– ನವೀನ್ ಸೂರಿಂಜೆ
ತನ್ನ ಹಿಂದೂ ಗೆಳೆಯನ ತಂದೆಗೆ ರಕ್ತದಾನ ಮಾಡಿದ್ದ ಕೊಳ್ತಮಜಲು ರೆಹಮಾನ್‌ನನ್ನು ಅದೇ ಹಿಂದೂ ಗೆಳೆಯ ಭಜರಂಗದಳದ ಜೊತೆ ಸೇರಿಕೊಂಡು ಮನೆಗೆ ಕರೆಯಿಸಿ ಕೊಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಆರೋಪಿಗಳಿಗೆ ಮೈಸೂರಿನ ಕೋಕಾ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ. ಭೀಕರ ಕೊಲೆ ಪ್ರಕರಣದಲ್ಲಿ ಆರೋಪಿಗಳು ಜಾಮೀನು ಪಡೆದಿರುವುದು ಸಹಜವಾಗಿಯೇ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿದೆ. ಪ್ರಕರಣದಲ್ಲಿ ಕೋಕಾ ಕಾಯ್ದೆ ಅನ್ವಯಿಸಿದ್ದರೂ ಜಾಮೀನು ಹೇಗೆ ಸಿಕ್ಕಿತು? ಪೊಲೀಸರು ಸಲ್ಲಿಸಿದ ಸಾಕ್ಷ್ಯಗಳಲ್ಲಿ ಏನು ಕೊರತೆಯಿತ್ತು? ಸರ್ಕಾರಿ ವಕೀಲರು ಆ ಕೊರತೆಗಳನ್ನು ನ್ಯಾಯಾಲಯದ ಮುಂದೆ ಸಮರ್ಥವಾಗಿ ಎದುರಿಸಿದ್ದರೇ? ಜಾಮೀನು ಆದೇಶದಲ್ಲೇನಾದರೂ ವೈರುಧ್ಯಗಳಿವೆಯೇ? ಎಂಬ ಪ್ರಶ್ನೆಗಳು ಈಗ ಎದುರಾಗುತ್ತವೆ.
ಈ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾದರೆ ಮೈಸೂರಿನ ಕೋಕಾ ವಿಶೇಷ ನ್ಯಾಯಾಲಯ ನೀಡಿರುವ ಜಾಮೀನು ಆದೇಶವನ್ನು ಗಮನಿಸಬೇಕು.
2025ರ ಮೇ 27ರಂದು ಕೊಳ್ತಮಜಲು ಅಬ್ದುಲ್ ರೆಹಮಾನ್ ಕೊಲೆಯಾದರು. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ FIR 54/2025 ದಾಖಲಾಗಿತ್ತು. ಕುರಿಯಾಳ ಗ್ರಾಮದ ಇರಾಕೋಡಿ ಪ್ರದೇಶದಲ್ಲಿ ಅಬ್ದುಲ್ ರೆಹಮಾನ್ ಮತ್ತು ಕಲಂದರ್ ಶಫಿ ಅವರ ಮೇಲೆ ಕತ್ತಿ ಸೇರಿದಂತೆ ಮಾರಕ ಆಯುಧಗಳಿಂದ ದಾಳಿ ನಡೆದಿದೆ ಎಂಬ ಮಾಹಿತಿ ಪೊಲೀಸರಿಗೆ ಬಂದಿತ್ತು. ಸ್ಥಳಕ್ಕೆ ತೆರಳಿದಾಗ ರೆಹಮಾನ್ ತೀವ್ರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕಲಂದರ್ ಶಫಿಗೂ ಗಂಭೀರ ಗಾಯಗಳಾಗಿದ್ದವು.
ಇಬ್ಬರೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಕಲಂದರ್ ಶಫಿಯನ್ನು ಆಂಬ್ಯುಲೆನ್ಸ್ ಮೂಲಕ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಅವರು ನೀಡಿದ ಹೇಳಿಕೆಯ ಪ್ರಕಾರ, 27-05-2025ರಂದು ಮಧ್ಯಾಹ್ನ ಅಬ್ದುಲ್ ರೆಹಮಾನ್ ಅವರು ಇರಾಕೋಡಿ ರಾಜೀವ್ ಅವರ ಮನೆಯ ಸಮೀಪದ ನದಿಯಿಂದ ತಮ್ಮ KA-19-AE-1477 ನೋಂದಣಿ ಸಂಖ್ಯೆಯ ಪಿಕಪ್ ವಾಹನಕ್ಕೆ ಮರಳು ತುಂಬಿಕೊಂಡು, ಅದನ್ನು ರಾಜೀವ್ ಅವರ ಮನೆಯ ಬಳಿ ಇಳಿಸುತ್ತಿದ್ದ ಸಂದರ್ಭದಲ್ಲಿ ಕತ್ತಿ, ಚಾಕು, ರಾಡ್ ಮತ್ತಿತರ ಮಾರಕ ಆಯುಧಗಳನ್ನು ಹೊಂದಿದ್ದ ಸುಮಾರು 15 ಮಂದಿಯ ಗುಂಪು ಅವರನ್ನು ವಾಹನದಿಂದ ಹೊರಗೆಳೆದು ಹಲ್ಲೆ ಮಾಡಿತ್ತು.
ಕಲಂದರ್ ಶಫಿ ಅವರನ್ನು ರಕ್ಷಿಸಲು ಮುಂದಾದಾಗ ಅವರ ಮೇಲೂ ಹಲ್ಲೆ ನಡೆದಿತ್ತು. ಬಳಿಕ ಸ್ಥಳಕ್ಕೆ ಇತರರು ಬರುತ್ತಿರುವುದನ್ನು ಕಂಡು ಆರೋಪಿಗಳು ಅಲ್ಲಿಂದ ಪರಾರಿಯಾದರು ಎಂಬುದು ಪ್ರಕರಣದ ಆರೋಪ.
ಗಂಭೀರವಾಗಿ ಗಾಯಗೊಂಡಿದ್ದ ಅಬ್ದುಲ್ ರೆಹಮಾನ್ ಮೃತಪಟ್ಟರು. ಕಲಂದರ್ ಶಫಿ ICUನಲ್ಲಿ ಚಿಕಿತ್ಸೆ ಪಡೆಯಬೇಕಾಯಿತು.
ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆ ಹಲವು ತಿರುವುಗಳನ್ನು ಕಂಡಿತು. 2025ರ ಅಕ್ಟೋಬರ್ 1ರಂದು ಬಂಟ್ವಾಳ ನ್ಯಾಯಾಲಯದಲ್ಲಿದ್ದ ಪ್ರಕರಣವನ್ನು ಕಮಿಟಲ್ ಮಾಡಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸುವ ಆದೇಶ ನೀಡಲಾಯಿತು. ಅಕ್ಟೋಬರ್ 13ರಂದು ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯವು ಕಡತವನ್ನು ಮೈಸೂರಿನ ಕೋಕಾ ವಿಶೇಷ ನ್ಯಾಯಾಲಯಕ್ಕೆ ಕಳುಹಿಸಿ ಆರೋಪಿಗಳನ್ನು ಮೈಸೂರು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಿತು.
ನಂತರ ನವೆಂಬರ್ 22ರಂದು ಮೈಸೂರಿನ ಕೋಕಾ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದ ಕೋಕಾ ಅನ್ವಯಿಕೆಯನ್ನು ರದ್ದುಪಡಿಸಿ ಕಡತವನ್ನು ಮತ್ತೆ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯಕ್ಕೆ ಕಳುಹಿಸಿತು.
ಡಿಸೆಂಬರ್ 11ರಂದು ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯವು ಆರೋಪಿ ನಂ.14 ರವಿ ಸಂಜಯ್ ಶೃಂಗೇರಿಗೆ ಜಾಮೀನು ನೀಡಿತು. ಡಿಸೆಂಬರ್ 12ರಂದು ಆರೋಪಿ ನಂ.7ರಿಂದ 10 ಮತ್ತು 13ರವರೆಗಿನ ಅಭಿನ್ ರೈ, ತೇಜಾಕ್ಷ, ಶಿವಪ್ರಸಾದ್, ಪ್ರದೀಪ್, ರಂಜಿತ್ ಮತ್ತು ಸಚಿನ್ ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಲಾಯಿತು.
ಈ ಹಂತದಲ್ಲಿ ಪ್ರಕರಣ ಮತ್ತೆ ಮಹತ್ವದ ತಿರುವು ಪಡೆಯಿತು. 2026ರ ಜನವರಿ 21ರಂದು ಕರ್ನಾಟಕ ಹೈಕೋರ್ಟ್, ಮೈಸೂರಿನ ಕೋಕಾ ನ್ಯಾಯಾಲಯದ ಕೋಕಾ ಅನ್ವಯಿಕೆಯನ್ನು ರದ್ದುಪಡಿಸಿದ ಆದೇಶವನ್ನು ರದ್ದುಪಡಿಸಿ, ಪ್ರಕರಣವನ್ನು ಮೈಸೂರಿನ ಕೋಕಾ ವಿಶೇಷ ನ್ಯಾಯಾಲಯದಲ್ಲೇ ಮುಂದುವರಿಸುವಂತೆ ಆದೇಶಿಸಿತು. ಹೈಕೋರ್ಟ್‌ನ ಈ ಆದೇಶದ ಹಿನ್ನೆಲೆಯಲ್ಲಿ ಫೆಬ್ರವರಿ 3ರಂದು ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯವು ಪ್ರಕರಣದ ಕಡತವನ್ನು ಮತ್ತೆ ಮೈಸೂರಿನ ಕೋಕಾ ನ್ಯಾಯಾಲಯಕ್ಕೆ ಕಳುಹಿಸಿತು.
ಮೇ 29ರಂದು ಮೈಸೂರಿನ ಕೋಕಾ ವಿಶೇಷ ನ್ಯಾಯಾಲಯವು ಆರೋಪಿಗಳ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿತು. ಆದರೆ ನಂತರ ಆರೋಪಿಗಳು ಮತ್ತೆ ಜಾಮೀನು ಅರ್ಜಿ ಸಲ್ಲಿಸಿದರು. ಜುಲೈ 2ರಂದು ಸಲ್ಲಿಸಲಾದ ಹೊಸ ಜಾಮೀನು ಅರ್ಜಿಗಳ ಕುರಿತು ವಾದ-ವಿವಾದಗಳನ್ನು ಆಲಿಸಿದ ಬಳಿಕ ಕೋಕಾ ವಿಶೇಷ ನ್ಯಾಯಾಲಯ ಆರೋಪಿಗಳಿಗೆ ಜಾಮೀನು ನೀಡಿತು.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು ಏನೆಂದರೆ, ಆರೋಪಿಗಳಿಗೆ ಜಾಮೀನು ನೀಡುವ ಸಂದರ್ಭದಲ್ಲಿ ನ್ಯಾಯಾಲಯವು ತನಿಖೆಯಿಂದ ಹೊರಬಂದಿರುವ ಪಿತೂರಿ ಮತ್ತು ಆರೋಪಿಗಳ ಪರಸ್ಪರ ಸಂಪರ್ಕಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಹೇಗೆ ಪರಿಗಣಿಸಿದೆ ಎಂಬುದು.
ಜಾಮೀನು ನೀಡಲು ನ್ಯಾಯಾಲಯ ಮುಂದಿಟ್ಟ ಪ್ರಮುಖ ಕಾರಣಗಳಲ್ಲಿ ಒಂದಾಗಿರುವುದು ಆರೋಪಿಗಳು ಸಂಘಟಿತವಾಗಿ ಕೃತ್ಯ ನಡೆಸಿದ್ದರು ಎಂಬುದನ್ನು ಪೊಲೀಸರು ಸಮರ್ಪಕವಾಗಿ ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂಬ ಅಂಶ.
ಇಲ್ಲಿಯೇ ತನಿಖೆಯ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆ ಎದುರಾಗುತ್ತದೆ. ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಆರೋಪಿಗಳ ಮೊಬೈಲ್ ಟವರ್ ಲೊಕೇಶನ್ ಮತ್ತು ಕಾಲ್ ರೆಕಾರ್ಡ್‌ಗಳನ್ನು ಪಿತೂರಿಗೆ ಸಂಬಂಧಿಸಿದ ಪ್ರಮುಖ ಅಂಶವಾಗಿ ಉಲ್ಲೇಖಿಸಿರುವುದಾಗಿ ಹೇಳಲಾಗಿದೆ. ಆರೋಪಿಗಳು ವಿವಿಧ ಸಂದರ್ಭಗಳಲ್ಲಿ ಒಂದೇ ಪ್ರದೇಶದಲ್ಲಿ ಸೇರಿದ್ದರು ಎಂಬುದನ್ನು ತೋರಿಸಲು ಈ ಡಿಜಿಟಲ್ ದಾಖಲೆಗಳನ್ನು ಬಳಸಲಾಗಿದೆ. ಆದರೆ ಈ ದಾಖಲೆಗಳನ್ನು ನ್ಯಾಯಾಲಯದಲ್ಲಿ ಸಾಕ್ಷ್ಯವಾಗಿ ಬಲಪಡಿಸಲು ಅಗತ್ಯವಾದ ಪ್ರಮಾಣೀಕರಣದ ಪ್ರಶ್ನೆ ಎದುರಾದಾಗ, ಪೊಲೀಸರು ಅಗತ್ಯವಾದ 65-B ಪ್ರಮಾಣಪತ್ರವನ್ನು ಸಲ್ಲಿಸಿಲ್ಲ ಎಂಬುದು ಆರೋಪಿಗಳಿಗೆ ಜಾಮೀನು ನೀಡುವ ಸಂದರ್ಭದಲ್ಲಿ ನ್ಯಾಯಾಲಯದ ಗಮನಕ್ಕೆ ಬಂದಿದೆ.
ಇದು ಅತ್ಯಂತ ಗಂಭೀರವಾದ ಪ್ರಶ್ನೆಯಾಗಿದೆ. ಮೊಬೈಲ್ ಟವರ್ ಲೊಕೇಶನ್ ಮತ್ತು ಕಾಲ್ ರೆಕಾರ್ಡ್‌ಗಳನ್ನು ತನಿಖೆಯ ಪ್ರಮುಖ ಭಾಗವನ್ನಾಗಿ ಪೊಲೀಸರು ಬಳಸಿಕೊಂಡಿದ್ದರೆ, ಅವುಗಳನ್ನು ನ್ಯಾಯಾಲಯದಲ್ಲಿ ಕಾನೂನುಬದ್ಧವಾಗಿ ಮಂಡಿಸಲು ಬೇಕಾದ ದಾಖಲೆಗಳನ್ನು ಪೂರ್ಣಗೊಳಿಸುವುದು ತನಿಖಾ ಸಂಸ್ಥೆಯ ಜವಾಬ್ದಾರಿಯಲ್ಲವೇ? ಡಿಜಿಟಲ್ ಸಾಕ್ಷ್ಯವನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸುವುದಷ್ಟೇ ಸಾಕೇ? ಅದನ್ನು ಕಾನೂನಿನ ಪ್ರಕಾರ ಪ್ರಮಾಣೀಕರಿಸುವ ಅಗತ್ಯವನ್ನು ತನಿಖಾಧಿಕಾರಿಗಳು ಗಮನಿಸದಿರುವುದು ಏಕೆ?
ಇದಕ್ಕಿಂತಲೂ ಮುಖ್ಯವಾಗಿ, ಆರೋಪಿಗಳ ಪರ ವಕೀಲರು 65-B ಪ್ರಮಾಣಪತ್ರ ಸಲ್ಲಿಸಲಾಗಿಲ್ಲ ಎಂಬ ಆಕ್ಷೇಪವನ್ನು ಮುಂದಿಟ್ಟಾಗ, ಅದಕ್ಕೆ ಪ್ರತಿಯಾಗಿ ಸರ್ಕಾರಿ ವಕೀಲರು ಪ್ರಮಾಣಪತ್ರವನ್ನು ಸಲ್ಲಿಸಲು ಸಮಯಾವಕಾಶ ಕೋರಿದ್ದರೇ? ಡಿಜಿಟಲ್ ಸಾಕ್ಷ್ಯಕ್ಕೆ ಸಂಬಂಧಿಸಿದ ಕೊರತೆಯನ್ನು ಸರಿಪಡಿಸಲು ಕಾನೂನಿನಲ್ಲಿ ಇರುವ ಅವಕಾಶವನ್ನು ಬಳಸಿಕೊಳ್ಳಲು ಸರ್ಕಾರದ ಪರವಾಗಿ ಪ್ರಯತ್ನ ನಡೆದಿತ್ತೇ? ಈ ಪ್ರಶ್ನೆಗಳಿಗೆ ಪ್ರಕರಣದ ದಾಖಲೆಗಳ ಆಧಾರದಲ್ಲಿ ಉತ್ತರ ಸಿಗಬೇಕಿದೆ.
ಏಕೆಂದರೆ 65-B ಪ್ರಮಾಣಪತ್ರದ ಕೊರತೆಯಿಂದಾಗಿ ಡಿಜಿಟಲ್ ಸಾಕ್ಷ್ಯದ ಸ್ವೀಕಾರಾರ್ಹತೆಯ ಬಗ್ಗೆ ಪ್ರಶ್ನೆ ಎದುರಾಗಿದ್ದರೂ, ಅಂತಹ ಕೊರತೆಯನ್ನು ಸರಿಪಡಿಸುವ ಕಾನೂನು ಅವಕಾಶಗಳ ಕುರಿತು ನ್ಯಾಯಾಲಯದ ಮುಂದೆ ಸರ್ಕಾರದ ಪರವಾಗಿ ಸಮರ್ಪಕವಾದ ವಾದ ಮಂಡನೆಯಾಗಬೇಕಿತ್ತು. ಆದರೆ ಆ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆಯೇ ಎಂಬುದು ಈಗ ಪರಿಶೀಲಿಸಬೇಕಾದ ವಿಷಯವಾಗಿದೆ.
ಇಲ್ಲಿ ಮತ್ತೊಂದು ಕುತೂಹಲಕಾರಿ ಅಂಶ ಜಾಮೀನು ಆದೇಶದಲ್ಲೇ ಕಾಣಿಸುತ್ತದೆ. ಜಾಮೀನು ನೀಡುವ ಕಾರಣಗಳನ್ನು ವಿವರಿಸುವ ಸಂದರ್ಭದಲ್ಲಿ ನ್ಯಾಯಾಲಯವು ಆರೋಪಿಗಳ ವಿರುದ್ಧದ ಪಿತೂರಿಗೆ ಸಂಬಂಧಿಸಿದ ಹಲವು ಸ್ಥಳಗಳ ಟವರ್ ಲೊಕೇಶನ್‌ಗಳನ್ನು ಪರಿಶೀಲಿಸಿದೆ. ಒಟ್ಟು ಆರು ಸಂದರ್ಭಗಳಲ್ಲಿ ಪಿತೂರಿ ನಡೆದಿರುವುದಾಗಿ ತನಿಖಾ ಸಂಸ್ಥೆ ಹೇಳಿರುವುದರಲ್ಲಿ, ಐದು ಸಂದರ್ಭಗಳಲ್ಲಿ ಆರೋಪಿಗಳ ಟವರ್ ಲೊಕೇಶನ್‌ಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿವೆ ಎಂದು ನ್ಯಾಯಾಲಯ ಗಮನಿಸಿದೆ.
ಉದಾಹರಣೆಗೆ, ಆರೋಪಿಗಳು ಬಜಪೆ ಪ್ರದೇಶದಲ್ಲಿ ಒಟ್ಟಾಗಿ ಸೇರಿದ್ದರೂ, ಮೊಬೈಲ್ ಟವರ್ ದಾಖಲೆಗಳಲ್ಲಿ ಬಜಪೆಯ ಬೇರೆ ಬೇರೆ ಸ್ಥಳಗಳು ಕಾಣಿಸಿಕೊಂಡಿರುವುದನ್ನು ನ್ಯಾಯಾಲಯ ಪ್ರಶ್ನಿಸಿದೆ. ಇದರಿಂದ ಆರೋಪಿಗಳ ನಿಖರ ಸ್ಥಳ ಒಂದಕ್ಕೊಂದು ತಾಳೆಯಾಗುತ್ತಿಲ್ಲ ಎಂಬ ಅನುಮಾನವನ್ನು ನ್ಯಾಯಾಲಯ ವ್ಯಕ್ತಪಡಿಸಿದೆ. ಜೊತೆಗೆ, ಕಾಲ್ ರೆಕಾರ್ಡ್ ಮತ್ತು ಟವರ್ ಲೊಕೇಶನ್ ದಾಖಲೆಗಳ ಮೂಲ ಹಾಗೂ ಅವುಗಳ ಪ್ರಮಾಣೀಕರಣದ ಪ್ರಶ್ನೆಯನ್ನೂ ನ್ಯಾಯಾಲಯ ಎತ್ತಿದೆ.
ಆದರೆ ಇಲ್ಲಿ ಒಂದು ಮೂಲಭೂತ ಪ್ರಶ್ನೆ ಇದೆ. ಒಂದೇ ಟವರ್ ವ್ಯಾಪ್ತಿಯಲ್ಲಿ ಇರುವ ಪ್ರತಿಯೊಬ್ಬ ವ್ಯಕ್ತಿಯ ಮೊಬೈಲ್ ಒಂದೇ ನಿಖರ ಸ್ಥಳವನ್ನು ತೋರಿಸುವುದಿಲ್ಲ. ಟವರ್ ಲೊಕೇಶನ್ ಎನ್ನುವುದು ವ್ಯಕ್ತಿಯ ಮನೆಯ ಬಾಗಿಲಿನ ಸಂಖ್ಯೆಯಷ್ಟು ನಿಖರವಾದ GPS ಸ್ಥಳವಲ್ಲ. ಹೀಗಿರುವಾಗ, ಒಂದೇ ಪ್ರದೇಶದಲ್ಲಿದ್ದ ಆರೋಪಿಗಳ ಮೊಬೈಲ್‌ಗಳು ಆ ಪ್ರದೇಶದ ಬೇರೆ ಬೇರೆ ಟವರ್‌ಗಳಿಗೆ ಸಂಪರ್ಕಗೊಂಡಿರುವುದನ್ನು ಪಿತೂರಿಯ ಅಸ್ತಿತ್ವವನ್ನೇ ನಿರಾಕರಿಸುವ ಮಟ್ಟಿಗೆ ಪರಿಗಣಿಸಬಹುದೇ ? ಇದು ವಿಚಾರಣೆ ಸಂದರ್ಭದ ಮೆರಿಟ್ ಪ್ರಶ್ನೆಯಲ್ಲವೇ ? ಎಂಬ ಪ್ರಶ್ನೆ ಕಾನೂನುಬದ್ಧವಾಗಿ ಪರಿಶೀಲಿಸಬೇಕಾದದ್ದು ಕ್ರಾಸ್ ಎಕ್ಸಾಮಿನೇಶನ್ ಎಂಬ ‘ಪೂರ್ಣಪ್ರಮಾಣದ ವಿಚಾರಣೆ’ಯ ಹಂತದಲ್ಲಿ ಅಲ್ಲವೇ ?
ಇದಕ್ಕಿಂತಲೂ ಗಮನಾರ್ಹವಾದದ್ದು ಜಾಮೀನು ಆದೇಶದ ಪ್ಯಾರಾ 20 ಮತ್ತು 21ರಲ್ಲಿರುವ ನ್ಯಾಯಾಲಯದ ನಿಲುವು.
ಪ್ಯಾರಾ 20ರಲ್ಲಿ ಬಾರ್‌ನಲ್ಲಿ ನಡೆದ ಪಿತೂರಿಗೆ ಸಂಬಂಧಿಸಿದ ಟವರ್ ಲೊಕೇಶನ್ ದಾಖಲೆಗಳ ಕುರಿತು ನ್ಯಾಯಾಲಯ ಚರ್ಚಿಸುತ್ತದೆ. ಆರೋಪಿಗಳು ಬಾರ್‌ನಲ್ಲಿ ಒಟ್ಟಿಗೆ ಇದ್ದರು ಎಂಬುದಕ್ಕೆ ಲೊಕೇಶನ್ ದಾಖಲೆಗಳಿವೆ. ಆದರೆ ಬಾರ್ ಒಂದು ಸಾರ್ವಜನಿಕ ಸ್ಥಳವಾಗಿರುವುದರಿಂದ, ಪೂರ್ಣ ಪ್ರಮಾಣದ ವಿಚಾರಣೆ ನಡೆಯದೇ ಆ ದಾಖಲೆಗಳನ್ನು ಕಣ್ಣುಮುಚ್ಚಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳುತ್ತದೆ. ಇದು ನ್ಯಾಯಾಲಯದ ಒಂದು ನಿಲುವು.
ಅದೇ ಪ್ರಕರಣದ ಪ್ಯಾರಾ 21ರಲ್ಲಿ ಬಾರ್‌ನಲ್ಲಿ ನಡೆದ ಪಿತೂರಿಗೆ ಸಂಬಂಧಿಸಿದಂತೆ ಇಬ್ಬರು ಸಾಕ್ಷಿಗಳು ಹೇಳಿಕೆ ನೀಡಿರುವುದನ್ನು ನ್ಯಾಯಾಲಯ ಉಲ್ಲೇಖಿಸುತ್ತದೆ. ಆದರೆ ಈ ಹಂತದಲ್ಲಿ ಪ್ರಕರಣದ merits ಅಥವಾ demerits ಅನ್ನು ಆಳವಾಗಿ ಪರಿಶೀಲಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳುತ್ತದೆ. Cr.P.C. ಸೆಕ್ಷನ್ 161ರ ಅಡಿಯಲ್ಲಿ ದಾಖಲಿಸಲಾದ ಸಾಕ್ಷಿದಾರರ ಹೇಳಿಕೆಗಳನ್ನು ಈ ಹಂತದಲ್ಲಿ ಅಂತಿಮ ಸಾಕ್ಷ್ಯವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬ ನಿಲುವನ್ನೂ ನ್ಯಾಯಾಲಯ ವ್ಯಕ್ತಪಡಿಸುತ್ತದೆ.
ಇಲ್ಲಿಯೇ ಜಾಮೀನು ಆದೇಶದ ಕುರಿತು ಪ್ರಮುಖ ಪ್ರಶ್ನೆ ಉದ್ಭವಿಸುತ್ತದೆ. ಒಂದೆಡೆ ಆರೋಪಿಗಳ ವಿರುದ್ಧದ ಟವರ್ ಲೊಕೇಶನ್ ಮತ್ತು ಡಿಜಿಟಲ್ ಸಾಕ್ಷ್ಯಗಳಲ್ಲಿ ಇರುವ ಸಣ್ಣ ವ್ಯತ್ಯಾಸಗಳನ್ನು ಪರಿಶೀಲಿಸಿ, ಅವುಗಳ ಆಧಾರದ ಮೇಲೆ ಪಿತೂರಿಯ ಸಾಕ್ಷ್ಯದ ಬಲವನ್ನು ಪ್ರಶ್ನಿಸಲಾಗುತ್ತದೆ. ಮತ್ತೊಂದೆಡೆ ಆರೋಪಿಗಳ ವಿರುದ್ಧ ಬಾರ್‌ನಲ್ಲಿ ನಡೆದ ಪಿತೂರಿಗೆ ಸಂಬಂಧಿಸಿದಂತೆ ಇಬ್ಬರು ಸಾಕ್ಷಿಗಳ ಹೇಳಿಕೆಗಳಿದ್ದರೂ, ಜಾಮೀನು ಹಂತದಲ್ಲಿ ಅವುಗಳ merits ಅಥವಾ demerits ಅನ್ನು ಆಳವಾಗಿ ಪರಿಶೀಲಿಸಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ.
ಅಂದರೆ, ಆರೋಪಿಗಳಿಗೆ ಅನುಕೂಲವಾಗುವ ಸಂದರ್ಭದಲ್ಲಿ ಸಾಕ್ಷ್ಯದ ಕೊರತೆ ಮತ್ತು ವ್ಯತ್ಯಾಸಗಳನ್ನು ವಿವರವಾಗಿ ಪರಿಶೀಲಿಸಲಾಗುತ್ತದೆ. ಆದರೆ ಆರೋಪಿಗಳ ವಿರುದ್ಧದ ಸಾಕ್ಷ್ಯಗಳನ್ನು ಪರಿಗಣಿಸುವ ಸಂದರ್ಭದಲ್ಲಿ ಇದು ವಿಚಾರಣೆಯ ಹಂತವಲ್ಲ, merits ಪರಿಶೀಲಿಸಲು ಸಾಧ್ಯವಿಲ್ಲ ಎಂಬ ನಿಲುವು ತೆಗೆದುಕೊಳ್ಳಲಾಗಿದೆ ಎಂಬ ಪ್ರಶ್ನೆ ಇಲ್ಲಿ ಎದುರಾಗುತ್ತದೆ.
ಈ ಪ್ರಕರಣದ ಮತ್ತೊಂದು ದೊಡ್ಡ ಪ್ರಶ್ನೆ ಸರ್ಕಾರದ ವೈಫಲ್ಯದ ಬಗ್ಗೆ. ಒಬ್ಬ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ಪೊಲೀಸರು ಸಂಘಟಿತ ಪಿತೂರಿಯ ಆರೋಪವನ್ನು ಮುಂದಿಟ್ಟಿದ್ದರೆ, ಅದನ್ನು ಸಾಬೀತುಪಡಿಸಲು ಬಳಸುವ ಡಿಜಿಟಲ್ ಸಾಕ್ಷ್ಯಗಳನ್ನು ಕಾನೂನಿನ ಎಲ್ಲ ಅಗತ್ಯತೆಗಳನ್ನು ಪೂರೈಸಿ ಸಲ್ಲಿಸುವ ಜವಾಬ್ದಾರಿ ಪೊಲೀಸರ ಮೇಲಿದೆ. ತನಿಖಾ ಸಂಸ್ಥೆ ಒಂದು ಮಹತ್ವದ ಸಾಕ್ಷ್ಯವನ್ನು ಸಂಗ್ರಹಿಸಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿ, ಆದರೆ ಅದನ್ನು ನ್ಯಾಯಾಲಯದಲ್ಲಿ ಸಮರ್ಥಿಸಲು ಅಗತ್ಯವಾದ ಪ್ರಮಾಣೀಕರಣವನ್ನು ಪೂರ್ಣಗೊಳಿಸದಿದ್ದರೆ, ಅದರ ಪರಿಣಾಮವನ್ನು ಅಂತಿಮವಾಗಿ ಪ್ರಕರಣವೇ ಎದುರಿಸಬೇಕಾಗುತ್ತದೆ.
ತನಿಖೆಯಲ್ಲಿ ಉಳಿದಿರುವ ಕೊರತೆಯನ್ನು ಗುರುತಿಸಿ ಅದನ್ನು ಕಾನೂನುಬದ್ಧವಾಗಿ ಸರಿಪಡಿಸುವ ಪ್ರಯತ್ನ ನಡೆದಿತ್ತೇ? 65-B ಪ್ರಮಾಣಪತ್ರದ ಕೊರತೆಯನ್ನು ಎದುರಿಸಲು ನ್ಯಾಯಾಲಯದ ಮುಂದೆ ಸೂಕ್ತವಾದ ಕಾನೂನು ವಾದ ಮಂಡಿಸಲಾಯಿತೇ? ಮೊಬೈಲ್ ಟವರ್ ಲೊಕೇಶನ್‌ಗಳ ಸ್ವರೂಪವನ್ನು, ಅವುಗಳ ತಾಂತ್ರಿಕ ಮಿತಿಗಳನ್ನು ಮತ್ತು ಆರೋಪಿಗಳು ಒಂದೇ ಪ್ರದೇಶದಲ್ಲಿ ಇದ್ದರೆ ಟವರ್ ದಾಖಲೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನ್ಯಾಯಾಲಯದ ಮುಂದೆ ವಿವರಿಸಲಾಯಿತೇ? ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.
ಏಕೆಂದರೆ ಇಲ್ಲಿ ವಿಚಾರ ಕೇವಲ ಭಜರಂಗಿ ಆರೋಪಿಗಳಿಗೆ ಜಾಮೀನು ಸಿಕ್ಕಿದೆ ಎಂಬುದಲ್ಲ. ಪ್ರಕರಣದಲ್ಲಿ ಕೋಕಾ ಕಾಯ್ದೆ ಅನ್ವಯಿಸಲು ಸರ್ಕಾರವೇ ಮುಂದಾಗಿದೆ. ಸಂಘಟಿತ ಅಪರಾಧದ ಆರೋಪವನ್ನು ಸರ್ಕಾರವೇ ಮುಂದಿಟ್ಟಿದೆ. ಅಂತಹ ಸಂದರ್ಭದಲ್ಲಿ ಆ ಆರೋಪವನ್ನು ಬೆಂಬಲಿಸುವ ಸಾಕ್ಷ್ಯಗಳನ್ನು ಕಾನೂನಿನ ದೃಷ್ಟಿಯಿಂದ ಗಟ್ಟಿಯಾಗಿ ಕಟ್ಟಿಕೊಡುವ ಜವಾಬ್ದಾರಿಯೂ ಸರ್ಕಾರದ ಮೇಲೆಯೇ ಇರುತ್ತದೆ.
ಒಂದು ಕಡೆ ತನಿಖಾ ಸಂಸ್ಥೆ ಸಂಘಟಿತ ಪಿತೂರಿಯ ಆರೋಪ ಮಾಡುತ್ತದೆ. ಮತ್ತೊಂದು ಕಡೆ ಅದನ್ನು ಸಾಬೀತುಪಡಿಸುವ ಪ್ರಮುಖ ಡಿಜಿಟಲ್ ದಾಖಲೆಗಳ ಪ್ರಮಾಣೀಕರಣದಲ್ಲಿ ಕೊರತೆ ಉಳಿಯುತ್ತದೆ. ನಂತರ ಅದೇ ಕೊರತೆ ಜಾಮೀನು ನೀಡುವ ಸಂದರ್ಭದಲ್ಲಿ ಆರೋಪಿಗಳಿಗೆ ಅನುಕೂಲವಾಗುತ್ತದೆ. ಈ ಬೆಳವಣಿಗೆ ತನಿಖೆಯ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುವುದು ಸಹಜ.
ಅದರಲ್ಲೂ, ಈ ಪ್ರಕರಣದ ಕೋಕಾ ಅನ್ವಯಿಕೆಯನ್ನು ಒಂದು ಹಂತದಲ್ಲಿ ಮೈಸೂರಿನ ವಿಶೇಷ ನ್ಯಾಯಾಲಯವೇ ರದ್ದುಪಡಿಸಿತ್ತು. ನಂತರ ಹೈಕೋರ್ಟ್ ಆ ಆದೇಶವನ್ನು ರದ್ದುಪಡಿಸಿ ಪ್ರಕರಣವನ್ನು ಮತ್ತೆ ಮೈಸೂರಿನ ಕೋಕಾ ನ್ಯಾಯಾಲಯದಲ್ಲೇ ಮುಂದುವರಿಸುವಂತೆ ಆದೇಶಿಸಿತು. ಅಂದರೆ ಪ್ರಕರಣದ ಕೋಕಾ ವ್ಯಾಪ್ತಿಯ ಪ್ರಶ್ನೆಯೇ ನ್ಯಾಯಾಲಯಗಳ ನಡುವೆ ಒಂದು ಹಂತದಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಅಂತಹ ಪ್ರಕರಣದಲ್ಲಿ ತನಿಖೆ ಮತ್ತು ಪ್ರಾಸಿಕ್ಯೂಷನ್ ಇನ್ನಷ್ಟು ಎಚ್ಚರಿಕೆಯಿಂದ ಮತ್ತು ಕಾನೂನುಬದ್ಧವಾಗಿ ಸಾಕ್ಷ್ಯವನ್ನು ಕಟ್ಟಿಕೊಡಬೇಕಾಗಿತ್ತು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.
ಗಂಭೀರ ಆರೋಪಗಳಿರುವ ಪ್ರಕರಣದಲ್ಲಿ ಆರೋಪಿಗಳ ವಿರುದ್ಧದ ಸಾಕ್ಷ್ಯವನ್ನು ಕಾನೂನಿನ ಪ್ರಕಾರ ಸಿದ್ಧಪಡಿಸುವಲ್ಲಿ ತನಿಖಾ ಸಂಸ್ಥೆ ಮತ್ತು ಸರ್ಕಾರದ ಪರ ವಕೀಲರು ಎಲ್ಲಿ ಎಡವಿದರು ಎಂಬ ಪ್ರಶ್ನೆಗೆ ಉತ್ತರ ಬೇಕೇ ಬೇಕು.
ರೆಹಮಾನ್ ಕೊಲೆಯ ಸತ್ಯವನ್ನು ನ್ಯಾಯಾಲಯದ ವಿಚಾರಣೆಯೇ ಅಂತಿಮವಾಗಿ ನಿರ್ಧರಿಸಬೇಕು. ಆದರೆ ಆ ವಿಚಾರಣೆ ಪರಿಣಾಮಕಾರಿಯಾಗಿ ನಡೆಯಬೇಕಾದರೆ, ತನಿಖೆಯಿಂದ ಸಂಗ್ರಹಿಸಲಾದ ಪ್ರತಿಯೊಂದು ಪ್ರಮುಖ ಸಾಕ್ಷ್ಯವೂ ಕಾನೂನುಬದ್ಧವಾಗಿ ನ್ಯಾಯಾಲಯದ ಮುಂದೆ ನಿಲ್ಲುವಂತಿರಬೇಕು.
65-B ಪ್ರಮಾಣಪತ್ರದಂತಹ ಮೂಲಭೂತ ಕಾನೂನು ಅಗತ್ಯತೆ ಪೂರೈಸದ ಕಾರಣಕ್ಕೆ ತನಿಖೆಯ ಪ್ರಮುಖ ಡಿಜಿಟಲ್ ಸಾಕ್ಷ್ಯವೇ ಪ್ರಶ್ನೆಗೆ ಒಳಗಾದರೆ, ಅದು ಕೇವಲ ತಾಂತ್ರಿಕ ದೋಷವಲ್ಲ. ಪ್ರಕರಣದ ಮೇಲೆಯೇ ಪರಿಣಾಮ ಬೀರುವ ತನಿಖಾ ದೌರ್ಬಲ್ಯ.ಈ ಪ್ರಶ್ನೆಗಳಿಗೆ ಸರ್ಕಾರ, ಪೊಲೀಸ್ ಇಲಾಖೆ ಮತ್ತು ಪ್ರಕರಣದ ಪ್ರಾಸಿಕ್ಯೂಷನ್ ಉತ್ತರಿಸಬೇಕಿದೆ.
ರೆಹಮಾನ್ ಕುಟುಂಬಕ್ಕೆ ನ್ಯಾಯ ದೊರಕಬೇಕಾದರೆ ಕೇವಲ ಆರೋಪಿಗಳನ್ನು ಬಂಧಿಸುವುದು ಅಥವಾ ಕೋಕಾ ಕಾಯ್ದೆ ಹಾಕುವುದು ಸಾಕಾಗುವುದಿಲ್ಲ. ಆರೋಪವನ್ನು ನ್ಯಾಯಾಲಯದಲ್ಲಿ ಕಾನೂನಿನ ಮಾನದಂಡಗಳಿಗೆ ತಕ್ಕಂತೆ ಸಾಬೀತುಪಡಿಸುವಷ್ಟು ಸಮರ್ಥ ತನಿಖೆ ಮತ್ತು ಪರಿಣಾಮಕಾರಿ ಪ್ರಾಸಿಕ್ಯೂಷನ್ ಕೂಡ ಅಗತ್ಯ.
ಇಲ್ಲವಾದರೆ, ಕಠಿಣ ಕಾಯ್ದೆಗಳನ್ನು ಬಳಸಿಕೊಂಡು ಪ್ರಕರಣ ದಾಖಲಿಸಿದರೂ, ತನಿಖೆಯಲ್ಲಿನ ಸಣ್ಣಪುಟ್ಟ ಕಾನೂನು ಲೋಪಗಳು ಅಂತಿಮವಾಗಿ ಆರೋಪಿಗಳಿಗೆ ದೊಡ್ಡ ಕಾನೂನು ಅನುಕೂಲವಾಗಿ ಪರಿಣಮಿಸುವ ಅಪಾಯವಿದೆ. ರೆಹಮಾನ್ ಪ್ರಕರಣದ ಜಾಮೀನು ಆದೇಶ ಈಗ ಇದೇ ಪ್ರಶ್ನೆಯನ್ನು ನಮ್ಮ ಮುಂದೆ ಇಟ್ಟಿದೆ.

Leave a Reply