- ನವೀನ್ ಸೂರಿಂಜೆ
ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ, ಬೇಟೆಗಾರರ ಮೇಲಿನ ಗುಂಡಿನ ದಾಳಿಯನ್ನು ಸಮರ್ಥಿಸಿ, ವಿರೋಧ ಪಕ್ಷದಲ್ಲಿದ್ದಾಗ ಅದನ್ನೇ ಖಂಡಿಸುವುದು ರಾಜಕೀಯದ ಸೋಗಲಾಡಿತನವಾಗಿದೆ. ಕಾಂಗ್ರೆಸ್ ಆಗಲಿ, ಬಿಜೆಪಿ ಆಗಲಿ, ಜೆಡಿಎಸ್ ಆಗಲಿ, ಯಾವ ಸರ್ಕಾರದ ಅವಧಿಯಲ್ಲೇ ನಡೆದಿದ್ದರೂ ನಾಗರಿಕರ ಸಾವಿಗೆ ಉತ್ತರದಾಯಿತ್ವ ರಾಜ್ಯದ ಮೇಲಿದೆ. ಆದ್ದರಿಂದ ಇಂತಹ ಪ್ರಕರಣಗಳಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪಕ್ಕಿಂತ ಸತ್ಯಶೋಧನೆ, ಸ್ವತಂತ್ರ ತನಿಖೆ ಮತ್ತು ನ್ಯಾಯವೇ ಮುಖ್ಯ.
ಖಾಕಿಗಳು ನಡೆಸುವ ಗುಂಡಿನ ದಾಳಿಯ ವಿಷಯದಲ್ಲಿ ಕಾಂಗ್ರೆಸ್ ಬಿಜೆಪಿ ಎಂಬ ವ್ಯತ್ಯಾಸಗಳು ಇರುವುದಿಲ್ಲ. 2026 ಆಗಸ್ಟ್ 15ರಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮರಿಯಮಂಗಲ/ಕಾವೇರಿ ವನ್ಯಜೀವಿಧಾಮ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ ಘಟನೆಯಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ. ಪ್ರಸ್ತುತ ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದ್ದು, ವಿರೋಧ ಪಕ್ಷದ ನಾಯಕರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಸ್ಐಟಿ (SIT) ತನಿಖೆಗೆ ಪಟ್ಟು ಹಿಡಿದಿದ್ದಾರೆ. ಶೂಟೌಟ್ ಹೆಸರಿನಲ್ಲಿ ನಡೆದ ಈ ಕೊಲೆ, ಪ್ರಭುತ್ವ ನಾಗರಿಕರ ಮೇಲೆ ನಡೆಸಿದ ಅಮಾನವೀಯ ಕೃತ್ಯ. ಆದರೆ ವಿಧಾನಸಭೆಯಲ್ಲಿ ನಾಗರಿಕರ ಪರವಾಗಿ ಮಾತನಾಡುತ್ತಿರುವ ಬಿಜೆಪಿಯನ್ನು ಈ ವಿಷಯದಲ್ಲಿ ನಂಬಬಹುದೇ? ಬಿಜೆಪಿ ಸರ್ಕಾರದ ಅವಧಿಯಲ್ಲಿ ‘ಬೇಟೆಗಾರರ ಮೇಲೆ ಗುಂಡೇಟು’ ಪ್ರಕರಣಗಳು ಸಾಲು ಸಾಲು ನಡೆದಿತ್ತು. ಇವತ್ತು ಕಾಂಗ್ರೆಸ್ಗೆ ಬುದ್ದಿ ಹೇಳುವ ಬಿಜೆಪಿ ಸರ್ಕಾರದ ಎರಡೂ ಅವಧಿಯಲ್ಲೂ ಬೇಟೆಗಾರರ ಮೇಲೆ ಶೂಟೌಟ್ ನಡೆಸಿ ಅಮಾಯಕರನ್ನು ಕೊಲೆ ಮಾಡಲಾಗಿತ್ತು.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದರೆ, 2008 ರಿಂದ 2013 ಮತ್ತು 2019 ರಿಂದ 2023 ರ ಅವಧಿಯಲ್ಲಿ ಬೇಟೆಗಾರರು/ಕಳ್ಳಬೇಟೆಗಾರರ ಹೆಸರಿನಲ್ಲಿ ಜನರ ಮೇಲೆ ಅರಣ್ಯ ಇಲಾಖೆ ಅಥವಾ ಪೊಲೀಸ್ ಗುಂಡಿನ ದಾಳಿ ನಡೆಸಿತ್ತು. ಎರಡು ಬಿಜೆಪಿ ಸರ್ಕಾರಗಳ ಅವಧಿಯಲ್ಲಿ ಬೇಟೆಗಾರರು, ಕಳ್ಳಬೇಟೆಗಾರರು, ಶ್ರೀಗಂಧ ಕಳ್ಳಸಾಗಣೆಗಾರರು ಅಥವಾ ಅರಣ್ಯ ಅಪರಾಧಿಗಳೆಂದು ಆರೋಪಿಸಲಾದ ಸ್ಥಳೀಯರ ಮೇಲೆ ಕರ್ನಾಟಕದಲ್ಲಿ ಅರಣ್ಯ ಇಲಾಖೆ ಅಥವಾ ಪೊಲೀಸ್ ನಡೆಸಿದ ಗುಂಡಿನ ದಾಳಿಗಳ ಮಾಹಿತಿ ಇಲ್ಲಿದೆ.
1. ಮುಖ್ಯಮಂತ್ರಿ ಯಡಿಯೂರಪ್ಪ, ಅರಣ್ಯ ಸಚಿವ ಸಿ.ಎಚ್. ವಿಜಯಶಂಕರ್
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಮೊದಲ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 2008 ರಿಂದ 2013 ಅವಧಿಯಲ್ಲಿ 26 ಸೆಪ್ಟೆಂಬರ್ 2008 ರಂದು ಐವರು ಬನ್ನೇರುಘಟ್ಟ ಹುಲಿ ರಕ್ಷಿತಾರಣ್ಯ ಪ್ರದೇಶಕ್ಕೆ ಶ್ರೀಗಂಧ ಕಡಿಯಲು ನುಗ್ಗಿದ್ದರು ಎಂದು ಆರೋಪಿಸಲಾಗಿತ್ತು. ಖಚಿತ ಮಾಹಿತಿಯ ಮೇರೆಗೆ ಅರಣ್ಯಕ್ಕೆ ತೆರಳಿದ ಅರಣ್ಯ ಸಿಬ್ಬಂದಿ ಕಾಡಿನಲ್ಲಿದ್ದ ಜನರತ್ತಾ ಗುಂಡು ಹಾರಿಸಿದರು. 30 ವರ್ಷದ ವಲ್ಲಿಯನ್ ಮೃತಪಟ್ಟರು. ಕಮಲ ಶೇಷನ್ ಎಂಬವರು ಗಾಯಗೊಂಡರು. ಆಗ ಸಿ.ಎಚ್. ವಿಜಯಶಂಕರ್ ಅರಣ್ಯ ಸಚಿವರಾಗಿದ್ದರು.
2. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಅರಣ್ಯ ಸಚಿವ ಶಂಕರ್
ಈಗ ಬಿಜೆಪಿಯ ಮೈತ್ರಿಕೂಟವಾಗಿದ್ದು, ಎನ್ಡಿಎ ಸರ್ಕಾರದಲ್ಲಿ ಸಚಿವರಾಗಿರುವ ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿರುವ ಅವಧಿಯಲ್ಲಿ ಅಂದರೆ, 11 ಏಪ್ರಿಲ್ 2019 ಬೇಟೆಗಾರರೆಂದು ಸ್ಥಳೀಯರ ಮೇಲೆ ಗುಂಡು ಹಾರಿಸಲಾಗಿತ್ತು. ಪಾಲಾರ್ ಗಡಿಯಲ್ಲಿ ಅರಣ್ಯ ಸಿಬ್ಬಂದಿ ಮತ್ತು ಬೇಟೆಗಾರರೆಂದು ಶಂಕಿಸಲಾದವರ ನಡುವೆ ಗುಂಡಿನ ಚಕಮಕಿ ನಡೆಯಿತು. ಸುಮಾರು 130 ಕೆಜಿ ಕಾಡುಮಾಂಸ, ಬಂದೂಕು, ಬಲೆ ಮತ್ತು ಚಾಕುಗಳು ವಶಕ್ಕೆ ಬಂದವು. ಆದರೆ ಯಾವುದೇ ಸಾವುಗಳು ವರದಿಯಾಗಿಲ್ಲ.
3. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅರಣ್ಯ ಇಲಾಖೆಯೂ ಸಿಎಂ ಬಳಿ
2021ರ ಡಿಸೆಂಬರ್ 1ರಂದು ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ನಾಗರಹೊಳೆ ಅರಣ್ಯದ ದೊಡ್ಡಹರವೆ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದ ಅರಣ್ಯ ಇಲಾಖೆಯ ಗುಂಡಿನ ದಾಳಿ ಕರ್ನಾಟಕದ ಅತ್ಯಂತ ವಿವಾದಾತ್ಮಕ ಅರಣ್ಯ ಕಾರ್ಯಾಚರಣೆಗಳಲ್ಲಿ ಒಂದಾಗಿದೆ. ಈ ಘಟನೆಯಲ್ಲಿ 37 ವರ್ಷದ ಜೇನು ಕುರುಬ ಆದಿವಾಸಿ ಯುವಕ ಬಸವ ಗುಂಡೇಟಿನಿಂದ ಗಾಯಗೊಂಡರು.
ಈ ಘಟನೆಯ ಬಗ್ಗೆ ಅರಣ್ಯ ಇಲಾಖೆ ಮತ್ತು ಸ್ಥಳೀಯ ಆದಿವಾಸಿ ಸಮುದಾಯ ನೀಡಿರುವ ವಿವರಣೆಗಳು ಪರಸ್ಪರ ಸಂಪೂರ್ಣ ಭಿನ್ನವಾಗಿವೆ. ಅರಣ್ಯ ಇಲಾಖೆಯ ಪ್ರಕಾರ, ದೊಡ್ಡಹರವೆ ಮೀಸಲು ಅರಣ್ಯದಲ್ಲಿ ಮೂರು ಮಂದಿ ಚಂದನ ಕಳ್ಳಸಾಗಣೆಗಾರರು ಅರಣ್ಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದರು. ಆತ್ಮರಕ್ಷಣೆಗಾಗಿ ಸಿಬ್ಬಂದಿ ಗುಂಡು ಹಾರಿಸಿದ್ದು, ಈ ವೇಳೆ ಜೇನುಕುರುಬ ಬಸವ ಗಾಯಗೊಂಡರು. ಉಳಿದ ಇಬ್ಬರು ಶಂಕಿತರು ಕಾಡಿನೊಳಗೆ ಪರಾರಿಯಾದರು ಎಂದು ಇಲಾಖೆ ಹೇಳಿಕೆ ನೀಡಿತ್ತು. ಆದರೆ ಬಸವ ಅವರ ಕುಟುಂಬ, ಜೇನು ಕುರುಬ ಸಮುದಾಯದ ಸದಸ್ಯರು ಮತ್ತು ಸ್ಥಳೀಯ ಹೋರಾಟಗಾರರು ಅರಣ್ಯ ಇಲಾಖೆಯ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದರು. ಅವರ ಆರೋಪಗಳ ಪ್ರಕಾರ, ಜೇನುಕುರುಬ ಬಸವ ಚಂದನ ಕಳ್ಳಸಾಗಣೆಯಲ್ಲಿ ಭಾಗಿಯಾಗಿರಲಿಲ್ಲ. ಅವರು ಹೊಲದ ಸಮೀಪ ಮಲ ವಿಸರ್ಜನೆಗಾಗಿ ಹೋಗಿದ್ದಾಗ ಗುಂಡೇಟಿಗೆ ಒಳಗಾದರು. ನಂತರ ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ಚಂದನದ ತುಂಡುಗಳನ್ನು ಸ್ಥಳದಲ್ಲಿ ಇಡಲಾಗಿದೆ ಎಂದು ಆರೋಪಿಸಲಾಯಿತು. ಈ ಆರೋಪಗಳ ಹಿನ್ನೆಲೆಯಲ್ಲಿ ಘಟನೆಯ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂಬ ಬೇಡಿಕೆಯೂ ಕೇಳಿಬಂದಿತ್ತು. ಆದರೆ ಬಿಜೆಪಿ ಸರ್ಕಾರ ಸ್ವತಂತ್ರ ತನಿಖೆ ನಡೆಸಲಿಲ್ಲ.
4. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅರಣ್ಯ ಇಲಾಖೆಯೂ ಸಿಎಂ ಬಳಿ
2023ರ ಮಾರ್ಚ್ 29ರಂದು ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯಲ್ಲಿ ನಡೆದ ಅರಣ್ಯ ಇಲಾಖೆಯ ಗುಂಡಿನ ದಾಳಿ ಪ್ರಕರಣವು ಕರ್ನಾಟಕದ ಇತ್ತೀಚಿನ ವರ್ಷಗಳಲ್ಲಿನ ಅತ್ಯಂತ ದಾಖಲೆಬದ್ಧ ಪ್ರಕರಣಗಳಲ್ಲಿ ಒಂದಾಗಿದೆ. ಈ ಘಟನೆಯಲ್ಲಿ ಗುಂಡೇಟಿಗೆ ಒಳಗಾದ ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಪರಾರಿಯಾಗಿದ್ದಾನೆ.
ಎಫ್ಐಆರ್ ಮತ್ತು ಕರ್ನಾಟಕ ಹೈಕೋರ್ಟ್ ದಾಖಲೆಯ ಪ್ರಕಾರ, 29 ಮಾರ್ಚ್ 2023ರ ಮುಂಜಾನೆ ಸುಮಾರು 1:15 ಗಂಟೆಗೆ ಅರಣ್ಯ ಸಿಬ್ಬಂದಿ ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ರಾತ್ರಿ ಗಸ್ತು ನಡೆಸುತ್ತಿದ್ದರು. ಈ ವೇಳೆ ಇಬ್ಬರು ವ್ಯಕ್ತಿಗಳು ಅರಣ್ಯ ಸಿಬ್ಬಂದಿಯ ಮೇಲೆ ಮಚ್ಚುಗಳನ್ನು ಎಸೆದರು ಎಂದು ಆರೋಪಿಸಲಾಗಿದೆ. ನಂತರ ಅವರು ಸ್ಥಳದಿಂದ ಓಡಲು ಯತ್ನಿಸಿದಾಗ, ಆತ್ಮರಕ್ಷಣೆಗಾಗಿ ಅರಣ್ಯಾಧಿಕಾರಿ ಗುಂಡು ಹಾರಿಸಿದ್ದಾಗಿ ದಾಖಲೆಯಲ್ಲಿದೆ. ಗುಂಡು ಒಬ್ಬ ವ್ಯಕ್ತಿಗೆ ಸೊಂಟದ ಕೆಳಭಾಗಕ್ಕೆ ತಗುಲಿದ್ದು, ಅವರು ಸ್ಥಳದಲ್ಲೇ ಮೃತಪಟ್ಟರು. ಇನ್ನೊಬ್ಬ ವ್ಯಕ್ತಿ ಪರಾರಿಯಾದರು. ಘಟನೆಯ ಬಳಿಕ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ. 228/2023 ದಾಖಲಾಗಿತ್ತು. ಸಾವಿಗೀಡಾದವರ ಮೇಲೆ ಕರ್ನಾಟಕ ಅರಣ್ಯ ಕಾಯ್ದೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ, ಐಪಿಸಿ ಸೆಕ್ಷನ್ 34, 379, 307, 353, ಶಸ್ತ್ರಾಸ್ತ್ರ ಕಾಯ್ದೆ (Arms Act) ಸೆಕ್ಷನ್ 25 ಮತ್ತು 27 ದಾಖಲಾಗಿತ್ತು.
ಈ ಎಲ್ಲ ಘಟನೆಗಳನ್ನು ಒಟ್ಟಾಗಿ ನೋಡಿದರೆ ಒಂದು ಸ್ಪಷ್ಟ ಸಂಗತಿ ಗೋಚರಿಸುತ್ತದೆ. ಸರ್ಕಾರಗಳು ಬದಲಾಗಿವೆ, ಮುಖ್ಯಮಂತ್ರಿಗಳು ಬದಲಾಗಿದ್ದಾರೆ, ಅರಣ್ಯ ಸಚಿವರು ಬದಲಾಗಿದ್ದಾರೆ. ಆದರೆ ಖಾಕಿಗಳ “ಶೂಟೌಟ್” ಅಹಂಕಾರವನ್ನು ಪ್ರಶ್ನಿಸುವಲ್ಲಿ ರಾಜಕೀಯ ಪಕ್ಷಗಳ ನಿಲುವು ಮಾತ್ರ ಅಧಿಕಾರಕ್ಕೆ ಅನುಗುಣವಾಗಿ ಬದಲಾಗಿದೆ. ವಿರೋಧ ಪಕ್ಷದಲ್ಲಿದ್ದಾಗ ಮಾನವ ಹಕ್ಕುಗಳ ಮಾತು, ಅಧಿಕಾರದಲ್ಲಿದ್ದಾಗ “ಆತ್ಮರಕ್ಷಣೆ” ಎಂಬ ಸಮರ್ಥನೆಯಲ್ಲಿ ಗುಂಡೇಟು! ಈ ದ್ವಂದ್ವ ನಿಲುವು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ.
ಸಂವಿಧಾನವು ಸರ್ಕಾರಕ್ಕೆ ನಾಗರಿಕರ ಜೀವವನ್ನು ಕಾಪಾಡುವ ಜವಾಬ್ದಾರಿಯನ್ನು ನೀಡಿದೆ. ನ್ಯಾಯಾಲಯ ನಡೆಸಬೇಕಿರುವ ವಿಚಾರಣೆಯನ್ನು ಬಂದೂಕಿನಿಂದ ನಡೆಸುವ ಅಧಿಕಾರವನ್ನು ಯಾರಿಗೂ ನೀಡಲಾಗಿಲ್ಲ. ಹಾಗಾಗಿ ಹನೂರು ಕಾವೇರಿ ವನ್ಯಜೀವಿಧಾಮದ 2026 ಆಗಸ್ಟ್ 15ರ ಘಟನೆ ಸೇರಿದಂತೆ, ಹಿಂದಿನ ಎಲ್ಲ ಗುಂಡಿನ ದಾಳಿ ಪ್ರಕರಣಗಳಲ್ಲಿಯೂ ಸ್ವತಂತ್ರ ನ್ಯಾಯಾಂಗ ಅಥವಾ ಎಸ್ಐಟಿ ತನಿಖೆ, ಸಂಪೂರ್ಣ ಪಾರದರ್ಶಕತೆ, ಮತ್ತು ಹೊಣೆಗಾರಿಕೆ ನಿಗದಿಯಾಗುವುದು ಅಗತ್ಯ. ಮಾನವ ಹಕ್ಕುಗಳ ಪ್ರಶ್ನೆಗೆ ಕಾಂಗ್ರೆಸ್-ಬಿಜೆಪಿ ಎಂಬ ಬಣ್ಣವಿಲ್ಲ. ಪ್ರಭುತ್ವದ ಗುಂಡು ಯಾರ ಎದೆಯನ್ನೇ ಭೇದಿಸಿದರೂ ಅದು ಸಂವಿಧಾನದ ಆಶಯವನ್ನೇ ಪ್ರಶ್ನಿಸುವ ವಿಷಯವಾಗಿದೆ.

Leave a Reply