
– ನವೀನ್ ಸೂರಿಂಜೆ
ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವೊಂದರ ಸಂಬಂಧ ರೌಡಿಶೀಟರ್ ಪುನೀತ್ ಕೆರೆಹಳ್ಳಿ ವಿರುದ್ದ ಬಾಡಿ ವಾರೆಂಟ್ ಜಾರಿಯಾಗಿದೆ. ಪ್ರಕರಣವೊಂದರಲ್ಲಿ ಎ1 ಆರೋಪಿಯಾಗಿರುವ ಪುನೀತ್ ಕೆರೆಹಳ್ಳಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಮತ್ತೊಂದು ಪ್ರಕರಣದ ವಿಚಾರಣೆ ಸಂಬಂಧ ಬಾಡಿ ವಾರೆಂಟ್ ಹೊರಡಿಸಲಾಗಿದೆ.
ಪ್ರಸ್ತುತ ಪುನೀತ್ ಕೆರೆಹಳ್ಳಿ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿದ್ದು ಬಂಧನದಲ್ಲಿದ್ದು, ಕೈದಿ ನಂ : UTP No.8642/2026 ಯನ್ನು ಹೊಂದಿದ್ದಾರೆ. ಹೀಗಾಗಿ, ಬೇರೆ ಪ್ರಕರಣದಲ್ಲಿ ಜೈಲಿನಲ್ಲಿರುವ ಆರೋಪಿಯನ್ನು ಬಸವೇಶ್ವರನಗರ ಪೊಲೀಸರು ತಮ್ಮ ಪ್ರಕರಣದಲ್ಲೂ ಕಾನೂನುಬದ್ಧವಾಗಿ ಹಾಜರುಪಡಿಸಿಕೊಳ್ಳಲು ನ್ಯಾಯಾಲಯದ ಅನುಮತಿ ಕೋರಿದ್ದು, ನ್ಯಾಯಾಲಯ ಅದಕ್ಕೆ ಒಪ್ಪಿಗೆ ನೀಡಿದೆ.
ನ್ಯಾಯಾಲಯದ ದಾಖಲೆಯಲ್ಲಿರುವ ಆದೇಶದ ಪ್ರಕಾರ, ಬಸವೇಶ್ವರನಗರ ಪೊಲೀಸರು ಎ1 ಆರೋಪಿ ಪುನೀತ್ ಕೆರೆಹಳ್ಳಿ ವಿರುದ್ಧ ಬಾಡಿ ವಾರಂಟ್ ನೀಡುವಂತೆ ಮನವಿ ಸಲ್ಲಿಸಿದ್ದರು. ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಆರೋಪಿಯ ವಿರುದ್ಧ ಬಾಡಿ ವಾರಂಟ್ ಹೊರಡಿಸಲು “genuine grounds” ಇವೆ ಎಂದು ದಾಖಲಿಸಿದೆ. ಅದರ ಆಧಾರದ ಮೇಲೆ ಆರೋಪಿಯನ್ನು ಹಾಜರುಪಡಿಸಲು ಬಾಡಿ ವಾರಂಟ್ ಜಾರಿ ಮಾಡುವಂತೆ ಕಚೇರಿಗೆ ನಿರ್ದೇಶನ ನೀಡಲಾಗಿದೆ.
ಹಾಸನದಿಂದ ಶಿವಾಜಿನಗರಕ್ಕೆ ಮಾಂಸ ಸಾಗಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ ಆರೋಪದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಪೊಲೀಸರು ಅವರನ್ನು ಬಂಧಿಸಿದ್ದರು. ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಅವರ ವಿರುದ್ಧ FIR ದಾಖಲಾಗಿದೆ. ಅಕ್ರಮ ವಲಸಿಗರಿಗೆ ಬಾಡಿಗೆ ನೀಡಿದ್ದಕ್ಕಾಗಿ ಜಮೀನುದಾರನಿಗೆ ಬೆದರಿಕೆ ಹಾಕಿದ ಆರೋಪ, ಸಾಮಾಜಿಕ ಜಾಲತಾಣಗಳಲ್ಲಿ ನಿರಾಶ್ರಿತರ ವಿರುದ್ಧ ಪ್ರಚೋದನಾತ್ಮಕ ವಿಡಿಯೋ ಹಂಚಿಕೊಂಡ ಆರೋಪ, ಹಾಗೂ ಇತರ ನಿಂದನೆ ಪ್ರಕರಣಗಳೂ ಸೇರಿ ಇವರ ಮೇಲೆ 15ಕ್ಕೂ ಹೆಚ್ಚು FIRಗಳು ದಾಖಲಾಗಿವೆ.
ಪುನೀತ್ ಕೆರೆಹಳ್ಳಿ ಈಗಾಗಲೇ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿರುವುದರಿಂದ, ಬಸವೇಶ್ವರನಗರ ಪೊಲೀಸರು ಅವರನ್ನು ತಮ್ಮ ಪ್ರಕರಣದಲ್ಲಿ ಹಾಜರುಪಡಿಸಲು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯವು ಪೊಲೀಸರ ಮನವಿಯನ್ನು ಪರಿಗಣಿಸಿ ಬಾಡಿ ವಾರಂಟ್ ಹೊರಡಿಸಲು ನಿರ್ದೇಶನ ನೀಡಿದೆ.
ನ್ಯಾಯಾಲಯವು ಕೇವಲ “ಪೊಲೀಸರು ಮನವಿ ಮಾಡಿದ್ದಾರೆ” ಎಂಬ ಕಾರಣಕ್ಕೆ ಬಾಡಿ ವಾರಂಟ್ ನೀಡಿಲ್ಲ. “There is genuine grounds to issue body warrant against the accused” ಎಂದು ದಾಖಲಿಸಿದೆ. ಅಂದರೆ, ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ನಂತರ ಆರೋಪಿಯನ್ನು ಹಾಜರುಪಡಿಸಲು ನ್ಯಾಯಾಲಯಕ್ಕೆ ಸಮರ್ಪಕ ಕಾರಣವಿದೆ ಎಂಬ ಅಭಿಪ್ರಾಯಕ್ಕೆ ಬಂದಿರುವುದು ಆದೇಶದಿಂದ ಸ್ಪಷ್ಟವಾಗುತ್ತದೆ.

Leave a Reply