ಕೆಜಿಎಫ್ ಬೆಮೆಲ್ ಗುತ್ತಿಗೆ ಕಾರ್ಮಿಕರಿಗೆ ‘ಸಮಾನ ಕೆಲಸಕ್ಕೆ ಸಮಾನ ವೇತನ’ ತೀರ್ಪು ! ಹೋರಾಟ ನಡೆದಿದ್ದು ಹೇಗೆ ? ತೀರ್ಪಿನಲ್ಲಿ ಏನೇನಿದೆ ?  

ಕೆಜಿಎಫ್ ಬೆಮೆಲ್ ಗುತ್ತಿಗೆ ಕಾರ್ಮಿಕರಿಗೆ ‘ಸಮಾನ ಕೆಲಸಕ್ಕೆ ಸಮಾನ ವೇತನ’ ತೀರ್ಪು ! ಹೋರಾಟ ನಡೆದಿದ್ದು ಹೇಗೆ ? ತೀರ್ಪಿನಲ್ಲಿ ಏನೇನಿದೆ ?  

ಕೆಜಿಎಫ್‌ನ ಬೆಮೆಲ್ ಕಾರ್ಖಾನೆಯಲ್ಲಿ  ಹಲವು ದಶಕಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಮಹತ್ವದ ನ್ಯಾಯ ದೊರೆತಿದೆ. ಬೆಮೆಲ್‌ನ ನೇರ ಉದ್ಯೋಗಿಗಳು ಮಾಡುತ್ತಿರುವ ಅದೇ ಅಥವಾ ಸಮಾನ ಸ್ವರೂಪದ ಕೆಲಸವನ್ನು ಮಾಡುತ್ತಿರುವ ಗುತ್ತಿಗೆ ಕಾರ್ಮಿಕರಿಗೂ ಅದೇ ವೇತನ ಶ್ರೇಣಿ ನೀಡಬೇಕು ಎಂದು ಕೇಂದ್ರ ಕಾರ್ಮಿಕ ಇಲಾಖೆಯ ಪ್ರಾಧಿಕಾರ ಆದೇಶಿಸಿದೆ. ಈ ಆದೇಶದಿಂದ 81 ಗುತ್ತಿಗೆ ಆಪರೇಟರ್‌ಗಳ ವೇತನದಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆ ಇದ್ದು, ಇದುವರೆಗೆ ಸುಮಾರು 18 ಸಾವಿರ ರೂ. ಆಸುಪಾಸಿನಲ್ಲಿ ವೇತನ ಪಡೆಯುತ್ತಿದ್ದ ಕಾರ್ಮಿಕರ ವೇತನ ಬೆಮೆಲ್‌ನ Technician Grade S3 ವೇತನ ಶ್ರೇಣಿಗೆ, ಅದರ ಅನ್ವಯವಾಗುವ ಡಿಎ ಸೇರಿದಂತೆ, ಏರಿಕೆಯಾಗಲಿದೆ. ಇದರಿಂದ ತಿಂಗಳ ವೇತನ ಸುಮಾರು 40 ಸಾವಿರ ರೂ. ಮಟ್ಟಕ್ಕೆ ತಲುಪುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಈ ವೇತನ ಪರಿಷ್ಕರಣೆ 16 ಅಕ್ಟೋಬರ್ 2023ರಿಂದ ಅನ್ವಯವಾಗುವುದರಿಂದ ಹಿಂದಿನ ಅವಧಿಯ ಬಾಕಿ ವೇತನವೂ ಕಾರ್ಮಿಕರಿಗೆ ಸಿಗಲಿದೆ. ಒಬ್ಬೊಬ್ಬ ಕಾರ್ಮಿಕರಿಗೆ ಸುಮಾರು 15 ಲಕ್ಷ ರೂ.ವರೆಗೆ ಅರಿಯರ್ಸ್ ಬರಬಹುದೆಂಬ ನಿರೀಕ್ಷೆಯೂ ಇದೆ. ಕಾರ್ಮಿಕರ ಪರವಾಗಿ ಕಾರ್ಮಿಕರ ಮುಖಂಡರೂಆಗಿರುವ  ಹಿರಿಯ ವಕೀಲ ಎಸ್ ಬಾಲನ್ ಈ ಕಾನೂನು ಹೋರಾಟ ನಡೆಸಿ  ಯಶಸ್ವಿಯಾಗಿದ್ದಾರೆ.

ಇದು ಕೇವಲ ವೇತನ ಹೆಚ್ಚಳದ ಆದೇಶವಲ್ಲ. ಗುತ್ತಿಗೆ ಕಾರ್ಮಿಕರು ಮತ್ತು ಕಾಯಂ ಕಾರ್ಮಿಕರು ಒಂದೇ ರೀತಿಯ ಕೆಲಸ ಮಾಡುತ್ತಿದ್ದರೆ, ಗುತ್ತಿಗೆ ಎಂಬ ಹೆಸರಿನ ಕಾರಣಕ್ಕೆ ಕಡಿಮೆ ವೇತನ ನೀಡಲು ಸಾಧ್ಯವಿಲ್ಲ ಎಂಬ ಕಾನೂನು ಮತ್ತು ಹೋರಾಟದ ಆಶಯವನ್ನು ಈ ಆದೇಶ ಎತ್ತಿ ಹಿಡಿದಿದೆ.

ಈ ಪ್ರಕರಣವನ್ನು ಕೆಜಿಎಫ್ ಬೆಮೆಲ್ Hydraulic and Powerline Division Contract Workers Trade Union ಕೇಂದ್ರ ಕಾರ್ಮಿಕ ಪ್ರಾಧಿಕಾರದ ಮುಂದೆ ತಂದಿತ್ತು. 2023ರ ಅಕ್ಟೋಬರ್ 16ರಂದು ಸಲ್ಲಿಸಲಾದ ಅರ್ಜಿಯಲ್ಲಿ ಗುತ್ತಿಗೆದಾರ AVR Enterprises ಮೂಲಕ ಕೆಲಸ ಮಾಡುತ್ತಿದ್ದ ಕಾರ್ಮಿಕರು ಬೆಮೆಲ್‌ನ ನೇರ ಉದ್ಯೋಗಿಗಳಾದ Operator, Machinist ಮತ್ತು Technician‌ಗಳಂತೆಯೇ ಅಥವಾ ಸಮಾನ ಸ್ವರೂಪದ ಕೆಲಸ ಮಾಡುತ್ತಿದ್ದಾರೆ ಎಂದು ಹಿರಿಯ ವಕೀಲ ಎಸ್ ಬಾಲನ್ ಅರ್ಜಿ ಸಲ್ಲಿಸಿ ವಾದಿಸಿದ್ದರು.

ಈ ವಾದಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಸಂಘಟನೆಯ ಪರವಾಗಿ ಎಸ್ ಬಾಲನ್ ಅವರು ಹಲವು ಪ್ರಮುಖವಾದ ಸಾಕ್ಷ್ಯಗಳನ್ನು ಪ್ರಾಧಿಕಾರದ ಮುಂದೆ ಮಂಡಿಸಿದ್ದರು. ಗುತ್ತಿಗೆ ಆಪರೇಟರ್‌ಗಳು CNC Machine, Gear Shaping Machine ಸೇರಿದಂತೆ ವಿವಿಧ ಯಂತ್ರಗಳಲ್ಲಿ ತಾಂತ್ರಿಕ ಹಾಗೂ ಕೌಶಲ್ಯಾಧಾರಿತ ಕೆಲಸ ಮಾಡುತ್ತಿದ್ದಾರೆ. Gear Cutting, Casting, Forging, Rough Turning, Finish Turning ಮತ್ತು Tooth Cutting ಮುಂತಾದ ಕೆಲಸಗಳನ್ನು ಅವರು ನಿರ್ವಹಿಸುತ್ತಿದ್ದಾರೆ. ಇವು ಸಾಮಾನ್ಯ ಅಸಂಘಟಿತ ಕೆಲಸಗಳಲ್ಲ. ನಿರ್ದಿಷ್ಟ ತಾಂತ್ರಿಕ ಜ್ಞಾನ, ತರಬೇತಿ ಮತ್ತು ಅನುಭವ ಅಗತ್ಯವಿರುವ ಕೆಲಸಗಳಾಗಿವೆ. ಕೆಲವು ಕಾರ್ಮಿಕರಿಗೆ 15 ವರ್ಷಕ್ಕಿಂತಲೂ ಹೆಚ್ಚಿನ ಅನುಭವವಿದೆ ಎಂಬದನ್ನೂ ಪ್ರಕರಣದಲ್ಲಿ ವಾದಿಸಿ, ಅದಕ್ಕೆ ಬೇಕಾದ ಸಾಕ್ಷ್ಯವನ್ನು ಬೆಮೆಲ್ ಅಧಿಕಾರಿಗಳ ಕ್ರಾಸ್ಎಕ್ಸಾಮಿನೇಶನ್ ನಲ್ಲಿ ಹೊರ  ತಂದಿದ್ದರು.

ಮುಖ್ಯವಾಗಿ, ಇದೇ ರೀತಿಯ ಕೆಲಸವನ್ನು ಬೆಮೆಲ್‌ನ ನೇರ ಉದ್ಯೋಗಿಗಳಾದ Technician, Machinist ಮತ್ತು Operator‌ಗಳು ಕೂಡ ಮಾಡುತ್ತಿದ್ದಾರೆ ಎಂಬ ಅಂಶವನ್ನು ಪ್ರಾಧಿಕಾರ ಪರಿಗಣಿಸಿದೆ. ಹೀಗಾಗಿ ಕಾರ್ಮಿಕರು ಗುತ್ತಿಗೆದಾರರ ಮೂಲಕ ಬಂದಿದ್ದಾರೆ ಎಂಬ ಒಂದೇ ಕಾರಣಕ್ಕೆ ಅವರ ಕೆಲಸದ ಮೌಲ್ಯ ಕಡಿಮೆಯಾಗುವುದಿಲ್ಲ ಎಂಬ ಪ್ರಶ್ನೆ ಪ್ರಕರಣದ ಕೇಂದ್ರಬಿಂದುವಾಗಿತ್ತು.

ಇಲ್ಲಿ Contract Labour (Regulation and Abolition) Act, 1970 ಮತ್ತು ಅದರ ಅಡಿಯಲ್ಲಿ ರೂಪಿಸಲಾದ Contract Labour (Regulation and Abolition) Central Rules, 1971 ಬಹಳ ಮುಖ್ಯವಾಗುತ್ತವೆ. ವಿಶೇಷವಾಗಿ Rule 25(2)(v)(a) ಗುತ್ತಿಗೆ ಕಾರ್ಮಿಕರಿಗೆ ಪಾವತಿಸಬೇಕಾದ ವೇತನ ಮತ್ತು ಅವರು ನಿರ್ವಹಿಸುವ ಕೆಲಸದ ಸ್ವರೂಪಕ್ಕೆ ಸಂಬಂಧಿಸಿದ ಪ್ರಮುಖ ನಿಯಮವಾಗಿದೆ. ಗುತ್ತಿಗೆದಾರನಿಗೆ ನೀಡಲಾಗುವ ಲೈಸೆನ್ಸ್‌ನ ಷರತ್ತುಗಳಲ್ಲಿಯೂ ಈ ನಿಯಮ ಸೇರಿದೆ.

ಈ ನಿಯಮದ ಅರ್ಥವನ್ನು ಸರಳವಾಗಿ ಹೇಳುವುದಾದರೆ, ಗುತ್ತಿಗೆದಾರನ ಬಳಿ ಕೆಲಸ ಮಾಡುತ್ತಿರುವ ಕಾರ್ಮಿಕರು ಮುಖ್ಯ ಸಂಸ್ಥೆಯ ನೇರ ಉದ್ಯೋಗಿಗಳು ಮಾಡುತ್ತಿರುವ ಅದೇ ಅಥವಾ ಸಮಾನ ಸ್ವರೂಪದ ಕೆಲಸ ಮಾಡುತ್ತಿದ್ದರೆ, ಕೇವಲ ‘ಕಾಂಟ್ರಾಕ್ಟ್ ವರ್ಕರ್’ ಎಂಬ ಹೆಸರಿನಿಂದ ಅವರ ವೇತನವನ್ನು ಅನ್ಯಾಯವಾಗಿ ಕಡಿಮೆ ಮಾಡಲು ಅವಕಾಶವಿಲ್ಲ. ಕೆಲಸದ ಸ್ವರೂಪ, ಜವಾಬ್ದಾರಿ, ಕೌಶಲ್ಯ ಮತ್ತು ನಿರ್ವಹಿಸುತ್ತಿರುವ ಕರ್ತವ್ಯಗಳ ಹೋಲಿಕೆ ಮುಖ್ಯವಾಗುತ್ತದೆ.

ಈ ಪ್ರಕರಣದಲ್ಲಿ ಇದೇ ಅಂಶವನ್ನು ಪರಿಶೀಲಿಸಿದ ಕೇಂದ್ರ ಕಾರ್ಮಿಕ ಪ್ರಾಧಿಕಾರ, 81 ಗುತ್ತಿಗೆ ಆಪರೇಟರ್‌ಗಳು ಬೆಮೆಲ್‌ನ ನೇರ ಉದ್ಯೋಗಿಗಳು ನಿರ್ವಹಿಸುವ ಅದೇ ಅಥವಾ ಸಮಾನ ಸ್ವರೂಪದ ಕೆಲಸ ಮಾಡುತ್ತಿದ್ದಾರೆ ಎಂದು ತೀರ್ಮಾನಿಸಿದೆ.

ಎಸ್ ಬಾಲನ್ ವಾದದ ಆಧಾರದ ಮೇಲೆ 2026ರ ಆಗಸ್ಟ್ 31ರಂದು Deputy Chief Labour Commissioner (Central), Bangalore ಹಾಗೂ Rule 25(2)(v)(a) ಮತ್ತು (b) ಅಡಿಯಲ್ಲಿ ಅಧಿಕಾರ ಹೊಂದಿರುವ ಪ್ರಾಧಿಕಾರವು ಮಹತ್ವದ ಆದೇಶ ಹೊರಡಿಸಿದೆ. ಆದೇಶವನ್ನು S.K. Mohanty ಅವರು ಹೊರಡಿಸಿದ್ದಾರೆ.

ಆದೇಶದ ಅತ್ಯಂತ ಮಹತ್ವದ ಭಾಗವೆಂದರೆ, AVR Enterprises ಮೂಲಕ ಕೆಲಸ ಮಾಡುತ್ತಿರುವ ಈ 81 ಗುತ್ತಿಗೆ ಆಪರೇಟರ್‌ಗಳಿಗೆ ಬೆಮೆಲ್ ನೇರ ಉದ್ಯೋಗಿಗಳ Technician Grade S3 ವೇತನ ಶ್ರೇಣಿಗೆ ಅನುಗುಣವಾಗಿ ವೇತನ ನಿಗದಿಪಡಿಸುವಂತೆ ಗುತ್ತಿಗೆದಾರನಿಗೆ ನಿರ್ದೇಶನ ನೀಡಲಾಗಿದೆ. ಅದರ ಜೊತೆಗೆ ಅನ್ವಯವಾಗುವ Dearness Allowance ಅಥವಾ DA ಕೂಡ ನೀಡಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ.

ಇದು ಇಂದಿನಿಂದ ಮಾತ್ರ ಅನ್ವಯವಾಗುವ ವೇತನ ಹೆಚ್ಚಳವಲ್ಲ. 2023ರ ಅಕ್ಟೋಬರ್ 16ರಂದು ಗುತ್ತಿಗೆ ಕಾರ್ಮಿಕರ ಸಂಘಟನೆ ಅರ್ಜಿ ಸಲ್ಲಿಸಿದ ದಿನಾಂಕದಿಂದಲೇ ಪರಿಷ್ಕೃತ ವೇತನ ಅನ್ವಯವಾಗಬೇಕು ಎಂದು ಆದೇಶಿಸಲಾಗಿದೆ. ಅಂದರೆ ಸುಮಾರು ಮೂರು ವರ್ಷಗಳ ಹಿಂದಿನ ದಿನಾಂಕದಿಂದಲೇ ವೇತನವನ್ನು ಮರು ಲೆಕ್ಕ ಹಾಕಬೇಕಾಗಿದೆ.

ಇಲ್ಲಿಯೇ ‘ಅರಿಯರ್ಸ್’ ಪ್ರಶ್ನೆ ಬರುತ್ತದೆ. 2023ರ ಅಕ್ಟೋಬರ್ 16ರಿಂದ 2026ರಲ್ಲಿ ಆದೇಶ ಜಾರಿಯಾಗುವವರೆಗೆ ಕಾರ್ಮಿಕರಿಗೆ ಈಗಾಗಲೇ ಪಾವತಿಸಿರುವ ವೇತನ ಮತ್ತು ಆದೇಶದಂತೆ ಅವರಿಗೆ ಸಿಗಬೇಕಾದ ವೇತನದ ನಡುವಿನ ವ್ಯತ್ಯಾಸವನ್ನು ಲೆಕ್ಕ ಹಾಕಿ ಬಾಕಿ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಆದ್ದರಿಂದ ಕಾರ್ಮಿಕರಿಗೆ ಒಬ್ಬೊಬ್ಬರಿಗೆ ಹಲವು ಲಕ್ಷ ರೂಪಾಯಿಗಳಷ್ಟು ಬಾಕಿ ವೇತನ ಸಿಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ವೇತನ, ಬೆಮೆಲ್ S3 ಗ್ರೇಡ್‌ನ ಅನ್ವಯವಾಗುವ ವೇತನ ಹಾಗೂ DA ಆಧರಿಸಿ ಲೆಕ್ಕ ಹಾಕಿದಾಗ ಕೆಲ ಕಾರ್ಮಿಕರಿಗೆ ಸುಮಾರು 15 ಲಕ್ಷ ರೂ.ವರೆಗೆ ಅರಿಯರ್ಸ್ ಬರುವ ಸಾಧ್ಯತೆ ಇದೆ.

ಆದೇಶದಲ್ಲಿ ಮತ್ತೊಂದು ಅತ್ಯಂತ ಪ್ರಮುಖ ಕಾನೂನು ರಕ್ಷಣೆಯನ್ನೂ ನೀಡಲಾಗಿದೆ. ಗುತ್ತಿಗೆದಾರನೇ ಪರಿಷ್ಕೃತ ವೇತನ ಮತ್ತು ಬಾಕಿ ಮೊತ್ತವನ್ನು ಪಾವತಿಸದಿದ್ದರೆ ಏನು ಮಾಡಬೇಕು ಎಂಬುದನ್ನೂ ಪ್ರಾಧಿಕಾರ ಸ್ಪಷ್ಟಪಡಿಸಿದೆ.

Contract Labour (Regulation and Abolition) Act, 1970ರ Section 21(4) ಇಲ್ಲಿ ಪ್ರಮುಖವಾಗುತ್ತದೆ. ಈ ಸೆಕ್ಷನ್‌ನಡಿ ಗುತ್ತಿಗೆದಾರ ಕಾರ್ಮಿಕರಿಗೆ ನೀಡಬೇಕಾದ ವೇತನವನ್ನು ಪಾವತಿಸಲು ವಿಫಲವಾದರೆ, Principal Employer ಆಗಿರುವ ಮುಖ್ಯ ಸಂಸ್ಥೆ ಆ ವೇತನವನ್ನು ಪಾವತಿಸುವ ಹೊಣೆ ಹೊರುವ ವ್ಯವಸ್ಥೆ ಇದೆ. ನಂತರ ಕಾನೂನಿನ ಪ್ರಕಾರ ಆ ಮೊತ್ತವನ್ನು ಗುತ್ತಿಗೆದಾರರಿಂದ ವಸೂಲಿ ಮಾಡಿಕೊಳ್ಳುವ ಅವಕಾಶ Principal Employerಗೆ ಇರುತ್ತದೆ.

ಅದೇ ಕಾರಣಕ್ಕೆ ಪ್ರಸ್ತುತ ಆದೇಶದಲ್ಲಿ ಬೆಮೆಲ್‌ನ Chief General Manager ಅವರಿಗೂ ಸ್ಪಷ್ಟ ನಿರ್ದೇಶನ ನೀಡಲಾಗಿದೆ. AVR Enterprises ನಿಗದಿತ ಅವಧಿಯಲ್ಲಿ ಪರಿಷ್ಕೃತ ವೇತನ ಮತ್ತು ಅರಿಯರ್ಸ್ ಪಾವತಿಸದಿದ್ದರೆ, Contract Labour Actನ Section 21(4) ಅಡಿಯಲ್ಲಿ ಬೆಮೆಲ್ ಸಂಸ್ಥೆಯೇ ಪಾವತಿ ಮಾಡುವ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಲಾಗಿದೆ.

ಇದರಿಂದ ಕಾರ್ಮಿಕರ ಮುಂದೆ ಕೇವಲ ಗುತ್ತಿಗೆದಾರನನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇರುವುದಿಲ್ಲ. ಕಾನೂನು ಗುತ್ತಿಗೆದಾರನಿಗೆ ಮೊದಲ ಹೊಣೆ ನೀಡಿದರೂ, ಆ ಹೊಣೆಗಾರಿಕೆಯನ್ನು ಆತ ನಿರ್ವಹಿಸದ ಸಂದರ್ಭದಲ್ಲಿ Principal Employer ಆಗಿರುವ ಬೆಮೆಲ್ ವಿರುದ್ಧವೂ ವೇತನ ಪಾವತಿಯ ಕಾನೂನು ವ್ಯವಸ್ಥೆ ಇದೆ ಎಂಬುದು ಈ ಆದೇಶದಿಂದ ಸ್ಪಷ್ಟವಾಗುತ್ತದೆ.

ಈ ಆದೇಶದ ಇನ್ನೊಂದು ಗಮನಾರ್ಹ ಅಂಶವೆಂದರೆ, ಕಾರ್ಮಿಕರಿಗೆ ‘ಸಮಾನ ಕೆಲಸಕ್ಕೆ ಸಮಾನ ವೇತನ’ ಎಂಬ ಕಾನೂನನ್ನು ಕೇವಲ ಆದೇಶವಾಗಿ ನೋಡದೆ, ಕೆಲಸದ ನೈಜ ಸ್ವರೂಪವನ್ನು ಪರಿಶೀಲಿಸಿ ಅನ್ವಯಿಸಲಾಗಿದೆ. ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಂಡಿರುವುದೇ ಅವರನ್ನು ಕಡಿಮೆ ಮೌಲ್ಯದ ಕಾರ್ಮಿಕರನ್ನಾಗಿ ಮಾಡುವುದಿಲ್ಲ. ಅವರು ಮಾಡುತ್ತಿರುವ ಕೆಲಸ ಬೆಮೆಲ್‌ನ ನೇರ ಉದ್ಯೋಗಿಗಳು ಮಾಡುತ್ತಿರುವ ಕೆಲಸಕ್ಕೆ ಸಮಾನವಾಗಿದ್ದರೆ, ಅವರ ವೇತನವೂ ಅದಕ್ಕೆ ಅನುಗುಣವಾಗಿರಬೇಕು ಎಂಬ ಅಂಶವನ್ನು ಈ ಪ್ರಕರಣದಲ್ಲಿ ಪ್ರಾಧಿಕಾರ ಒಪ್ಪಿಕೊಂಡಿದೆ.

ಅಂದರೆ ಬೆಮೆಲ್‌ನಲ್ಲಿ ಕೆಲಸ ಮಾಡುವ ವ್ಯಕ್ತಿಯ ವೇತನವನ್ನು ನಿರ್ಧರಿಸುವಾಗ ‘ಅವನು ಬೆಮೆಲ್‌ನ ಕಾಯಂ ಉದ್ಯೋಗಿಯೇ ಅಥವಾ ಗುತ್ತಿಗೆ ಕಾರ್ಮಿಕನೇ?’ ಎನ್ನುವುದಕ್ಕಿಂತ ‘ಅವನು ಮಾಡುತ್ತಿರುವ ಕೆಲಸ ಏನು?’ ಎಂಬ ಪ್ರಶ್ನೆ ಮುಖ್ಯವಾಗಿದೆ. ಕೆಲಸ ಒಂದೇ ಆಗಿದ್ದರೆ, ಕೇವಲ ನೇಮಕಾತಿಯ ಸ್ವರೂಪ ಬೇರೆ ಎಂಬ ಕಾರಣಕ್ಕೆ ವೇತನದಲ್ಲಿ ಭಾರೀ ವ್ಯತ್ಯಾಸ ಇರಬಾರದು ಎಂಬುದು ಈ ಪ್ರಕರಣದ ಮೂಲವಾಗಿದೆ.

ಈ ಆದೇಶವು ಕೆಜಿಎಫ್‌ನ 81 ಕಾರ್ಮಿಕರಿಗೆ ಮಾತ್ರ ಸೀಮಿತವಾದ ಒಂದು ವೇತನ ವಿವಾದವಾಗಿ ನೋಡಬೇಕಾದ ಪ್ರಕರಣವಲ್ಲ. ದೇಶದ ವಿವಿಧ ಸಾರ್ವಜನಿಕ ವಲಯದ ಸಂಸ್ಥೆಗಳು, ಕಾರ್ಖಾನೆಗಳು ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕಾಯಂ ಉದ್ಯೋಗಿಗಳಂತೆಯೇ ಕೆಲಸ ಮಾಡುತ್ತಿರುವ ಕಾರ್ಮಿಕರಿಗೂ ಇದು ಮಹತ್ವದ ಕಾನೂನು ಉದಾಹರಣೆಯಾಗಬಹುದು. ಆದರೆ ಪ್ರತಿ ಪ್ರಕರಣದಲ್ಲಿಯೂ ಇದೇ ರೀತಿಯ ಬೀದಿ ಹೋರಾಟ ಮತ್ತು ಕಾನೂನು ಹೋರಾಟ ನಡೆಯುತ್ತದೆಯೇ ಎಂಬ  ಪ್ರಶ್ನೆಯ ಮೇಲೆ ಫಲಿತಾಂಶ ನಿಂತಿದೆ.

ಕೆಜಿಎಫ್ ಬೆಮೆಲ್ ಪ್ರಕರಣದಲ್ಲಿ, ಕಾರ್ಮಿಕರು ನಿರ್ವಹಿಸುತ್ತಿರುವ ನಿರ್ದಿಷ್ಟ ತಾಂತ್ರಿಕ ಕೆಲಸ, ಅವರು ಬಳಸುವ ಯಂತ್ರಗಳು, ಅವರ ಕೌಶಲ್ಯ, ಅನುಭವ, ಕೆಲಸದ ಸ್ವರೂಪ ಮತ್ತು ಬೆಮೆಲ್‌ನ ನೇರ ಉದ್ಯೋಗಿಗಳು ನಿರ್ವಹಿಸುತ್ತಿರುವ ಕೆಲಸಗಳ ನಡುವಿನ ಸಾಮ್ಯತೆಯನ್ನು ಸಾಕ್ಷ್ಯಗಳ ಆಧಾರದ ಮೇಲೆ ಪರಿಶೀಲಿಸಿ ಪ್ರಾಧಿಕಾರ ತೀರ್ಮಾನಕ್ಕೆ ಬಂದಿದೆ ಎಂಬುದೇ ಈ ಆದೇಶದ ಕಾನೂನು ಮಹತ್ವ.

ಬೆಮೆಲ್ ಕಾರ್ಮಿಕ ಮುಖಂಡರೊಂದಿಗೆ ಬಾಲನ್
ಬೆಮೆಲ್ ಕಾರ್ಮಿಕರೊಂದಿಗೆ ಬಾಲನ್

ಗೆಲುವಿನ ದಶಕಗಳ ಹೋರಾಟ

1988ರಲ್ಲಿ ಬೆಮೆಲ್‌ನಲ್ಲಿ ಗುತ್ತಿಗೆ ಕಾರ್ಮಿಕರ ಸಂಘಟನೆ ಮಾಡುವ ಸಂದರ್ಭ  ಸುಲಭದ್ದಾಗಿರಲಿಲ್ಲ. ಆಗ ಬೆಮೆಲ್‌ನಲ್ಲಿ ಕ್ಯಾಂಟೀನ್ ನೌಕರರು, ಆಸ್ಪತ್ರೆ ನೌಕರರು, ಸ್ವಚ್ಛತಾ ಕಾರ್ಮಿಕರು, ಚಾಲಕರು ಸೇರಿದಂತೆ ಸುಮಾರು ಎರಡು ಸಾವಿರ ಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರ ದಿನಗೂಲಿ ಕೇವಲ ಎಂಟು ರೂಪಾಯಿ. ಇಂದಿನ ತಲೆಮಾರಿಗೆ ಎಂಟು ರೂಪಾಯಿ ದಿನಗೂಲಿ ಎಂಬುದು ನಂಬಲೂ ಕಷ್ಟವಾಗಬಹುದು. ಆದರೆ ಆಗಲೂ ಆ ಎಂಟು ರೂಪಾಯಿಯ ಹಿಂದೆ ಒಂದು ಕುಟುಂಬದ ಬದುಕಿತ್ತು. ಆ ಎಂಟು ರೂಪಾಯಿಯಲ್ಲಿ ಮನೆ ನಡೆಯಬೇಕಿತ್ತು, ಹೊಟ್ಟೆ ತುಂಬಬೇಕಿತ್ತು, ಮಕ್ಕಳನ್ನು ನೋಡಿಕೊಳ್ಳಬೇಕಿತ್ತು. ಆದರೆ ಆ ಕಾರ್ಮಿಕನಿಗೆ ತನ್ನ ದುಡಿಮೆಯ ಜಾಗದಲ್ಲೇ ಕನಿಷ್ಠ ಗೌರವವೂ ಇರಲಿಲ್ಲ.

ಬೆಮೆಲ್ ಕ್ಯಾಂಟೀನ್‌ನಲ್ಲಿ ಊಟ ಮಾಡಲು ಪರ್ಮನೆಂಟ್ ಕಾರ್ಮಿಕನ ಟೋಕನ್ ಬೇಕಾಗುತ್ತಿತ್ತು. ಗುತ್ತಿಗೆ ಕಾರ್ಮಿಕರು ತಮ್ಮ ಸಹೋದ್ಯೋಗಿಗಳ ಬಳಿ ಟೋಕನ್‌ಗಾಗಿ ಬೇಡಿಕೊಳ್ಳಬೇಕಾದ ಪರಿಸ್ಥಿತಿ ಇತ್ತು. ಪರ್ಮನೆಂಟ್ ಕಾರ್ಮಿಕನ ಟೋಕನ್ ಪಡೆದು ಕ್ಯಾಂಟೀನ್‌ನಲ್ಲಿ ಊಟಕ್ಕಾಗಿ ಸಾಲಿನಲ್ಲಿ ನಿಂತರೆ, ಮ್ಯಾನೇಜ್ಮೆಂಟ್‌ನ ಕಣ್ಣಿಗೆ ಬಿದ್ದ ಕೂಡಲೇ ಆ ಕಾರ್ಮಿಕನನ್ನು ಆ ಸಾಲಿನಿಂದಲೇ ಓಡಿಸಲಾಗುತ್ತಿತ್ತು. ಒಂದು ಕಡೆ ಕಾರ್ಮಿಕನು ಸಂಸ್ಥೆಯ ಉತ್ಪಾದನೆಗೆ ತನ್ನ ಶ್ರಮ ನೀಡುತ್ತಿದ್ದಾನೆ. ಮತ್ತೊಂದು ಕಡೆ ಅದೇ ಸಂಸ್ಥೆಯ ಕ್ಯಾಂಟೀನ್‌ನಲ್ಲಿ ಒಂದು ಹೊತ್ತಿನ ಊಟಕ್ಕಾಗಿ ಸಾಲಿನಲ್ಲಿ ನಿಲ್ಲುವ ಹಕ್ಕು ಕೂಡ ಅವನಿಗೆ ಇರಲಿಲ್ಲ. ಇದು ಕೇವಲ ಹಸಿವಿನ ಪ್ರಶ್ನೆಯಾಗಿರಲಿಲ್ಲ. ಇದು ಅವಮಾನ ಮತ್ತು ಅಸಮಾನತೆಯ ಪ್ರಶ್ನೆಯಾಗಿತ್ತು.

ಆ ಪರಿಸ್ಥಿತಿಯಲ್ಲಿ ಕಾರ್ಮಿಕರ ನೋವನ್ನು ಕೇವಲ ವೈಯಕ್ತಿಕ ದೂರುಗಳಾಗಿ ನೋಡುವ ಬದಲು ಅದನ್ನು ಸಂಘಟನೆಯ ಪ್ರಶ್ನೆಯನ್ನಾಗಿ ಮಾಡಲಾಯಿತು. ಬಾಲನ್ಅವರು ಗುತ್ತಿಗೆ ಕಾರ್ಮಿಕರನ್ನು ಒಗ್ಗೂಡಿಸಿದರು.  ಸಂಘಟನೆಯನ್ನು ನೋಂದಣಿ ಮಾಡಿಸಿಕೊಂಡರು. ಹೋರಾಟಗಾರನಾಗಿ, ಯುವವಕೀಲನಾಗಿ ಮ್ಯಾನೇಜ್ಮೆಂಟ್‌ಗೆ ನೋಟಿಸ್ ನೀಡಿದರು. ಮೆರವಣಿಗೆ ನಡೆಸಲಾಯಿತು. ಅಂತಿಮವಾಗಿ ಮುಷ್ಕರವನ್ನೂ ನಡೆಸಲಾಯಿತು. ಕಾರ್ಮಿಕರು ಮತ್ತು ಆಡಳಿತ ಅಥವಾ ಉದ್ಯೋಗದಾತರ ನಡುವೆ ಉಂಟಾದ ವಿವಾದವನ್ನು ನೇರವಾಗಿ ನ್ಯಾಯಾಲಯಕ್ಕೆ ಕೊಂಡೊಯ್ಯುವ ಮೊದಲು, ಕಾರ್ಮಿಕ ಇಲಾಖೆ ಅಥವಾ Labour Commissioner ಅವರ ಮುಂದೆ ಎರಡೂ ಪಕ್ಷಗಳನ್ನು ಕರೆಸಿ ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುವ ಪ್ರಕ್ರಿಯೆಯನ್ನು Conciliation ಎಂದು ಕರೆಯಲಾಗುತ್ತದೆ. ಬೆಮೆಲ್ ಗುತ್ತಿಗೆ ಕಾರ್ಮಿಕರ ಹೋರಾಟದಲ್ಲಿಯೂ ಇಂತಹ ಕನ್ಸಿಲಿಯೇಶನ್ ಪ್ರಕ್ರಿಯೆ ನಡೆಯಿತು. ಆರು ತಿಂಗಳು ಈ ಪ್ರಕ್ರಿಯೆಗಾಗಿ ಓಡಾಡಬೇಕಾಯಿತು.

ಈ ಹೋರಾಟದ ಸಂದರ್ಭದಲ್ಲಿ ಬೆಮೆಲ್ ಯಾವ ಉದ್ಯಮಕ್ಕೆ ಸೇರಿದೆ ಎಂಬ ಪ್ರಶ್ನೆಯೂ ಎದುರಾಯಿತು. ಅದು ಆಟೋಮೊಬೈಲ್ ಉದ್ಯಮವೇ ಅಥವಾ ಎಂಜಿನಿಯರಿಂಗ್ ಉದ್ಯಮವೇ ಎಂಬ ವಿಚಾರ ಕಾರ್ಮಿಕರ ವೇತನದ ಮೇಲೂ ಪರಿಣಾಮ ಬೀರುವ ಪ್ರಶ್ನೆಯಾಗಿತ್ತು. ಅಂತಿಮವಾಗಿ ಬೆಮೆಲ್ ಅನ್ನು ಆಟೋಮೊಬೈಲ್ ಉದ್ಯಮವೆಂದು ಪರಿಗಣಿಸಿದ ನಂತರ ಗುತ್ತಿಗೆ ಕಾರ್ಮಿಕರ ದಿನಗೂಲಿ ಎಂಟು ರೂಪಾಯಿಯಿಂದ ಹದಿನೆಂಟು ರೂಪಾಯಿಗೆ ಏರಿಕೆಯಾಯಿತು. ಎಂಟು ರೂಪಾಯಿ ಪಡೆಯುತ್ತಿದ್ದ ಕಾರ್ಮಿಕನಿಗೆ ಹದಿನೆಂಟು ರೂಪಾಯಿ ದಿನಗೂಲಿ ದೊರೆಯುವುದು ಆ ಕಾಲದಲ್ಲಿ ದೊಡ್ಡ ಬದಲಾವಣೆ. ಅದರ ಜೊತೆಗೆ ಸುಮಾರು ಮೂರು ಸಾವಿರ ರೂಪಾಯಿ ಅರಿಯರ್ಸ್ ಕೂಡ ದೊರೆಯುವಂತಾಯಿತು. ತಿಂಗಳಿಗೆ ಇನ್ನೂರು ರೂಪಾಯಿ ಸಂಬಳವನ್ನೇ ನೋಡಿರದ ಕಾರ್ಮಿಕರು ಸಾವಿರಾರು ರೂಪಾಯಿ ಸಂಬಳ ಪಡೆಯುವ ಹಂತಕ್ಕೆ ಬಂದರು. ಇದು ಯಾರೊಬ್ಬರ ಕರುಣೆಯಿಂದ ಬಂದ ಬದಲಾವಣೆಯಲ್ಲ. ಇದು ಸಂಘಟಿತ ಹೋರಾಟದಿಂದ ಬಂದ ಫಲ.

ಆದರೆ ಒಂದು ಹೋರಾಟದಲ್ಲಿ ವೇತನ ಹೆಚ್ಚಾಯಿತು ಎಂದರೆ ಕಾರ್ಮಿಕರ ಎಲ್ಲಾ ಸಮಸ್ಯೆಗಳು ಮುಗಿದುಹೋಗುವುದಿಲ್ಲ. ಡಿಎ ಕೊಡುತ್ತಿರಲಿಲ್ಲ. ಮತ್ತೆ ಹೋರಾಟ ಮಾಡಬೇಕಾಯಿತು. ಡಿಎ ಕೊಡಿಸಲಾಯಿತು. ಕ್ಯಾಂಟೀನ್‌ನಲ್ಲಿ ಟೋಕನ್ ಪಡೆಯುವ ಅವಮಾನ ಮುಂದುವರಿದಿತ್ತು. ಮತ್ತೆ ಹೋರಾಟ ಮಾಡಬೇಕಾಯಿತು. ಕಾರ್ಮಿಕರಿಗೆ ಕ್ಯಾಂಟೀನ್‌ನಲ್ಲಿ ಗೌರವದಿಂದ ಊಟ ಮಾಡುವ ಹಕ್ಕು ದೊರೆಯುವಂತೆ ಹೋರಾಟ ಮುಂದುವರಿಯಿತು. ನಂತರ ಬೋನಸ್‌ಗಾಗಿ ಹೋರಾಟ ಆರಂಭವಾಯಿತು. ಬೋನಸ್ ಕ್ಲೈಮ್ ಮಾಡಲಾಯಿತು. ಒಂದು ತಿಂಗಳ ಸಂಬಳದಷ್ಟು ಬೋನಸ್ ನೀಡುವ ಪ್ರಕ್ರಿಯೆ ಆರಂಭವಾಯಿತು. ಹೀಗೆ ಒಂದು ಬೇಡಿಕೆ ಈಡೇರಿದ ನಂತರ ಮತ್ತೊಂದು ಬೇಡಿಕೆ ಮುಂದಿಟ್ಟು ಹೋರಾಟ ಮುಂದುವರಿಯುತ್ತಲೇ ಇತ್ತು.

ಈ ಹೋರಾಟಕ್ಕೆ ಪ್ರತಿರೋಧವೂ ಎದುರಾಯಿತು. ಲಾಠಿಚಾರ್ಜ್ ನಡೆಯಿತು. ವಕೀಲರಾದ ಎಸ್ ಬಾಲನ್ ಅವರೂ ಲಾಠಿ  ಏಟು ತಿನ್ನಬೇಕಾಯಿತು. ಆದರೆ ಹೋರಾಟ ನಿಲ್ಲಲಿಲ್ಲ. ಕಾನೂನು ಹೋರಾಟ ಶುರುವಾಯಿತು.

ಅಂತಿಮವಾಗಿ ನೋಡಿದರೆ, 2026ರ ಆಗಸ್ಟ್ 31ರ ಈ ಆದೇಶವು ಕೆಜಿಎಫ್ ಬೆಮೆಲ್‌ನ ಗುತ್ತಿಗೆ ಕಾರ್ಮಿಕರ ಪಾಲಿಗೆ ವೇತನ ಹೆಚ್ಚಳದ ಆದೇಶಕ್ಕಿಂತ ಹೆಚ್ಚಿನ ಅರ್ಥ ಹೊಂದಿದೆ. ವರ್ಷಗಳ ಕಾಲ ಒಂದೇ ಯಂತ್ರದ ಮುಂದೆ, ಒಂದೇ ಉತ್ಪಾದನಾ ವ್ಯವಸ್ಥೆಯೊಳಗೆ, ಒಂದೇ ರೀತಿಯ ತಾಂತ್ರಿಕ ಕೆಲಸ ಮಾಡುತ್ತಿದ್ದರೂ ‘ಗುತ್ತಿಗೆ ಕಾರ್ಮಿಕ’ ಎಂಬ ಹೆಸರಿನಿಂದ ಕಡಿಮೆ ವೇತನ ಪಡೆಯುತ್ತಿದ್ದ 81 ಕಾರ್ಮಿಕರ ಕೆಲಸದ ಮೌಲ್ಯವನ್ನು ಕಾನೂನು ಮಾನ್ಯ ಮಾಡಿರುವ ಆದೇಶ ಇದು. 2023ರ ಅಕ್ಟೋಬರ್ 16ರಿಂದ ಅನ್ವಯವಾಗುವ ವೇತನ ಪರಿಷ್ಕರಣೆ, ಅದರೊಂದಿಗೆ ಬರುವ ಅರಿಯರ್ಸ್ ಮತ್ತು ಗುತ್ತಿಗೆದಾರ ಪಾವತಿಸದಿದ್ದರೆ Principal Employer ಆಗಿರುವ ಬೆಮೆಲ್‌ನ ಮೇಲೂ ಬೀಳುವ ಹೊಣೆಗಾರಿಕೆ ಈ ಆದೇಶವನ್ನು ವಿಶೇಷವಾಗಿಸಿದೆ.

ಒಟ್ಟಿನಲ್ಲಿ, ಕೆಜಿಎಫ್ ಬೆಮೆಲ್ ಕಾರ್ಮಿಕರ ಹೋರಾಟದಲ್ಲಿ ಇದು ಒಂದು ಮಹತ್ವದ ಕಾನೂನು ಗೆಲುವು. ‘ಕೆಲಸ ಒಂದೇ ಆಗಿದ್ದರೆ ವೇತನದ ನ್ಯಾಯವೂ ಒಂದೇ ಆಗಬೇಕು’ ಎಂಬ ಕಾರ್ಮಿಕರ ಬಹುಕಾಲದ ಬೇಡಿಕೆಗೆ ಕೇಂದ್ರ ಕಾರ್ಮಿಕ ಪ್ರಾಧಿಕಾರದ ಈ ಆದೇಶ ಕಾನೂನುಬದ್ಧ ಮುದ್ರೆ ಹಾಕಿದೆ.

Leave a Reply

Your email address will not be published.