ತುಳು ಮಾನ್ಯತೆ: ಮಂಗಳೂರು ಉತ್ತರ ಶಾಸಕ ಡಾ ವೈ ಭರತ್ ಶೆಟ್ಟಿ ಸುಳ್ಳುಗಳು !

ತುಳು ಮಾನ್ಯತೆ: ಮಂಗಳೂರು ಉತ್ತರ ಶಾಸಕ ಡಾ ವೈ ಭರತ್ ಶೆಟ್ಟಿ ಸುಳ್ಳುಗಳು !
  • ನವೀನ್ ಸೂರಿಂಜೆ

ತುಳು ಭಾಷೆಗೆ ಕರ್ನಾಟಕದಲ್ಲಿ ಆಡಳಿತಾತ್ಮಕ ಮಾನ್ಯತೆ ದೊರಕಿರುವುದನ್ನು ತುಳುವರು ಪಕ್ಷ ಬೇದ ಮರೆತು ಸ್ವಾಗತಿಸಿದ್ದಾರೆ.  ಆದರೆ ಈ ಐತಿಹಾಸಿಕ ನಿರ್ಧಾರವನ್ನು ಸ್ವಾಗತಿಸುವ ಬದಲು, ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿಯವರು ನಾಲ್ಕು ಮುಖಗಳ ಫೋಟೋ ಹಾಕಿಕೊಂಡು ಬಸವರಾಜ ಬೊಮ್ಮಾಯಿ, ಸುನಿಲ್ ಕುಮಾರ್, ಮೋಹನ್ ಆಳ್ವ ಅವರ ಹೆಸರಿನಲ್ಲಿ ತುಳು ಮಾನ್ಯತೆಯ ಸಂಪೂರ್ಣ ಕ್ರೆಡಿಟ್ ಹಂಚುವ ಪ್ರಯತ್ನ ಮಾಡಿದ್ದಾರೆ. ವಾಸ್ತವದಲ್ಲಿ ಸುನೀಲ್ ಕುಮಾರ್​ ಗೂ, ಮೋಹನ್ ಆಳ್ವ ವರದಿಗೂ ತುಳು ಮಾನ್ಯತೆಗೂ ಸಂಬಂಧವೇ ಇಲ್ಲ ! ತುಳು ಮಾನ್ಯತೆಗಾಗಿ ಸರ್ಕಾರ ಅನುಸರಿಸಿದ್ದು ಕೆ ಎಂ ಗಾಯತ್ರಿ ವರದಿಯನ್ನೇ ಹೊರತು ಮೋಹನ್ಆಳ್ವ ವರದಿಯನ್ನಲ್ಲ.

2023ರ ಜನವರಿ 30ರಂದು ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ವಿ. ಸುನಿಲ್ ಕುಮಾರ್ ಅವರು ತುಳುವಿಗೆ ಮಾನ್ಯತೆ ಕೊಡುವ ಸಾಧ್ಯತೆಯನ್ನು ಅಧ್ಯಯನ ಮಾಡಲು ಡಾ. ಎಂ. ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದರು. ಆ ಸಮಿತಿಯು ತುಳುವಿನ ಇತಿಹಾಸ, ಸಾಹಿತ್ಯ, ಲಿಪಿ, ಶಾಸನಗಳು, ಸಾಂಸ್ಕೃತಿಕ ಪರಂಪರೆ ಮುಂತಾದ ವಿಚಾರಗಳನ್ನು ಅಧ್ಯಯನ ಮಾಡಿತು. 2023ರ ಫೆಬ್ರವರಿ 14ರಂದು ವರದಿ ಸಲ್ಲಿಸಿತು.‌ ಅಷ್ಟೆ !

2023ರಲ್ಲಿ ಮೋಹನ್ ಆಳ್ವ ಸಮಿತಿ ವರದಿ ಸಲ್ಲಿಸಿದ ನಂತರವೂ ತುಳುವಿಗೆ ಆಡಳಿತಾತ್ಮಕ ಮಾನ್ಯತೆ ದೊರೆಯಲಿಲ್ಲ. ಮೋಹನ್ ಆಳ್ವ ವರದಿ ಬಂದ ನಂತರ ಕಾನೂನು ಇಲಾಖೆಯ ಅಭಿಪ್ರಾಯ ಪಡೆಯಲಾಯಿತು. ಅಲ್ಲಿಗೆ ಡಾ ಮೋಹನ್ ಆಳ್ವ ವರದಿಯು ಬಸವರಾಜ ಬೊಮ್ಮಾಯಿ ಮತ್ತು ಸುನೀಲ್ ಕುಮಾರ್ ಅವದಿಯಲ್ಲೇ ಮೂಲೆಗೆ ಬಿತ್ತು. ಯಾಕೆಂದರೆ ಅದು ಅನುಷ್ಠಾನಯೋಗ್ಯ ಆಗಿರಲಿಲ್ಲ !

2026ರಲ್ಲಿ ಕಾಂಗ್ರೆಸ್ ಸರ್ಕಾರವು ತುಳು ಮಾನ್ಯತೆಗಾಗಿ ವರದಿ ನೀಡಲು ಕೆ ಎಂ ಗಾಯತ್ರಿ ನೇತೃತ್ವದ ಸಮಿತಿ ನೇಮಿಸಿತು. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಅಂದಿನ ನಿರ್ದೇಶಕಿ ಕೆ.ಎ. ಗಾಯತ್ರಿ ಅಧ್ಯಕ್ಷತೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಉಪಸ್ಥಿತಿಯಲ್ಲಿ 6 ಮಂದಿ ಸದಸ್ಯರ ಅಧ್ಯಯನ ಸಮಿತಿಯನ್ನು ಸರಕಾರ ನೇಮಿಸಿತ್ತು.   ತುಳು ಅಕಾಡೆಮಿಯ ಅಧ್ಯಕ್ಷರಾದ ತಾರನಾಥ  ಗಟ್ಟಿಯವರ ಜೊತೆ  ಕೆ ಎಂ ಗಾಯತ್ರಿ ನೇತೃತ್ವದ ಸಮಿತಿ ಆಂಧ್ರಪ್ರದೇಶದ ಎಲ್ಲಾ ಇಲಾಖೆಗಳನ್ನು ಸಂದರ್ಶಿಸಿ ಅಲ್ಲಿ ಉರ್ದುವಿಗೆ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡಿದ ವಿಧಾನವನ್ನು ಅಧ್ಯಯನ ಮಾಡಿತು. ಕೆ.ಎಂ. ಗಾಯತ್ರಿ ನೇತೃತ್ವದ ಆ ಸಮಿತಿ 2026ರ ಮಾರ್ಚ್‌ನಲ್ಲಿ ತನ್ನ ವರದಿಯನ್ನು ಸಲ್ಲಿಸಿತು.

ಇದು ಅತ್ಯಂತ ಮುಖ್ಯವಾದ ಅಂಶ. ಅಂದರೆ, 2026ರ ಕೆ.ಎಂ. ಗಾಯತ್ರಿ ನೇತೃತ್ವದ ಸಮಿತಿ ನೀಡಿದ ವರದಿಯಲ್ಲಿ ಡಿ ಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟವು ಒಪ್ಪಿಕೊಂಡಿತು. ಅಂತಿಮವಾಗಿ 2026ರ ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆ ನಡೆಸಿ ಘೋಷಿಸಲಾಯಿತು. ಈ ಎಲ್ಲಾ ಹಂತಗಳನ್ನು ಬಿಟ್ಟು ಒಬ್ಬ ಶಿಕ್ಷಣ ವ್ಯಾಪಾರಿ ಅಥವಾ ಒಂದು ಪಕ್ಷದ ಖಾತೆಗೆ ಸಂಪೂರ್ಣ ಸಾಧನೆಯನ್ನು ಹಾಕುವುದು ಇತಿಹಾಸವನ್ನು ರಾಜಕೀಯ ಪೋಸ್ಟರ್ ಆಗಿ ಪರಿವರ್ತಿಸುವುದಷ್ಟೇ.

ಡಿ ಕೆ ಶಿವಕುಮಾರ್ ಆಪ್ತರಾಗಿರುವ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿಗೆ ತುಳು ಮಾನ್ಯತೆಯ ಲಾಭ ಸಿಗುತ್ತದೆ ಎಂಬ ಭಯವೇ ಡಾ ವೈ ಭರತ್ ಶೆಟ್ಟಿಯವರ ತುರ್ತು ಸುಳ್ಳು ಪೋಸ್ಟರ್ ಗೆ ಕಾರಣ.

ಹೀಗಾಗಿ ವೈ. ಭರತ್ ಶೆಟ್ಟಿ ಅವರ ಪೋಸ್ಟ್‌ನಲ್ಲಿರುವ ಸಮಸ್ಯೆ ತುಳು ಭಾಷೆಯ ಮಾನ್ಯತೆಯನ್ನು ಸ್ವಾಗತಿಸಿರುವುದಲ್ಲ. ಸಮಸ್ಯೆ ಇರುವುದು ಅದರ ಇತಿಹಾಸವನ್ನು ಒಂದೇ ರಾಜಕೀಯ ಕಡೆಯ ಸಾಧನೆಯಂತೆ ತೋರಿಸುವ ರೀತಿ ಮತ್ತು ಸುಳ್ಳುಗಳ ಬಗ್ಗೆ ಮಾತ್ರ  !

ತುಳುವಿಗೆ ಮಾನ್ಯತೆ ದೊರಕಬೇಕೆಂಬ ಬೇಡಿಕೆ ನಿನ್ನೆಯದಲ್ಲ. ತುಳು ಸಂಘಟನೆಗಳು, ಸಾಹಿತಿಗಳು, ಭಾಷಾ ಹೋರಾಟಗಾರರು, ವಿವಿಧ ಪಕ್ಷಗಳ ಜನಪ್ರತಿನಿಧಿಗಳು, ವಿಧಾನಸಭೆಯ ಸದಸ್ಯರು, ಸಂಸದರು ಹಲವು ವರ್ಷಗಳಿಂದ ಈ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. 

2023ರಲ್ಲಿ ಸುನಿಲ್ ಕುಮಾರ್ ಸಚಿವರಾಗಿದ್ದಾಗ ಸಮಿತಿ ರಚನೆಯಾಯಿತು. ಮೋಹನ್ ಆಳ್ವ ಅದರ ಅಧ್ಯಕ್ಷರಾದರು. ವರದಿ ಸಲ್ಲಿಕೆಯಾಯಿತು. ನಂತರ ಅದು ಮೂಲೆ ಸೇರಿತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಇಲಾಖೆಯ ಅಭಿಪ್ರಾಯ, ವಿಧಾನಸಭೆಯ ಚರ್ಚೆಗಳು, ವಿವಿಧ ಜನಪ್ರತಿನಿಧಿಗಳ ಒತ್ತಾಯ, ಕೆ ಎಂ ಗಾಯತ್ರಿ ನೇತೃತ್ವದ ಮತ್ತೊಂದು ತಜ್ಞರ ಸಮಿತಿ, ಆಂಧ್ರಪ್ರದೇಶದ ಮಾದರಿಯ ಅಧ್ಯಯನ, ಹೀಗೆ ಇವೆಲ್ಲ ನಡೆದವು. ಕೊನೆಗೆ 2026ರ ಸೆಪ್ಟೆಂಬರ್ 18ರಂದು ಸಚಿವ ಸಂಪುಟ ನಿರ್ಧಾರ ಕೈಗೊಂಡಿತು. ಇದೆಲ್ಲವನ್ನೂ ಮಾಡಿದ್ದು ಕನ್ನಡ ಮತ್ತು  ಸಂಸ್ಕೃತಿ ಸಚಿವರಾಗಿದ್ದ  ಶಿವರಾಜ ತಂಗಡಗಿಯವರು.

ಹೀಗಿರುವಾಗ ಶಾಸಕ ಭರತ್ ಶೆಟ್ಟಿಯವರು “ನಮ್ಮ ತುಳು ಭಾಷೆಗೆ ರಾಜ್ಯದ 2ನೇ ಅಧಿಕೃತ ಭಾಷೆಯ ಸ್ಥಾನಮಾನ ದೊರಕಿದ್ದು ನಮ್ಮ ನಾಯಕರ ಪ್ರಯತ್ನದ ಫಲ” ಎನ್ನುವ ರೀತಿಯಲ್ಲಿ ಇಡೀ ಪ್ರಕ್ರಿಯೆಯನ್ನು ನಾಲ್ಕು ಮುಖಗಳಿರುವ ಒಂದು ಪೋಸ್ಟರ್‌ಗೆ ಸೀಮಿತಗೊಳಿಸುವುದು ತುಳು ಭಾಷೆಯ ಹೋರಾಟದ ವ್ಯಾಪ್ತಿಯನ್ನೇ ಕುಗ್ಗಿಸುವ ಕೆಲಸ. ಶಿಕ್ಷಣೋದ್ಯಮಿ ಮೋಹನ್  ಆಳ್ವರ ವರದಿಗೂ, ಸುನೀಲ್ ಕುಮಾರ್ ಕಾರ್ಕಳ  ಅವರಿಗೂ ಸಂಬಂಧವೇ ಇಲ್ಲ. ತುಳುವರು ಈ ನಿಟ್ಟಿನಲ್ಲಿ ನೆನಪಿಟ್ಟುಕೊಳ್ಳಬೇಕಿರುವುದು ಕೆ ಎಂ ಗಾಯತ್ರಿ ವರದಿಯನ್ನು ಮಾತ್ರ. 

ನವೀನ್ ಸೂರಿಂಜೆ
ನವೀನ್ ಸೂರಿಂಜೆ

Leave a Reply

Your email address will not be published.