ನವೀನ್ ಸೂರಿಂಜೆ
ಧರ್ಮಸ್ಥಳದ 17 ವರ್ಷದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕೇವಲ ಮರುತನಿಖೆಗೆ ಆದೇಶ ನೀಡಿದ ತೀರ್ಪಲ್ಲ. 2012ರಿಂದ ಬೆಳ್ತಂಗಡಿ ಪೊಲೀಸರು, ಕರ್ನಾಟಕ CID ಮತ್ತು CBI ನಡೆಸಿದ ತನಿಖೆಗಳಲ್ಲಿದ್ದ ಗಂಭೀರ ಲೋಪಗಳನ್ನು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ದಾಖಲೆಗಳ ಆಧಾರದ ಮೇಲೆ ಎತ್ತಿಹಿಡಿದಿದೆ. ಇದಕ್ಕಿಂತಲೂ ಮುಖ್ಯವಾಗಿ, ತನಿಖೆ ಮುಗಿದು 14 ವರ್ಷಗಳಾದರೂ ಕೆಲವು ಸಾಕ್ಷ್ಯಗಳು ಇನ್ನೂ ಜೀವಂತವಾಗಿವೆ ಎಂಬುದನ್ನು ನ್ಯಾಯಾಲಯವೇ ಪತ್ತೆಹಚ್ಚಿದೆ. ಸೌಜನ್ಯ ಚೂಡಿದಾರ್ ನಲ್ಲಿ ಸಂತೋಷ್ ರಾವ್ಅವರದ್ದು ಅಲ್ಲದ ಅಪರಿಚಿತ ವ್ಯಕ್ತಿಯ ಕೂದಲು ದೊರೆತಿದೆ. ಆ ಕೂದಲಿಗೆ ಸಂಬಂಧಿಸಿದ ವ್ಯಕ್ತಿಯನ್ನು ಈಗ ಎಸ್ಐಟಿ ಬಂಧಿಸಿ ಡಿಎನ್ಎ ಪರೀಕ್ಷೆ ಮಾಡಬೇಕಿದೆ ! ಇದೇ ಈ ತೀರ್ಪಿನ ಅತ್ಯಂತ ಗಮನಾರ್ಹ ಅಂಶವಾಗಿದೆ.
ಸೌಜನ್ಯ ಪ್ರಕರಣದಲ್ಲಿ ಸಂತೋಷ್ ರಾವ್ ವಿರುದ್ಧದ ಆರೋಪಗಳು ಸಾಬೀತಾಗದೇ ಅವರು ಖುಲಾಸೆಗೊಂಡ ನಂತರವೂ, “ಹಾಗಾದರೆ ನಿಜವಾದ ಅಪರಾಧಿಗಳು ಯಾರು?” ಎಂಬ ಪ್ರಶ್ನೆ ಉಳಿದಿತ್ತು. ಕರ್ನಾಟಕ ಹೈಕೋರ್ಟ್ ಕೂಡ ಖುಲಾಸೆಯ ತೀರ್ಪಿಗೆ ಈ ಪ್ರಶ್ನೆಯೊಂದಿಗೆ ತಾರ್ಕಿಕ ಸಂಬಂಧವಿದೆ ಮತ್ತು ಪ್ರಕರಣವು ಮರುತನಿಖೆಯನ್ನು ಬೇಡುತ್ತದೆ ಎಂದು ಹೇಳಿದ್ದರೂ, ಬಹಳ ತಡವಾಗಿರುವುದರಿಂದ ಹೊಸ ಸಾಕ್ಷ್ಯ ಸಿಗುವುದು ಅನುಮಾನ ಎಂದು ಹೇಳಿ ಮರುತನಿಖೆಗೆ ನಿರಾಕರಿಸಿತ್ತು. ಸುಪ್ರೀಂಕೋರ್ಟ್ ಇದೇ ಕಾರಣವನ್ನು ತಿರಸ್ಕರಿಸಿದೆ.
ಮೂರು ವಾರದಲ್ಲಿ ಸಿಕ್ಕ ಎಂಟು ಸಾಕ್ಷಿಗಳು ! 14 ವರ್ಷಗಳಿಂದ ತನಿಖಾ ಸಂಸ್ಥೆಗಳಿಗೆ ಸಿಗದವರು!
ಸುಪ್ರೀಂಕೋರ್ಟ್ ತೀರ್ಪಿನ ಪ್ಯಾರಾ 47ರಲ್ಲಿ ದಾಖಲಿಸಿರುವ ಸಂಗತಿ ಈ ಪ್ರಕರಣದ ಅತ್ಯಂತ ಗಂಭೀರ ಪ್ರಶ್ನೆಯನ್ನು ಎತ್ತುತ್ತದೆ. 2026 ಏಪ್ರಿಲ್ 29ರಂದು ಸುಪ್ರೀಂಕೋರ್ಟ್ ಸೌಜನ್ಯ ಕುಟುಂಬದ ಹೆಚ್ಚುವರಿ ಅಫಿಡವಿಟ್‌ನಲ್ಲಿ 12ರಿಂದ 19ರವರೆಗೆ ನಮೂದಿಸಿದ್ದ ಎಂಟು ಸಂಭಾವ್ಯ ಸಾಕ್ಷಿಗಳಿಗೆ ಕರ್ನಾಟಕ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು ಎಂದು ಆದೇಶಿಸಿತ್ತು. ರಾಜ್ಯ ಸರ್ಕಾರ ಆ ಆದೇಶವನ್ನು ಪಾಲಿಸಿ ಕೇವಲ ಮೂರು ವಾರಗಳೊಳಗೆ ಆ ಎಂಟು ಜನ ಸಂಭಾವ್ಯ ಸಾಕ್ಷಿಗಳನ್ನು ಪತ್ತೆಹಚ್ಚಿತು.
ಇದನ್ನೇ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಪ್ರಶ್ನೆಯಾಗಿ ಮುಂದಿಟ್ಟಿದೆ. ರಾಜ್ಯ ಸರ್ಕಾರಕ್ಕೆ ಎಂಟು ಸಂಭಾವ್ಯ ಸಾಕ್ಷಿಗಳನ್ನು ಮೂರು ವಾರಗಳಲ್ಲಿ ಪತ್ತೆಹಚ್ಚಲು ಸಾಧ್ಯವಾದರೆ, ಇದೇ ಸಾಕ್ಷಿಗಳನ್ನು ಮೂರು ತನಿಖಾ ಸಂಸ್ಥೆಗಳು ತನಿಖೆಯ ಆರಂಭಿಕ ಹಂತದಲ್ಲೇ ಏಕೆ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎಂಬುದು ನ್ಯಾಯಾಲಯದ ಪ್ರಶ್ನೆ. ಅಂದರೆ, “ಸಾಕ್ಷಿಗಳು ಈಗ ಇಲ್ಲ” ಎಂಬ ಕಾರಣವನ್ನು ತನಿಖಾ ಸಂಸ್ಥೆಗಳ ಪರವಾಗಿ ಒಪ್ಪಿಕೊಳ್ಳಲು ಸುಪ್ರೀಂಕೋರ್ಟ್ ಸಿದ್ಧವಾಗಿಲ್ಲ. 2012ರಲ್ಲಿ ತನಿಖೆ ನಡೆದ ಸಂದರ್ಭದಲ್ಲಿ ತನಿಖಾಧಿಕಾರಿಗಳು ಈ ಸುಳಿವುಗಳನ್ನು ಸಮರ್ಪಕವಾಗಿ ಅನುಸರಿಸಿದ್ದರೇ ಎಂಬುದೇ ನ್ಯಾಯಾಲಯದ ಪ್ರಮುಖ ಅನುಮಾನವಾಗಿದೆ. ಇದು ಪ್ಯಾರಾ 47ರಲ್ಲಿರುವ ಅತ್ಯಂತ ಮಹತ್ವದ ಗಮನಾರ್ಹ ಅಂಶವಾಗಿದೆ.
ಸೌಜನ್ಯಳ ಬಟ್ಟೆಯಲ್ಲಿದ್ದ ಅಪರಿಚಿತ ವ್ಯಕ್ತಿಯ ಕೂದಲು ! ಆತನ DNA ಪರೀಕ್ಷೆ ಇನ್ನೂ ಸಾಧ್ಯ!
ಮರುತನಿಖೆಗೆ ಸುಪ್ರೀಂಕೋರ್ಟ್ ನೀಡಿದ ಮತ್ತೊಂದು ಪ್ರಮುಖ ಕಾರಣ ಪ್ಯಾರಾ 48 ಮತ್ತು 49ರಲ್ಲಿ ದಾಖಲಾಗಿದೆ. ಸೌಜನ್ಯಳ ಚೂಡಿದಾರ್‌ನಿಂದ ಸಂಗ್ರಹಿಸಲಾದ Material Object No.15ರಲ್ಲಿ ಸಂತೋಷ್ ರಾವ್ ಅವರ ಕೂದಲುಗಳ ಜೊತೆಗೆ ಇನ್ನೊಬ್ಬ ಪುರುಷನ ಕೂದಲು ಕೂಡ ಪತ್ತೆಯಾಗಿತ್ತು ಎಂದು DNA ಪರೀಕ್ಷೆ ನಡೆಸಿದ FSL ಅಧಿಕಾರಿಯಾದ PW-18 ವಿನೋದ್ ಜೆ. ಲಕ್ಕಪ್ಪನ್ ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡಿದ್ದರು.
ಇದಕ್ಕಿಂತಲೂ ಮುಖ್ಯವಾಗಿ, ಆ ವಿಜ್ಞಾನಿಯೇ ನ್ಯಾಯಾಲಯಕ್ಕೆ ಹೇಳಿದ್ದು, ಪ್ರಕರಣದಲ್ಲಿ ಶಂಕಿತ ವ್ಯಕ್ತಿಗಳನ್ನು ಪತ್ತೆಹಚ್ಚಿದರೆ ಅವರ ರಕ್ತದ ಮಾದರಿಯನ್ನು ಈಗಲೂ ಸಂಗ್ರಹಿಸಿ, ಚೂಡಿದಾರ್‌ನಲ್ಲಿರುವ ಅಪರಿಚಿತ ಕೂದಲಿನ DNAಗೆ ಹೋಲಿಕೆ ಮಾಡಬಹುದು ಎಂಬುದು.
ಹೀಗಾಗಿ 2024ರಲ್ಲಿ ಕರ್ನಾಟಕ ಹೈಕೋರ್ಟ್ “Golden Hour” ನಲ್ಲಿ ಸಂಗ್ರಹಿಸದ ಸಾಕ್ಷ್ಯ ಈಗಲೂ ದೊರೆಯುತ್ತದೆಯೇ ಎಂಬುದು ಅನುಮಾನ” ಎಂದು ಹೇಳಿದ್ದನ್ನು ಸುಪ್ರೀಂಕೋರ್ಟ್ ನೇರವಾಗಿ ತಪ್ಪು ಎಂದು ಹೇಳಿದೆ. ಪ್ಯಾರಾ 48ರಲ್ಲಿ ಹೈಕೋರ್ಟ್‌ನ ಆ ನಿರ್ಣಯವನ್ನು “clearly erroneous and cannot be sustained” ಎಂದು ಸುಪ್ರೀಂಕೋರ್ಟ್ ಹೇಳಿದೆ.
ಅಂದರೆ, 14 ವರ್ಷಗಳಾದರೂ ಪ್ರಕರಣದಲ್ಲಿ ವೈಜ್ಞಾನಿಕ ತನಿಖೆಗೆ ದಾರಿ ಸಂಪೂರ್ಣ ಮುಚ್ಚಿಲ್ಲ ಎಂಬುದನ್ನು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ತನಿಖೆ ಸರಿಯಾಗಿ ನಡೆದಿದ್ದರೆ ಸತ್ಯ ಹೊರಬರುತ್ತಿತ್ತು ಎಂಬುದಕ್ಕೆ ಮತ್ತೊಂದು ದಾಖಲೆ
ಸೌಜನ್ಯ ಪ್ರಕರಣದಲ್ಲಿ ಹಿಂದಿನ ತನಿಖೆಗಳು ಕೇವಲ ಕೆಲವು ಸಣ್ಣ ಲೋಪಗಳಿಂದ ಕೂಡಿದ್ದವು ಎಂಬುದಲ್ಲ. ತನಿಖೆಯ ದಿಕ್ಕಿನಲ್ಲೇ ಗಂಭೀರ ಸಮಸ್ಯೆಗಳಿದ್ದವು ಎಂಬುದನ್ನು ಸುಪ್ರೀಂಕೋರ್ಟ್ ತೀರ್ಪು ದಾಖಲಿಸುತ್ತದೆ.
ಪ್ಯಾರಾ 31ರಲ್ಲಿ Sessions Court ಗಮನಿಸಿದ ಅಂಶಗಳನ್ನು ಸುಪ್ರೀಂಕೋರ್ಟ್ ಉಲ್ಲೇಖಿಸಿದೆ. ತನಿಖಾಧಿಕಾರಿಗಳು ವಿವಿಧ ಮೊಬೈಲ್ ಸಂಖ್ಯೆಗಳ tower dump ಮಾಹಿತಿ ಸಂಗ್ರಹಿಸಿದ್ದರು. ಆದರೆ ಆ ಮಾಹಿತಿಯನ್ನು ಮುಂದಿನ ತನಿಖಾಧಿಕಾರಿಗೆ ಹಸ್ತಾಂತರಿಸಿರಲಿಲ್ಲ. ಮುಖ್ಯ ರಸ್ತೆಯಲ್ಲಿದ್ದ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯದ ಮುಂಭಾಗದ CCTV ಕ್ಯಾಮೆರಾದ ದೃಶ್ಯಾವಳಿಗಳನ್ನೂ ಸಂಗ್ರಹಿಸಿರಲಿಲ್ಲ.
ಪ್ಯಾರಾ 32 ಇನ್ನಷ್ಟು ಗಂಭೀರವಾಗಿದೆ. ಸೌಜನ್ಯಳ ಒಳಉಡುಪು, ಛತ್ರಿ ಮತ್ತು ಚಪ್ಪಲಿಗಳು ಪತ್ತೆಯಾಗಿರಲಿಲ್ಲ. ಮೃತದೇಹ ಪತ್ತೆಯಾದ ಸ್ಥಳದಲ್ಲಿ ಶಾಲಾ ಬ್ಯಾಗ್ ಮತ್ತು ಪುಸ್ತಕಗಳು ಇದ್ದರೂ, ಘಟನೆ ನಡೆದ ದಿನ ಭಾರಿ ಮಳೆಯಾಗಿದ್ದರೂ ಅವು ಒದ್ದೆಯಾಗಿರಲಿಲ್ಲ. ಇದರಿಂದ ಅಪರಾಧ ನಡೆದ ಸ್ಥಳವೇ ಬೇರೆ ಆಗಿರಬಹುದು ಮತ್ತು ಮೃತದೇಹವನ್ನು ನಂತರ ಆ ಸ್ಥಳಕ್ಕೆ ತಂದು ಹಾಕಿರಬಹುದು ಎಂಬ ಸಾಧ್ಯತೆಯನ್ನು Sessions Court ಗಮನಿಸಿತ್ತು.
ಅಷ್ಟೇ ಅಲ್ಲ, ಸ್ಥಳದಲ್ಲಿ ಸಿಕ್ಕ ಚೀಟಿಯನ್ನು ತನಿಖಾಧಿಕಾರಿ ವಶಪಡಿಸಿಕೊಂಡಿರಲಿಲ್ಲ. ಅದನ್ನು ಕೈ ಬರಹ ತಜ್ಞರ ಮೂಲಕ ಪರೀಕ್ಷಿಸುವ ಪ್ರಯತ್ನವೂ ನಡೆದಿರಲಿಲ್ಲ. ಮರಣೋತ್ತರ ಪರೀಕ್ಷೆಯನ್ನು ವಿಡಿಯೋ ರೆಕಾರ್ಡ್ ಮಾಡಿರಲಿಲ್ಲ. ಸೌಜನ್ಯಳ ಕೈಗಡಿಯಾರದ ಸ್ಥಿತಿಯನ್ನೂ ದಾಖಲಿಸಿರಲಿಲ್ಲ. ಮೃತದೇಹ ಸಿಕ್ಕ ಸ್ಥಳದ ವಿಡಿಯೋ ಡಾಕ್ಯುಮೆಂಟೇಶನ್ ಕೂಡ ಮಾಡಿರಲಿಲ್ಲ.
ಇವುಗಳಲ್ಲಿ ಹಲವು ಅಂಶಗಳು 2023ರ Sessions Court ತೀರ್ಪಿನಲ್ಲೇ ಇದ್ದರೂ, ಇದೀಗ ಸುಪ್ರೀಂಕೋರ್ಟ್ ಅವುಗಳನ್ನು ಮರುತನಿಖೆಯ ಅಗತ್ಯತೆಯನ್ನು ನಿರ್ಧರಿಸುವ ಪ್ರಮುಖ ಹಿನ್ನೆಲೆಯಾಗಿ ದಾಖಲಿಸಿದೆ.
ತನಿಖೆಯ ಮೂಲ ಸಿದ್ಧಾಂತವನ್ನೇ Sessions Court ತಿರಸ್ಕರಿಸಿತ್ತು
ಪ್ಯಾರಾ 37ರಲ್ಲಿ ಉಲ್ಲೇಖಿಸಿರುವ Sessions Court ತೀರ್ಪು ಸಂತೋಷ್ ರಾವ್ ವಿರುದ್ಧದ ಪ್ರಕರಣದ ಮೂಲ ದುರ್ಬಲತೆಯನ್ನು ಬಹಿರಂಗಪಡಿಸುತ್ತದೆ.
ಸಂತೋಷ್ ರಾವ್ ಅವರನ್ನು ಘಟನೆ ನಡೆದ ಸ್ಥಳದಲ್ಲಿ ಯಾರೂ ನೋಡಿರಲಿಲ್ಲ. ಸೌಜನ್ಯಳನ್ನು ಅವರೊಂದಿಗೆ ಕೊನೆಯ ಬಾರಿ ಯಾರೂ ನೋಡಿರಲಿಲ್ಲ. Last seen theory ಇರಲಿಲ್ಲ. ಅವರ ಬಟ್ಟೆಗಳಲ್ಲಿ ರಕ್ತ ಅಥವಾ ವೀರ್ಯದ ಕಲೆಗಳಿರಲಿಲ್ಲ. ಸೌಜನ್ಯಳ ಉಗುರುಗಳಲ್ಲಿಯೂ ಸಂತೋಷ್ ರಾವ್ ಅವರ ಚರ್ಮದ ತುಣುಕು ಅಥವಾ ರಕ್ತ ಪತ್ತೆಯಾಗಿರಲಿಲ್ಲ.
ಅವರ ಮೇಲೆ ಪತ್ತೆಯಾದ ಗಾಯಗಳನ್ನು ಅತ್ಯಾಚಾರ ಅಥವಾ ಕೊಲೆಯ ಸಂದರ್ಭದಲ್ಲಿ ಸೌಜನ್ಯಳು ಮಾಡಿದ್ದಾಳೆ ಎಂಬ ಪ್ರಾಸಿಕ್ಯೂಷನ್ ವಾದಕ್ಕೂ Sessions Court ಒಪ್ಪಲಿಲ್ಲ. ಅವರನ್ನು ಸಾರ್ವಜನಿಕರು ಹಿಡಿದು ಹೊಡೆದಾಗಲೇ ಆ ಗಾಯಗಳು ಸಂಭವಿಸಿದ್ದವು ಎಂಬುದಕ್ಕೆ ಸಾಕ್ಷ್ಯವಿದೆ ಎಂದು ನ್ಯಾಯಾಲಯ ದಾಖಲಿಸಿತ್ತು.
ಅತ್ಯಂತ ಮುಖ್ಯವಾಗಿ, ಸಂತೋಷ್ ರಾವ್ ಅವರ ಮೇಲೆ ನಡೆದ forensic psychological assessmentನಲ್ಲಿ ಅವರು ಹೇಳಿಕೆಗಳಲ್ಲಿ deceptive ಆಗಿದ್ದರು ಎಂಬ ಅಭಿಪ್ರಾಯ ಬಂದಿದ್ದರೂ, ಅದನ್ನು ಮಾತ್ರ ಆಧರಿಸಿ ಅವರು ಅಪರಾಧ ಮಾಡಿದ್ದಾರೆ ಎಂದು ನಿರ್ಧರಿಸಲಾಗುವುದಿಲ್ಲ ಎಂದು Sessions Court ಹೇಳಿತ್ತು.
ಅತ್ಯಾಚಾರದ ಪ್ರಮುಖ ಸಾಕ್ಷ್ಯವೇ ಸರಿಯಾಗಿ ಸಂರಕ್ಷಿಸಲ್ಪಡಲಿಲ್ಲ
ಪ್ಯಾರಾ 125 ಮತ್ತು 126ರಲ್ಲಿ ಸೌಜನ್ಯ ಪ್ರಕರಣದ ಅತ್ಯಂತ ಗಂಭೀರ ವೈಜ್ಞಾನಿಕ ಲೋಪ ದಾಖಲಾಗಿದೆ.
ಸೌಜನ್ಯಳ vaginal swab ಸರಿಯಾಗಿ ಸಂರಕ್ಷಿಸದ ಕಾರಣ DNA ಪರೀಕ್ಷೆಗೆ ಫಲಿತಾಂಶ ಬಂದಿರಲಿಲ್ಲ. FSL ವಿಜ್ಞಾನಿಯ ಪ್ರಕಾರ ಆ ಮಾದರಿಯಲ್ಲಿ fungus ಕಂಡುಬಂದಿತ್ತು. ವೈದ್ಯರು vaginal swab ಅನ್ನು ಸರಿಯಾಗಿ ಒಣಗಿಸಿ pack ಮಾಡಬೇಕಾಗಿತ್ತು ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದರು.
‘ಸಂತ್ರಸ್ತೆ ಜೀವಂತವಾಗಿರಲಿಲ್ಲ. ಅತ್ಯಾಚಾರದ ಬಗ್ಗೆ ಆಕೆ ಸ್ವತಃ ಸಾಕ್ಷ್ಯ ನೀಡಲು ಸಾಧ್ಯವಿರಲಿಲ್ಲ. ಇಂತಹ ಸಂದರ್ಭದಲ್ಲಿ vaginal swabನಂತಹ expert evidence ಅಪರಾಧಿಯನ್ನು ಗುರುತಿಸಲು ಅತ್ಯಂತ ಪ್ರಮುಖ ಸಾಕ್ಷ್ಯವಾಗಬಹುದಾಗಿತ್ತು. ಆದರೆ ಅದು ಸರಿಯಾಗಿ ಸಂರಕ್ಷಿಸಲ್ಪಡದೇ ಹೋಗಿದ್ದರಿಂದ ಆ ಸಾಕ್ಷ್ಯದಿಂದ ಯಾವುದೇ DNA ಫಲಿತಾಂಶ ಸಿಗಲಿಲ್ಲ’ ಎಂದು ಸುಪ್ರಿಂ ಕೋರ್ಟ್ ತೀರ್ಪಿನನಲ್ಲಿ ಹೇಳಿದೆ.
ಇದು ಕೇವಲ ತನಿಖೆಯ ಸಣ್ಣ ತಾಂತ್ರಿಕ ದೋಷವಲ್ಲ. ಪ್ರಕರಣದ ಪ್ರಮುಖ ವೈಜ್ಞಾನಿಕ ಸಾಕ್ಷ್ಯವೇ ತನಿಖೆಯ ಆರಂಭದಲ್ಲೇ ಕಳೆದುಹೋದ ಸಂಗತಿ ಎಂದು ತೀರ್ಪಿನ ಪ್ಯಾರಾ 126ರಿಂದ ಸ್ಪಷ್ಟವಾಗುತ್ತದೆ. 2017ರಲ್ಲೇ ಸೆಷನ್ ಕೋರ್ಟ್ ತೀರ್ಪಿನಲ್ಲಿ “CBI ಸರಿಯಾಗಿ ತನಿಖೆ ನಡೆಸಿಲ್ಲ” ಎಂದು ಹೇಳಿತ್ತು. ಹಾಗಾಗಿ ಈ ಪ್ರಕರಣದಲ್ಲಿ ಹೊಸ ತನಿಖೆಯ ಅಗತ್ಯತೆಯ ಬಗ್ಗೆ 2026ರಲ್ಲಿ ಮಾತ್ರ ನ್ಯಾಯಾಲಯ ಪ್ರಶ್ನೆ ಎತ್ತಿಲ್ಲ ಎಂಬುದನ್ನೂ ಸುಪ್ರೀಂಕೋರ್ಟ್ ದಾಖಲಿಸಿದೆ.
ಪ್ಯಾರಾ 40ರಲ್ಲಿ 07.02.2017ರ Sessions Court ಆದೇಶವನ್ನು ಬಹುತೇಕ ವಿವರವಾಗಿ ದಾಖಲಿಸಲಾಗಿದೆ. ಆ ಆದೇಶದಲ್ಲಿ Sessions Judge ಹೇಳಿದಂತೆ CBI ತನಿಖೆಯಲ್ಲಿ ಗಂಭೀರ ಲೋಪಗಳಿವೆ ಎಂದು ಹೇಳಿದ್ದರು.
CBI ಕೆಲವು ಸಾಕ್ಷಿಗಳನ್ನು ಮಾತ್ರ ದಾಖಲಿಸಿಕೊಂಡು, ಬೆಳ್ತಂಗಡಿ ಪೊಲೀಸ್ ಮತ್ತು CID ದಾಖಲಿಸಿದ್ದ ಇತರ ಪ್ರಮುಖ ಸಾಕ್ಷಿಗಳ ಹೇಳಿಕೆಗಳನ್ನು ಸಮರ್ಪಕವಾಗಿ ಪರಿಶೀಲಿಸಿಲ್ಲ ಎಂದು Sessions Court ಗಮನಿಸಿತ್ತು. ಸೌಜನ್ಯಳೊಂದಿಗೆ ಬಸ್ಸಿನಲ್ಲಿ ಪ್ರಯಾಣಿಸಿದ್ದ ಹುಡುಗಿಯನ್ನೂ CBI ವಿಚಾರಿಸಿರಲಿಲ್ಲ. ಘಟನೆಯ ದಿನ ನಾಲ್ವರು ವ್ಯಕ್ತಿಗಳು ಮಾತನಾಡುತ್ತಿರುವುದನ್ನು ಕಂಡಿದ್ದ ಮಹಿಳೆಯನ್ನೂ ವಿಚಾರಿಸಿರಲಿಲ್ಲ. ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ರವಿ ಪೂಜಾರಿ ಕೊಲೆಯಾಗಿದ್ದರೂ ಅದರ ಪ್ರಾಮುಖ್ಯತೆಯನ್ನು CBI ಪರಿಗಣಿಸಿರಲಿಲ್ಲ.
ಇದಲ್ಲದೆ, ಸಂತೋಷ್ ರಾವ್ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದವರ ಪಾತ್ರವನ್ನೂ ಸಮರ್ಪಕವಾಗಿ ತನಿಖೆ ಮಾಡಲಾಗಿಲ್ಲ ಎಂಬ ಪ್ರಶ್ನೆಯನ್ನು Sessions Court ಎತ್ತಿತ್ತು.
ಅಂದರೆ, 2017ರಲ್ಲೇ ನ್ಯಾಯಾಲಯ ತನಿಖಾ ಸಂಸ್ಥೆಯ ಗಮನಕ್ಕೆ ತಂದಿದ್ದ ಅನೇಕ ಪ್ರಶ್ನೆಗಳಿಗೆ ನಂತರವೂ ಸಮರ್ಪಕ ಉತ್ತರ ಸಿಕ್ಕಿಲ್ಲ ಎಂಬುದು ಈಗ ಸುಪ್ರೀಂಕೋರ್ಟ್ ತೀರ್ಪಿನಿಂದ ಮತ್ತೊಮ್ಮೆ ಬೆಳಕಿಗೆ ಬಂದಿದೆ.
ಸೌಜನ್ಯಳನ್ನು ಒಬ್ಬ ವ್ಯಕ್ತಿ ಮಾತ್ರ ಕೊಲ್ಲಲು ಸಾಧ್ಯವೇ? Sessions Court ಪ್ರಶ್ನೆ ಸುಪ್ರಿಂ ಸಾಥ್
ಪ್ಯಾರಾ 40ರಲ್ಲಿ ಉಲ್ಲೇಖಿಸಿರುವ 2017ರ Sessions Court ಆದೇಶದ ಇನ್ನೊಂದು ಅಂಶವನ್ನು ಸುಪ್ರಿಂ ಕೋರ್ಟ್ ಗಮನಿಸಿದೆ. ಸೌಜನ್ಯಳ ದೇಹದ ಸ್ಥಿತಿ, ವೈದ್ಯಕೀಯ ಸಾಕ್ಷ್ಯ, ಆಕೆಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯುವ ಸಾಧ್ಯತೆ, ಆರೋಪಿಯ ದೈಹಿಕ ಸ್ಥಿತಿ ಮುಂತಾದವುಗಳನ್ನು ಗಮನಿಸಿದ Sessions Court, ಈ ಕೃತ್ಯವನ್ನು ಒಬ್ಬ ವ್ಯಕ್ತಿಯೇ ಮಾಡಿದ್ದಾನೆಯೇ ಎಂಬ ಪ್ರಶ್ನೆಯನ್ನು ಎತ್ತಿತ್ತು.
ಸೌಜನ್ಯಳ ದೇಹದಲ್ಲಿ ಅತ್ಯಾಚಾರ ಮತ್ತು ಕುತ್ತಿಗೆಯನ್ನು ಒತ್ತಿ ಉಸಿರುಗಟ್ಟಿಸುವುದು ನಡೆದಿರುವ ವೈದ್ಯಕೀಯ ಸಾಕ್ಷ್ಯವಿದ್ದರೂ, ಅದನ್ನು ಸಂತೋಷ್ ರಾವ್ ಒಬ್ಬರೇ ಮಾಡಿದ್ದಾರೆ ಎಂಬುದನ್ನು ಸಂಪರ್ಕಿಸುವ ಸಾಕ್ಷ್ಯ ತನಿಖೆಯಲ್ಲಿ ಸಿಕ್ಕಿರಲಿಲ್ಲ ಎಂಬುದೇ Sessions Courtನ ಪ್ರಮುಖ ನಿರ್ಣಯವಾಗಿತ್ತು.
ಈ ರೀತಿ ಹಲವು ಪ್ರಮುಖವಾದ ಅಂಶಗಳು ಸುಪ್ರಿಂ ಕೋರ್ಟ್ ತೀರ್ಪಿನಲ್ಲಿವೆ. ವಿಶೇಷವಾಗಿ 2026 ಏಪ್ರಿಲ್ 29ರಂದು ಸುಪ್ರೀಂಕೋರ್ಟ್ ರಕ್ಷಣೆ ನೀಡಿದ್ದ ಎಂಟು ಸಂಭಾವ್ಯ ಸಾಕ್ಷಿಗಳನ್ನು, ಮೂರು ವಾರಗಳಲ್ಲೇ ಅವರನ್ನು ರಾಜ್ಯ ಸರ್ಕಾರ ಪತ್ತೆಹಚ್ಚಿದ್ದು, 2012ರಿಂದ ಮೂರು ತನಿಖಾ ಸಂಸ್ಥೆಗಳು ಅವರನ್ನು ಏಕೆ ಪತ್ತೆಹಚ್ಚಲಿಲ್ಲ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಸೌಜನ್ಯಗಳ ಚೂಡಿದಾರ್‌ನಲ್ಲಿ ಪತ್ತೆಯಾದ ಅಪರಿಚಿತ ವ್ಯಕ್ತಿಯ ಕೂದಲಿನಿಂದ ಇಂದಿಗೂ DNA ಹೋಲಿಕೆ ಸಾಧ್ಯವಿದೆ ಎಂಬ ವೈಜ್ಞಾನಿಕ ಸಾಕ್ಷ್ಯವನ್ನೂ ಸುಪ್ರಿಂ ಕೋರ್ಟ್ ಹೇಳಿ, ಎಸ್ಐಟಿ ತನಿಖೆಗೆ ಆದೇಶಿಸಿದೆ.

Leave a Reply