ಕೇಸ್ ಕೂದಲಿಗೆ ಸಮ ಎನ್ನುವ ಪ್ರಭಾಕರ್ ಭಟ್ ಕೋರ್ಟ್ ದಾಖಲೆಗಳು ಏನು ಹೇಳುತ್ತವೆ? ಭಟ್  ಮಾತು ಕೇಳಿ ಜೈಲಲ್ಲಿ ಕೊಳೆಯುತ್ತಿರುವ ಶೂದ್ರ ಯುವಕರು ! 

ಕೇಸ್ ಕೂದಲಿಗೆ ಸಮ ಎನ್ನುವ ಪ್ರಭಾಕರ್ ಭಟ್ ಕೋರ್ಟ್ ದಾಖಲೆಗಳು ಏನು ಹೇಳುತ್ತವೆ? ಭಟ್  ಮಾತು ಕೇಳಿ ಜೈಲಲ್ಲಿ ಕೊಳೆಯುತ್ತಿರುವ ಶೂದ್ರ ಯುವಕರು ! 

– ನವೀನ್ ಸೂರಿಂಜೆ

”ನನ್ನ ಮೇಲೆ ಕೇಸ್ ಹಾಕೋಕೆ ಹೊರಟಿದ್ದಾರೆ.‌ ಇದು ನನಗೆ ದೊಡ್ಡ ವಿಷಯ ಅಲ್ಲ.‌ ಈ ಕೇಸ್ ನನ್ನ ಕೂದಲಿಗೆ ಸಮ‌” ಸೆಪ್ಟೆಂಬರ್ 28ರಂದು ಬಿ.ಸಿ.ರೋಡ್‌ನಲ್ಲಿ ನಡೆದ ‘ಚಲೋ’ ಪ್ರತಿಭಟನೆಯ ಬಳಿಕ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮಾಧ್ಯಮಗಳ ಮುಂದೆ ಆಡಿದ ಮಾತು ಇದು. ಆದರೆ ಇದೇ ಪ್ರಭಾಕರ ಭಟ್ ಅವರ ಕಾನೂನು ಹೋರಾಟದ ಇತಿಹಾಸವನ್ನು ನ್ಯಾಯಾಲಯದ ದಾಖಲೆಗಳ ಮೂಲಕ ನೋಡಿದಾಗ ಚಿತ್ರಣ ಸ್ವಲ್ಪ ಭಿನ್ನವಾಗಿ ಕಾಣುತ್ತದೆ. ಪೊಲೀಸರ ಪ್ರಕರಣಗಳು “ಕೂದಲಿಗೆ ಸಮ” ಎನ್ನುವ ಸಾರ್ವಜನಿಕ ಹೇಳಿಕೆಯೊಂದೆಡೆ ಇದ್ದರೆ, ನ್ಯಾಯಾಲಯದ ಮುಂದೆ ವಯಸ್ಸು, ಆರೋಗ್ಯ, ಬಂಧನದ ಭೀತಿ, ತಡೆಯಾಜ್ಞೆ ಮತ್ತು ಜಾಮೀನು ಎಂಬ ಕಾನೂನು ಪರಿಹಾರಗಳನ್ನು ಪಡೆಯುವ ಇನ್ನೊಂದು ಮುಖ ದಾಖಲೆಗಳಲ್ಲಿ ಕಾಣುತ್ತದೆ. 

ಗೂಂಡಾ ಕಾಯ್ದೆ ಹೇರಿಕೆ ಮತ್ತು ಹಿರಿಯ ಆರ್‌ಎಸ್‌ಎಸ್ ನಾಯಕ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ನೋಟಿಸ್ ಜಾರಿ ಮಾಡಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗದಳ ಸೋಮವಾರ ‘ಬಿ.ಸಿ. ರೋಡ್ ಚಲೋ’ ಪ್ರತಿಭಟನೆ ನಡೆಸಿತು. ಪ್ರತಿಭಟನೆ ಬಳಿಕ ಮಾಧ್ಯಮದ ಜೊತೆ ಈ ರೀತಿ ಮಾತನಾಡಿದ್ದಾರೆ. ರೆಹಮಾನ್ ಕೊಲೆಯ ಆರೋಪಿಗಳಾದ ಭಜರಂಗದಳದ ಭರತ್ ಕುಮ್ಡೇಲು ಮತ್ತು ಇತರರಿಗೆ ಕೋಕಾ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದರೂ ಬಿಡುಗಡೆಯಾಗಿಲ್ಲ. ಕೋಕಾ  ವಿಶೇಷ ನ್ಯಾಯಾಲಯ ಜಾಮೀನು ನೀಡುವ ಸಂದರ್ಭದಲ್ಲಿ ಪೊಲೀಸರು ಗೂಂಡಾ ಕಾಯ್ದೆ ಹಾಕಿದ್ದರಿಂದ ಜೈಲು ಮುಂದುವರೆದಿದೆ. ಈ ಮಧ್ಯೆ ರೆಹಮಾನ್ ಕೊಲೆ ಪ್ರಕರಣದಲ್ಲಿ ಪೊಲೀಸರು ಪ್ರಭಾಕರ ಭಟ್ ಗೆ ನೋಟಿಸ್ ಜಾರಿ ಮಾಡಿದ್ದಾರೆ. ಇವೆರಡನ್ನು ವಿರೋಧಿಸಿ ಹಿಂದುತ್ವ ಸಂಘಟನೆಗಳು ‘ಬಿ ಸಿ ರೋಡ್ ಚಲೋ’ ನಡೆಸಿದವು. 

ಪೊಲೀಸ್ ಕೇಸ್​ಗಳು ನನ್ನ ಕೂದಲಿಗೆ ಸಮ ಎಂದವರು, 2017ರಲ್ಲಿಯೇ 2015ರ ಪುತ್ತೂರು ದ್ವೇಷ ಭಾಷಣ ಪ್ರಕರಣದಲ್ಲಿ ರಾಜ್ಯ ಸರ್ಕಾರ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಹೋಗಿದ್ದರು. ಜುಲೈ 13, 2017ರಂದು ಹೈಕೋರ್ಟ್ ಆ ಪ್ರಕರಣದ ಮುಂದಿನ ಕ್ರಿಮಿನಲ್ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಿತ್ತು. ಅದಕ್ಕೂ ಮೊದಲು, ಏಪ್ರಿಲ್ 2017ರಲ್ಲಿ ಅವರು ಇದೇ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದರು. 2014ರ ಬಂಟ್ವಾಳ ಮತ್ತು ವಿಟ್ಲ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿಯೂ ಜೂನ್ 24, 2017ರಂದು ಅವರಿಗೆ ನಿರೀಕ್ಷಣಾ ಜಾಮೀನು ಪಡೆದಿದ್ದರು. ಅಂದರೆ ಬೀದಿಯಲ್ಲಿ “ಕೇಸ್ ನನ್ನ ಕೂದಲಿಗೆ ಸಮ” ಎನ್ನುವ ಮೂಲಕ ಯುವ ಸಮುದಾಯವನ್ನು ಕೇಸ್​​ಗೆ ಹೆಸರಬೇಡಿ ಎಂದು ಪ್ರಚೋದಿಸುವ ಪ್ರಭಾಕರ ಭಟ್ಟರು ಕೋರ್ಟ್ ದಾಖಲೆಗಳ ಪ್ರಕಾರ ಕಾನೂನಿನ ರಕ್ಷಣೆ ಪಡೆಯುತ್ತಾರೆ. 

ಹಿಂದೂ ಯುವಕರು ಪ್ರಭಾಕರ ಭಟ್ಟರ ಭಾಷಣ ಕೇಳಿ ”ಈ ವಯಸ್ಸಿನ ಪ್ರಭಾಕರ ಭಟ್ಟರೇ ಕೇಸ್ ಕೂದಲಿಗೆ ಸಮ ಎಂದ  ಬಳಿಕ ಯುವಕರಾದ ನಾವು ಕೂದಲು ಸೆಟೆದು ನಿಲ್ಲದೇ ಇದ್ದರೆ ಹೇಗೆ ?” ಎಂದು ಯೋಚಿಸಿ ಇನ್ನಷ್ಟೂ ಕೇಸುಗಳನ್ನು ಮೈಮೇಲೆ ಹಾಕಿಕೊಳ್ಳುವ ಸಾಧ್ಯತೆ ಇದೆ. ಭಟ್ಟರು ಬೀದಿಯಲ್ಲಿ ಒಂದು ಮಾತು, ಕೋರ್ಟ್​ನಲ್ಲಿ ಮತ್ತೊಂದು ಮಾತು !

ಶ್ರೀರಂಗಪಟ್ಟಣ ಪ್ರಕರಣದಲ್ಲೂ ಪ್ರಭಾಕರ ಭಟ್ಟರು ಹೀಗೆಯೇ ಮಾಡಿದ್ದಾರೆ. 2023ರ ಡಿಸೆಂಬರ್‌ನಲ್ಲಿ ‘ಮುಸ್ಲಿಂ ಮಹಿಳೆಯರಿಗೆ ದಿನಕ್ಕೊಬ್ಬ ಗಂಡ’ ಕುರಿತು ಭಟ್ ನೀಡಿದ ಹೇಳಿಕೆಗಳ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು. ಆ ಪ್ರಕರಣದಲ್ಲಿ ಅವರ ವಕೀಲರು ವಯಸ್ಸು ಮತ್ತು ಆರೋಗ್ಯದ ವಿಚಾರವನ್ನು ನ್ಯಾಯಾಲಯದ ಮುಂದೆ ಇಟ್ಟಿದ್ದರು. ಭಟ್ ಅವರಿಗೆ 81 ವರ್ಷ ವಯಸ್ಸಾಗಿದ್ದು, 2022ರಲ್ಲಿ cardio-thoracic ಮತ್ತು vascular surgery ಆಗಿರುವುದನ್ನು ನ್ಯಾಯಾಲಯ ಪರಿಗಣಿಸಿತು. ಜನವರಿ 17, 2024ರಂದು ಶ್ರೀರಂಗಪಟ್ಟಣದ ನ್ಯಾಯಾಲಯ anticipatory bail ನೀಡುವಾಗ ವಯಸ್ಸು ಮತ್ತು ಆರೋಗ್ಯವನ್ನು ತನ್ನ ಪರಿಗಣನೆಯಲ್ಲಿನ ಪ್ರಮುಖ ಅಂಶಗಳೆಂದು ದಾಖಲಿಸಿತು.

ಇತ್ತೀಚಿನ ಉಪ್ಪಳಿಗೆ ಪ್ರಕರಣದಲ್ಲೂ ಪ್ರಭಾಕರ ಭಟ್ಟರು ಹೀಗೆಯೇ ಮಾಡಿದ್ದಾರೆ. 2025ರ ಅಕ್ಟೋಬರ್ 20ರಂದು ಉಪ್ಪಳಿಗೆಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಭಟ್ ನೀಡಿದ ಭಾಷಣದ ಕುರಿತು ಈಶ್ವರಿ ಪದ್ಮುಂಜ ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು. ಪುತ್ತೂರು ಗ್ರಾಮಾಂತರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಅದರ ವಿರುದ್ಧ ಭಟ್ ನ್ಯಾಯಾಲಯದ ಮೊರೆ ಹೋದರು.

ಅಕ್ಟೋಬರ್ 27, 2025ರಂದು ಪುತ್ತೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮುಂದಿನ ವಿಚಾರಣೆವರೆಗೆ ಬಂಧನ ಸೇರಿದಂತೆ coercive action ಕೈಗೊಳ್ಳದಂತೆ ಪೊಲೀಸರಿಗೆ ಸೂಚಿಸಿತು. ಅಕ್ಟೋಬರ್ 29ಕ್ಕೆ ವಿಚಾರಣೆ ಮುಂದೂಡಲಾಯಿತು.

ಮುಂದಿನ ಹಂತದಲ್ಲಿ ಪ್ರಕರಣದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ಡಿಸೆಂಬರ್ 10, 2025ರಂದು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಭಟ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿತು. ಎಫ್​ಐಆರ್ ಸಂಖ್ಯೆ No.118/2025 ನಲ್ಲಿ  ಸರ್ಕಾರಿ ಅಭಿಯೋಜಕರು ಜಾಮೀನಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

2026ರ ಜೂನ್ 2ರಂದು ಇದೇ ಉಪ್ಪಳಿಗೆ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿ ಕರ್ನಾಟಕ ಹೈಕೋರ್ಟ್ ಮುಂದೆ ಬಂದಾಗ ದೂರುದಾರರ ಪರ ವಕೀಲ ಎಸ್. ಬಾಲನ್ ಅವರು ಭಟ್ ವಿರುದ್ಧ ದಾಖಲಾಗಿರುವ 12 FIRಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಭಟ್ ಪರ  ವಕೀಲರು ‘ಭಟ್ ಅವರ ವಯಸ್ಸು 83 ವರ್ಷ’ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಈ ವಿಚಾರಣೆಯಲ್ಲಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಈಗಾಗಲೇ ದಾಖಲಾಗಿರುವ ಪ್ರಕರಣಗಳನ್ನು ಒಂದೇ ವಿಚಾರಣಾ ಪರಿಧಿಗೆ ತರಲು ನಿರ್ದೇಶಿಸಿದರು. ಭಟ್ ಪರ ವಕೀಲರು ಮುಂದಿನ ದಿನಗಳಲ್ಲಿ ದ್ವೇಷ ಭಾಷಣ ಮಾಡುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.

ಭಜರಂಗದಳದ ಭರತ್ ಕುಮ್ಡೇಲು  ಮತ್ತು ಇತರರ ವಿರುದ್ಧ ಗೂಂಡಾ ಕಾಯ್ದೆ ಹಾಕಿರುವ ಪ್ರಭಾಕರ ಭಟ್  ವಿರುದ್ಧ ಯಾಕೆ ಗೂಂಡಾ ಕಾಯ್ದೆ ಹಾಕಿಲ್ಲ ? ಪ್ರಭಾಕರ ಭಟ್ ವಿರುದ್ಧವೂ 13 ಪ್ರಕರಣಗಳಿವೆ. ಹಲವು  ಪ್ರಕರಣಗಳು ರದ್ದಾಗಿದೆ, ಹಲವು ಪ್ರಕರಣಗಳು ತಡೆಯಾಜ್ಞೆಯಲ್ಲಿದೆ.

ಭಟ್ ವಿರುದ್ಧದ ಪ್ರಕರಣಗಳ ಪಟ್ಟಿಯನ್ನೂ ಇದೇ ದೃಷ್ಟಿಯಿಂದ ನೋಡಬೇಕು. ಉಪ್ಪಿನಂಗಡಿ ಪೊಲೀಸ್ ಠಾಣೆಯ Crime No.08/2012, ವಿಟ್ಲದ Crime No.25/2014, ಬಂಟ್ವಾಳ ನಗರ ಠಾಣೆಯ 101/2014, ಬೆಳ್ತಂಗಡಿಯ 105/2014, ಪುತ್ತೂರು ನಗರದ 113/2014, ಬಂಟ್ವಾಳ ನಗರದ 07/2015 ಮತ್ತು 177/2017, ಬಜ್ಪೆಯ 157/2018, ಕೊಣಾಜೆಯ 58/2018, ಬಂಟ್ವಾಳ ನಗರದ 130/2019, ಶ್ರೀರಂಗಪಟ್ಟಣದ 263/2023 ಹಾಗೂ ಬಂಟ್ವಾಳ ಗ್ರಾಮಾಂತರದ 60/2025 ಸೇರಿದಂತೆ ಪ್ರಕರಣಗಳ ಪಟ್ಟಿಯನ್ನು ದೂರುದಾರರ ಪರವಾಗಿ ಹೈಕೋರ್ಟ್ ವಿಚಾರಣೆಯಲ್ಲಿಯೂ ಉಲ್ಲೇಖಿಸಲಾಗಿದೆ.  

ಪೊಲೀಸ್ ಪಟ್ಟಿಯ ಪ್ರಕಾರ ಭರತ್ ಕುಮ್ಡೇಲು ವಿರುದ್ಧ ಬಂಟ್ವಾಳ ಗ್ರಾಮಾಂತರದ 121/2006, 136/2007, 184/2007, 79/2009, 154/2010, 245/2011, 157/2012, 54/2013, 74/2016, 223/2017, ಬಂಟ್ವಾಳ ಪಟ್ಟಣದ 126/2012, 240/2015, 169/2017, 152/2024,  ಉಪ್ಪಿನಂಗಡಿಯ 130/2023, ಪುತ್ತೂರು ಪಟ್ಟಣದ 35/2025 ಮತ್ತು 79/2016, ಮಂಗಳೂರು ದಕ್ಷಿಣದ 119/2010 ಹಾಗೂ ಮಂಗಳೂರು ಗ್ರಾಮಾಂತರದ 106/2012 ಸೇರಿದಂತೆ 19 ಪ್ರಕರಣಗಳನ್ನು ಉಲ್ಲೇಖಿಸಲಾಗಿದೆ.

ಈ ಪೈಕಿ ಐದು ಪ್ರಕರಣಗಳಲ್ಲಿ ವಿಚಾರಣೆ ನಡೆಯುತ್ತಿದೆ. ಬಂಟ್ವಾಳ ಪಟ್ಟಣದ ಎರಡು, ಉಪ್ಪಿನಂಗಡಿ, ಬಂಟ್ವಾಳ ಗ್ರಾಮಾಂತರ ಮತ್ತು ಪುತ್ತೂರು ಪಟ್ಟಣದ ತಲಾ ಒಂದು ಪ್ರಕರಣಗಳು ವಿಚಾರಣೆಯಲ್ಲಿವೆ.

ಇದರ ಜೊತೆಗೆ ಭರತ್ ಕುಮ್ಡೇಲು ಸಹಚರರಾದ ಅಭಿನ್ ರೈ ವಿರುದ್ಧ ಬಂಟ್ವಾಳ ಪಟ್ಟಣ ಮತ್ತು ಬಂಟ್ವಾಳ ಗ್ರಾಮಾಂತರ ಠಾಣೆಗಳಲ್ಲಿ ಪ್ರಕರಣಗಳು, ಪ್ರದೀಪ್ ವಿರುದ್ಧ ಮೂರು ಪ್ರಕರಣಗಳು, ಶಿವಪ್ರಸಾದ್ ಮತ್ತು ರಂಜಿತ್ ವಿರುದ್ಧ ತಲಾ ನಾಲ್ಕು ಪ್ರಕರಣಗಳು ಹಾಗೂ ತೇಜಕ್ಷ ವಿರುದ್ಧ ಬಂಟ್ವಾಳ ಗ್ರಾಮಾಂತರ ಮತ್ತು ಬಜ್ಪೆ ಠಾಣೆಗಳಲ್ಲಿ ಪ್ರಕರಣಗಳಿವೆ.

ಇಷ್ಟೆಲ್ಲಾ ಪ್ರಕರಣಗಳು ಇರುವುದರಿಂದಲೇ ಪೊಲೀಸರು ಗೂಂಡಾ ಕಾಯ್ದೆ ಹಾಕಿದ್ದಾರೆ. ಆದರೆ ಇಷ್ಟೇ ಪ್ರಕರಣವನ್ನು ಹೊಂದಿರುವ ಪ್ರಭಾಕರ ಭಟ್ ಮೇಲೆ ಗೂಂಡಾ ಕಾಯ್ದೆ ಏಕಿಲ್ಲ ?  ಹಿಂದುತ್ವದ ಶೂದ್ರ ಯುವಕರ  ಮೇಲೆಯೇ ಯಾಕೆ ಗೂಂಡಾ ಕಾಯ್ದೆ ದಾಖಲಾಗುತ್ತದೆ ?ಪೊಲೀಸ್ ಕೇಸ್ ಗಳು ನನ್ನ ಕೂದಲಿಗೆ ಸಮ ಎಂದು ಹೇಳುತ್ತಲೇ, ತಾನು ಮಾತ್ರ ಕಾನೂನಿನ ರಕ್ಷಣೆ ಪಡೆಯುವ ಪ್ರಭಾಕರ ಭಟ್ಟರಂತಹ ಆರ್​ಎಸ್​ಎಸ್ ಪ್ರಮುಖರು, ಭಜರಂಗದಳದ ಕಾಲಾಳು ಶೂದ್ರರನ್ನು ಜೈಲಿನಲ್ಲೇ ಕೊಳೆಯುವಂತೆ ಮಾಡುತ್ತಾರೆ.

ನವೀನ್ ಸೂರಿಂಜೆ
ನವೀನ್ ಸೂರಿಂಜೆ

Leave a Reply

Your email address will not be published.