– ನವೀನ್ ಸೂರಿಂಜೆ
ಸೌಜನ್ಯ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ಕೇವಲ ‘ಹೊಸ ಎಸ್ಐಟಿ ರಚಿಸಿ’ ಎಂದಷ್ಟೇ ಹೇಳಿ ಕೈತಿಳೆದುಕೊಂಡಿಲ್ಲ. ಸೌಜನ್ಯ ಪ್ರಕರಣದ ಇಂಚಿಂಚನ್ನೂ ಶೋಧಿಸಿರುವ ಸುಪ್ರಿಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಹಲವು ನೇರ, ಹಲವು ಪರೋಕ್ಷ ಸೂಚನೆಗಳನ್ನು ನೀಡಿದೆ. ತೀರ್ಪಿನಲ್ಲಿರುವ ನೇರ ಸೂಚನೆಗಳು ಆದೇಶದ ರೂಪದಲ್ಲಿದ್ದರೆ, ಪರೋಕ್ಷ ಸೂಚನೆಗಳು ‘ಅಭಿಪ್ರಾಯ, ದೂರುದಾರರ ಅರ್ಜಿಯ ಉಲ್ಲೇಖ, ಬೇರೆಬೇರೆ ತೀರ್ಪುಗಳ ಉಲ್ಲೇಖ’ದ ರೂಪದಲ್ಲಿವೆ.
ಸುಪ್ರಿಂ ಕೋರ್ಟ್ನ ಈ ಐತಿಹಾಸಿಕ ತೀರ್ಪಿನಲ್ಲಿ ಸೌಜನ್ಯ ಪರ ನಡೆದ ಹೋರಾಟವನ್ನು ಉಲ್ಲೇಖಿಸಿದೆ. ಹಾಗಾಗಿ ರಾಜ್ಯ ಸರ್ಕಾರವು ಈಗ ಈ ತೀರ್ಪಿನ ಉಲ್ಲೇಖಗಳ ಆಧಾರದಲ್ಲಿ ಸೌಜನ್ಯ ಪರ ಹೋರಾಟಗಾರರು, ಯೂಟ್ಯೂಬರ್ ಗಳ ಮೇಲಿರುವ ಎಲ್ಲಾ ಪ್ರಕರಣಗಳನ್ನು ಸಚಿವ ಸಂಪುಟದಲ್ಲಿ ಮಂಡಿಸಿ ರದ್ದುಗೊಳಿಸಬೇಕು.
ತೀರ್ಪಿನಲ್ಲಿ ಹೋರಾಟಗಾರರ ಬಗ್ಗೆ ಏನು ಹೇಳಿದೆ ? : ಸೌಜನ್ಯ ಅತ್ಯಾಚಾರ ಮತ್ತು ಕೊಲೆಯ ಆರೋಪಿಗಳನ್ನು ಬಂಧಿಸಲು ಮೂರು ತನಿಖಾ ತಂಡಗಳು ವಿಫಲವಾದವು. ಇದು ಕೇವಲ ತನಿಖಾ ತಂಡದ, ಸರ್ಕಾರದ ವಿಫಲತೆಯಲ್ಲ. ಬದಲಾಗಿ “Society would be failing in its duty” ಎಂದು ಸಮಾಜದ ಕರ್ತವ್ಯದ ವಿಫಲತೆ ಎಂದು ಬಣ್ಣಿಸಿ, ಹೋರಾಟವನ್ನು ಚುರುಕುಗೊಳಿಸಬೇಕು ಎಂದು ಪರೋಕ್ಷ ಅಭಿಪ್ರಾಯ ವ್ಯಕ್ತಪಡಿಸಿದೆ.
ಮೊದಲನೆಯದಾಗಿ, ಸುಪ್ರಿಂ ಕೋರ್ಟ್ ತೀರ್ಪಿನ ಪ್ಯಾರಾ 12 ರಿಂದ 14ರಲ್ಲಿ ಹೋರಾಟದ ವಿಚಾರ ಪ್ರಸ್ತಾಪವಾಗುತ್ತದೆ. ”ಸೌಜನ್ಯ ಕುಟುಂಬ ಮತ್ತು ಸಾರ್ವಜನಿಕರು ಸಂತ್ರಸ್ತೆಯ ಸಾವಿನ ಪ್ರಕರಣದಲ್ಲಿ ಸಂತೋಷ್ ರಾವ್ ನಿಜವಾದ ಆರೋಪಿಯಲ್ಲ ಎಂದು ಅನುಮಾನ ವ್ಯಕ್ತಪಡಿಸಿ, ಬೇರೆ ವ್ಯಕ್ತಿಗಳ ಪಾತ್ರದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ಇದರ ನಂತರ Due to public outcry and considering the sensitivity of the matter ಎಂದು ಹೇಳಿ, ಕರ್ನಾಟಕ ಸರ್ಕಾರವು 12.12.2012ರಂದು ತನಿಖೆಯನ್ನು CIDಗೆ ವರ್ಗಾಯಿಸಿತು” ಎಂದು ಸುಪ್ರಿಂ ಕೋರ್ಟ್ ಹೇಳುತ್ತದೆ.
ಇದಕ್ಕಿಂತಲೂ ಮುಖ್ಯವಾದುದು ಪ್ಯಾರಾ 14ರ ಉಲ್ಲೇಖ. ಇಲ್ಲಿ ತೀರ್ಪಿನಲ್ಲಿ ಕುಟುಂಬದ ಆರೋಪವನ್ನಷ್ಟೇ ದಾಖಲಿಸುವುದಿಲ್ಲ. huge outcry and agitation by the General Public (ಸಾರ್ವಜನಿಕರಿಂದ ಭಾರೀ ಆಕ್ರೋಶ ಮತ್ತು ಪ್ರತಿಭಟನೆ) ನಡೆದಿತ್ತು ಎಂದು ದಾಖಲಿಸುತ್ತದೆ. ಪೊಲೀಸರು ಮತ್ತು ಸರ್ಕಾರಗಳು ನಿಜವಾದ ಅಪರಾಧಿಗಳನ್ನು ರಕ್ಷಿಸುತ್ತಿದೆ, ಪ್ರಕರಣವನ್ನು ಮುಚ್ಚಿಹಾಕಲಾಗುತ್ತಿದೆ ಮತ್ತು ನಿರಪರಾಧಿಯನ್ನು ಪ್ರಕರಣದಲ್ಲಿ ಸಿಕ್ಕಿಸಲಾಗಿದೆ ಎಂದು ಆರೋಪಿಸಿ ಜನರು ಹೋರಾಟ ನಡೆಸಿದ್ದರು ಎಂದು ತೀರ್ಪಿನಲ್ಲಿ ಬರುತ್ತದೆ. ಆ ಸಾರ್ವಜನಿಕ ಒತ್ತಡ ಮತ್ತು ಆಕ್ರೋಶದ (public pressure and outcry) ನಂತರವೇ 06.11.2013ರಂದು ಕರ್ನಾಟಕ ಸರ್ಕಾರ ಪ್ರಕರಣವನ್ನು CBIಗೆ ವಹಿಸಿತು ಎಂದು ಸುಪ್ರೀಂ ಕೋರ್ಟ್ ದಾಖಲಿಸಿದೆ.
ಜನರ ಹೋರಾಟವು ತನಿಖಾ ಸಂಸ್ಥೆಯನ್ನು ಟಾರ್ಗೆಟ್ ಮಾಡಿಲ್ಲ. ಬದಲಾಗಿ, ಆದರೆ ತನಿಖೆಯ ಮೇಲಿನ ಸಾರ್ವಜನಿಕ ಉತ್ತರದಾಯಿತ್ವವನ್ನು ನಿರ್ಮಿಸಿದ ಅಂಶವಾಗಿ ಅದು ತೀರ್ಪಿನಲ್ಲಿ ಕ್ರಮಬದ್ಧವಾಗಿ ದಾಖಲಾಗಿದೆ. ”ಮೊದಲು ಸಾರ್ವಜನಿಕ ಆಕ್ರೋಶ, ನಂತರ CIDಗೆ ವರ್ಗಾವಣೆ, ಮತ್ತೆ ಸಾರ್ವಜನಿಕ ಆಕ್ರೋಶ ಮತ್ತು ಒತ್ತಡ, ನಂತರ CBIಗೆ ವರ್ಗಾವಣೆ” ಹೀಗೆ ತೀರ್ಪಿನಲ್ಲಿ ಕ್ರೊನಾಲಜಿಯಂತೆ ದಾಖಲಿಸಲಾಗಿದೆ.
ತೀರ್ಪಿನಲ್ಲಿ ಹಿಂದಿನ ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸುವ ಸಂದರ್ಭದಲ್ಲಿ ಇನ್ನೂ ನೇರವಾಗಿ ಹೋರಾಟದ ಪ್ರಾಮುಖ್ಯತೆಯನ್ನು ದಾಖಲಿಸಿದೆ. “Even the agitation was continued for a long period of one year” ಎಂದು ಹೇಳಲಾಗಿದೆ. ಅಂದರೆ, ಸೌಜನ್ಯ ಪ್ರಕರಣದಲ್ಲಿ ಸಾರ್ವಜನಿಕ ಆಂದೋಲನ ಒಂದು ದಿನದ ಅಥವಾ ತಾತ್ಕಾಲಿಕ ಪ್ರತಿಕ್ರಿಯೆಯಾಗಿರಲಿಲ್ಲ. ಸುಮಾರು ಒಂದು ವರ್ಷದ ಅವಧಿಯ ಹೋರಾಟವಾಗಿತ್ತು ಎಂಬುದು ಹಿಂದಿನ ನ್ಯಾಯಾಲಯದ ದಾಖಲೆಯ ಮೂಲಕ ಸುಪ್ರೀಂ ಕೋರ್ಟ್ ತೀರ್ಪಿನ ಭಾಗವಾಗಿದೆ.
ಅದೇ ಉಲ್ಲೇಖದಲ್ಲಿ, “ಅನುಮಾನಿತರ ವಿರುದ್ಧ ಏನೂ ಇಲ್ಲದಿದ್ದರೆ ಇಷ್ಟು ದೊಡ್ಡ ಹೋರಾಟ ಏಕೆ ನಡೆಯಿತು?” ಎಂಬ ಪ್ರಶ್ನೆಯನ್ನೂ ಆ ನ್ಯಾಯಾಲಯ ಎತ್ತಿತ್ತು. ಸ್ಥಳೀಯ ಸಾರ್ವಜನಿಕರಿಂದಲೂ ಪ್ರಕರಣದ ತನಿಖೆ ಸರಿಯಾಗಿ ನಡೆದಿಲ್ಲ ಎಂಬ ಮಾಹಿತಿ ಬಂದಿತ್ತು ಎಂದು ದಾಖಲಿಸಲಾಗಿದೆ.
ಸೌಜನ್ಯ ಪ್ರಕರಣದಂತಹ ಘಟನೆ ನಡೆದಾಗ ಸಮಾಜದ ಜವಾಬ್ದಾರಿಯ ಏನು ಎಂಬುದರ ಬಗ್ಗೆ ಪ್ಯಾರಾ 60 ಸುಪ್ರಿಂ ಕೋರ್ಟ್ ಹೇಳಿದೆ. ಇದು ಈ ತೀರ್ಪಿನ ಅತ್ಯಂತ ಶಕ್ತಿಶಾಲಿ ಸಾಮಾಜಿಕ ನ್ಯಾಯದ ಭಾಗಗಳಲ್ಲಿ ಇದು ಪ್ರಮುಖವಾಗಿದೆ. “Society would be failing in its duty if it does not provide justice to the victim…” ಅಂದರೆ, 17 ವರ್ಷದ ಬಾಲಕಿ ಅತ್ಯಾಚಾರ ಮತ್ತು ಕೊಲೆಗೆ ಒಳಗಾದ ಪ್ರಕರಣದಲ್ಲಿ ಸರಿಯಾದ ತನಿಖೆ ನಡೆಸಿ ನಿಜವಾದ ಅಪರಾಧಿಗಳನ್ನು ಕಾನೂನಿನ ಮುಂದೆ ತರುವ ಕೆಲಸ ಕೇವಲ ಪೊಲೀಸರ ಅಥವಾ ನ್ಯಾಯಾಲಯದ ಕರ್ತವ್ಯವಲ್ಲ. ಸಮಾಜವೇ ತನ್ನ ಕರ್ತವ್ಯವನ್ನು ನಿರ್ವಹಿಸಬೇಕಾದ ಪ್ರಶ್ನೆ ಎಂದು ಸುಪ್ರೀಂ ಕೋರ್ಟ್ ಹೇಳುತ್ತದೆ.
ಸಾಮಾನ್ಯವಾಗಿ “ಸಮಾಜದ ಜವಾಬ್ದಾರಿ” ಎಂದರೆ ಜನರು ಪ್ರತಿಭಟನೆ ಮಾಡಬೇಕು, ಧ್ವನಿ ಎತ್ತಬೇಕು ಎಂಬ ಅರ್ಥದಲ್ಲಿ ನಾವು ಬಳಸುತ್ತೇವೆ. ಆದರೆ ಸುಪ್ರೀಂ ಕೋರ್ಟ್ನ ಪ್ಯಾರಾ 60ರ ಅರ್ಥ ಅದಕ್ಕಿಂತ ವಿಶಾಲವಾಗಿದೆ. ನ್ಯಾಯ ದೊರಕದಿದ್ದರೆ “Society would be failing in its duty” ಎಂದು ಹೇಳುವ ಮೂಲಕ, ಸಂತ್ರಸ್ತೆಗೆ ನ್ಯಾಯ ದೊರಕಿಸುವ ವ್ಯವಸ್ಥೆಯ ವೈಫಲ್ಯವು ಸಮಾಜದ ವೈಫಲ್ಯವೂ ಆಗಿದೆ ಎಂಬ ಮಟ್ಟಕ್ಕೂ ಕೊಂಡೊಯ್ಯುತ್ತದೆ.
ತೀರ್ಪಿನ ಪ್ಯಾರಾ 56ರಲ್ಲಿ ಸುಪ್ರೀಂ ಕೋರ್ಟ್ Pooja Pal v. Union of India ಪ್ರಕರಣವನ್ನು ಉಲ್ಲೇಖಿಸುತ್ತದೆ. ಅಲ್ಲಿ ಅಪರಾಧವು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ವಿಷಯವಲ್ಲ. “crime against society at large” ಎಂದು ಹೇಳಲಾಗಿದೆ. ಸರ್ಕಾರಗಳು ಮಾನವ ಹಕ್ಕುಗಳ ರಕ್ಷಕ ಮತ್ತು ಕಾನೂನಿನ ರಕ್ಷಕನಾಗಿ ತನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಯಾವುದೇ ಲೋಪಕ್ಕೆ ಅದು ಕಾನೂನು ಪಾಲಿಸುವ ನಾಗರಿಕರ ಮುಂದೆ ಉತ್ತರದಾಯಿಯಾಗಿರಬೇಕು ಎಂಬ ವಿಷಯವನ್ನು ಸುಪ್ರೀಂ ಕೋರ್ಟ್ ಇಲ್ಲಿ ಸ್ಪಷ್ಟವಾಗಿ ಹೇಳಿದೆ.
ಕೊನೆಗೆ ಪ್ಯಾರಾ 59 ಮತ್ತು 60ರಲ್ಲಿ ಹೋರಾಟದ ಪ್ರಶ್ನೆಯೇ ನ್ಯಾಯದ ಪ್ರಶ್ನೆಯಾಗುತ್ತದೆ. ಪ್ಯಾರಾ 59ರಲ್ಲಿ ಕೋರ್ಟ್ ತನಿಖೆಯ ವೈಫಲ್ಯವನ್ನು ಅತ್ಯಂತ ಕಠಿಣ ಪದಗಳಲ್ಲಿ ವಿವರಿಸುತ್ತದೆ. ತನಿಖೆಯ ರೀತಿಯೇ ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತ ಉಂಟುಮಾಡಿದೆ. ಆರೋಪಿಯಾಗಿ ವಿಚಾರಣೆಗೊಳಗಾದ ವ್ಯಕ್ತಿ ಆ ಅಪರಾಧ ಮಾಡಲು ಅಸಮರ್ಥ ಎಂದು ನಿರ್ಧರಿಸಲಾಯಿತು. ತನಿಖೆಯು ಸಂತ್ರಸ್ತೆಗೆ ಅನ್ಯಾಯ ಉಂಟುಮಾಡುವ ರೀತಿಯಲ್ಲಿ ನಡೆದಿದೆ. ನಿಜವಾದ ಆರೋಪಿಗಳು ತನಿಖೆಯನ್ನು ದಾರಿತಪ್ಪಿಸಿರುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಹೇಳುತ್ತದೆ.
ಅದಾದ ತಕ್ಷಣದ ಪ್ಯಾರಾ 60ರಲ್ಲಿ ಸಮಾಜ/ಹೋರಾಟದ ಜವಾಬ್ದಾರಿ ಬರುತ್ತದೆ. Injustice to a person who was falsely charged can always be compensated, however injustice to the victim who was brutally raped and then murdered can never be compensated ಎಂದು ಬರೆಯಲಾಗಿದೆ. ಅದರ ಅರ್ಥ, ‘ಸುಳ್ಳು ಆರೋಪದಲ್ಲಿ ಸಿಲುಕಿಸಲ್ಪಟ್ಟ ವ್ಯಕ್ತಿಗೆ ಆದ ಅನ್ಯಾಯವನ್ನು ಯಾವಾಗಲೂ ಪರಿಹರಿಸಬಹುದು. ಆದರೆ ಕ್ರೂರವಾಗಿ ಅತ್ಯಾಚಾರಕ್ಕೊಳಗಾಗಿ ನಂತರ ಹತ್ಯೆಗೀಡಾದ ಸಂತ್ರಸ್ತೆಗೆ ಆದ ಅನ್ಯಾಯವನ್ನು ಎಂದಿಗೂ ಪರಿಹರಿಸಲಾಗುವುದಿಲ್ಲ’ ಎಂದು ಸುಪ್ರಿಂ ಕೋರ್ಟ್ ಹೇಳಿದೆ. ಅದರ ಮುಂದುವರೆದ ಭಾಗವಾಗಿಯೇ ”Society would be failing in its duty…” ಎಂಬ ತೀರ್ಮಾನಕ್ಕೆ ಕೋರ್ಟ್ ಬರುತ್ತದೆ.
ಹೀಗಾಗಿ ಜನ ಹೋರಾಟದ ಮೂಲಕ ಸರ್ಕಾರವನ್ನು ಕಾಲಕಾಲಕ್ಕೆ ಎಚ್ಚರಿಸಿ ಪೊಲೀಸ್, ಸಿಐಡಿ, ಸಿಬಿಐ, ಎಸ್ಐಟಿ ತನಿಖೆ ನಡೆಸುವಂತೆ ಮಾಡಲಾಯಿತು. ಜನರ ಈ ಹೋರಾಟವನ್ನು ಸುಪ್ರಿಂ ಕೋರ್ಟ್ ಮುಕ್ತಕಂಠದಿಂದ ಶ್ಲಾಘಿಸಿದೆ. ಮಾತ್ರವಲ್ಲದೇ, ಹೋರಾಟದ ಜವಾಬ್ದಾರಿಯನ್ನು ಇನ್ನಷ್ಟೂ ಹೆಚ್ಚಿಸಿದೆ. ಹಾಗಾಗಿ ರಾಜ್ಯ ಸರ್ಕಾರವು ಸುಪ್ರಿಂ ಕೋರ್ಟಿನ ಈ ತೀರ್ಪಿನ ಆಧಾರದಲ್ಲಿ ಹೋರಾಟಗಾರರ ಮೇಲೆ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ರದ್ದುಗೊಳಿಸಬೇಕಿದೆ.


Leave a Reply