಮಣ್ಣು, ರಕ್ತ, ಕೂದಲು ಮತ್ತು ಬಟ್ಟೆಗಳು ಅಪರಾಧ ನಡೆದ ಸ್ಥಳದ ಬಗ್ಗೆ ಮಾಹಿತಿ ನೀಡಬಹುದು. ಇವೆಲ್ಲವೂ ಸೇರಿ ಒಂದು ಅಪರಾಧದ ಕಥೆಯನ್ನು ಹೇಳುತ್ತವೆ. ಆದರೆ ಅವುಗಳು ಬೇರೆ ಬೇರೆ ಒತ್ತಡದ ಕಾರಣಕ್ಕಾಗಿ “ಹೇಳಲಾರವು”! ಸೌಜನ್ಯ ಪ್ರಕರಣದಲ್ಲಿ ಇದೇ ‘ಮೌನ ಸಾಕ್ಷಿ’ಗಳ ಸಂಪೂರ್ಣ ತನಿಖೆ ಅಗತ್ಯವಾಗಿದೆ.
ಅಷ್ಟೇ ಅಲ್ಲ, ಹಿಂದಿನ ತನಿಖೆಯಲ್ಲಿ ಯಾರು ಏನು ಹೇಳಿದ್ದಾರೆ ಎಂಬುದನ್ನೂ SIT ಮತ್ತೆ ಪರಿಶೀಲಿಸಬೇಕಾಗಿದೆ. ಯಾರು ಪ್ರಮುಖ ಸಾಕ್ಷಿಯಾಗಿದ್ದರು? ಯಾರು ಹೇಳಿಕೆ ನೀಡಿದ್ದರೂ ಚಾರ್ಜ್‌ಶೀಟ್‌ನಲ್ಲಿ ಸಾಕ್ಷಿಯಾಗಿ ಸೇರಿಸಲ್ಪಟ್ಟಿರಲಿಲ್ಲ? ಯಾರು ತನಿಖಾ ಸಂಸ್ಥೆಯ ಮುಂದೆ ಮಾಹಿತಿ ನೀಡಿದ್ದರು? ಯಾರ ಹೇಳಿಕೆಗಳನ್ನು ಪರಿಗಣಿಸಲಿಲ್ಲ? ಯಾರು ನಂತರವೂ ತನಿಖಾ ವ್ಯಾಪ್ತಿಯಿಂದ ಹೊರಗುಳಿದರು? ಗೊತ್ತಿದ್ದೂ ಬಾಯಿ ಬಿಡದವರು ಯಾರು ? ಯಾರ ಪ್ರಭಾವ ಕೆಲಸ ಮಾಡಿದೆ ? ಇವೆಲ್ಲವೂ ಮೌನ ಸಾಕ್ಷಿಗಳೇ ಆಗಿದ್ದು ತನಿಖೆಯ ಭಾಗವಾಗಬೇಕಾಗುತ್ತದೆ.
ಸೌಜನ್ಯ ಪ್ರಕರಣದ ಹೊಸ SITಗೆ ಇರುವ ಸವಾಲು ಏನೆಂದರೆ, ಹಿಂದಿನ ತನಿಖೆಯಲ್ಲಿ ತಪ್ಪಿಹೋದ “ಮಾತನಾಡುವ ಸಾಕ್ಷಿದಾರರು” ಯಾರು? ಹಿಂದಿನ ತನಿಖೆಯಲ್ಲಿ ನಿರ್ಲಕ್ಷಿಸಲ್ಪಟ್ಟ “ಮೌನ ಸಾಕ್ಷಿಗಳು” ಯಾವುವು? ಯಾರ ವಿರುದ್ದ ಜನ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ? ಹಿಂದಿನ ತನಿಖೆಯಲ್ಲಿ ಸಂಗ್ರಹಿಸದೇ ಉಳಿದ ವೈಜ್ಞಾನಿಕ ಸಾಕ್ಷ್ಯ ಯಾವುದು? ಎಂಬುದನ್ನು ಪತ್ತೆ ಹಚ್ಚಬೇಕಿದೆ.
ಇದೇ ಕಾರಣಕ್ಕೆ ಈ ತೀರ್ಪು ಹೊಸ SITಗೆ ಒಂದು ದೊಡ್ಡ ಹೊಣೆಗಾರಿಕೆಯನ್ನು ನೀಡಿದೆ. ಸುಪ್ರೀಂ ಕೋರ್ಟ್ ಹೊಸ SIT ರಚಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಿದೆ. ಹಿಂದಿನ ಬೆಳ್ತಂಗಡಿ ಪೊಲೀಸ್, CID ಮತ್ತು CBI ತನಿಖಾ ತಂಡಗಳಲ್ಲಿ ಕೆಲಸ ಮಾಡಿದ ಅಧಿಕಾರಿಗಳು ಹೊಸ SITಯ ಭಾಗವಾಗಬಾರದು ಎಂದು ಕೂಡ ಸ್ಪಷ್ಟವಾಗಿ ಹೇಳಿದೆ. ಆಧುನಿಕ ತನಿಖಾ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿರುವ ಸಮರ್ಥ ತನಿಖಾಧಿಕಾರಿಗಳ ತಂಡವನ್ನು ರಚಿಸಿ, ಹಿರಿಯ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ನ್ಯಾಯಾಲಯ ಹೇಳಿದೆ. ಎಸ್ಐಟಿ ಈಗ ಕಾರ್ಯಾರಂಭ ಮಾಡಿದ್ದು ಸುಪ್ರಿಂ ತೀರ್ಪಿನ ಈ ಭಾಗಗಳನ್ನು ಗಮನಿಸಬೇಕಿದೆ.

Leave a Reply