– ನವೀನ್ ಸೂರಿಂಜೆ
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕೇವಲ ಮರುತನಿಖೆಗೆ ಆದೇಶ ನೀಡಿದ ತೀರ್ಪಲ್ಲ. 14 ವರ್ಷಗಳ ಹಿಂದೆ ನಡೆದ ಈ ಅಪರಾಧದ ತನಿಖೆಯನ್ನು ವಿವಿಧ ಹಂತಗಳಲ್ಲಿ ನಡೆಸಿದ ರೀತಿಯನ್ನೇ ನ್ಯಾಯಾಲಯ ಅತ್ಯಂತ ಗಂಭೀರವಾಗಿ ಪ್ರಶ್ನಿಸಿದೆ. ಹಿಂದಿನ ತನಿಖೆಯಲ್ಲಿ ಉಳಿದುಹೋಗಿರುವ ಸಾಕ್ಷ್ಯಗಳು, ತನಿಖೆಯಲ್ಲಿನ ಲೋಪಗಳು ಮತ್ತು ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚುವ ಅವಕಾಶವೇ ಹಾಳಾಗಿರುವ ಸಾಧ್ಯತೆಯ ಬಗ್ಗೆ ಸುಪ್ರೀಂಕೋರ್ಟ್ ದಾಖಲಿಸಿರುವ ಅಭಿಪ್ರಾಯಗಳು ಈ ಪ್ರಕರಣದ ಮುಂದಿನ ತನಿಖೆಗೆ ಮಹತ್ವದ ದಿಕ್ಕು ನೀಡಿವೆ. ವಿಶೇಷವಾಗಿ, ತನಿಖೆಯ ದಾರಿ ತಪ್ಪಿಸಿರುವ ಸಾಧ್ಯತೆಯನ್ನು ನ್ಯಾಯಾಲಯ ತಳ್ಳಿಹಾಕಿಲ್ಲ ಎಂಬ ಅಂಶವು ತೀರ್ಪಿನ ಅತ್ಯಂತ ಗಮನಾರ್ಹ ಭಾಗವಾಗಿದೆ.
ಪ್ಯಾರಾ 59ರಲ್ಲಿ ಸುಪ್ರೀಂಕೋರ್ಟ್ ಪ್ರಕರಣದ ತನಿಖೆಯ ಬಗ್ಗೆ ಅತ್ಯಂತ ಗಂಭೀರ ಅಭಿಪ್ರಾಯ ದಾಖಲಿಸಿದೆ. 17 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಪ್ರಕರಣದಲ್ಲಿ ವಿವಿಧ ತನಿಖಾ ಸಂಸ್ಥೆಗಳು ತನಿಖೆ ನಡೆಸಿದ ರೀತಿಯು ‘ನ್ಯಾಯಾಲಯದ ಆತ್ಮಸಾಕ್ಷಿಗೆ ಘಾಸಿ’ ಉಂಟುಮಾಡುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆರೋಪಿಯಾಗಿ ವಿಚಾರಣೆಗೊಳಗಾದ ವ್ಯಕ್ತಿಯೇ ಅಪರಾಧ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಕಂಡಿರುವ ಹಿನ್ನೆಲೆಯಲ್ಲಿ, ತನಿಖೆಯ ರೀತಿಯು ಸಂತ್ರಸ್ತೆಗೆ ಅನ್ಯಾಯ ಮಾಡಿದೆ ಎಂದು ಹೇಳಿದೆ.
ಪ್ಯಾರಾ 59 ರ ತೀಪಿನ ಭಾಗದ ಕನ್ನಡ ಅನುವಾದ ಹೀಗಿದೆ. ”17 ವರ್ಷ ವಯಸ್ಸಿನ ಅಪ್ರಾಪ್ತ ಬಾಲಕಿಯ ಮೇಲೆ ಕ್ರೂರವಾಗಿ ಅತ್ಯಾಚಾರ ಎಸಗಿ ಕೊಲೆ ಮಾಡಲಾದ ಪ್ರಕರಣದಲ್ಲಿ, ತನಿಖೆ ಮುಂದುವರಿದ ರೀತಿಯೂ ಹಾಗೂ ವಿವಿಧ ತನಿಖಾ ಸಂಸ್ಥೆಗಳು ತನಿಖೆ ನಡೆಸಿ, ಸಾಕ್ಷ್ಯಗಳನ್ನು ಸಂಗ್ರಹಿಸಿ ಮತ್ತು ಅವುಗಳನ್ನು ಮೌಲ್ಯಮಾಪನ ಮಾಡಿದ ರೀತಿಯೂ ನ್ಯಾಯಾಲಯದ ಆತ್ಮಸಾಕ್ಷಿಯನ್ನೇ ಬೆಚ್ಚಿಬೀಳಿಸುವಂತಿದೆ. ಯಾರ ವಿರುದ್ಧ ವಿಚಾರಣೆ ನಡೆಸಲಾಯಿತೋ, ಆ ವ್ಯಕ್ತಿ ಈ ಅಪರಾಧವನ್ನು ಎಸಗಲು ಅಸಮರ್ಥನಾಗಿದ್ದಾನೆ ಎಂದು ತೀರ್ಮಾನಿಸಲಾಗಿದೆ. ಸ್ಪಷ್ಟವಾಗಿ, ಸಂತ್ರಸ್ತೆಗೆ ಅನ್ಯಾಯವಾಗುವ ರೀತಿಯಲ್ಲಿ ತನಿಖೆಯನ್ನು ನಡೆಸಲಾಗಿದೆ.” ಎಂದು ನ್ಯಾಯಮೂರ್ತಿಗಳು ಬರೆದಿದ್ದಾರೆ.
ಇದಕ್ಕಿಂತಲೂ ಮುಂದೆ ಹೋಗಿ, ನಿಜವಾದ ಅಪರಾಧಿಗಳು ತನಿಖೆಯನ್ನೇ ದಾರಿ ತಪ್ಪಿಸಿರುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಪ್ಯಾರಾ 59ರಲ್ಲಿ ಸುಪ್ರೀಂಕೋರ್ಟ್ ಹೇಳಿದೆ. ಇದು ಆರೋಪಿತರ ವಿರುದ್ಧ ಅಪರಾಧ ಸಾಬೀತಾಗಿದೆ ಎಂಬ ನ್ಯಾಯಾಂಗ ನಿರ್ಣಯವಲ್ಲ. ಬದಲಾಗಿ, ಹಿಂದಿನ ತನಿಖೆಯ ದೋಷಗಳಿಂದ ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚುವ ಅವಕಾಶವೇ ಹಾಳಾಗಿರಬಹುದೆಂಬ ಸಾಧ್ಯತೆಯನ್ನು ಸುಪ್ರೀಂಕೋರ್ಟ್ ದಾಖಲಿಸಿದೆ.
“ಸುಳ್ಳಾಗಿ ಆರೋಪಿಸಲ್ಪಟ್ಟ ವ್ಯಕ್ತಿಗೆ ಪರಿಹಾರ ಕೊಡಬಹುದು. ಕೊಲೆಯಾದ ಸಂತ್ರಸ್ತೆಗೆ ಕೊಡಲು ಸಾಧ್ಯವಿಲ್ಲ” ಎಂಬ ಪ್ಯಾರಾ 60ರಲ್ಲಿನ ಸುಪ್ರೀಂಕೋರ್ಟ್ನ ಮಾತು ಕೂಡ ಈ ತೀರ್ಪಿನ ಪ್ರಮುಖ ಭಾಗವಾಗಿದೆ.
ಸಂತೋಷ್ ರಾವ್ ಅವರ ಮೇಲೆ ತಪ್ಪಾಗಿ ಆರೋಪ ಹೊರಿಸಿದ್ದರೆ ಅದರಿಂದ ಉಂಟಾದ ಅನ್ಯಾಯಕ್ಕೆ ಪರಿಹಾರ ನೀಡುವ ಸಾಧ್ಯತೆ ಇದೆ. ಆದರೆ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಸೌಜನ್ಯಳಿಗೆ ನಡೆದ ಅನ್ಯಾಯವನ್ನು ನಂತರ ಪರಿಹರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸಮಾಜದ ಕರ್ತವ್ಯವೇ ಇಂತಹ ಗಂಭೀರ ಅಪರಾಧದ ಸಂತ್ರಸ್ತೆಗೆ ನ್ಯಾಯ ಒದಗಿಸುವುದು ಮತ್ತು ಸರಿಯಾದ ತನಿಖೆ ನಡೆಸಿ ನಿಜವಾದ ಅಪರಾಧಿಗಳನ್ನು ಕಾನೂನಿನ ಮುಂದೆ ತರುವುದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಆದರೆ ಸುಪ್ರೀಂಕೋರ್ಟ್ ಯಾರನ್ನೂ ಅಪರಾಧಿ ಎಂದು ಹೇಳಿಲ್ಲ. ತೀರ್ಪಿನ ಪ್ಯಾರಾ 61(vi) ಅತ್ಯಂತ ಮುಖ್ಯವಾದ ಕಾನೂನು ಎಚ್ಚರಿಕೆಯನ್ನು ಒಳಗೊಂಡಿದೆ. ಹೊಸ SIT ತನ್ನ ತನಿಖೆಯನ್ನು ಈ ತೀರ್ಪಿನಲ್ಲಿ ಹೇಳಿರುವ ಮೆರಿಟ್ ಆಧಾರಿತ ವಿಚಾರಗಳಿಂದ ಪ್ರಭಾವಿತರಾಗದೆ ನಡೆಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ತೀರ್ಪಿನ ಪ್ಯಾರಾ 61(v)ರಲ್ಲಿ ಸುಪ್ರೀಂಕೋರ್ಟ್ ಸಂತೋಷ್ ರಾವ್ಗೆ ಸ್ಪಷ್ಟ ಕಾನೂನು ರಕ್ಷಣೆ ನೀಡಿದೆ. ಅವರು ಈಗಾಗಲೇ ವಿಚಾರಣೆಗೆ ಒಳಗಾಗಿ ಖುಲಾಸೆಗೊಂಡಿರುವುದರಿಂದ Article 20(2) ಮತ್ತು Section 300 CrPC ಅಡಿಯಲ್ಲಿ ಅವರನ್ನು ಅದೇ ಅಪರಾಧಕ್ಕಾಗಿ ಮತ್ತೆ ವಿಚಾರಣೆ ಅಥವಾ ಪ್ರಾಸಿಕ್ಯೂಷನ್ಗೆ ಒಳಪಡಿಸಲು ಸಾಧ್ಯವಿಲ್ಲ. ಹೊಸ ತನಿಖೆಯಲ್ಲಿಯೂ ಅವರನ್ನು ಮತ್ತೆ ತನಿಖೆಗೆ ಒಳಪಡಿಸಬಾರದು ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಆದೇಶಿಸಿದೆ.
ಹಳೆಯ ಮೂರು ತನಿಖಾ ಸಂಸ್ಥೆಗಳ ಯಾರಿಗೂ ಹೊಸ SITಯಲ್ಲಿ ಸ್ಥಾನವಿಲ್ಲ. ಪ್ಯಾರಾ 61(iii) ಮತ್ತು (iv)ರಲ್ಲಿ ಸುಪ್ರೀಂಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಹೊಸ Special Investigation Team ರಚಿಸುವಂತೆ ಆದೇಶಿಸಿದೆ. SITಯನ್ನು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮುನ್ನಡೆಸಬೇಕು. ಆ ತಂಡದಲ್ಲಿ ಆಧುನಿಕ ತನಿಖಾ ತಂತ್ರಜ್ಞಾನ ಬಳಸುವ ಸಾಮರ್ಥ್ಯ ಹೊಂದಿರುವ ಸಮರ್ಥ ತನಿಖಾಧಿಕಾರಿಗಳು ಇರಬೇಕು.
ಇನ್ನೂ ಮಹತ್ವದ ಷರತ್ತು ಎಂದರೆ ಬೆಳ್ತಂಗಡಿ ಠಾಣೆಯ ಪೊಲೀಸರು, CID ಅಥವಾ CBI ನಡೆಸಿದ ಹಿಂದಿನ ತನಿಖೆಗಳಲ್ಲಿ ಭಾಗಿಯಾಗಿದ್ದ ಯಾವುದೇ ಅಧಿಕಾರಿಯನ್ನು ಹೊಸ SITಯಲ್ಲಿ ಸೇರಿಸಬಾರದು. ಇದು ಕೇವಲ “fresh investigation” ಎಂಬ ಪದದ ಬಳಕೆಯಲ್ಲ. ಹಿಂದಿನ ತನಿಖೆಯಿಂದ ಸಂಪೂರ್ಣವಾಗಿ ಪ್ರತ್ಯೇಕವಾದ ತನಿಖಾ ತಂಡವನ್ನೇ ರಚಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.
ಪ್ಯಾರಾ 61(vii)ರಲ್ಲಿ ಹೊಸ ತನಿಖೆ ಮೂರು ತಿಂಗಳೊಳಗೆ ಪೂರ್ಣಗೊಳ್ಳಬೇಕು ಮತ್ತು ಸಂಬಂಧಪಟ್ಟ ನ್ಯಾಯಾಲಯದ ಮುಂದೆ ವರದಿ ಸಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ನಿಖರ ಗಡುವು ವಿಧಿಸಿದೆ. ಹೀಗಾಗಿ ಪ್ರಕರಣವನ್ನು ಮತ್ತೆ ವರ್ಷಗಳ ಕಾಲ ತನಿಖೆಯ ಹೆಸರಿನಲ್ಲಿ ಎಳೆಯಲು ಅವಕಾಶ ನೀಡಿಲ್ಲ.
14 ವರ್ಷಗಳ ಹಿಂದೆ ನಡೆದ ಅಪರಾಧಕ್ಕೆ ಸಂಬಂಧಿಸಿದಂತೆ ಈಗಲೂ ದೊರೆಯಬಹುದಾದ ಸಾಕ್ಷ್ಯ, ಪತ್ತೆಯಾಗಿರುವ ಸಂಭಾವ್ಯ ಸಾಕ್ಷಿಗಳು ಮತ್ತು DNA ಪರೀಕ್ಷೆಗೆ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ಹೊಸ ತನಿಖೆ ನಡೆಸಬೇಕಾಗಿದೆ.
ಸೌಜನ್ಯ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಈ ತೀರ್ಪಿನ ನಿಜವಾದ ಮಹತ್ವ “ಮರುತನಿಖೆಗೆ ಆದೇಶ” ಎಂಬುದಕ್ಕಷ್ಟೇ ಸೀಮಿತವಾಗುವುದಿಲ್ಲ. ಮೂರು ತನಿಖಾ ಸಂಸ್ಥೆಗಳು ತನಿಖೆ ನಡೆಸಿದ ನಂತರವೂ ಎಂಟು ಸಂಭಾವ್ಯ ಸಾಕ್ಷಿಗಳನ್ನು 2026ರಲ್ಲಿ ಕೇವಲ ಮೂರು ವಾರಗಳಲ್ಲಿ ಪತ್ತೆಹಚ್ಚಲು ಸಾಧ್ಯವಾಗಿದೆ ಎಂಬ ಅಂಶ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಸೌಜನ್ಯಳ ಬಟ್ಟೆಯಲ್ಲಿ ಪತ್ತೆಯಾದ ಅಪರಿಚಿತ ಪುರುಷನ ಕೂದಲಿನ DNA ಈಗಲೂ ಶಂಕಿತರ DNAಗೆ ಹೋಲಿಕೆ ಮಾಡಬಹುದಾಗಿದೆ. ಪ್ರಮುಖ ವೈದ್ಯಕೀಯ ಸಾಕ್ಷ್ಯ ಸರಿಯಾಗಿ ಸಂರಕ್ಷಿಸಲ್ಪಡದೆ ಹಾಳಾಗಿದೆ. CCTV, tower dump, ಸಾಕ್ಷಿಗಳು ಮತ್ತು ಸಂತ್ರಸ್ತೆಯ ವಸ್ತುಗಳ ಕುರಿತು ತನಿಖಾ ಲೋಪಗಳಿವೆ. ಮತ್ತು ಈ ಎಲ್ಲದರ ಹಿನ್ನೆಲೆಯಲ್ಲಿ ಹಿಂದಿನ ತನಿಖೆಯೇ ನ್ಯಾಯಾಲಯದ ದೃಷ್ಟಿಯಲ್ಲಿ ಗಂಭೀರವಾಗಿ ಪ್ರಶ್ನಾರ್ಹವಾಗಿದೆ.
ಈ ಹಿನ್ನೆಲೆಯಲ್ಲಿ, ಸೌಜನ್ಯ ಪ್ರಕರಣದ ಮುಂದಿನ ತನಿಖೆಯ ಅತ್ಯಂತ ಮಹತ್ವದ ಪ್ರಶ್ನೆ “ಯಾರನ್ನು ಬಂಧಿಸುತ್ತಾರೆ?” ಎಂಬುದಕ್ಕಿಂತ ಮೊದಲು “2012ರಿಂದ ತನಿಖೆಯಾಗದೆ ಉಳಿದ ಯಾವ ಸಾಕ್ಷ್ಯಗಳನ್ನು ಈಗ ವೈಜ್ಞಾನಿಕವಾಗಿ ಪರೀಕ್ಷಿಸಬಹುದು?” ಎಂಬುದಾಗಿದೆ. ಸುಪ್ರೀಂಕೋರ್ಟ್ನ 59 ಮತ್ತು 61ನೇ ಪ್ಯಾರಾದ ಆದೇಶ ಈಗ ಆ ಪ್ರಶ್ನೆಗೆ ಉತ್ತರ ಹುಡುಕುವ ಜವಾಬ್ದಾರಿಯನ್ನು ಹೊಸ SITಗೆ ವಹಿಸಿದೆ.

Leave a Reply