ಕರಾವಳಿಯ ಹಿಂದುತ್ವ ರಕ್ಷಣೆಯ ಸಭೆ ‘ಬಾರ್’ಗಳಲ್ಲಿ ನಡೆಯುತ್ತೆ ! ಕೋರ್ಟ್ ದಾಖಲೆಯಲ್ಲಿದೆ ಸ್ಫೋಟಕ ಅಂಶಗಳು!

ಕರಾವಳಿಯ ಹಿಂದುತ್ವ ರಕ್ಷಣೆಯ ಸಭೆ 'ಬಾರ್'ಗಳಲ್ಲಿ ನಡೆಯುತ್ತೆ ! ಕೋರ್ಟ್ ದಾಖಲೆಯಲ್ಲಿದೆ ಸ್ಫೋಟಕ ಅಂಶಗಳು

ನವೀನ್ ಸೂರಿಂಜೆ

ಕೋಮುಗಲಭೆ, ಪ್ರತಿಕಾರದ ಕೊಲೆಗಳು, ಹಿಂದುತ್ವದ ರಕ್ಷಣೆ, ಮುಸ್ಲಿಮರ ವಿರುದ್ಧದ ಕಾರ್ಯಾಚರಣೆಗಳ ಬಗ್ಗೆ ಚರ್ಚೆಗಳು ಆರ್‌ಎಸ್‌ಎಸ್‌ನ ಬೈಠಕ್‌ಗಳಲ್ಲಿ, ಶಾಖೆಗಳಲ್ಲಿ ನಡೆಯುತ್ತವೆ ಎಂದು ಸಾಮಾನ್ಯವಾಗಿ ಅಂದುಕೊಳ್ಳಲಾಗುತ್ತದೆ. ಆದರೆ ಕರಾವಳಿಯ ಹಿಂದುತ್ವ ರಾಜಕಾರಣದ ಒಂದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯದ ದಾಖಲೆಗಳನ್ನು ಗಮನಿಸಿದರೆ, ಕಥೆ ಸ್ವಲ್ಪ ಭಿನ್ನವಾಗಿ ಕಾಣಿಸುತ್ತದೆ. ಹಿಂದುತ್ವದ ಹೆಸರಿನಲ್ಲಿ ನಡೆಯುವ ಪಿತೂರಿಯ ಸಭೆಗಳು ಶಾಖೆಗಳಲ್ಲಿ ಮಾತ್ರವಲ್ಲ, ಬಾರ್‌ಗಳಲ್ಲೂ ನಡೆದಿವೆ ಎಂಬ ಆರೋಪಗಳು ಪೊಲೀಸ್ ಚಾರ್ಜ್‌ಶೀಟ್ ಮತ್ತು ನ್ಯಾಯಾಲಯದ ದಾಖಲೆಗಳಲ್ಲಿ ದಾಖಲಾಗಿವೆ.

ಕೊಳ್ತಮಜಲು ರೆಹಮಾನ್ ಕೊಲೆ ಪ್ರಕರಣದಲ್ಲಿ ಭರತ್ ಕುಮ್ಡೇಲ್ ಸೇರಿದಂತೆ ಭಜರಂಗಿ ಆರೋಪಿಗಳ ವಿರುದ್ಧ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಕೊಲೆಗೂ ಮುನ್ನ ನಡೆದಿತ್ತೆನ್ನಲಾದ ಹಲವು ಪಿತೂರಿ ಸಭೆಗಳ ಸ್ಥಳ ಮತ್ತು ದಿನಾಂಕಗಳನ್ನು ದಾಖಲಿಸಲಾಗಿದೆ. ಆರೋಪಪಟ್ಟಿಯಲ್ಲಿರುವ ಈ ಅಂಶಗಳನ್ನು ಆಧರಿಸಿ ವಿಶೇಷ ಸರ್ಕಾರಿ ಅಭಿಯೋಜಕರು ಜಾಮೀನು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದ ಗಮನಕ್ಕೂ ತಂದಿದ್ದಾರೆ. ಅದರಲ್ಲೂ ಕೆಲವು ಸಭೆಗಳು ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ನಡೆದಿವೆ ಎಂಬುದು ನ್ಯಾಯಾಲಯದ ಆದೇಶದಲ್ಲೇ ದಾಖಲಾಗಿದೆ.

ಮೈಸೂರು ವಿಶೇಷ ಕೋಕಾ ನ್ಯಾಯಾಲಯದ ಜಾಮೀನು ಆದೇಶದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರು ಮಂಡಿಸಿದ ವಾದವನ್ನು ನ್ಯಾಯಾಲಯ ದಾಖಲಿಸಿದೆ. ಅದರ ಪ್ರಕಾರ, ಆರೋಪಿಗಳು ರೆಹಮಾನ್ ಕೊಲೆಗೂ ಮುನ್ನ ಹಲವು ದಿನಾಂಕಗಳಲ್ಲಿ ಪರಸ್ಪರ ಸಂಪರ್ಕದಲ್ಲಿದ್ದು ಪಿತೂರಿ ನಡೆಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು. ಆರೋಪಿಗಳ ಮೊಬೈಲ್ ಕರೆಗಳ ವಿವರಗಳು, ಸ್ಥಳದ ವಿವರಗಳು ಮತ್ತು ಕೆಲವು ಸಾಕ್ಷಿಗಳ ಹೇಳಿಕೆಗಳನ್ನು ಇದಕ್ಕೆ ಆಧಾರವಾಗಿ ಪೊಲೀಸರು ಮುಂದಿಟ್ಟಿದ್ದರು.

ವಿಶೇಷ ಸರ್ಕಾರಿ ಅಭಿಯೋಜಕರು ನ್ಯಾಯಾಲಯದ ಮುಂದೆ ಮಂಡಿಸಿದ ಪ್ರಕಾರ, ಮೊದಲ ಪಿತೂರಿ ಸಭೆ 2025ರ ಏಪ್ರಿಲ್ 26ರಂದು ಬೆಂಜನಪದವಿನ ಲಿಕ್ವಿಡ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ನಡೆದಿತ್ತು. ಬಾರ್​​ ನಲ್ಲಿಯೇ ಪಿತೂರಿ ರೂಪುಗೊಂಡಿತ್ತು ಎಂಬುದು ಪೊಲೀಸರ ಆರೋಪವಾಗಿತ್ತು. ನಂತರ ಮೇ 5ರಂದು ಕೊರ್ದಬ್ಬು ದೇವಸ್ಥಾನದ ಬಳಿ, ಮೇ 14ರಂದು ಮತ್ತೆ ಬೆಂಜನಪದವಿನ ಲಿಕ್ವಿಡ್ ಬಾರ್‌ನಲ್ಲಿ, ಮೇ 25ರ ರಾತ್ರಿ ಮೇ 26ರ ಮಧ್ಯಾಹ್ನದವರೆಗೆ ಭರತ್ ಕುಮ್ಡೇಲ್ ಅವರ ಮನೆಯಲ್ಲಿ ಹಾಗೂ ಮೇ 26ರಂದು ಬಡಗಬೆಳ್ಳೂರು ದೀಪಕ್ ಬಾರ್‌ನಲ್ಲಿ ಪಿತೂರಿ ನಡೆದಿದೆ ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿತ್ತು.

ಅಂದರೆ, ಪೊಲೀಸರ ಚಾರ್ಜ್​​ಶೀಟ್ ಪ್ರಕಾರ ರೆಹಮಾನ್ ಕೊಲೆಯ ಸಂಚು ಒಂದೇ ದಿನದಲ್ಲಿ ರೂಪುಗೊಂಡದ್ದಲ್ಲ. ಏಪ್ರಿಲ್ 26ರಿಂದ ಮೇ 26ರವರೆಗೆ ಹಲವು ಹಂತಗಳಲ್ಲಿ ಆರೋಪಿಗಳು ಪರಸ್ಪರ ಭೇಟಿಯಾಗಿ ಚರ್ಚಿಸಿ, ಕೊನೆಗೆ ಕೊಲೆ ನಡೆದಿತ್ತೆಂದು ಆರೋಪಿಸಲಾಗಿದೆ. ಈ ಪೈಕಿ ಬೆಂಜನಪದವಿನ ಲಿಕ್ವಿಡ್ ಬಾರ್ ಮತ್ತು ಬಡಗಬೆಳ್ಳೂರಿನ ದೀಪಕ್ ಬಾರ್ ಎಂಬ ಎರಡು ಸಾರ್ವಜನಿಕ ಸ್ಥಳಗಳ ಹೆಸರು ನ್ಯಾಯಾಲಯದ ದಾಖಲೆಗಳಲ್ಲಿ ಸ್ಪಷ್ಟವಾಗಿ ಬಂದಿದೆ.

ಪ್ರಾಸಿಕ್ಯೂಷನ್ ಪರವಾಗಿ ನ್ಯಾಯಾಲಯಕ್ಕೆ ಸಲ್ಲಿಸಲಾದ ದಾಖಲೆಗಳ ಪ್ರಕಾರ, ಆರೋಪಿಗಳ ನಡುವೆ ನಡೆದ ದೂರವಾಣಿ ಕರೆಗಳ ವಿವರಗಳನ್ನೂ ತನಿಖಾಧಿಕಾರಿಗಳು ಸಂಚಿನ ಸಂಪರ್ಕಕ್ಕೆ ಸಾಕ್ಷಿಯಾಗಿ ಮುಂದಿಟ್ಟಿದ್ದರು. 2025ರ ಮೇ 25ರಿಂದ ಮೇ 27ರವರೆಗೆ ಆರೋಪಿಗಳ ನಡುವೆ ಪರಸ್ಪರ ಕರೆಗಳು ನಡೆದಿದ್ದು, ಆ ಕರೆಗಳ ವಿವರಗಳು ಆರೋಪಿಗಳ ನಡುವಿನ ಸಂಪರ್ಕವನ್ನು ತೋರಿಸುತ್ತವೆ ಎಂದು ವಿಶೇಷ ಸರ್ಕಾರಿ ಅಭಿಯೋಜಕರು ವಾದಿಸಿದ್ದರು. ಇದಲ್ಲದೆ, ಪ್ರಕರಣದ CW-18 ಮತ್ತು CW-32 ಎಂಬ ಸಾಕ್ಷಿಗಳ ಹೇಳಿಕೆಗಳೂ ಬೆಂಜನಪದವಿನ ಲಿಕ್ವಿಡ್ ಬಾರ್ ಮತ್ತು ಬಡಗಬೆಳ್ಳೂರಿನ ದೀಪಕ್ ಬಾರ್‌ನಲ್ಲಿ ಪಿತೂರಿ ನಡೆದಿತ್ತೆಂಬ ಆರೋಪವನ್ನು ಬೆಂಬಲಿಸುತ್ತವೆ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.

ಇನ್ನು ಮೇ 26ರಂದು ಬಡಗಬೆಳ್ಳೂರಿನ ದೀಪಕ್ ಬಾರ್‌ನಲ್ಲಿ ಪಿತೂರಿ ನಡೆದಿತ್ತು ಎಂಬ ಆರೋಪವನ್ನೂ ಪ್ರಾಸಿಕ್ಯೂಷನ್ ಮುಂದಿಟ್ಟಿತ್ತು. ಜೊತೆಗೆ ಈ ಸಂಬಂಧ ಪ್ರಾಸಿಕ್ಯೂಷನ್ CW-18 ಮತ್ತು CW-32ರ ಹೇಳಿಕೆಗಳನ್ನೂ ಮುಂದಿಟ್ಟಿತ್ತು. ಮೇ 14ರಂದು ಬೆಂಜನಪದವಿನಲ್ಲಿ ಮತ್ತು ಮೇ 26ರಂದು ಬಡಗಬೆಳ್ಳೂರಿನ ದೀಪಕ್ ಬಾರ್‌ನಲ್ಲಿ ಆರೋಪಿಗಳು ಪಿತೂರಿ ನಡೆಸಿದ್ದರು ಎಂಬುದನ್ನು ಈ ಸಾಕ್ಷಿಗಳ ಹೇಳಿಕೆಗಳು ಬೆಂಬಲಿಸುತ್ತವೆ ಎಂದು ಸರ್ಕಾರಿ ಅಭಿಯೋಜಕರು ವಾದಿಸಿದ್ದರು. ಆದರೆ ಜಾಮೀನು ವಿಚಾರಣೆಯ ಹಂತದಲ್ಲಿ ಈ ಹೇಳಿಕೆಗಳ ಆಧಾರದ ಮೇಲೆ ಆರೋಪಿಗಳು ಪಿತೂರಿ ನಡೆಸಿದ್ದಾರೆ ಎಂದು ಅಂತಿಮವಾಗಿ ತೀರ್ಮಾನಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು. ಈ ಜಾಮೀನು ಆದೇಶವನ್ನು ಓದುವಾಗ ಒಂದು ಸಂಗತಿಯನ್ನು ಪ್ರತ್ಯೇಕವಾಗಿ ಅರ್ಥಮಾಡಿಕೊಳ್ಳಬೇಕು. ನ್ಯಾಯಾಲಯವು ‘ಪಿತೂರಿ ನಡೆದಿಲ್ಲ’ ಎಂದು ಅಂತಿಮವಾಗಿ ಹೇಳಿಲ್ಲ. ಅದೇ ಸಮಯದಲ್ಲಿ, ಪೊಲೀಸರು ಆರೋಪಪಟ್ಟಿಯಲ್ಲಿ ಹೇಳಿರುವ ಸ್ಥಳಗಳು ಮತ್ತು ಮೊಬೈಲ್ ಲೊಕೇಷನ್‌ಗಳು ಮಾತ್ರ ಸಾಕು, ಆರೋಪಿಗಳು ಪಿತೂರಿ ನಡೆಸಿದ್ದಾರೆ ಎಂದು ಈ ಹಂತದಲ್ಲೇ ಹೇಳಲು ಸಾಧ್ಯವಿಲ್ಲ ಎಂದಿದೆ. ಅಂದರೆ, ಆರೋಪಗಳ ಸತ್ಯಾಸತ್ಯತೆ ಅಂತಿಮ ವಿಚಾರಣೆಯಲ್ಲಿ ಸಾಕ್ಷ್ಯಗಳ ಮೂಲಕ ನಿರ್ಧಾರವಾಗಬೇಕಿದೆ.

ಆದರೆ ಸಾರ್ವಜನಿಕ ಚರ್ಚೆಯ ದೃಷ್ಟಿಯಿಂದ ಈ ಆದೇಶ ಮತ್ತೊಂದು ಕುತೂಹಲಕಾರಿ ಪ್ರಶ್ನೆಯನ್ನು ಎತ್ತುತ್ತದೆ. ಕರಾವಳಿಯಲ್ಲಿ ಹಿಂದುತ್ವದ ರಾಜಕೀಯ, ಸಂಘಟನೆ ಮತ್ತು ಹಿಂಸಾತ್ಮಕ ಪ್ರತೀಕಾರದ ಬಗ್ಗೆ ಚರ್ಚೆಗಳು ಯಾವ ಸ್ಥಳಗಳಲ್ಲಿ ನಡೆಯುತ್ತವೆ? ಹಿಂದುತ್ವದ ಹೆಸರಿನಲ್ಲಿ ನಡೆಯುವ ಪ್ರತಿಯೊಂದು ನಿರ್ಧಾರವೂ ಶಾಖೆಯಲ್ಲೇ ಆಗುತ್ತದೆಯೇ? ಅಥವಾ ರಾಜಕೀಯ ಹಾಗೂ ಸಂಘಟನಾ ಚಟುವಟಿಕೆಗಳ ನಡುವೆ ಬಾರ್​ ಗಳಲ್ಲೂ ಹಿಂದುತ್ವವಾದಿಗಳು  ಸಭೆಗಳು ನಡೆಸುತ್ತಾರೆಯೇ ? ಅದು ಯಾವ  ಮಾದರಿಯ ಸಭೆ ? ಬಾರ್​​ ನಲ್ಲಿ ಗುಂಪುಗೂಡಿ ಕುಡಿದು  ಧರ್ಮ ರಕ್ಷಣೆ ಮಾಡಬೇಕಾದ ಸ್ಥಿತಿ ಹಿಂದೂ ಧರ್ಮಕ್ಕೆ ಬಂದಿದೆಯೇ ? ಎಂಬ ಪ್ರಶ್ನೆಗಳಿಗೆ ಕರಾವಳಿ ಜನ ಉತ್ತರ ಕಂಡುಕೊಳ್ಳಬೇಕಿದೆ.

ರೆಹಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯದ ಮುಂದೆ ಇಟ್ಟಿರುವ ಆರೋಪಗಳು ಮತ್ತು ನ್ಯಾಯಾಲಯದ ಜಾಮೀನು ಆದೇಶದಲ್ಲಿರುವ ವಿವರಗಳು ಕನಿಷ್ಠ ಇಂತಹ ಪ್ರಶ್ನೆಗಳನ್ನು ಕೇಳುವ ಅವಕಾಶವನ್ನು ನೀಡುತ್ತವೆ. ವಿಶೇಷವಾಗಿ, ಕೊಲೆಗೂ ಮುನ್ನದ ಪಿತೂರಿಯ ಸಭೆಗಳೆಂದು ಪ್ರಾಸಿಕ್ಯೂಷನ್ ಹೇಳಿರುವ ಸ್ಥಳಗಳ ಪಟ್ಟಿಯಲ್ಲಿ ಎರಡು ಬಾರ್ ಅ್ಯಂಡ್ ರೆಸ್ಟೋರೆಂಟ್‌ಗಳ ಹೆಸರು ನ್ಯಾಯಾಲಯದ ದಾಖಲೆಯಲ್ಲೇ ಪದೇ ಪದೇ ಕಾಣಿಸಿಕೊಂಡಿದೆ.

ಹೀಗಾಗಿ ‘ಹಿಂದುತ್ವದ ರಕ್ಷಣೆ’ ಎಂಬ ಹೆಸರಿನಲ್ಲಿ ನಡೆಯುವ ರಾಜಕೀಯ ಚರ್ಚೆಗಳ ಸ್ಥಳಗಳ ಬಗ್ಗೆ ಸಮಾಜದ ಮುಂದೆ ಮತ್ತೊಂದು ಚಿತ್ರ ತೆರೆದುಕೊಳ್ಳುತ್ತದೆ. ಶಾಖೆ, ಬೈಠಕ್, ದೇವಸ್ಥಾನಗಳಷ್ಟೇ ಅಲ್ಲ, ಬಾರ್‌ಗಳೂ ಪೊಲೀಸ್ ಚಾರ್ಜ್‌ಶೀಟ್‌ ಪ್ರಕಾರ ಹಿಂದುತ್ವ ರಕ್ಷಣೆಗಾಗಿ ಪಿತೂರಿಯ ಸ್ಥಳಗಳಾಗಿ ದಾಖಲಾಗಿವೆ ಎಂಬುದು ಈ ಪ್ರಕರಣದ ನ್ಯಾಯಾಲಯದ ದಾಖಲೆಗಳಿಂದ ಹೊರಬರುವ ಒಂದು ಗಮನಾರ್ಹ ಅಂಶ.

ಆದರೆ ಅಂತಿಮವಾಗಿ, ಈ ಎಲ್ಲಾ ಆರೋಪಗಳು ನ್ಯಾಯಾಲಯದ ವಿಚಾರಣೆಯಲ್ಲಿ ಸಾಕ್ಷ್ಯಗಳ ಮೂಲಕ ಸಾಬೀತಾಗಬೇಕಿದೆ. ಜಾಮೀನು ಆದೇಶವು ಆರೋಪಿಗಳ ಅಪರಾಧವನ್ನು ಅಂತಿಮವಾಗಿ ನಿರ್ಧರಿಸುವ ತೀರ್ಪಲ್ಲ. ನ್ಯಾಯಾಲಯವೇ ಗಮನಿಸಿರುವಂತೆ, ಆರೋಪಪಟ್ಟಿಯಲ್ಲಿರುವ ದಾಖಲೆಗಳನ್ನು ಕಾನೂನಿನ ಪರೀಕ್ಷೆಗೆ ಒಳಪಡಿಸಿ, ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿ, ಎಲ್ಲಾ ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರವೇ ಪಿತೂರಿಯ ಆರೋಪಗಳ ಸತ್ಯಾಸತ್ಯತೆ ನಿರ್ಧಾರವಾಗಲಿದೆ.

ಆದರೂ ಒಂದು ಪ್ರಶ್ನೆ ಮಾತ್ರ ಉಳಿಯುತ್ತದೆ. ಕರಾವಳಿಯ ಹಿಂದುತ್ವದ ರಾಜಕೀಯದ ಕೆಲವು ನಿರ್ಣಾಯಕ ಸಭೆಗಳು ಶಾಖೆಗಳಲ್ಲಿ ನಡೆಯುತ್ತವೆಯೋ, ಬಾರ್‌ಗಳಲ್ಲೋ? ಈ ಪ್ರಶ್ನೆಗೆ ಉತ್ತರ ಹುಡುಕಲು ರೆಹಮಾನ್ ಕೊಲೆ ಪ್ರಕರಣದ ಚಾರ್ಜ್‌ಶೀಟ್ ಮತ್ತು ನ್ಯಾಯಾಲಯದ ದಾಖಲೆಗಳೇ ಸಾಕಷ್ಟು ಕುತೂಹಲಕಾರಿ ದಾಖಲೆಗಳಾಗಿವೆ.

ನವೀನ್ ಸೂರಿಂಜೆ
ನವೀನ್ ಸೂರಿಂಜೆ

Leave a Reply

Your email address will not be published.