– ನವೀನ್ ಸೂರಿಂಜೆ
ಎಂಅರ್ ಪಿಎಲ್ ನಲ್ಲಿ ಸೆಪ್ಟೆಂಬರ್ 30 ರಂದು ಬುಧವಾರ ನಡೆದ ಸ್ಪೋಟ, ಸಾವು ನೋವುಗಳ ಬಗ್ಗೆ ಎಲ್ಲರೂ ಲೊಚಗುಟ್ಟುತ್ತಾರೆ. ಮಂಗಳೂರು ಬೋಪಾಲ್ ಆಗಬಹುದು ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಹೊಣೆಗಾರಿಕೆ ವಹಿಸಲು ಯಾರೂ ಸಿದ್ದರಿಲ್ಲ. ಎಂಆರ್ಪಿಎಲ್ ಬಗ್ಗೆ ಅಸೆಂಬ್ಲಿಯಲ್ಲಿ ಮಾತನಾಡದ ಶಾಸಕರೂ ಇದಕ್ಕೆ ಜವಾಬ್ದಾರಿಯಲ್ಲವೇ ?
ಎಂಆರ್ ಪಿಎಲ್ ದುರಂತದ ನೇರ ಹೊಣೆಯನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ ವೈ ಭರತ್ ಶೆಟ್ಟಿಯವರು ಹೊತ್ತುಕೊಳ್ಳಬೇಕು. ಅದಕ್ಕೆ ಕಾರಣ ಅವರು ಎಂಆರ್ ಪಿಎಲ್ ಸಮಸ್ಯೆಗಳ ಬಗ್ಗೆ ತೋರಿದ ದಿವ್ಯ ನಿರ್ಲಕ್ಷ್ಯ ! ಎಂಆರ್ಪಿಎಲ್/ಎಸ್ಇಝಡ್ ಕಂಪನಿಗಳು ಮೂಲ್ಕಿ ಮೂಡಬಿದ್ರೆ ಮತ್ತು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಹರಡಿಕೊಂಡಿದೆ. ಆದರೆ, ಎಂಆರ್ಪಿಎಲ್ ಸ್ಪೋಟ, ಅನಿಲ ದುರಂತಗಳು ಒಂದು ದಿನದ ಘಟನೆ ಮತ್ತು ಬೆರಳೆಣಿಕೆಯ ಸಾವು ನೋವುಗಳಿಗೆ ಸೀಮಿತವಲ್ಲ. ಈ ಸ್ಪೋಟಗಳು, ಅನಿಲ ಲೀಕೇಜ್ ಗಳು ಎಂಆರ್ಪಿಎಲ್ ಸನಿಹದಲ್ಲಿರುವ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಜನವಸತಿ ಪ್ರದೇಶಗಳ ಮೇಲೆ ಧೀರ್ಘಕಾಲಿನ ಪರಿಣಾಮ ಬೀರುತ್ತದೆ.
ಸ್ಪೋಟಗಳು ಒಂದು ಘಟನೆಯಷ್ಟೆ. ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಘಟಕದಲ್ಲಿ ಸೆಪ್ಟೆಂಬರ್ 30, 2026ರಂದು ಭಾರೀ ಸ್ಫೋಟ ಸಂಭವಿಸಿದ್ದು, ಓರ್ವ ಕಾರ್ಮಿಕ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಈ ಸ್ಪೋಟದ ತೀವ್ರತೆ ಎಷ್ಟಿತ್ತೆಂದರೆ ಬಜಪೆ, ಜೋಕಟ್ಟೆ, ಕಳವಾರಿನಲ್ಲಿರುವ ಮನೆ, ಮಸೀದಿ, ಚರ್ಚ್ಗಳ ಹೆಂಚುಗಳು ಹಾರಿಹೋಗಿವೆ. ಸೂರಿಂಜೆಯ ಪಂಚಾಯತ್ ಕಟ್ಟಡವೂ ಸೇರಿದಂತೆ ಹಲವು ಮನೆಗಳಿಗೆ ಹಾನಿಯಾಗಿದೆ. ಒಂದು ಘಟಕದಲ್ಲಿ ನಡೆದ ಸ್ಪೋಟದ ತೀವ್ರತೆ ಇಷ್ಟಿರಬೇಕಾದರೆ, ಸಾವಿರಾರು ಎಕರೆಯಲ್ಲಿರುವ ಎಂಆರ್ಪಿಎಲ್ ಪೆಟ್ರೋಲಿಯಂ ಸ್ಥಾವರದ ಅವಘಡವಾದರೆ ಪರಿಣಾಮ ಹೇಗಿರಬಹುದು ?
ವೈ ಭರತ್ ಶೆಟ್ಟಿಯವರು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಒಂದು ಬಾರಿಯೂ ಎಂಆರ್ ಪಿಎಲ್ ಸಮಸ್ಯೆಯ ಬಗ್ಗೆ ಪ್ರಶ್ನೆ ಕೇಳಿದ ದಾಖಲೆಗಳು ಲಭ್ಯವಾಗುತ್ತಿಲ್ಲ. ಎಂಆರ್ ಪಿಎಲ್ ನಿಂದ ಅತ್ಯಂತ ಹೆಚ್ಚು ಸಮಸ್ಯೆಯಾಗುವುದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮೀನುಗಾರರು, ಕಾರ್ಮಿಕರು, ನಿವಾಸಿಗಳಿಗೆ ಆದರೂ ಈವರೆಗೂ ಈ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ್ದು ಇಲ್ಲವೇ ಎನ್ನುವಷ್ಟು ಕಡಿಮೆ.
ಕರ್ನಾಟಕ ವಿಧಾನಸಭೆಯ ದಾಖಲೆಗಳನ್ನು ಪರಿಶೀಲಿಸಿದರೆ, ಎಂಆರ್ ಪಿಎಲ್, ಎಂಎಸ್ಇಝಡ್, ಎಸ್ಇಝಡ್ ನಿಂದ ಉಂಟಾಗುತ್ತಿರುವ ಪರಿಸರ, ಭೂಮಿ, ಮಾಲಿನ್ಯ ಅಥವಾ ಜನರ ಸುರಕ್ಷತಾ ಸಮಸ್ಯೆಗಳ ಕುರಿತು ಡಾ. ಭರತ್ ಶೆಟ್ಟಿ ಅವರು ವಿಧಾನಸಭೆಯಲ್ಲಿ ಪ್ರಶ್ನೋತ್ತರ, ನಿಲುವಳಿ ಸೂಚನೆ ಅಥವಾ ಗಮನ ಸೆಳೆಯುವ ಸೂಚನೆಯ ಮೂಲಕ ಪ್ರಸ್ತಾಪಿಸಿರುವ ಸ್ಪಷ್ಟ ದಾಖಲೆಗಳೇ ಇಲ್ಲ.
ಡಾ ವೈ ಭರತ್ ಶೆಟ್ಟರು ಸುರತ್ಕಲ್, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಹಲವು ವಿಷಯಗಳ ಬಗ್ಗೆ ಅವರ ಹೆಸರಿನ ಪ್ರಶ್ನೋತ್ತರ ದಾಖಲೆಗಳು ಲಭ್ಯವಿವೆ. ಆದರೆ MRPL ಅಥವಾ SEZ ಸಮಸ್ಯೆಯನ್ನು ಕೇಂದ್ರವಾಗಿಟ್ಟುಕೊಂಡ ಪ್ರಶ್ನೆ/ಸೂಚನೆ ಎಂಬುದು ನಾನು ಹುಡುಕಿದ ಅಧಿಕೃತ ದಾಖಲೆಗಳಲ್ಲಿ ಪತ್ತೆಯಾಗಿಲ್ಲ.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರವು ಸುರತ್ಕಲ್ ವಿಧಾನಸಭಾ ಕ್ಷೇತ್ರ ಆಗಿದ್ದಾಗಲೇ ಆಗಿನ ಶಾಸಕರು ಎಂಆರ್ ಪಿಎಲ್ ಸಮಸ್ಯೆ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಭಾಷಣಗಳ ಮೂಲಕವೇ ಕೋಮುಗಲಭೆಗಳನ್ನು ಮಾಡಿಸುತ್ತಿದ್ದ, ಕೋಮುವಾದಿ ಶಾಸಕ ಎಂದೇ ಹೆಸರಾಗಿದ್ದ ಕುಂಬ್ಳೆ ಸುಂದರರಾವ್ ಅವರು ಕೂಡಾ ಎಂಆರ್ ಪಿಎಲ್ ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಹಾಗೆ ನೋಡಿದರೆ, ಪ್ರತೀ ವಿಧಾನಸಭಾ ಅಧಿವೇಶನದಲ್ಲೂ ಕುಂಬ್ಳೆ ಸುಂದರರಾವ್ ಅವರು ಎಂಆರ್ ಪಿಎಲ್ ವಿರುದ್ದ ಪ್ರಶ್ನೆ ಕೇಳುತ್ತಿದ್ದರು. ಶಾಸಕ ವಿಜಯಕುಮಾರ್ ಶೆಟ್ಟಿಯವರು ಎಂಆರ್ ಪಿಎಲ್ ಪರವಾಗಿದ್ದರೂ ಅದರ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಲು ಹಿಂಜರಿಯುತ್ತಿರಲಿಲ್ಲ. ಕೃಷ್ಣ ಪಾಲೇಮಾರ್ ಕೂಡಾ ಎಂಅರ್ ಪಿಎಲ್ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ.
“ಈ ರೀತಿ ವಿಧಾನಸಭೆಯಲ್ಲಿ ಪ್ರಶ್ನೆ ಕೇಳಿದ ತಕ್ಷಣ ಎಂಆರ್ ಪಿಎಲ್ ನಲ್ಲಿ ಸ್ಪೋಟಗಳು ನಿಲ್ಲುತ್ತಾ ?” ಎಂದು ಪ್ರಶ್ನಿಸಬಹುದು. ಎಂಆರ್ ಪಿಎಲ್ ಎಂಬ ಬಹುಕೋಟಿ ಉದ್ಯಮವು ಸ್ಥಳೀಯ ಆಡಳಿತವನ್ನು ನಿರ್ಲಕ್ಷಿಸಿ, ಜನರ ಭದ್ರತೆ, ನೆಲ, ಜಲದ ಬಗ್ಗೆ ಕಾಳಜಿ ಇಲ್ಲದೇ ಏಕಸ್ವಾಮ್ಯದಲ್ಲಿ ಕಾರ್ಯನಿರ್ವಹಿಸುವಾಗ ಅದನ್ನು ಸರ್ಕಾರದ ಹಿಡಿತದಲ್ಲಿ ಇರುವಂತೆ ನೋಡಿಕೊಳ್ಳುವುದು ಜನರಿಂದ ಆಯ್ಕೆಯಾದ ಜನಪ್ರತಿನಿದಿಯ ಕರ್ತವ್ಯ. ಆ ಕರ್ತವ್ಯವನ್ನು ಡಾ ವೈ ಭರತ್ ಶೆಟ್ಟಿ ಮರೆತಿದ್ದಾರೆ.
ಎಂಆರ್ ಪಿಎಲ್ ಭೂಸ್ವಾಧೀನ, ಹಸಿರು ವಲಯ ವಿವಾದ, ತ್ಯಾಜ್ಯ ನೀರು ವಿಸರ್ಜನೆ, ನೇತ್ರಾವತಿಯಿಂದ ನೀರು ಬಳಕೆ, ಅಂತರ್ಜಲದಲ್ಲಿ ಸೇರಿಕೊಂಡ ಪೆಟ್ರೋಲ್, ಮೀನುಗಾರಿಕೆ ಕುಸಿತ, ಭತ್ತ ಬೆಲೆ ಕುಸಿತ, ಯಾವ ತರಕಾರಿಯೂ ಬೆಳೆಯದಂತಹ ವಾತಾವರಣ, ವಾಸನೆ, ನದಿ, ಗದ್ದೆಗಳ ನೀರು ಸೇರಿಕೊಂಡ ಪೆಟ್ರೋಲಿಯಂ ತ್ಯಾಜ್ಯ, ಚರ್ಮದ ರೋಗಗಳು ಸೇರಿದಂತೆ ಎಂಆರ್ ಪಿಎಲ್ ನಿಂದ ಸಾವಿರ ಸಾವಿರ ಸಮಸ್ಯೆಗಳಾಗುತ್ತಿವೆ. ಇದೆಲ್ಲದರ ನೇರ ಪರಿಣಾಮ ಬೀರುವುದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಜನರ ಮೇಲೆ. ಆದರೂ ಶಾಸಕ ಡಾ ವೈ ಭರತ್ ಶೆಟ್ಟಿ ಮಾತನಾಡಿದ್ದೇ ಇಲ್ಲ. ಇವೆಲ್ಲಾ ಸಮಸ್ಯೆಗಳನ್ನು ಸಹಿಸಿಕೊಂಡರೆ, ಸ್ಥಳೀಯರಿಗೆ ಉದ್ಯೋಗವಾದರೂ ಸಿಗುತ್ತದೆಯೇ ಎಂದರೆ ಅದೂ ಇಲ್ಲ. ನೇಮಕಾತಿಯಲ್ಲಿ ಉತ್ತರ ಭಾರತೀಯರಿಗೆ ಆಧ್ಯತೆ ನೀಡಲಾಗಿತ್ತು. ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ಜನರ ಹೋರಾಟಗಳು ನಿತ್ಯ ನಡೆಯುತ್ತಿದ್ದರೂ ಶಾಸಕರು ಸಂಪೂರ್ಣ ಮೌನ.
ಎಂಆರ್ಪಿಎಲ್ನಿಂದ ವರ್ಷಕ್ಕೆ ಕನಿಷ್ಟ 1200 ಟನ್ ಫ್ಲೋರೈಡ್, 2 ಟನ್ ಸಯನೈಡ್, 100 ಟನ್ ಗ್ರೀಸ್, 30 ಟನ್ ತಾಮ್ರ 20 ಟನ್ ಕ್ಯಾರಮಿಯಂ, 2 ಟನ್ ಆಸೊನಿಕ್, 1 ಟನ್ ಮರ್ಕ್ಯುರಿ ತ್ಯಾಜ್ಯವಾಗಿ ಕರಾವಳಿಯ ನೆಲ ಜಲ ಸೇರಿಕೊಳ್ಳುತ್ತದೆ ಎಂದು ಹತ್ತು ವರ್ಷಗಳ ಹಿಂದೆಯೇ ಹಲವು ವೈಜ್ಞಾನಿಕ ವರದಿಗಳು ಬಂದಿದ್ದವು. ಇದಲ್ಲದೇ ಇದು ಒಂದೊಂದು ವಿಷಾನಿಲ ಹೊರಗೆ ಬಂದರೆ ಅದರ ಪರಿಣಾಮಗಳು ಬೇರೆಯದ್ದೇ ಆಗಿರುತ್ತದೆ. ಇದೆಲ್ಲವೂ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಜನವಸತಿ ಪ್ರದೇಶದ ಮೇಲೆ ಇಂದಲ್ಲಾ ನಾಳೆ ನೇರ ಪರಿಣಾಮ ಬೀರುತ್ತದೆ. ಇಷ್ಟೆಲ್ಲಾ ಇದ್ದರೂ ಕೋಮುದ್ವೇಷದಲ್ಲೇ ಮುಳುಗಿರುವ ಈಗಿನ ಜನಪ್ರತಿನಿಧಿಗಳು ವಿಧಾನಸಭೆಯಲ್ಲಿ ಈ ಬಗ್ಗೆ ಪರಿಣಾಮಕಾರಿಯಾಗಿ ಮಾತನಾಡಿಲ್ಲ !
ಕುಂಬ್ಳೆ ಸುಂದರರಾವ್, ವಿಜಯಕುಮಾರ್ ಶೆಟ್ಟಿ, ಜಯಪ್ರಕಾಶ್ ಹೆಗ್ಡೆ, ಯು ಆರ್ ಸಭಾಪತಿ, ಕೃಷ್ಣಪಾಲೇಮಾರ್ ಅವರುಗಳನ್ನು ಹೊರತುಪಡಿಸಿದರೆ ಸುರತ್ಕಲ್/ಮಂಗಳೂರು ಉತ್ತರದ ಶಾಸಕರು ಎಂಆರ್ಪಿಎಲ್ ಸಮಸ್ಯೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಾತನಾಡಿದ್ದೇ ಕಡಿಮೆ. ಹಾಗಾಗಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರು ಈ ದುರಂತದ ಹೊಣೆ ಹೊತ್ತುಕೊಳ್ಳಬೇಕಿದೆ.


Leave a Reply