– ನವೀನ್ ಸೂರಿಂಜೆ
ಸೌಜನ್ಯ ಪ್ರಕರಣದ ತನಿಖೆ ಇನ್ನು ಸಾಮಾನ್ಯ ಪೊಲೀಸ್ ತನಿಖೆಯ ಪ್ರಶ್ನೆಯಾಗಿ ಉಳಿದಿಲ್ಲ. ಈ ಪ್ರಕರಣದಲ್ಲಿ ತನಿಖೆ ಹೇಗೆ ನಡೆಯಿತು, ತನಿಖಾಧಿಕಾರಿಗಳು ಯಾವ ಸಾಕ್ಷ್ಯಗಳನ್ನು ಸಂಗ್ರಹಿಸಿದರು, ಯಾವ ಸಾಕ್ಷ್ಯಗಳನ್ನು ಕಡೆಗಣಿಸಿದರು, ನೈಜ ಆರೋಪಿಗಳತ್ತ ತನಿಖೆ ಏಕೆ ಸಾಗಲಿಲ್ಲ ಮತ್ತು ತನಿಖೆಯ ವೈಫಲ್ಯದಿಂದ ಯಾರಿಗೆ ಲಾಭವಾಯಿತು ಎಂಬ ಪ್ರಶ್ನೆಗಳಿಗೆ ಇದೀಗ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಅತ್ಯಂತ ಗಂಭೀರವಾದ ಮಾತುಗಳನ್ನು ದಾಖಲಿಸಿದೆ. ಹೀಗಿರುವಾಗ ವೆಂಕಟೇಶ ಪ್ರಸನ್ನರಂತಹ ಅಧಿಕಾರಿಯನ್ನು ಎಸ್ಐಟಿಯಲ್ಲಿ ಯಾಕೆ ಸೇರಿಸಲಾಯಿತು ?
2026ರ ಸೆಪ್ಟೆಂಬರ್ 21ರಂದು ಸುಪ್ರೀಂ ಕೋರ್ಟ್ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ-ನೋವೊ ತನಿಖೆಗೆ ಆದೇಶಿಸಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಸಂಜೀವ್ ಸಚ್‌ದೇವ ಅವರ ಪೀಠ ನೀಡಿರುವ ಈ ತೀರ್ಪು, ಈ ಪ್ರಕರಣದ ಮುಂದಿನ ತನಿಖೆಗೆ ಕೇವಲ ಕಾನೂನು ಮಾರ್ಗದರ್ಶನವನ್ನಷ್ಟೇ ನೀಡಿಲ್ಲ, ಹಿಂದಿನ ತನಿಖೆಯ ಗುಣಮಟ್ಟದ ಬಗ್ಗೆಯೂ ಅತ್ಯಂತ ಗಂಭೀರವಾದ ಪ್ರಶ್ನೆಗಳನ್ನು ಎತ್ತಿದೆ. ಹಾಗಿರುವಾಗ ಸರ್ಕಾರ ಎಚ್ಚರಿಕೆಯಿಂದ ಎಸ್ಐಟಿ ರಚನೆ ಮಾಡಬೇಕಿತ್ತು.
ತೀರ್ಪಿನ 59ನೇ ಪ್ಯಾರಾದಲ್ಲಿ ‘17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಪ್ರಕರಣದಲ್ಲಿ ತನಿಖೆ ಮುಂದುವರಿದ ರೀತಿಯೂ, ವಿವಿಧ ತನಿಖಾ ಸಂಸ್ಥೆಗಳು ಸಾಕ್ಷ್ಯಗಳನ್ನು ಸಂಗ್ರಹಿಸಿ ಮೌಲ್ಯಮಾಪನ ಮಾಡಿದ ರೀತಿಯೂ “shocks the very conscience of the court” ಅಂದರೆ ನ್ಯಾಯಾಲಯದ ಆತ್ಮಸಾಕ್ಷಿಯನ್ನೇ ಘಾಸಿಗೊಳಿಸುತ್ತದೆ’ ಎಂದು ಬರೆಯಲಾಗಿದೆ.
ಅದರ ನಂತರ ಸುಪ್ರಿಂ ಕೋರ್ಟ್ ಹೇಳುವ ಮಾತು ಇನ್ನೂ ಗಂಭೀರವಾಗಿದೆ. “Such lax and improper investigation gives premium to the Investigating Officers who failed to do their job correctly and diligently.” ಅಂದರೆ, ಕರ್ತವ್ಯವನ್ನು ಸರಿಯಾಗಿ ಮತ್ತು ಪ್ರಾಮಾಣಿಕವಾಗಿ ನಿರ್ವಹಿಸದ ತನಿಖಾಧಿಕಾರಿಗಳಿಗೆ ಇಂತಹ ಸಡಿಲ ಮತ್ತು ಅಸಮರ್ಪಕ ತನಿಖೆಯೇ ಒಂದು ರೀತಿಯ ‘ಪ್ರೀಮಿಯಂ’ ನೀಡುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಹೀಗಿರುವಾಗ ಬೇರೆಬೇರೆ ಪ್ರಕರಣಗಳಲ್ಲಿ ಭ್ರಷ್ಟಾಚಾರ ಮಾಡಿ ಲಾಭ ಮಾಡಿಕೊಂಡಿರುವ ಆರೋಪ ಎದುರಿಸುತ್ತಿರುವ ವೆಂಕಟೇಶ ಪ್ರಸನ್ನರನ್ನು ಎಸ್ಐಟಿಗೆ ಹೇಗೆ ನೇಮಿಸಲಾಯಿತು ?
ವೆಂಕಟೇಶ್ ಪ್ರಸನ್ನ ಅವರು ಹಿಂದೆ ಬೆಂಗಳೂರಿನ CCBಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ರವಿ ಪೂಜಾರಿ ಪ್ರಕರಣದಲ್ಲಿ ಅವರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದವು. 2020ರ ಮಾರ್ಚ್‌ನಲ್ಲಿ ರವಿ ಪೂಜಾರಿಯನ್ನು ವಿಚಾರಣೆ ನಡೆಸಿದಾಗ, CCBಗೆ ಸಂಬಂಧಿಸಿದ್ದ ಅಧಿಕಾರಿಯೊಬ್ಬರು ತನ್ನ ಪರವಾಗಿ ‘ಇನ್ಫಾರ್ಮರ್’ ಆಗಿ ಕೆಲಸ ಮಾಡುತ್ತಿದ್ದರು ಹಾಗೂ ತನ್ನ ವಿರುದ್ಧದ ಪೊಲೀಸ್ ತನಿಖೆಯ ಪ್ರಮುಖ ಮಾಹಿತಿಯನ್ನು ತನಗೆ ನೀಡುತ್ತಿದ್ದರು ಎಂದು ರವಿ ಪೂಜಾರಿ ಹೇಳಿದ್ದಾಗಿ The News Minute ವರದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಆಗಿನ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಆ ಅಧಿಕಾರಿಯನ್ನು CCBಯಿಂದ ವರ್ಗಾಯಿಸಿ, ನ್ಯಾಯಸಮ್ಮತ ವಿಚಾರಣೆ ನಡೆಯಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದರು. ಈ ಸಂಬಂಧದ ವರದಿಯನ್ನು DGP-IGP ಪ್ರವೀಣ್ ಸೂದ್ ಅವರಿಗೆ ಕಳುಹಿಸಲಾಗಿತ್ತು ಎಂದೂ ಆಯುಕ್ತರು ಹೇಳಿದ್ದರು. ನಂತರದ ವರದಿಗಳಲ್ಲಿ ಈ ಅಧಿಕಾರಿ ACP ವೆಂಕಟೇಶ್ ಪ್ರಸನ್ನ ಎಂದು ಹೆಸರು ಬಹಿರಂಗವಾಗಿದ್ದು, ಅವರ ರವಿ ಪೂಜಾರಿಯೊಂದಿಗಿನ ಆಪ್ತತೆಯ ಬಗ್ಗೆ ಪ್ರತ್ಯೇಕ ತನಿಖೆ ಮತ್ತು ಸಾಕ್ಷ್ಯ ಸಂಗ್ರಹ ನಡೆದಿತ್ತು ಎಂದು ವರದಿಯಾಗಿದೆ.
ಇದಕ್ಕಿಂತ ಮುಂಚೆಯೂ ಮಂಗಳೂರಿನಲ್ಲಿ ವೆಂಕಟೇಶ್ ಪ್ರಸನ್ನ ಅವರ ಕರ್ತವ್ಯಾವಧಿಗೆ ಸಂಬಂಧಿಸಿದಂತೆ ವಿವಾದಗಳು ಮತ್ತು ಆರೋಪಗಳು ಸಾರ್ವಜನಿಕವಾಗಿ ದಾಖಲಾಗಿವೆ. 2009ರಲ್ಲಿ ಮಂಗಳೂರಿನ ವಕೀಲ ನೌಶಾದ್ ಕಾಸಿಂಜಿ ಕೊಲೆ ಪ್ರಕರಣದಲ್ಲಿಯೂ ವೆಂಕಟೇಶ್ ಪ್ರಸನ್ನ ಅವರ ಹೆಸರು ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಹೈಕೋರ್ಟ್ ದಾಖಲೆಗಳಲ್ಲಿ ಕಾಣಿಸಿಕೊಂಡಿತ್ತು. ನೌಶಾದ್ ಅವರ ಪತ್ನಿ ನುಸ್ರತ್ ಜಹಾನ್ ಅವರು ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ವೆಂಕಟೇಶ್ ಪ್ರಸನ್ನ ಸೇರಿದಂತೆ ನಾಲ್ವರು ಪೊಲೀಸ್ ಅಧಿಕಾರಿಗಳು ನೌಶಾದ್ ಅವರ ವಿರುದ್ಧ ಅಸಮಾಧಾನ ಹೊಂದಿದ್ದರು ಮತ್ತು ಅವರ ಕೊಲೆಯಲ್ಲಿ ಪೊಲೀಸರ ಪಾತ್ರವಿರಬಹುದು ಎಂದು ಆರೋಪಿಸಿ CBI ತನಿಖೆ ಕೋರಿದ್ದರು. 2012ರ ಸೆಪ್ಟೆಂಬರ್ 13ರ WRIT PETITION NO.40282/2010 (GM-RES) ತೀರ್ಪಿನ ಪ್ಯಾರ 2ರಿಂದ 7ರವರೆಗೆ ಈ ಆರೋಪಗಳು ಮತ್ತು ಸರ್ಕಾರದ ಪ್ರತಿವಾದವನ್ನು ಹೈಕೋರ್ಟ್ ವಿವರವಾಗಿ ದಾಖಲಿಸಿದೆ.

ಬಹುಕೋಟಿ ರೂಪಾಯಿಗಳ ಆಂಬಿಡೆಂಟ್ ವಂಚನೆ ಪ್ರಕರಣದ ತನಿಖಾಧಿಕಾರಿಯಾಗಿದ್ದ CCB ACP ವೆಂಕಟೇಶ್ ಪ್ರಸನ್ನ ಅವರ ವಿರುದ್ಧ ಉದ್ಯಮಿ ಆರ್. ವಿಜಯ್ ತಾತ ಅವರು ಗಂಭೀರ ಆರೋಪಗಳನ್ನು ಮಾಡಿ ರಾಜ್ಯದ DG&IGP, ಬೆಂಗಳೂರು ಪೊಲೀಸ್ ಆಯುಕ್ತರು ಸೇರಿದಂತೆ ಅಧಿಕಾರಿಗಳಿಗೆ ದೂರು ನೀಡಿದ್ದರು. ವೆಂಕಟೇಶ್ ಪ್ರಸನ್ನ ಅವರು ತಮ್ಮನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸುತ್ತಿದ್ದಾರೆ ಎಂದು ವಿಜಯ್ ತಾತ ಆರೋಪಿಸಿದ್ದಾಗಿ 2018ರ ನವೆಂಬರ್ 21ರಂದು The New Indian Express ವರದಿ ಮಾಡಿತ್ತು. ಇದೇ ವಿವಾದಕ್ಕೆ ಸಂಬಂಧಿಸಿದಂತೆ ವಿಜಯ್ ತಾತ ಅವರು 18 ಡಿಸೆಂಬರ್ 2018ರಂದು ನೀಡಿದ್ದ ಖಾಸಗಿ ದೂರಿನ ಆಧಾರದ ಮೇಲೆ ನಡೆದ ಪ್ರಕರಣದ ವಿವರಗಳು ಕರ್ನಾಟಕ ಹೈಕೋರ್ಟ್‌ನ 18 ನವೆಂಬರ್ 2021ರ R. Vijay Tata v. State of Karnataka ತೀರ್ಪಿನಲ್ಲೂ ದಾಖಲಾಗಿವೆ. ಮತ್ತೊಂದೆಡೆ, ಆಂಬಿಡೆಂಟ್ ಪ್ರಕರಣದ ತನಿಖಾಧಿಕಾರಿಯಾಗಿದ್ದ ವೆಂಕಟೇಶ್ ಪ್ರಸನ್ನ ಅವರು ವಿಜಯ್ ತಾತ ಅವರನ್ನು ಬಂಧಿಸಲು ಕ್ರಮ ಕೈಗೊಂಡ ನಂತರ ಅವರನ್ನು ಪ್ರಕರಣದ ತನಿಖೆಯಿಂದ ತೆಗೆದು ಮತ್ತೊಬ್ಬ ತನಿಖಾಧಿಕಾರಿಯನ್ನು ನೇಮಿಸಲಾಗಿತ್ತು ಎಂದು 2018ರ ಡಿಸೆಂಬರ್ 18ರ Daijiworld ವರದಿ ಹೇಳುತ್ತದೆ. ಒಟ್ಟಾರೆ ಈ ಗಂಭೀರ ಆರೋಪಗಳು ಕೇಳಿಬಂದ ಬೆನ್ನಲ್ಲೇ, ಆಂಬಿಡೆಂಟ್ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸಿಪಿ ವೆಂಕಟೇಶ್ ಪ್ರಸನ್ನ ಅವರನ್ನು ಸಿಸಿಬಿಯಿಂದ (CCB) ಸಿಸಿಆರ್‌ಬಿಗೆ (CCRB) ವರ್ಗಾವಣೆ ಮಾಡಲಾಗಿತ್ತು.
ಸೌಜನ್ಯ ಪ್ರಕರಣದ ಹಿಂದಿನ ತನಿಖೆಗಳ ಕುರಿತು ಸುಪ್ರೀಂ ಕೋರ್ಟ್ ಸ್ವತಃ ತನಿಖೆಯ ನಿಷ್ಪಕ್ಷಪಾತತೆ, ಸಾಕ್ಷ್ಯಗಳ ಮೌಲ್ಯಮಾಪನ, ನೈಜ ಆರೋಪಿಗಳ ಸಾಧ್ಯತೆ ಮತ್ತು ತನಿಖಾಧಿಕಾರಿಗಳ ಕರ್ತವ್ಯನಿಷ್ಠೆಯ ಬಗ್ಗೆ ಇಷ್ಟು ಗಂಭೀರವಾದ ಮಾತುಗಳನ್ನು ದಾಖಲಿಸಿರುವ ಸಂದರ್ಭದಲ್ಲಿ, ಹೊಸ ತನಿಖಾ ತಂಡವನ್ನು ರಚಿಸುವಾಗ ಪ್ರತಿಯೊಬ್ಬ ಸದಸ್ಯನ ಹಿಂದಿನ ಸೇವಾ ದಾಖಲೆ, ವಿವಾದಗಳು, ಇಲಾಖಾ ತನಿಖೆಗಳು, ಆರೋಪಗಳು ಮತ್ತು ಹಿತಾಸಕ್ತಿ ಸಂಘರ್ಷಗಳನ್ನೆಲ್ಲ ಪರಿಶೀಲಿಸಲಾಗಿದೆಯೇ?
ಇದೇ ತೀರ್ಪಿನ 60ನೇ ಪ್ಯಾರಾದಲ್ಲಿ ನ್ಯಾಯಾಲಯ ಮತ್ತೊಂದು ಮೂಲಭೂತ ವಿಚಾರವನ್ನು ಹೇಳುತ್ತದೆ. ಸುಳ್ಳು ಆರೋಪಕ್ಕೆ ಒಳಗಾದ ವ್ಯಕ್ತಿಗೆ ಆಗಿರುವ ಅನ್ಯಾಯವನ್ನು ಪರಿಹರಿಸಲು ಸಾಧ್ಯವಿದೆ. ಆದರೆ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಬಲಿಪಶುವಿಗೆ ತನಿಖೆಯ ವೈಫಲ್ಯದಿಂದ ಉಂಟಾದ ಅನ್ಯಾಯವನ್ನು ಪರಿಹರಿಸಲು ಸಾಧ್ಯವಿಲ್ಲ. ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚಿ ಶಿಕ್ಷೆಗೆ ಒಳಪಡಿಸುವಂತಹ ಸರಿಯಾದ ತನಿಖೆ ನಡೆಯದಿದ್ದರೆ ಸಮಾಜವೇ ತನ್ನ ಕರ್ತವ್ಯದಲ್ಲಿ ವಿಫಲವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಇಂತಹ ಗಂಭೀರ ನ್ಯಾಯಾಂಗ ಟೀಕೆಗಳಿಗೆ ಒಳಗಾದ ತನಿಖಾ ವ್ಯವಸ್ಥೆಯನ್ನೇ ಸರಿಪಡಿಸಲು ಸುಪ್ರೀಂ ಕೋರ್ಟ್ ಡಿ-ನೋವೊ ತನಿಖೆಗೆ ಆದೇಶಿಸಿರುವ ಸಂದರ್ಭದಲ್ಲಿ, ಆ ತನಿಖೆಯನ್ನು ನಡೆಸುವ SITಯ ಸದಸ್ಯರ ಆಯ್ಕೆ ಎಷ್ಟು ಕಟ್ಟುನಿಟ್ಟಿನ ಮಾನದಂಡಗಳ ಆಧಾರದ ಮೇಲೆ ನಡೆಯಬೇಕು?
ತನಿಖಾಧಿಕಾರಿಯ ವಿರುದ್ಧ ಹಿಂದೆ ಕೇಳಿಬಂದ ಆರೋಪಗಳು ಮಾತ್ರ ಆತನನ್ನು ಶಾಶ್ವತವಾಗಿ ತನಿಖೆಯಿಂದ ಹೊರಗಿಡುತ್ತವೆ ಎಂದು ಕಾನೂನು ಹೇಳುವುದಿಲ್ಲ. ಆರೋಪಗಳು ಸಾಬೀತಾಗದಿದ್ದರೆ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸುವುದೂ ಸರಿಯಲ್ಲ. ಆದರೆ ಅದೇ ಸಮಯದಲ್ಲಿ, ಅತ್ಯಂತ ಸೂಕ್ಷ್ಮವಾದ ಮತ್ತು ಸಾರ್ವಜನಿಕ ನಂಬಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ತನಿಖಾಧಿಕಾರಿಯ ಹಿಂದಿನ ಸೇವಾ ದಾಖಲೆಯ ಬಗ್ಗೆ ಪ್ರಶ್ನೆಗಳಿದ್ದರೆ, ಸರ್ಕಾರವು ಅವುಗಳನ್ನು ಪರಿಶೀಲಿಸದೆ ನೇಮಕ ಮಾಡಿದೆ ಎಂಬ ಅನುಮಾನಕ್ಕೆ ಅವಕಾಶ ನೀಡಬಾರದು.
ವೆಂಕಟೇಶ್ ಪ್ರಸನ್ನರನ್ನು SITಗೆ ನೇಮಿಸುವ ಮೊದಲು ಅವರ ವಿರುದ್ಧ ನಡೆದ ಇಲಾಖಾ ವಿಚಾರಣೆಗಳ ಅಂತಿಮ ಫಲಿತಾಂಶವೇನು? ರವಿ ಪೂಜಾರಿ ಪ್ರಕರಣದಲ್ಲಿ ಪೊಲೀಸ್ ಆಯುಕ್ತರು ಮಾಡಿದ್ದ ಶಿಫಾರಸಿನ ನಂತರ ಏನಾಯಿತು? ಆ ವಿಚಾರಣೆಯಲ್ಲಿ ಅವರು ನಿರ್ದೋಷಿ ಎಂದು ತೀರ್ಮಾನಿಸಲಾಯಿತೇ? ಅಥವಾ ಯಾವುದೇ ಇಲಾಖಾ ಕ್ರಮ ಕೈಗೊಳ್ಳಲಾಯಿತೇ? ಅವರ ವಿರುದ್ಧ ಮಂಗಳೂರಿನಲ್ಲಿ ಕೇಳಿಬಂದಿದ್ದ ಇತರ ಆರೋಪಗಳ ಸ್ಥಿತಿ ಏನು? ಇವೆಲ್ಲವನ್ನೂ ಪರಿಶೀಲಿಸಿ, ದಾಖಲೆ ಆಧಾರದ ಮೇಲೆ ಸರ್ಕಾರವೇ ಸಾರ್ವಜನಿಕರಿಗೆ ತಿಳಿಸಬೇಕಾಗಿದೆ.
ಸೌಜನ್ಯ ಪ್ರಕರಣದ ತನಿಖೆಯ ಮೇಲೆ ಒಂದು ಕಣವೂ ಅನುಮಾನ ಉಳಿಯಬಾರದು. ಯಾಕೆಂದರೆ ಸುಪ್ರೀಂ ಕೋರ್ಟ್ ಈಗಾಗಲೇ ಹಿಂದಿನ ತನಿಖೆಯ ಬಗ್ಗೆ “ನ್ಯಾಯಾಲಯದ ಆತ್ಮಸಾಕ್ಷಿಗೆ ಘಾಸಿ”ಯಾಗುವಷ್ಟು ಗಂಭೀರವಾದ ಟೀಕೆ ಮಾಡಿದೆ. ತನಿಖೆಯ ವೈಫಲ್ಯದಿಂದ ತನಿಖಾಧಿಕಾರಿಗಳಿಗೇ ‘ಪ್ರೀಮಿಯಂ’ ಸಿಗುತ್ತದೆ ಎಂದು ಹೇಳಿದೆ. ನೈಜ ಅಪರಾಧಿಗಳು ತನಿಖೆಯನ್ನು ಪ್ರಭಾವಿಸಿರಬಹುದಾದ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದಿದೆ. ಅಂತಿಮವಾಗಿ, ಹಳೆಯ ತನಿಖೆಯನ್ನು ಬದಿಗಿಟ್ಟು ಡಿ-ನೋವೊ ತನಿಖೆಗೆ ಆದೇಶಿಸಿದೆ. ಇಂತಹ ಸಂದರ್ಭದಲ್ಲಿ ಹೊಸ SITಯ ಪ್ರತಿಯೊಬ್ಬ ಸದಸ್ಯನ ಆಯ್ಕೆಯೂ ಪ್ರಶ್ನಾತೀತವಾಗಿರಬೇಕು.
“ತನಿಖಾಧಿಕಾರಿಯ ವಿರುದ್ಧ ಆರೋಪವಿತ್ತು” ಎಂಬ ಕಾರಣಕ್ಕೆ ಮಾತ್ರ ಅವರನ್ನು SITಯಿಂದ ಹೊರಗಿಡಬೇಕು ಎಂದು ಹೇಳುವುದು ಒಂದು ವಾದ. “ಆರೋಪವಿತ್ತು ಎಂಬುದನ್ನೇ ಪರಿಗಣಿಸದೆ ಅವರನ್ನು SITಗೆ ಸೇರಿಸುವುದು” ಮತ್ತೊಂದು ವಾದ. ಆದರೆ ಸುಪ್ರೀಂ ಕೋರ್ಟ್‌ನ ತೀರ್ಪಿನ ಹಿನ್ನಲೆಯಲ್ಲಿ ಸರಿಯಾದ ಮಧ್ಯಮಾರ್ಗವೆಂದರೆ, ಅಧಿಕಾರಿಗಳ ಮೇಲಿನ ಹಿಂದಿನ ಆರೋಪಗಳು, ಇಲಾಖಾ ವಿಚಾರಣೆಗಳು ಮತ್ತು ಅವುಗಳ ಅಂತಿಮ ಫಲಿತಾಂಶಗಳನ್ನು ಪಾರದರ್ಶಕವಾಗಿ ಪರಿಶೀಲಿಸಿ, ಯಾವುದೇ ಹಿತಾಸಕ್ತಿ ಸಂಘರ್ಷ ಅಥವಾ ವಿಶ್ವಾಸದ ಸಮಸ್ಯೆ ಉಳಿಯದಂತೆ ನೇಮಕಾತಿ ಮಾಡಬೇಕಿದೆ.

Leave a Reply