ಎರಡು ವರ್ಷದ ಸಿಎಂ ಅವಧಿಯಲ್ಲಿ ಬಿಸಿನೆಸ್ ಮತ್ತು ಸರ್ಕಾರಿ ಕೆಲಸಕ್ಕಾಗಿ ಫಾರಿನ್ ಟೂರ್ ಮಾಡ್ತಾರಾ ಡಿಕೆಶಿ ! ಇದು ನೈತಿಕ ಸಂಘರ್ಷದ ಪ್ರಶ್ನೆಯಲ್ಲವೇ? ನ್ಯಾಯಾಲಯದ ಆದೇಶದಲ್ಲಿ ಏನಿದೆ?

–          ನವೀನ್ ಸೂರಿಂಜೆ

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ, ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಚರ್ಚೆಗಳ ಮಧ್ಯೆ ಡಿ ಕೆ ಶಿವಕುಮಾರ್ ಅವರು ಐಟಿ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ‘ತಮ್ಮ ವೈಯಕ್ತಿಕ ವ್ಯವಹಾರಗಳ ಅಭಿವೃದ್ಧಿ ಹಾಗೂ ರಾಜ್ಯದ ಆಡಳಿತಾತ್ಮಕ ಕಾರ್ಯಗಳ ನಿಮಿತ್ತ ಎರಡು ವರ್ಷಗಳ ಕಾಲ ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ’ 2026 ಮೇ 14 ರಂದು ಅರ್ಜಿ ಸಲ್ಲಿಸಿದ್ದಾರೆ. ಡಿ ಕೆ ಶಿವಕುಮಾರ್ ವಿರುದ್ಧ ಆದಾಯ ತೆರಿಗೆ ಇಲಾಖೆಯು IT Act 278, 277 ಮತ್ತು IPC U/s 193, , 199, 120B ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಬೆಂಗಳೂರಿನ ನ್ಯಾಯಾಲಯದಲ್ಲಿ ತನಿಖೆಯಲ್ಲಿದೆ.

ಪ್ರಕರಣದ ಮೊದಲನೆಯ ಆರೋಪಿಯಾಗಿರುವ ಡಿಕೆ ಶಿವಕುಮಾರ್ ಮತ್ತು ಪ್ರಕರಣದ ಮೂರನೇ ಆರೋಪಿಯಾಗಿರುವ ಸುನೀಲ್ ಕುಮಾರ್ ಶರ್ಮ ವ್ಯವಹಾರದ ಪಾಲುದಾರರಾಗಿದ್ದಾರೆ. ಡಿ ಕೆ ಶಿವಕುಮಾರ್ ಅವರು ಮೇ 14 ರಂದು ವಿದೇಶ ಪ್ರವಾಸ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯಲ್ಲೂ ಅದನ್ನು ಸ್ಪಷ್ಟಪಡಿಸಿದ್ದಾರೆ. ‘ಆರೋಪಿ 1 (ಡಿ ಕೆ ಶಿವಕುಮಾರ್) ಮತ್ತು ಆರೋಪಿ 3 (ಸುನೀಲ್ ಕುಮಾರ್ ಶರ್ಮ) ಇವರುಗಳು ವ್ಯವಹಾರದಲ್ಲಿ ಪಾಲುದಾರರಾಗಿದ್ದು ಎಂ/ಎಸ್ ಶರ್ಮಾ ಟ್ರಾನ್ಸ್‌ಪೋರ್ಟ್ಸ್ ಎಂಬ ಸಂಸ್ಥೆಯ ಮೂಲಕ ಸಾರಿಗೆ ವ್ಯವಹಾರ ನಡೆಸುತ್ತಿದ್ದಾರೆ. ಅದಲ್ಲದೆ, ಡಿ ಕೆ ಶಿವಕುಮಾರ್ ಅವರು ಶಿಕ್ಷಣ ಸಂಸ್ಥೆ ಸೇರಿದಂತೆ ಇತರೆ ವ್ಯವಹಾರಗಳನ್ನೂ ನಡೆಸುತ್ತಿದ್ದಾರೆ. ಡಿ ಕೆ ಶಿವಕುಮಾರ್ ಅವರು ಉದ್ಯಮಿ ಎಂಬುದರಲ್ಲಿ ಯಾವುದೇ ವಿವಾದವಿಲ್ಲ. ಇದೇ ರೀತಿ, ಅವರು ಪ್ರಸ್ತುತ ರಾಜ್ಯದ ಉಪ ಮುಖ್ಯಮಂತ್ರಿ ಆಗಿದ್ದು, ಸಣ್ಣ ನೀರಾವರಿ ಮತ್ತು ಬೆಂಗಳೂರು ಅಭಿವೃದ್ಧಿ ಖಾತೆಗಳ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಹಾಗಾಗಿ ವ್ಯವಹಾರ ಮತ್ತು ಆಡಳಿತಾತ್ಮಕ ಕಾರಣಗಳಿಗೆ ವಿದೇಶ ಪ್ರವಾಸಕ್ಕೆ ಅನುಮತಿ ನೀಡಬೇಕು’ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಒಪ್ಪಂದದಂತೆ ಸಿದ್ದರಾಮಯ್ಯರ ಅವಧಿ ಮುಗಿದು ಡಿ ಕೆ ಶಿವಕುಮಾರ್ ಅವರಿಗೆ ಮುಂದಿನ ಎರಡು ವರ್ಷಗಳ ಅವಧಿಯ ಸಿಎಂ ಹುದ್ದೆಯನ್ನು ಹಸ್ತಾಂತರಿಸಬೇಕು ಎಂಬ ಚರ್ಚೆ ಹೆಚ್ಚಾಗುತ್ತಿದ್ದ ಸಮಯದಲ್ಲೇ, ಎರಡು ವರ್ಷಗಳ ವಿದೇಶ ಪ್ರವಾಸದ ಅನುಮತಿ ಕೇಳಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಮೇ 14 ರಂದು ಡಿ ಕೆ ಶಿವಕುಮಾರ್ ಸಲ್ಲಿಸಿದ ಅರ್ಜಿಗೆ ಅಂದೇ ಆದಾಯ ತೆರಿಗೆ ಇಲಾಖೆ ಆಕ್ಷೇಪಣಾ ಅರ್ಜಿಯನ್ನು ಸಲ್ಲಿಸಿದೆ. (ಹೆಚ್ಚಾಗಿ, ಆಕ್ಷೇಪಣಾ ಅರ್ಜಿ ಸಲ್ಲಿಸಲು ಸಮಯಾವಕಾಶ ಕೇಳುತ್ತಾರೆ) ನ್ಯಾಯಾಯಲವು ಅರ್ಜಿ ವಿಚಾರಣೆಯನ್ನು ಅಂದೇ ಪೂರ್ಣಗೊಳಿಸಿ, ಮರುದಿನ ಅಂದರೆ ಮೇ 15 ರಂದು ಆದೇಶ ಪ್ರಕಟಕ್ಕೆ ದಿನ ನಿಗಧಿಗೊಳಿಸಿದೆ. ಮೇ 15 ರಂದು ನ್ಯಾಯಾಲಯವು ಈ ಕುರಿತಾದ ಆದೇಶವನ್ನೂ ಮಾಡಿದೆ.

ನ್ಯಾಯಾಲಯವು 2016 ಮೇ 15 ರಂದು ಮಾಡಿದ ಆದೇಶದ ಸಾರಾಂಶದ ಬರಹ ರೂಪ ಹೀಗಿದೆ :

ಆದೇಶ

ಆರೋಪಿ ಸಂಖ್ಯೆ–1 ಡಿ  ಕೆ ಶಿವಕುಮಾರ ಅವರು ತಮ್ಮ ವ್ಯವಹಾರ  ಅಭಿವೃದ್ಧಿ ಹಾಗೂ ರಾಜ್ಯದ ಆಡಳಿತಾತ್ಮಕ ಕಾರ್ಯಗಳ ನಿಮಿತ್ತ ವಿದೇಶ ಪ್ರವಾಸಕ್ಕೆ  ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ದೂರುದಾರರ ಪರ (ಆದಾಯ ತೆರಿಗೆ ಇಲಾಖೆ) ವಕೀಲರು ಆ ಅರ್ಜಿಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯನ್ನು ಮತ್ತು ಆಕ್ಷೇಪಣಾ ಅರ್ಜಿಯನ್ನು ಹಾಗೂ ದಾಖಲಾತಿಗಳನ್ನು ಪರಿಶೀಲಿಸಿ, ವಾದಗಳನ್ನು ಆಲಿಸಲಾಯಿತು.

ದಾಖಲೆಗಳಿಂದ ತಿಳಿದು ಬರುವುದೇನೆಂದರೆ, ಆರೋಪಿ ಸಂಖ್ಯೆ1 ಆಗಿರುವ ಡಿ ಕೆ ಶಿವಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡುವಾಗ, ನ್ಯಾಯಾಲಯವು ‘ಡಿಕೆ ಶಿವಕುಮಾರ್ ಅವರು ನ್ಯಾಯಾಲಯದ ಅನುಮತಿ ಇಲ್ಲದೆ ದೇಶ ತೊರೆಯಬಾರದು ಎಂಬ ವಿಶೇಷ ಷರತ್ತು’ ವಿಧಿಸಿತ್ತು. ಆದ್ದರಿಂದ, ಯಾವುದೇ ಉದ್ದೇಶಕ್ಕಾಗಿ ವಿದೇಶ ಪ್ರಯಾಣ ಮಾಡಲು ನ್ಯಾಯಾಲಯದ ಅನುಮತಿ ಅವಶ್ಯಕವಾಗಿದ್ದು, ಈ ಕಾರಣಕ್ಕೆ ಆರೋಪಿ ಸರಿಯಾದ ರೀತಿಯಲ್ಲಿ ಈ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ ಉಲ್ಲೇಖಿಸಿರುವಂತೆ, ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ತಮ್ಮ ವ್ಯವಹಾರ ಸಂಬಂಧಿತ ಅಗತ್ಯಗಳು ಹಾಗೂ ಉಪ ಮುಖ್ಯಮಂತ್ರಿ ಹುದ್ದೆಯಲ್ಲಿ ರಾಜ್ಯದ ಸಣ್ಣ ನೀರಾವರಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಖಾತೆಗಳ ಜವಾಬ್ದಾರಿಗಳ ಹಿನ್ನೆಲೆಯಲ್ಲಿ ವಿದೇಶಗಳಿಗೆ ಪ್ರಯಾಣಿಸಬೇಕಾಗುತ್ತದೆ ಎಂದು ಆರೋಪಿ ತಿಳಿಸಿದ್ದಾರೆ.

ದೂರು ಪ್ರಕಾರ, ಆರೋಪಿ ಸಂಖ್ಯೆ1 ಡಿ ಕೆ ಶಿವಕುಮಾರ್ ಅವರು ಆರೋಪಿ ಸಂಖ್ಯೆ3 ಸುನೀಲ್ ಕುಮಾರ್ ಶರ್ಮಅವರ ವ್ಯವಹಾರ ಸಹಚರರಾಗಿದ್ದು, “ಎಂ/ಎಸ್ ಶರ್ಮಾ ಟ್ರಾನ್ಸ್​​ಪೋರ್ಟ್ಸ್” ಎಂಬ ಸಂಸ್ಥೆಯ ಮೂಲಕ ಸಾರಿಗೆ ವ್ಯವಹಾರ ನಡೆಸುತ್ತಿರುವುದು ತಿಳಿದುಬರುತ್ತದೆ. ಅದಲ್ಲದೆ, ಅವರು ಶಿಕ್ಷಣ ಸಂಸ್ಥೆ ಸೇರಿದಂತೆ ಇತರೆ ವ್ಯವಹಾರಗಳನ್ನೂ ನಡೆಸುತ್ತಿದ್ದಾರೆ. ಹೀಗಾಗಿ, ಅವರು ಉದ್ಯಮಿ ಎಂಬುದರಲ್ಲಿ ಯಾವುದೇ ವಿವಾದವಿಲ್ಲ. ಇದೇ ರೀತಿ, ಅವರು ಪ್ರಸ್ತುತ ರಾಜ್ಯದ ಉಪ ಮುಖ್ಯಮಂತ್ರಿ ಆಗಿದ್ದು, ಸಣ್ಣ ನೀರಾವರಿ ಮತ್ತು ಬೆಂಗಳೂರು ಅಭಿವೃದ್ಧಿ ಖಾತೆಗಳ ಜವಾಬ್ದಾರಿಯನ್ನು ವಹಿಸಿಕೊಂಡಿರುವುದೂ ವಿವಾದಾತೀತ.

ಈ ಹಿನ್ನೆಲೆದಲ್ಲಿ, ತಮ್ಮ ವೈಯಕ್ತಿಕ ವ್ಯವಹಾರಗಳ ಅಭಿವೃದ್ಧಿ ಹಾಗೂ ತಮ್ಮ ಸಚಿವಾಲಯದ ವ್ಯಾಪ್ತಿಯ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ನಿಮಿತ್ತ ವಿವಿಧ ದೇಶಗಳಿಗೆ ಪ್ರಯಾಣಿಸಬೇಕಾಗುವ ಸಾಧ್ಯತೆ ಇದೆ. ಹೀಗಾಗಿ, ವಿದೇಶ ಪ್ರವಾಸಕ್ಕೆ ಅನುಮತಿ ಕೋರುವ ಕಾರಣಗಳು ನಿಜವಾದವು ಎಂದು ನ್ಯಾಯಾಲಯಕ್ಕೆ ತೋರುತ್ತದೆ.

ದೂರುದಾರರ ಪರ ವಿಶೇಷ ಸಾರ್ವಜನಿಕ ಅಭಿಯೋಜಕರು(SPP) ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದಾರೆ. ‘ಎರಡು ವರ್ಷದಷ್ಟು ದೀರ್ಘ ಅವಧಿಗೆ ಅನುಮತಿ ನೀಡುವುದು ಇದೇ ನ್ಯಾಯಾಲಯ ವಿಧಿಸಿದ ಜಾಮೀನು ಷರತ್ತುಗಳನ್ನು ಹಿಂತೆಗೆದುಕೊಳ್ಳುವಂತಾಗುತ್ತದೆ’ ಎಂಬ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಒಂದು ಆಕ್ಷೇಪ ಹೊರತುಪಡಿಸಿ ಗಂಭೀರ ವಿರೋಧ ವ್ಯಕ್ತಪಡಿಸಲಿಲ್ಲ.

ಇದಕ್ಕೆ ಪ್ರತಿಯಾಗಿ, ಆರೋಪಿಯ ಪರ ವಕೀಲರು ತಿಳಿಸಿದಂತೆ, ಪ್ರತಿಸಾರಿ ನ್ಯಾಯಾಲಯದ ಅನುಮತಿ ಪಡೆಯುವ ತೊಂದರೆ ತಪ್ಪಿಸಲು ಹಾಗೂ ತುರ್ತು ವಿದೇಶ ಪ್ರಯಾಣದ ಅವಶ್ಯಕತೆಗಳನ್ನು ಗಮನಿಸಿ, ಈ ನ್ಯಾಯಾಲಯವು ಈಗಾಗಲೇ 29.09.2023ರ ಆದೇಶದ ಮೂಲಕ ಆರೋಪಿಯ ಪಾಸ್‌ ಪೋರ್ಟ್ ನವೀಕರಣಕ್ಕೆ ಮೂರು ವರ್ಷದ ಅವಧಿಗೆ ಅನುಮತಿ ನೀಡಿತ್ತು. ಅದರ ಆಧಾರದ ಮೇಲೆ ಆರೋಪಿ ಡಿಕೆ ಶಿವಕುಮಾರ್ ಅವರು ಐದು ವರ್ಷಗಳ ಅವಧಿಗೆ ಪಾಸ್‌ಪೋರ್ಟ್ ನವೀಕರಿಸಿಕೊಂಡಿದ್ದಾರೆ.

ವಿವಿಧ ದೇಶಗಳ ವೀಸಾ ಪ್ರಕ್ರಿಯೆಗೆ ಒಂದು ತಿಂಗಳಿಂದ ಆರು ತಿಂಗಳವರೆಗೆ ಸಮಯ ಬೇಕಾಗುವ ಸಾಧ್ಯತೆ ಇರುವುದರಿಂದ, ಪ್ರತಿಸಾರಿ ನ್ಯಾಯಾಲಯದ ಅನುಮತಿ ಪಡೆಯುವುದು ಕಷ್ಟಕರವಾಗಬಹುದು. ಜೊತೆಗೆ, ಪ್ರತೀ ಬಾರಿ ಇಂತಹ ಮರು ಅರ್ಜಿಗಳನ್ನು ವಿಚಾರಿಸುವುದು ನ್ಯಾಯಾಲಯಕ್ಕೂ ಭಾರವಾಗಬಹುದು. ಹೀಗಾಗಿ, ತಮ್ಮ ವೈಯಕ್ತಿಕ ವ್ಯವಹಾರ ಹಾಗೂ ಸರ್ಕಾರಿ ಕಾರ್ಯಗಳ ನಿಮಿತ್ತ ಆಗಾಗ್ಗೆ ವಿದೇಶ ಪ್ರವಾಸ ಅಗತ್ಯವಿರುವುದರಿಂದ, ಎರಡು ವರ್ಷದ ಅವಧಿಗೆ ಒಟ್ಟಾರೆ ಅನುಮತಿ ಕೇಳಲಾಗಿದೆ.

ಆರೋಪಿ ಸಂಖ್ಯೆ1 ಡಿ ಕೆ ಶಿವಕುಮಾರ್ ಅವರ ವೈಯಕ್ತಿಕ ಹಾಗೂ ಅಧಿಕೃತ ಹುದ್ದೆಯ ಸ್ಥಿತಿಗತಿಗಳನ್ನು ಪರಿಗಣಿಸಿದಾಗ, ಅವರ ಪರ ವಕೀಲರು ಮಂಡಿಸಿದ ವಾದಗಳು ಸರಿಯಾಗಿಯೂ ಸತ್ಸಂಕಲ್ಪದಿಂದ ಕೂಡಿದವಾಗಿಯೂ ಕಾಣುತ್ತವೆ. ಇದು ರಾಜ್ಯದ ಪ್ರತಿನಿಧಿತ್ವದ ಹಿತಾಸಕ್ತಿ ಹಾಗೂ ನ್ಯಾಯಾಲಯದ ಹಿತಾಸಕ್ತಿಗೂ ಅನುಕೂಲಕರವಾಗಿದೆ.

ಇದಲ್ಲದೆ, ಈ ಪ್ರಕರಣದ ಆರೋಪಿ ಸಂಖ್ಯೆ3 ಸುನೀಲ್ ಕುಮಾರ್ ಶರ್ಮ ಅವರಿಗೆ ಈಗಾಗಲೇ ಎಂಟು ತಿಂಗಳ ಅವಧಿಗೆ ವಿದೇಶ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ ಎಂಬುದು ದಾಖಲೆಗಳಿಂದ ತಿಳಿದುಬರುತ್ತದೆ. ಹೀಗಿರುವಾಗ, ಸಮಾನತೆ ಸಿದ್ಧಾಂತದ (Doctrine of Parity) ಆಧಾರದ ಮೇಲೆ ಇದೇ ಸೌಲಭ್ಯವನ್ನು ಆರೋಪಿ ಸಂಖ್ಯೆ1 ಆಗಿರುವ ಡಿ ಕೆ ಶಿವಕುಮಾರ್ ಅವರಿಗೆ ನಿರಾಕರಿಸಲಾಗುವುದಿಲ್ಲ.

ಕರ್ನಾಟಕ ಹೈಕೋರ್ಟ್‌ನ A.V. Vinoda and Another v/s State of Karnataka, W.A. No.932 933/1974 ಪ್ರಕರಣದಲ್ಲಿ, ಒಂದೇ ರೀತಿಯ ಪರಿಸ್ಥಿತಿಯಲ್ಲಿರುವವರಿಗೆ ಸಮಾನ ರೀತಿಯ ಪರಿಹಾರ ನೀಡಬೇಕು; ವಿಶೇಷ ಕಾರಣಗಳಿಲ್ಲದಿದ್ದರೆ, ಒಂದೇ ಪರಿಸ್ಥಿತಿಯಲ್ಲಿರುವ ಮತ್ತೊಬ್ಬರಿಗೆ ಅದನ್ನು ನಿರಾಕರಿಸಲಾಗುವುದಿಲ್ಲ  ಎಂದು ತೀರ್ಪು ನೀಡಲಾಗಿದೆ.

ದೂರುದಾರರ ಪರ ವಕೀಲರು ಸಹ ಆರೋಪಿ ಸಂಖ್ಯೆ 3 ರೊಂದಿಗೆ ಹೋಲಿಸಿದಾಗ, ಆರೋಪಿ ಸಂಖ್ಯೆ1 ಆಗಿರುವ ಡಿ ಕೆ ಶಿವಕುಮಾರ್ ಅವರ ವಿರುದ್ಧ ಯಾವುದೇ ವಿಶೇಷ ಕಾರಣ ಅಥವಾ ವಿನಾಯಿತಿ ಅಂಶಗಳನ್ನು ತೋರಿಸಲಿಲ್ಲ. ಅವರು ಕೇವಲ, ಮುಂದಿನ ವಿಚಾರಣಾ ದಿನಾಂಕದಲ್ಲಿ ಆರೋಪಿ ವೈಯಕ್ತಿಕವಾಗಿ ಹಾಜರಾಗುವಂತೆ ಹೆಚ್ಚುವರಿ ಷರತ್ತು ವಿಧಿಸಿ ಅನುಮತಿ ನೀಡಬಹುದು ಎಂದು ಸೂಚಿಸಿದರು. ಇದನ್ನು ಹೊರತುಪಡಿಸಿ, ಅರ್ಜಿಯನ್ನು ತಿರಸ್ಕರಿಸಲು ಯಾವುದೇ ಸಮರ್ಪಕ ಕಾರಣವನ್ನು ಅವರು ಮಂಡಿಸಲಿಲ್ಲ.

ಆದ್ದರಿಂದ, ಕೆಳಗಿನಂತೆ ಆದೇಶಿಸಲಾಗುತ್ತದೆ:

ಆದೇಶ

ಆರೋಪಿ ಸಂಖ್ಯೆ1 ಆಗಿರುವ ಡಿ ಕೆ ಶಿವಕುಮಾರ್ ಸಲ್ಲಿಸಿದ ಅರ್ಜಿಯನ್ನು ಅನುಮೋದಿಸಲಾಗುತ್ತದೆ.

ಇಂದಿನಿಂದ ಮುಂದಿನ ಎರಡು ವರ್ಷಗಳ ಅವಧಿಗೆ, ಅಮೇರಿಕಾ, ಯುರೋಪಿಯನ್ ದೇಶಗಳು, ಯು.ಕೆ., ಆಸ್ಟ್ರೇಲಿಯಾ, ರಷ್ಯಾ ಹಾಗೂ ಅರಬ್ ರಾಷ್ಟ್ರಗಳಿಗೆ ವಿದೇಶ ಪ್ರವಾಸ ಮಾಡಲು ಆರೋಪಿ ಸಂಖ್ಯೆ1 ಡಿ ಕೆ ಶಿವಕುಮಾರ್ ಅವರಿಗೆ ಕೆಳಗಿನ ಷರತ್ತುಗಳೊಂದಿಗೆ ಅನುಮತಿ ನೀಡಲಾಗುತ್ತದೆ:

  1. ಪ್ರತಿ ದೇಶಕ್ಕೆ ಮಾಡುವ ಪ್ರವಾಸದ ವೇಳಾಪಟ್ಟಿ ಮತ್ತು ವಿವರಗಳನ್ನು ಮುಂಚಿತವಾಗಿ ತನಿಖಾ ಸಂಸ್ಥೆಗೆ ತಿಳಿಸಬೇಕು.
  2. ನ್ಯಾಯಾಲಯ ಸೂಚಿಸಿದಾಗಲೆಲ್ಲಾ ನ್ಯಾಯಾಲಯದ ಮುಂದೆ ಹಾಜರಾಗಬೇಕು.
  3. ಆರೋಪಿ ಯಾವುದಾದರೂ ಷರತ್ತು ಉಲ್ಲಂಘಿಸಿದಲ್ಲಿ, ತನಿಖಾ ಸಂಸ್ಥೆ ಅಥವಾ ಆದಾಯ ತೆರಿಗೆ ಇಲಾಖೆಯು ಅಗತ್ಯ ಅರ್ಜಿ ಸಲ್ಲಿಸಲು ಸ್ವತಂತ್ರವಾಗಿರುತ್ತದೆ.
  4. ಮುಂದಿನ ವಿಚಾರಣೆಗೆ ದಿನಾಂಕ: 10.06.2026.

ಮುಖ್ಯಮಂತ್ರಿಯಾಗಲು ಹೊರಟಿರುವ ಡಿ ಕೆ ಶಿವಕುಮಾರ್ ಅವರು ‘ವ್ಯವಹಾರ ಮತ್ತು ಸರ್ಕಾರಿ ಕಾರಣಕ್ಕಾಗಿ ವಿದೇಶ ಪ್ರವಾಸ’ ಮಾಡಲು ಯೋಜನೆ ರೂಪಿಸಿಕೊಂಡಿದ್ದಾರೆ. ನ್ಯಾಯಾಲಯವೂ ಅನುಮತಿ ನೀಡಿದೆ. ಡಿ ಕೆ ಶಿವಕುಮಾರ್ ಅವರ ಅರ್ಜಿಗೆ ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆಯು ‘ಗಂಭೀರ ಆಕ್ಷೇಪಣೆ ಸಲ್ಲಿಸಿಲ್ಲ’ ಎಂದು ನ್ಯಾಯಾಲಯವೂ ಅಭಿಪ್ರಾಯಪಟ್ಟಿದೆ.

ಮುಖ್ಯಮಂತ್ರಿ   ಅಥವಾ ಉಪಮುಖ್ಯಮಂತ್ರಿ ಹುದ್ದೆಯಲ್ಲಿರುವ ವ್ಯಕ್ತಿ, ಸರ್ಕಾರದ ಹುದ್ದೆ, ಪ್ರಭಾವ, ಸರ್ಕಾರಿ ಯಂತ್ರಾಂಗ ಅಥವಾ ಅಧಿಕೃತ ಪ್ರವಾಸಗಳನ್ನು ತನ್ನ ಖಾಸಗಿ ವ್ಯವಹಾರದ ಅಭಿವೃದ್ಧಿಗೆ ಬಳಸಿಕೊಂಡರೆ, ಅದು ಹಲವು ಕಾರಣಗಳಿಂದ ಅಧಿಕಾರದ ದುರುಪಯೋಗ ಮತ್ತು ನೈತಿಕ ಸಂಘರ್ಷ(Conflict of Interest) ಎಂದು ಪರಿಗಣಿಸಲಾಗುತ್ತದೆ. ಜನಪ್ರತಿನಿಧಿಗಳು ಸಾರ್ವಜನಿಕ ಹುದ್ದೆಯನ್ನು ಖಾಸಗಿ ಲಾಭಕ್ಕೆ ಬಳಸುವುದು, ತೆರಿಗೆದಾರರ ಹಣದಿಂದ ಸಿಗುವ ಸೌಲಭ್ಯಗಳನ್ನು ವೈಯಕ್ತಿಕ ವ್ಯವಹಾರಕ್ಕೆ ತಿರುಗಿಸುವುದು, ಸರ್ಕಾರ ಮತ್ತು ಖಾಸಗಿ ವ್ಯವಹಾರಗಳ ಗಡಿ ಅಳಿಸುವುದು, ಅಧಿಕಾರದ ಪ್ರಭಾವದಿಂದ ವ್ಯವಹಾರಿಕ ಲಾಭ ಪಡೆಯುವ ಸಾಧ್ಯತೆ ಇದ್ದು ಇದು ಪ್ರಜಾಪ್ರಭುತ್ವದಡಿಯಲ್ಲಿ ಸರಿಯಾದುದಲ್ಲ. ಇವೆಲ್ಲವನ್ನು ಕಾನೂನಿನ ಭಾಷೆಯಲ್ಲಿ Conflict of Interest (ಹಿತಾಸಕ್ತಿ ಸಂಘರ್ಷ), Abuse of Office (ಹುದ್ದೆಯ ದುರುಪಯೋಗ), Misuse of Public Office for Private Gain, Crony Capitalism (ಸ್ನೇಹಪರ ಬಂಡವಾಳಶಾಹಿ), Ethical Impropriety (ನೈತಿಕ ಅಸಂಗತತೆ), Institutional Corruption(ಸಾಂಸ್ಥಿಕ ಭ್ರಷ್ಟಾಚಾರ) ಎಂದು ಕರೆಯುತ್ತಾರೆ.

ನವೀನ್ ಸೂರಿಂಜೆ

Leave a Reply

Your email address will not be published.