ಕೋಮುವಾದದ ವಿರುದ್ಧ ನಿಜಕ್ಕೂ ಸಿದ್ದರಾಮಯ್ಯ ಏಕಾಂತ ಹೋರಾಟ ನಡೆಸಿದ್ದಾರೆಯೇ ? ನ್ಯಾಯಾಂಗದ ದಾಖಲೆಗಳು ಏನು ಹೇಳುತ್ತವೆ ?

     

      • ನವೀನ್ ಸೂರಿಂಜೆ

    ಡಿ ಕೆ ಶಿವಕುಮಾರ್ ಅವರಿಗೆ ಸಿಎಂ ಹುದ್ದೆಯನ್ನು ಬಿಟ್ಟುಕೊಡುವ ವೇಳೆ ಭಾವನಾತ್ಮಕ ಸುದ್ಧಿಗೋಷ್ಠಿ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಕೊನೆ ಉಸಿರು ಇರುವವರೆಗೆ ಕೋಮುವಾದದ ವಿರುದ್ಧ ಹೋರಾಡುತ್ತೇನೆ’ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯರ ಈ ಹೇಳಿಕೆ  ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗೆ ಒಳಗಾಗುತ್ತಿದೆ. ಸಿದ್ದರಾಮಯ್ಯನವರು ಈ ಪತ್ರಿಕಾಗೋಷ್ಠಿಗೂ ಮುನ್ನ  ವಿಶ್ವೇಶ್ವರ ಭಟ್ ಜೊತೆ ಹದಿನೈದು ನಿಮಿಷಗಳಿಗೂ ಹೆಚ್ಚು ಕಾಲ ಏಕಾಂತ ಚರ್ಚೆ ನಡೆಸಿದ್ದರು. ಅದಿರಲಿ, ಕಳೆದ ಎರಡು ವರ್ಷಗಳಲ್ಲಿ ಸಿದ್ದರಾಮಯ್ಯ ಸರ್ಕಾರ ಕೋಮುವಾದದ ವಿರುದ್ಧ ಹೋರಾಟ ನಡೆಸಿದೆಯೇ ?  ನ್ಯಾಯಾಂಗದ ದಾಖಲೆಗಳು ಈ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡುತ್ತದೆ.

    20 may 2023 ರಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 24 ಮಂದಿ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದಾರೆ ಎಂಬ  ಸುಳ್ಳು ಮತ್ತು ಪ್ರಚೋದನಾಕಾರಿ ಭಾಷಣವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಮಾಡಿದ್ದರು. 2023ರ ಮೇ 22ರಂದು ಬೆಳ್ತಂಗಡಿಯಲ್ಲಿ ಹರೀಶ್ ಪೂಂಜಾ ವಿರುದ್ಧ ಪ್ರಕರಣ ದಾಖಲಾಗಿತ್ತು. 09 ಜೂನ್ 2023 ರಂದು ಹೈಕೋರ್ಟ್ ಈ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ. ಮುಖ್ಯಮಂತ್ರಿ ಬಗ್ಗೆಯೇ ಪ್ರಚೋದನಾತ್ಮಕ ಕೋಮು ಭಾಷಣ ಮಾಡಿದ ಪ್ರಕರಣದ ತಡೆಯಾಜ್ಞೆಯನ್ನು ತೆರವುಗೊಳಿಸಲು ಸರ್ಕಾರ ಕೆಲಸ ಮಾಡಲಿಲ್ಲ !

    .ಪ್ರವೀಣ್ ನೆಟ್ಟಾರ್ ಕೊಲೆ ವಿರುದ್ದ ಅನುಮತಿ ಇಲ್ಲದೇ ಪ್ರತಿಭಟನೆ ನಡೆಸಿ, ಪ್ರಚೋದನಾಕಾರಿ ಭಾಷಣ ಮಾಡಿದ್ದಕ್ಕಾಗಿ ಎಸ್.ಜೆ. ಪಾರ್ಕ್ ಠಾಣಾ ಇನ್ಸ್‌ಪೆಕ್ಟರ್ ನಗರದ 6ನೇ ಎಸಿಎಂಎಂ ನ್ಯಾಯಾಲಯದಲ್ಲಿ ದಾಖಲಿಸಿರುವ ಖಾಸಗಿ ದೂರು ಮತ್ತು ನ್ಯಾಯಾಲಯ ಹೊರಡಿಸಿರುವ ಸಮನ್ಸ್ ಗೆ ಹೈಕೋರ್ಟ್ 10 ಜುಲೈ 2023 ರಂದು ತಡೆಯಾಜ್ಞೆ ನೀಡಿತ್ತು. ಮಂಗಳಾದೇವಿ ದೇವಸ್ಥಾನದಲ್ಲಿ ಮುಸ್ಲೀಮರು ವ್ಯಾಪಾರ ಮಾಡಬಾರದು ಎಂದು ಪ್ರಚೋದನಾಕಾರಿ ಕೋಮು ಭಾಷಣ ಮಾಡಿದ್ದ ವಿಎಚ್‌ಪಿ ಮುಖಂಡ ಶರಣ್ ಪಂಪ್ ವೆಲ್ ವಿರುದ್ದ ಮಂಗಳೂರಿನ ಪಾಂಡೇಶ್ವರ  ಪೊಲೀಸರು ೆಫ್​ಐಆರ್ ದಾಖಲಿಸಿದ್ದರು. ಈ ಎಫ್​ಐಆರ್​ಗೂ  20 ಅಕ್ಟೋಬರ್​ 2023 ರಂದು ಹೈಕೋರ್ಟ್​  ತಡೆಯಾಜ್ಞೆನೀಡಿತ್ತು. ಈ ವರೆಗೂಸರ್ಕಾರತಡೆಯಾಜ್ಞೆ ತೆರವಿಗೆ ಅರ್ಜಿ  ಹಾಕಲಿಲ್ಲ !

    2013ರಿಂದ 2023ರ ನಡುವೆ 10 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಕೋಮುವಾದಿ ಕ್ರಿಮಿನಲ್  ಪುನೀತ್ ಕೆರೆಹಳ್ಳಿಯನ್ನು ಗೂಂಡಾ ಕಾಯಿದೆಯಡಿ ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದರು. ಆದರೆ ಹೈಕೋರ್ಟ್ ಸೂಚನೆಯಂತೆ 17 ಸೆಪ್ಟೆಂಬರ್ 2023 ರಂದು ಸಿದ್ದರಾಮಯ್ಯ ಸರ್ಕಾರದ ಗೃಹ ಇಲಾಖೆಯು ರಾಜ್ಯ ಸಲಹಾ ಮಂಡಳಿಯ ವರದಿಯ ಮೇರೆಗೆ ಗೂಂಡಾ ಕಾಯ್ದೆಯನ್ನು ವಾಪಸ್ ಪಡೆದು ಪುನೀತ್ ಕೆರೆಹಳ್ಳಿಯನ್ನು ಬಿಡುಗಡೆ ಮಾಡಿತು. ಪುನೀತ್ ಕೆರೆಹಳ್ಳಿಯು 2023 ಏಪ್ರಿಲ್‌ನಲ್ಲಿ ಚುನಾವಣಾ ಸಮಯದಲ್ಲಿ ಮಂಡ್ಯ ಮೂಲದ ಜಾನುವಾರು ಸಾಗಾಟಗಾರ ಇದ್ರಿಸ್ ಪಾಷಾ ಅವರನ್ನು ಕೊಂದಿದ್ದ. ಅದಕ್ಕಾಗಿ ಪುನೀತ್ ನನ್ನು ಸಾತನೂರು ಪೊಲೀಸರು ಬಂಧಿಸಿದ್ದರು. ನಂತರ ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆದರೆ, ಜಾಮೀನಿನ ಮೇಲೆ ಹೊರಬಂದ ನಂತರವೂ ಕೋಮುಪ್ರಚೋದನೆ ಮಾಡುತ್ತಿದ್ದ ಹಲವು ದೂರು ದಾಖಲಾಗಿತ್ತು. ಆ ಕಾರಣದಿಂದ ಪುನೀತ್ ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿತ್ತು. ಆದರೆ ಸಲಹಾ ಮಂಡಳಿ ಶಿಫಾರಸ್ಸಿನಂತೆ ಹೈಕೋರ್ಟ್ ಪುನೀತ್ ನನ್ನು ಬಿಡುಗಡೆ ಮಾಡಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲೇ ವೇಶ್ಯಾವಾಟಿಕೆ  ಪ್ರಕರಣದಲ್ಲಿ ಬಂಧಿತನಾಗಿದ್ದ ಪುನೀತ್ ಕೆರೆಹಳ್ಳಿಯಂತಹ ಕೋಮು ಕ್ರಿಮಿಯ ‘ಹಿಂದುತ್ವ ಹೋರಾಟ’ದ ವಿಷಯವನ್ನು ವಿಧಾನಸಭೆಯಲ್ಲಿ ಚರ್ಚೆಯಾಗಲು ಕಾಂಗ್ರೆಸ್ ಅವಕಾಶ ಮಾಡಿಕೊಟ್ಟಿತ್ತು !

    ಸಿಎಂ ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡಿ ಸಮುದಾಯಗಳ ನಡುವೆ ದ್ವೇಷ ಹರಡಿದ ಆರೋಪದ ಮೇಲೆ ಯುವಾ ಬ್ರಿಗೇಡ್‌ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಾರವಾರ ಗ್ರಾಮಾಂತರ ಪೊಲೀಸರು ಅಕ್ಟೋಬರ್ 5, 2023 ರಂದು ಎಫ್‌ಐಆರ್ ದಾಖಲಿಸಿದ್ದರು. ಈ ಎಫ್​ಐಆರ್​ಗೂ 16 ನವೆಂಬರ್ 2023 ರಂದುನ್ಯಾಯಾಲಯ ತಡೆಯಾಜ್ಞೆನೀಡಿದೆ. ಈ ತಡೆಯಾಜ್ಞೆಯ ತೆರವಿಗೆ ಅರ್ಜಿ ಹಾಕುವ ಗೋಜಿಗೆ ಸರ್ಕಾರ ಹೋಗಿಲ್ಲ !

    ಮುಸ್ಲಿಂ ಮಹಿಳೆಯರಿಗೆ  ಪರ್ಮನೆಂಟ್‌ ಗಂಡ ಇಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌ ಅವರನ್ನು ಸರ್ಕಾರ ಬಂಧಿಸಲ್ಲ ಎಂದು ಹೈಕೋರ್ಟ್‌ ಮುಂದೆ ಭರವಸೆ ನೀಡಿತ್ತು !  ಹಾಗಾಗಿ ಹೈಕೋರ್ಟ್ “ಸರ್ಕಾರ ಬಂಧಿಸಲ್ಲ ಎಂದಿರುವುದರಿಂದ ಬಂಧನದ ಕ್ರಮ ಕೈಗೊಳ್ಳಬಾರದು” ಎಂದು ಡಿಸೆಂಬರ್ 28, 2023 ರಂದು ಆದೇಶ ನೀಡಿತ್ತು. ಆದರೆ ನಾವು ಒಂದು ತಂಡವಾಗಿ ವಕೀಲ ಎಸ್ ಬಾಲನ್ ಅವರ ಮೂಲಕ ತಡೆಯಾಜ್ಞೆ ತೆರವು ಅರ್ಜಿಯನ್ನು ಹೈಕೋರ್ಟ್​ಗೆ ಸಲ್ಲಿಸಿದ್ದೇವೆ.

    ರಾಯಚೂರು ಜಿಲ್ಲೆಯ ಸಿರವಾರದಲ್ಲಿ ಆಯೋಜಿಸಿದ್ದ ನಮೋ ಬ್ರಿಗೇಡ್ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಂಘಟನೆಯ ಮುಖಂಡ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗಳಿಗೆ 30 ಜನವರಿ 2024 ರಂದು  ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠ ತಡೆಯಾಜ್ಞೆ ನೀಡಿದೆ. ಕಾಂಗ್ರೆಸ್ ಸರ್ಕಾರ ಇದ್ದರೂ ಅವರ ಹೈಕಮಾಂಡ್​ ಬಗ್ಗೆ ಮಾತನಾಡಿದರೂ ರಾಜ್ಯ ಸರ್ಕಾರ ಈವರೆಗೂ ತಡೆಯಾಜ್ಞೆ ತೆರವುಗೊಳಿಸಿ ವಿಚಾರಣೆ ನಡೆಸುವ ಪ್ರಯತ್ನ ಮಾಡಿಲ್ಲ !

    ಕೋಮು ಗಲಭೆ, ದನಸಾಗಾಟ ಹಲ್ಲೆ, ನೈತಿಕ ಪೊಲೀಸ್ ಗಿರಿ ಪ್ರಕರಣಗಳಲ್ಲಿ ಭಾಗಿಯಾದ ಹಿಂದೂ ಜಾಗರಣಾ ವೇದಿಕೆ ಮುಖಂಡರಾದ ದಿನೇಶ್ ಪಂಜಿಗ‌ ಹಾಗೂ ಬೆಳ್ತಂಗಡಿಯ ಯಶೋಧರ ಅವರ ಗಡಿಪಾರು ನೊಟೀಸ್​ಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಹ ಸಂಯೋಜಕ ದಿನೇಶ್​ ಪಂಜಿಗ ಮತ್ತು ವೇಣೂರು ವಲಯದ ಮುಖಂಡರಾಗಿದ್ದ ಯಶೋಧರ ಎಂಬುವರಿಗೆ, ಕರ್ನಾಟಕ ಪೊಲೀಸ್​ ಕಾಯ್ದೆ ಕಲಂ 55 ರಂತೆ ವಿಜಯಪುರ ಜಿಲ್ಲೆಯ ಸಿಂಧಗಿ ಪೊಲೀಸ್​ ಠಾಣಾ ವ್ಯಾಪ್ತಿಗೆ ನಿಮ್ಮನ್ನು ಯಾಕೆ ಗಡಿಪಾರು ಮಾಡಬಾರು ಎಂದು ಕಾರಣ ಕೇಳಿ ಪುತ್ತೂರು ಉಪವಿಭಾಗೀಯ ದಂಡಾಧಿಕಾರಿ ನೋಟಿಸ್​ ಜಾರಿ ಮಾಡಿದ್ದರು. ಈ ಗಡಿಪಾರು ನೋಟಿಸ್ ಗೆ 10 ಫೆಬ್ರವರಿ 2024 ರಂದು ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಕೋಮುವಾದದ ವಿರುದ್ಧ ಹೋರಾಡುತ್ತೇವೆ ಎಂದು ಹೇಳುವ ರಾಜ್ಯ ಸರ್ಕಾರ ಏನೂ ಮಾಡಲಿಲ್ಲ !

    ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ಪದ ಬಳಕೆಗೆ ಸಂಬಂಧಿಸಿದಂತೆ ಅನಂತಕುಮಾರ್‌ ಹೆಗ್ಡೆ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಠಾಣೆಯಲ್ಲಿಐಪಿಸಿ ಸೆಕ್ಷನ್‌ಗಳಾದ 153,153ಎ, 505(2) ಅಡಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣಕ್ಕೆ 16 ಫೆಬ್ರವರಿ 2024 ರಂದು ತಡೆಯಾಜ್ಞೆ ನೀಡಿದೆ. ಈವರೆಗೂ ತಡೆಯಾಜ್ಞೆ ತೆರವುಗೊಳಿಸಲು ಸರ್ಕಾರ ಯತ್ನಿಸಲಿಲ್ಲ.

    ಬಂಟ್ವಾಳ ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಬೆಂಗಳೂರಿನ ಟೌನ್‌ಹಾಲ್‌ ಮುಂದೆ ಪ್ರತಿಭಟನೆ ನಡೆಸಿದ ಪ್ರಕರಣ ಸಂಬಂಧ ಸೂಲಿಬೆಲೆ ವಿರುದ್ಧದ ಪ್ರಕರಣವನ್ನು ಹೈಕೋರ್ಟ್​  ರದ್ದುಗೊಳಿಸಿ ಫೆಬ್ರವರಿ 28, 2024 ರಂದು ಆದೇಶ ನೀಡಿದೆ. ಈ ಹಿಂದೆ ಪ್ರಕರಣಕ್ಕೆ ತಡೆಯಾಜ್ಞೆ ನೀಡಲಾಗಿತ್ತು. ಆ ಬಳಿಕ ಪ್ರಕರಣವನ್ನೇ ರದ್ದುಗೊಳಿಸಿ ಸಂಪೂರ್ಣ ರಿಲೀಫ್ ನೀಡಲಾಗಿದೆ‌. ಈ ಪ್ರಕರಣದಲ್ಲಿ ಸೂಲಿಬೆಲೆ ಜತೆಗೆ ಬಿಜೆಪಿ ಶಾಸಕರೂ ಸೇರಿ 11 ಆರೋಪಿಗಳು ಇದ್ದರು. ಎಲ್ಲರ ಪ್ರಕರಣ ರದ್ದಾಗಿದೆ. ಸಿದ್ದರಾಮಯ್ಯ ಸರ್ಕಾರ ಈ ಸಂಬಂಧ ಹೈಕೋರ್ಟ್ ವಿಭಾಗೀಯ ಪೀಠ ಅಥವಾ ಸುಪ್ರಿಂ  ಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಲಿಲ್ಲ !

    ‘ಸಿದ್ರಾಮುಲ್ಲಾ ಖಾನ್‌ ಸರ್ಕಾರವನ್ನು ನಾವೆಲ್ಲೂ ನೋಡಿಲ್ಲ. ಅತ್ಯಂತ ಹೇಸಿಗೆ ಬರುವ ರೀತಿ ಅಲ್ಪಸಂಖ್ಯಾತರ ತುಷ್ಠೀಕರಣ ಮಾಡುವಲ್ಲಿ ನಿರತರಾಗಿದ್ದಾರೆ. ಇವರ ಕೈಯಲ್ಲಿ ಅಧಿಕಾರ ಕೊಟ್ಟರೆ ನಮ್ಮನ್ನು ಮಾರಾಟ ಮಾಡುತ್ತಾರೆ. ಹಿಂದೂಗಳ ದೇವಸ್ಥಾನದ ಹುಂಡಿಗೆ ಹಾಕಿದ ಹಣವನ್ನು, ಚರ್ಚ್‌, ಮಸಿದಿಗೆ ಕೊಡುತ್ತಾರೆ. ಹಿಂದೂಗಳ ದೇವಸ್ಥಾನದಲ್ಲಿ ದೇವರಿಲ್ಲವೇ?’ ಎಂದು ಹೇಳಿಕೆನೀಡಿದ್ದ ಅನಂತ್ ಕುಮಾರ್ ವಿರುದ್ಧ ಎಫ್​ಯಾರ್ ದಾಖಲಾಗಿತ್ತು. ಈ ಎಫ್​ಐಆರ್​​ಗೂ 16 ಮಾರ್ಚ್ 2024ರಂದು ತಡೆಯಾಜ್ಞೆ ನೀಡಲಾಗಿದೆ.  ಹಿಂದೂ ಸಂಘಟನೆಯ ಕಾರ್ಯಕರ್ತ ಶ್ರೀನಿವಾಸ ನಾಯ್ಕರಿಗೆ ಜಿಲ್ಲಾಡಳಿತ ನೋಟಿಸ್‌ ಜಾರಿ ಮಾಡಿ 1 ವರ್ಷದ ಗಡಿಪಾರು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು. ಇದರ ವಿರುದ್ಧ ಶ್ರೀನಿವಾಸ ನಾಯ್ಕ ಅವರು ಉಕ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಎಪ್ರಿಲ್ 10, 2024 ರಂದು ನ್ಯಾಯಾಲಯ ಗಡಿಪಾರು ಪ್ರಕರಣಕ್ಕೆ ಸಂಬಂಧಿಸಿದಂತೆ ತಡೆಯಾಜ್ಞೆ ನೀಡಿದೆ. ಸರ್ಕಾರ  ನ್ಯಾಯಾಂಗದ ಯಾವ ಅವಕಾಶಗಳನ್ನೂ  ಬಳಸಿಕೊಳ್ಳಲಿಲ್ಲ !

    ಲೋಕಸಭಾ ಚುನಾವಣೆ ಸಂಬಂಧ ಅಶಾಂತಿ ಉಂಟಾಗದಂತೆ ಕೆಲವರನ್ನು ಆಯಾ ಜಿಲ್ಲೆಗಳಿಂದ ಗಡಿಪಾರು ಆದೇಶ ಹೊರಡಿಸಿತ್ತು. ಅದೇ ರೀತಿ ಚಿಕ್ಕಮಗಳೂರು ಬಜಗರಂಗದಳದ ಮಾಜಿ ಜಿಲ್ಲಾ ಸಂಚಾಲಕ ತುಡುಕೂರು ಮಂಜು ಎಂಬುವವರನ್ನು  ಚಿಕ್ಕಮಗಳೂರು ಜಿಲ್ಲಾಡಳಿತ 17 ಕಾರಣಗಳನ್ನು ನೀಡಿ ಎರಡು ತಿಂಗಳ ಕಾಲ ಜಿಲ್ಲೆಯಿಂದ ಗಡಿಪಾರು ಮಾಡಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದರು. ಜಿಲ್ಲಾಡಳಿತದ ಆದೇಶಕ್ಕೆ ಎಪ್ರಿಲ್ 25, 2024 ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಕೋಮುಗಲಭೆಗಳನ್ನು ಹುಟ್ಟುಹಾಕುವ ಹಿಂದೂ ಜಾಗರಣ ಮಂಚ್ ವಿಟ್ಲ ತಾಲೂಕಿನ ಸದಸ್ಯ ಅಕ್ಷಯ್ ರಾಜಪೂತ್ ನನ್ನು ಪೊಲೀಸರು ಮನೆಗೆ ಹೋಗಿ ಬಂಧಿಸಿ ಗಡಿಪಾರು ಮಾಡಿದ್ದರು. ಈ ಗಡಿಪಾರು ಆದೇಶಕ್ಕೆ ಮೇ 09, 2024 ರಂದು ಹೈಕೋರ್ಟ್ ತಡೆಯಾಜ್ಞೆ ನೀಡಿದೆ.  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆಗಳಿಗೆ ಕಾರಣರಾಗಿದ್ದ ಭಜರಂಗದಳದ ಪುತ್ತೂರಿನ ಸಂಪ್ಯ ನಿವಾಸಿ ಪ್ರಜ್ವಲ್, ತಿಂಗಳಾಡಿಯ ನಿತಿನ್,  ದಿನೇಶ್ ಹಾಗೂ ಅಜಲಡ್ಕದ ಪ್ರದೀಪನನ್ನು ಬಾಗಲಕೋಟೆಗೆ ಗಡಿಪಾರು ಮಾಡಲು ದಕ ಪೊಲೀಸ್ ಶಿಫಾರಸು ಮಾಡಿದ್ದರು. ಈ ಆದೇಶಕ್ಕೆ ಮೇ 10, 2024 ರಂದು ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸರ್ಕಾರ ಇದ್ಯಾವುದನ್ನೂ  ನ್ಯಾಯಾಲಯದಲ್ಲಿ ಪ್ರಶ್ನಿಸಲಿಲ್ಲ !

    ಅಕ್ರಮ ಸ್ಪೋಟಕಗಳನ್ನು ಹೊಂದಿದ್ದ ವ್ಯಕ್ತಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು. ಆರೋಪಿಯನ್ನು ಬಿಟ್ಟು ಬಿಡುವಂತೆ ಠಾಣೆಗೆ ನುಗ್ಗಿ ಬೆದರಿಕೆ ಒಡ್ಡಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ದ ಎಫ್ಐಆರ್ ದಾಖಲಾಗಿತ್ತು. ಆ ಎಫ್ಐಆರ್ ತನಿಖೆಗೆ ಹೈಕೋರ್ಟ್ ಮೇ 31, 2024 ರಂದು ತಡೆಯಾಜ್ಞೆ ನೀಡಿದೆ.  ಮಂಗಳೂರು ನಗರದ ಕಂಕನಾಡಿ ವೃತ್ತದ ಸಮೀಪದ ಮಸೀದಿಯೊಂದರ ಮುಂಭಾಗದ ರಸ್ತೆಯಲ್ಲೇ ಮುಸ್ಲಿಮರು ನಮಾಜ್ ಮಾಡಿದ ಘಟನೆಗೆ ಸಂಬಂಧಿಸಿದಂತೆ, ಕೋಮು ದ್ವೇಷ ಭಾವನೆ ಹುಟ್ಟಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಆರೋಪ ಸಂಬಂಧ, ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ 07 ಜೂನ್ 2024 ರಂದು ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸರ್ಕಾರ ಈ ತಡೆಯಾಜ್ಞೆ ತೆರವು ಮಾಡಲಿಲ್ಲ.

    ಬಿ ಎಸ್ ಯಡಿಯೂರಪ್ಪ ವಿರುದ್ದ 2024 ಮಾರ್ಚ್ ನಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಬಗ್ಗೆ ಪೋಕ್ಸೋ ಕೇಸ್ ದಾಖಲಾಗಿತ್ತು. ಅಮಾಯಕ ಮಹಿಳೆ ತನ್ನ ಅಪ್ರಾಪ್ತ ಹೆಣ್ಣು ಮಗುವಿನ ಜೊತೆ ದೂರು ನೀಡಲು ಹೋದಾಗ ಪೊಲೀಸರು ದೂರು ದಾಖಲಿಸಲು ನಿರಾಕರಿಸಿದ್ದರು.  ಸಿದ್ದರಾಮಯ್ಯನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದರೂ ಬಿಜೆಪಿ ನಾಯಕ ಯಡಿಯೂರಪ್ಪ ವಿರುದ್ದ ಎಫ್ಐಆರ್ ಆಗುವುದಿಲ್ಲ. ಕೊನೆಗೆ ಹೇಗಾದರೂ ಮಾಡಿ ಹೆಣ್ಮಗುವಿಗೆ ನ್ಯಾಯ ಒದಗಿಸಬೇಕು ಎಂದು ಹೋರಾಡಿದ ಬಳಿಕ ಬಿ ಎಸ್ ಯಡಿಯೂರಪ್ಪ ವಿರುದ್ದ ಎಫ್ಐಆರ್ ದಾಖಲಾಗುತ್ತದೆ. ‘ದ ಹಿಂದೂ’ ಈ ಪ್ರಕರಣವನ್ನು ಬಯಲಿಗೆಳೆಯುವ ಸುದ್ದಿ ಮೊದಲ ಬಾರಿ ಪ್ರಕಟಿಸುತ್ತದೆ. ಆದರೆ, ಕಾಂಗ್ರೆಸ್ ಸರ್ಕಾರದ ಪೊಲೀಸರು ತನಿಖೆಯನ್ನೂ ಮಾಡಲ್ಲ, ಬಂಧನವನ್ನೂ ಮಾಡಲ್ಲ. ಸಾಲದ್ದಕ್ಕೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು “ದೂರುದಾರೆ ಸಂತ್ರಸ್ತ ಹೆಣ್ಮಗುವಿನ ತಾಯಿ ಮಾನಸಿಕ ಅಸ್ವಸ್ಥೆ” ಎಂದು ತನಿಖೆಯೇ ನಡೆಸದೇ ತೀರ್ಪು ಕೊಡುತ್ತಾರೆ. ಬಿ ಎಸ್ ಯಡಿಯೂರಪ್ಪ ಬಿಜೆಪಿ ನಾಯಕರಾದರೂ ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರ ಜೊತೆ ಹೊಂದಿರುವ ಆತ್ಮೀಯ ಸಂಬಂಧವೇ ಇದಕ್ಕೆ ಕಾರಣ ಎನ್ನುವುದಕ್ಕೆ ದಾಖಲೆ ಏನೂ ಕೊಡಬೇಕಿಲ್ಲ. ಈ ಮಧ್ಯೆ ಸಂತ್ರಸ್ತ ಮಹಿಳೆ ಸಿಪಿಐಎಂನ ಜನವಾದಿ ಮಹಿಳಾ ಸಂಘಟನೆಯನ್ನು ಸಂಪರ್ಕಿಸುತ್ತಾರೆ. ಜನವಾದಿ ಮಹಿಳಾ ಸಂಘಟನೆಯ ಕಾಂ. ಗೌರಮ್ಮ ಅವರು ಮಹಿಳೆಯ ಸಂಪೂರ್ಣ ವಿಷಯ ತಿಳಿದುಕೊಂಡು  ನನ್ನ ಫೋನ್ ನಂಬರ್ ನೀಡಿದ್ದರು.  ಸಂತ್ರಸ್ತ ಮಹಿಳೆ ನನ್ನನ್ನು ಸಂಪರ್ಕಿಸಿ ದೂರವಾಣಿ ಮೂಲಕ ಸುಧೀರ್ಘವಾಗಿ ಮಾತನಾಡಿದ್ದರು. ನಾನು ಹಿರಿಯ ವಕೀಲ ಎಸ್ ಬಾಲನ್ ಅವರನ್ನು ಸಂಪರ್ಕಿಸಿ ಈ ಸಂತ್ರಸ್ತ ಮಹಿಳೆಗೆ ಉಚಿತ ಕಾನೂನಿನ ನೆರವು ನೀಡುವಂತೆ ಕೇಳಿದ್ದೆ. ನಾವು ಒಂದು ತಂಡವಾಗಿ ಈಪ್ರಕರಣವನ್ನು ನಿರ್ವಹಿಸಿದೆವು. ನಾವು ಕೆಲಸ ಆರಂಭಿಸಿದ ಒಂದೆರಡು ದಿನದಲ್ಲೇ  ಆ ಸಂತ್ರಸ್ತ ಮಹಿಳೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಬಂದಿದೆ. ಇದಾದ ಬಳಿಕ ಪೂರ್ಣ ಪ್ರಮಾಣದ ರಿಟ್ ಅರ್ಜಿಯನ್ನು ಎಸ್ ಬಾಲನ್ ಸಿದ್ದಗೊಳಿಸಿದರು. ಹಲವು ನ್ಯಾಯಾಲಯಗಳ ತೀರ್ಪುಗಳನ್ನು ಉಲ್ಲೇಖಿಸಿದ್ದ ರಿಟ್ ಪಿಟಿಷನ್ ಅನ್ನು ಹೈಕೋರ್ಟ್ ನಲ್ಲಿ ಜೂನ್ 10 ರಂದು ಹಾಕಲಾಯಿತು. ರಿಟ್ ಪಿಟಿಷನ್ ಹಾಕಿರುವುದು ಪೊಲೀಸರ ಗಮನಕ್ಕೆ ಬಂತು. ಪೋಕ್ಸೋ ಕೇಸ್ ದಾಖಲಾದರೂ ಒಂದೇ ಒಂದು ಬಾರಿ ವಿಚಾರಣೆ ನಡೆಸದ, ಒಂದೇ ಒಂದು ಬಾರಿ ಸೆಕ್ಷನ್ 41(a) ನೋಟಿಸ್ ನೀಡದ ಪೊಲೀಸರ ಮೇಲೆ ಕ್ರಮ ಆಗೋದು ಗ್ಯಾರಂಟಿ ಎಂಬುದು ರಿಟ್ ಓದಿದ ಯಾರಿಗಾದರೂ ಅರ್ಥ ಆಗುವಂತಿತ್ತು.  ಮೂರು ತಿಂಗಳ ಕಾಲ ನೋಟಿಸ್ ನೀಡದ ಪೊಲೀಸರು ನಾವು ರಿಟ್ ಅರ್ಜಿ ಸಲ್ಲಿಸಿದ ಮರುದಿನ ಅಂದರೆ ಜೂನ್ 11 ರಂದು ಬಿ ಎಸ್ ಯಡಿಯೂರಪ್ಪರಿಗೆ 41(a) ನೋಟಿಸನ್ನು ತರಾತುರಿಯಲ್ಲಿ ಪೊಲೀಸರೇ ನೀಡಿ ಬಂದರು. ಜೂನ್ 13 ರಂದು ಸೆಷನ್ ನ್ಯಾಯಾಲಯಕ್ಕೆ ಅರ್ಜಿ ಹಾಕಿದ ಪೊಲೀಸರು “ಬಿ ಎಸ್ ಯಡಿಯೂರಪ್ಪ ವಿಚಾರಣೆಗಾಗಿ ನಾನ್ ಬೇಲೆಬಲ್ ವಾರೆಂಟ್ ಕೊಡುವಂತೆ” ನಿವೇದಿಸಿದರು. ವಾದ ವಿವಾದ ಆಲಿಸಿದ ನ್ಯಾಯಾಲಯ ಪೊಕ್ಸೋ ಕೇಸ್ ನಲ್ಲಿ ಬಿ ಎಸ್ ಯಡಿಯೂರಪ್ಪ ವಿರುದ್ದ ವಾರೆಂಟ್ ಜಾರಿ ಮಾಡಿದೆ. ಆ ಬಳಿಕ ಬಿ ಎಸ್ ಯಡಿಯೂರಪ್ಪ ಅವರು ವಾರೆಂಟ್ ಮತ್ತು ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೊರೆ ಹೋದರು.‌ ಮತ್ತೆ ದೂರುದಾರ ಸಂತ್ರಸ್ತೆಯ ಪರವಾಗಿ ಬಾಲನ್ ವಾದ ಮಂಡಿಸಿದರು.  ಹಲವು ಸುಧೀರ್ಘ ಅರ್ಜಿಗಳನ್ನು ಸಲ್ಲಿಸಲಾಯಿತು. ನಾನು ಬಾಲನ್ ಜೊತೆ ನಿತ್ಯ ಹೈಕೋರ್ಟ್ ಗೆ ಹೋಗಿ ಫಾಲೋಅಪ್ ಮಾಡುತ್ತಿದ್ದೆವು. ಸಂತ್ರಸ್ತ ಬಾಲಕಿಯ ತಾಯಿಯ ಅನುಪಸ್ಥಿತಿಯಲ್ಲಿ ಸಂತ್ರಸ್ತ ಬಾಲಕಿಗೆ ನ್ಯಾಯ ದೊರಕಿಸಿಕೊಡಲು ಯತ್ನ ನಡೆಯಿತು.  ನ್ಯಾಯಾಲಯವು ಸಿಐಡಿ ಮತ್ತು ಟ್ರಯಲ್ ಕೋರ್ಟ್ ನ ಕ್ರಮವನ್ನು ಎತ್ತಿ ಹಿಡಿದಿದೆ. ಬಿ ಎಸ್ ಯಡಿಯೂರಪ್ಪ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪೋಕ್ಸೋ ಕೇಸ್ ವಿಚಾರಣೆ ಎದುರಿಸಬೇಕಿದೆ.‌ ಈಗ ಬಿ ಎಸ್ ಯಡಿಯೂರಪ್ಪ  ಸುಪ್ರಿಂ ಕೋರ್ಟ್​ ನಲ್ಲಿ ಅರ್ಜಿ ಹಾಕಿದ್ದಾರೆ. ಯಡಿಯೂರಪ್ಪರ ಪೋಕ್ಸೋ ಕೇಸ್ ಬೆನ್ನು ಹತ್ತಬೇಕಾದ ಸರ್ಕಾರ ಬಿಎಸ್​ವೈ ಬೆನ್ನಿಗೆ ನಿಂತಿದೆ. ಎಸ್ ಬಾಲನ್ಅವರು ನಮ್ಮ ತಂಡದ ಪರವಾಗಿ, ಸಂತ್ರಸ್ತ ಬಾಲಕಿಯ ವಕಾಲತ್ತನ್ನು ಸುಪ್ರಿಂಕೋರ್ಟಿಗೂ ಸಲ್ಲಿಕೆಮಾಡಿದ್ದಾರೆ ! ಈ ಪ್ರಕರಣದಲ್ಲಿ  ಕೋಮುವಾದದ ವಿರುದ್ಧ ಹೋರಾಡುವ ಸಿದ್ದರಾಮಯ್ಯ ಎಲ್ಲಿದ್ದಾರೆ ಹುಡುಕಿ !

    ‘ರಾಮ ಮಂದಿರದ ಬದಲಿಗೆ ಬಾಬರಿ ಮಸೀದಿಯನ್ನು ತರಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದರು’ ಎಂಬ ಫೇಕ್ ನ್ಯೂಸ್ ಅನ್ನು ದ್ವೇಷದ ಹಂಚುವ ಭಾಗವಾಗಿ ಬಲಪಂಥೀಯ ಯೂಟ್ಯೂಬರ್ ಅಜಿತ್ ಬಾರ್ತಿ ಪ್ರಸಾರ ಮಾಡಿದ್ದರು. ಬಿಹಾರದ ಬೆಗುಸರಾಯ್ ನಿವಾಸಿಯಾಗಿರುವ ಯೂಟ್ಯೂಬರ್ ವಿರುದ್ದ “ಧಾರ್ಮಿಕ ಗುಂಪುಗಳನ್ನು ಎತ್ತಿಕಟ್ಟಿ ಗಲಭೆಗೆ ಪ್ರಚೋದನೆ” ಎಂಬ ದೂರನ್ನು ಕೆಪಿಸಿಸಿ ಕಾನೂನು ಘಟಕವು ಹೈಗ್ರೌಂಡ್ ಪೊಲೀಸ್ ಠಾಣೆಗೆ ನೀಡಿತ್ತು. ಹೈಗ್ರೌಂಡ್ ಪೊಲೀಸರು ಐಪಿಸಿ 153A, 502(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ  ನೀಡಿದೆ. ರಾಹುಲ್ ಗಾಂಧಿ ಬಗ್ಗೆಯೇ ಕೋಮು ಪ್ರಚೋದನೆ ಮಾಡಿದರೂ ಸರ್ಕಾರ ಕೈಕೊಟ್ಟಿ ಕುಳಿತಿದೆ !

    ಇದೊಂದು ಆಸಕ್ತಿಕರ ಪ್ರಕರಣ. ‘ಬ್ಯಾರಿ ಮುಸ್ಲೀಮರು ಕಂತ್ರಿಗಳು’ ಎಂದು ಮುಸ್ಲಿಂ ಸಮುದಾಯವನ್ನು ನಿಂದಿಸಿದ್ದ ಶಾಸಕ ಹರೀಶ್​ ಪೂಂಜಾ ವಿರುದ್ಧ ಉಪ್ಪಿನಂಗಡಿ ಪೊಲೀಸ್  ಠಾಣೆಯಲ್ಲಿ ದೂರು ದಾಖಲಾಗಿತ್ತು. ನೂರು ಎಫ್‌ಐಆರ್‌ ದಾಖಲಿಸಲಿ. ಅದಕ್ಕೆ ನಾನು ಹೆದರುವುದಿಲ್ಲವೆಂದು ಪೂಂಜಾ ಹೇಳಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ ಎಫ್​ಐಆರ್​ಗೆ ಹೈಕೋರ್ಟ್‌ 22  ಮೇ 2025 ತಡೆಯಾಜ್ಞೆ ನೀಡಿದೆ. ನಾವು ಒಂದು ತಂಡವಾಗಿ ವಕೀಲ ಎಸ್ ಬಾಲನ್ ಅವರನ್ನು ನಿಯೋಜಿಸಿ, ದೂರುದಾರರ  ಪರವಾಗಿ ‘ತಡೆಯಾಜ್ಞೆ ತೆರವು ಕೋರಿ ಅರ್ಜಿ’ ಸಲ್ಲಿಸಿದೆವು. ರಾಜ್ಯಸರ್ಕಾರ ಈ ಅರ್ಜಿ ಸಲ್ಲಿಸುವ ಬದ್ಧತೆ ತೋರಿಸಬೇಕಿತ್ತು. ರಾಜ್ಯ ಸರ್ಕಾರ ಅಂತಹ ಬದ್ಧತೆ ತೋರಲಿಲ್ಲ. ಹಾಗಾಗಿ ನಾವು ಈ ಪ್ರಯತ್ನ ಮಾಡಿದೆವು. ಆದರೆ ತಡೆಯಾಜ್ಞೆತೆರವು ಅರ್ಜಿ ವಿಚಾರಣೆಗೇ ಬಾರದಂತೆ ಸಿದ್ದರಾಮಯ್ಯ ಸರ್ಕಾರವು ನ್ಯಾಯಾಲಯದಲ್ಲಿ ಸಮಯಾವಕಾಶ ಕೇಳಿತು. ಹರೀಶ್ ಪೂಂಜಾ ಮತ್ತು ಸರ್ಕಾರ ಜತೆಯಾಗಿಯೇ ಸಮಯ ಕೇಳಿ ತಡೆಯಾಜ್ಞೆಯನ್ನು ಮುಂದುವರೆಸುತ್ತಿತ್ತು. ಹೈಕೋರ್ಟ್​​ ಇದನ್ನು ಹೀಗೇ ನಮೂದಿಸಿದೆ : ‘Learned High Court Government Pleader for respondent No.1 as well as learned counsel for the petitioner jointly seek time’ ಅಂತಿಮವಾಗಿ ಎಸ್ ಬಾಲನ್ ಅವರು ‘ಆರೋಪಿ ಹರೀಶ್​ ಪೂಂಜಾ ಈ ತಡೆಯಾಜ್ಞೆಯ ಲಾಭ ಪಡೆದು ಪದೇಪದೇ ಅಪರಾಧ ಮಾಡುತ್ತಿದ್ದಾರೆ. ದ್ವೇಷ ಭಾಷಣ ನಿರಂತರ ಮಾಡುತ್ತಿದ್ದಾರೆ’ಎಂದುಹೈಕೋರ್ಟ್​​ನ ಗಮನ ಸೆಳೆದರು.(Learned counsel for respondent No.2 submits that taking advantage of the interim order the petitioner is continuing to indulge in illegal activities including the alleged offences) ಇದೆಲ್ಲವನ್ನೂ ಸರ್ಕಾರ ಮಾಡಬೇಕಿತ್ತು. ಹೈಕೋರ್ಟ್​ನಲ್ಲಿ ಸರ್ಕಾರ ಸುಮ್ಮನಿತ್ತು. ಬಾಲನ್ ವಾದ ಆಲಿಸಿದ ನ್ಯಾಯಾಧೀಶರು ‘ಹರೀಶ್​ಪೂಂಜಾ ಮತ್ತೆ ದ್ವೇಷ ಭಾಷಣದ ಅಪರಾಧ  ಮಾಡುವಂತಿಲ್ಲ’ ಎಂದು (In the meanwhile, interim order granted earlier is extended till the next date of hearing subject to condition that the petitioner shall not repeat the alleged offences) ಅದೇಶ ಹೊರಡಿಸಿದರು. ಅಲ್ಲಿಂದೀಚಿಗೆ   ಹರೀಶ್​ ಪೂಂಜಾ ದ್ವೇಷ  ಭಾಷಣ ನಿಂತಿದೆ.

    ಕೊಲೆಯಾದ ರೌಡಿಶೀಟರ್ ಸುಹಾಸ್ ಶೆಟ್ಟಿಗೆ ಕಾವಳಪಡೂರು ಗ್ರಾಮದ ಮದ್ವ ಪ್ಯಾಲೇಸ್ ಕಲ್ಯಾಣ ಮಂಟಪದ ಹಾಲ್ ನಲ್ಲಿ ಮೇ 12ರಂದು ನಡೆದ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಪ್ರಭಾಕರ್ ಭಟ್ ಸಮಾಜದ ಸ್ವಾಸ್ಥ್ಯ ಕೆಡುವಂತೆ, ಮತೀಯ ಗುಂಪುಗಳ ನಡುವೆ ವೈಮನಸ್ಸು ಉಂಟು ಮಾಡುವಂತೆ, ಪ್ರಚೋದನಾತ್ಮಕವಾಗಿ ಭಾಷಣ ಮಾಡಿದ್ದರು. ಈ ಪ್ರಕರಣಕ್ಕೆ  2 ಜೂನ್ 2025 ರಂದುತಡೆಯಾಜ್ಞೆ ನೀಡಲಾಗಿದೆ. ಮೇ.25ರಂದು ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣವನ್ನು NIA ಗೆ ವಹಿಸಬೇಕು ಎಂದು ಸಂಘಪರಿವಾರದ ಸಂಘಟನೆಗಳು ಬಜ್ಪೆಯಲ್ಲಿ ಆಯೋಜಿಸಿದ್ದ ʼಬಜ್ಪೆ ಚಲೋʼ ಕಾರ್ಯಕ್ರಮದ ವೇಳೆ ಶೀಕಾಂತ್‌ ಶೆಟ್ಟಿ ಪ್ರಚೋದನಾಕಾರಿಯಾಗಿ ಮಾತನಾಡಿದ್ದರು. ಈ ಪ್ರಕರಣಕ್ಕೆ 2 ಜೂನ್ 2025 ತಡೆಯಾಜ್ಞೆ ನೀಡಲಾಗಿದೆ. ವಿಶ್ವ ಹಿಂದೂ ಪರಿಷತ್‌ ನಾಯಕ ಶರಣ್‌ ಕುಮಾರ್‌ ಅಲಿಯಾಸ್‌ ಶರಣ್‌ ಪಂಪ್‌ವೆಲ್‌ ಉಡುಪಿಯಲ್ಲಿ ಮಾಡಿದ್ದ ದ್ವೇಷ ಭಾಷಣ ಪ್ರಕರಣದ ಎಫ್​ಐಆರ್​ಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ| ಇವ್ಯಾವುದನ್ನೂ ತೆರವುಗೊಳಿಸುವ ಪ್ರಯತ್ನ ಸಿದ್ದರಾಮಯ್ಯ ಸರ್ಕಾರ ಮಾಡಲಿಲ್ಲ !

    2025 ಎಪ್ರಿಲ್ 27 ರಂದು ಕೇರಳದ ವಯನಾಡ್ ನಿವಾಸಿ ಅಶ್ರಫ್ ಎಂಬ ಮಾನಸಿಕ ಅಸ್ವಸ್ಥನನ್ನು ಕುಡುಪು ಭಟ್ರಕಲ್ಲರ್ಟಿ ರಸ್ತೆಯಲ್ಲಿ ಗುಂಪು ಹತ್ಯೆ ಮಾಡಲಾಗಿತ್ತು. ಮುಸ್ಲೀಮನೆಂಬ ಏಕೈಕ ಕಾರಣಕ್ಕೆ ಕೊಲೆಯಾಗಿದ್ದ ಅಮಾಯಕ ಮಾನಸಿಕ ಅಸ್ವಸ್ಥನನ್ನು ಕೊಲೆ ಮಾಡಿ ಹೆಣವನ್ನು ಮೈದಾನದಲ್ಲೇ ಇಟ್ಟು ಆಟವಾಡಿಕೊಂಡಿದ್ದ ಕ್ರೂರಿ ಹಂತಕರನ್ನು ಜನರ ಪ್ರತಿಭಟನೆಯ ಬಳಿಕ ಬಂಧಿಸಲಾಯಿತು. 21 ಮಂದಿಯನ್ನು ಬಂಧಿಸಲಾಗಿದ್ದರೂ, ಆರೋಪಿಗಳಿಗೆ ಮೇ 31 ರಿಂದ ಜಾಮೀನು ಮಂಜೂರಾಯಿತು. ಈ ಬಗ್ಗೆ ರಾಜ್ಯ ಸರ್ಕಾರ ಕನಿಷ್ಠ ಮೇಲ್ಮನವಿಯನ್ನೂ ಸಲ್ಲಿಸಲಿಲ್ಲ. ಜಾಮೀನು ಸಿಗದಂತೆ ಪ್ರಕರಣ, ಸೆಕ್ಷನ್ ದಾಖಲಿಸುವ ಪ್ರಯತ್ನವನ್ನೂ ರಾಜ್ಯ ಸರ್ಕಾರ ಮಾಡಲಿಲ್ಲ.

    ಚಿಕ್ಕಮಗಳೂರಿನ ಬಾಬಬುಡನ್  ಗಿರಿ ದರ್ಗಾ ವಿಚಾರದಲ್ಲೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೃದು ಹಿಂದುತ್ವ ಪ್ರದರ್ಶಿಸಿತು. ಸಂಘ ಪರಿವಾರವು ಬಾಬಾಬುಡನ್ ದರ್ಗಾ ಮೇಲಿನ ಹಕ್ಕು ಸ್ಥಾಪನೆಗೆ ಪೂರಕವಾಗಿಯೇ ಸಿದ್ದರಾಮಯ್ಯ ಸರ್ಕಾರ ಸುಪ್ರಿಂ  ಕೋರ್ಟಿಗೆ ಅಫಿದಾವಿತ್ ಸಲ್ಲಿಸಿತು. ಈ ಹಿಂದೆ ಬಿಜೆಪಿ ಸರ್ಕಾರವು ಸಂಘಪರಿವಾರದ ನಿರ್ದೇಶನದಂತೆ ಸಲ್ಲಿಸಿದ್ದ ಅಫಿದಾವಿತ್ ಅನ್ನೇ ಬೇರೊಂದು ಮಾದರಿಯಲ್ಲಿ ಕಾಂಗ್ರೆಸ್ ಸರ್ಕಾರ ಸಲ್ಲಿಕೆ ಮಾಡಿದೆ. 1992ರಿಂದ ಹಿಂದುತ್ವ ಸಂಘಟನೆಗಳು ಬಾಬಾಬುಡನ್ ದರ್ಗಾವನ್ನು ದತ್ತಾತ್ರೆಯ ದೇವಸ್ಥಾನ ಎಂದು ಘೋಷಿಸಿ ಬ್ರಾಹ್ಮಣ ಅರ್ಚಕರ ನೇಮಕಕ್ಕೆ ಒತ್ತಾಯಿಸಿ ಪ್ರತಿಭಟನೆ, ಕೋಮು ಗಲಭೆ ನಡೆಸಿದವು. 2007ರಲ್ಲಿ ಕರ್ನಾಟಕ ಹೈಕೋರ್ಟ್ ಇದಕ್ಕೆ ಪುಷ್ಠಿ ನೀಡುವಂತೆ, ‘ದತ್ತಾತ್ರೇಯ ಕುರಿತ ಹಿಂದುತ್ವ ಸಂಘಟನೆಗಳ ಬೇಡಿಕೆಯ ಕುರಿತಾದ ಸತ್ಯಾಸತ್ಯತೆಯನ್ನು ಪರಿಶೀಲಿಸಿ ವರದಿ ನೀಡುವುದು’ ಎಂದು ಧಾರ್ಮಿಕ ದತ್ತಿ ಆಯುಕ್ತರಿಗೆ ಸೂಚಿಸಿತು. ಧಾರ್ಮಿಕ ದತ್ತಿ ಇಲಾಖೆಯು, ‘ಬಾಬಬುಡನ್ ದರ್ಗಾ ಮೂಲತಃ ದತ್ತಾತ್ರೇಯ ದೇವಸ್ಥಾನವಾಗಿದ್ದು, 1780ರ ಹೈದರ್ ಅಲಿ ಕಾಲದಲ್ಲಿ ದರ್ಗಾವಾಗಿ ಪರಿವರ್ತಿತವಾಯಿತು’ ಎಂದು ಇತಿಹಾಸದ ಉಲ್ಲೇಖಗಳು ಇಲ್ಲದೆಯೇ ವರದಿ ನೀಡಿದ್ದಲ್ಲದೆ, ದರ್ಗಾದಲ್ಲಿ ಹಿಂದೂ ಅರ್ಚಕರನ್ನು ನೇಮಿಸಿ, ಹಿಂದೂ ಆಗಮ ವಿಧಾನಗಳ ಪೂಜೆಗೆ ಅವಕಾಶ ನೀಡಬೇಕೆಂದು ಶಿಫಾರಸು ಮಾಡಲಾಯಿತು. ಈ ಶಿಫಾರಸ್ಸನ್ನು ಹೈಕೋರ್ಟ್​ ಮತ್ತು ಸುಪ್ರಿಂ ಕೋರ್ಟ್​ನಲ್ಲಿ ಶಾಖಾದ್ರಿ ಸಂಘಟನೆಗಳು ಪ್ರಶ್ನಿಸಿದವು. ಸಿದ್ದರಾಮಯ್ಯನೇತೃತ್ವದ ಕಾಂಗ್ರೆಸ್ ಸರ್ಕಾರವು 2025 ರಲ್ಲಿ ಸುಪ್ರಿಂ ಕೋರ್ಟಿಗೆ ‘ ಸರ್ಕಾರವು ದರ್ಗಾ ನಿರ್ವಹಣೆಗೆ ಸಮಾನ ಸಂಖ್ಯೆಯ ಹಿಂದೂ ಮತ್ತು ಮುಸ್ಲಿಂ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸುವುದು, ಜೊತೆಗೆ, ಮುಜಾವರ್ ಜೊತೆಗೆ ಒಬ್ಬ ಹಿಂದೂ ಅರ್ಚಕನನ್ನೂ ನೇಮಿಸುವುದು’ ಎಂದು ಅಫಿದಾವಿತ್ ಸಲ್ಲಿಸಿದೆ. ಇದು ಕಾಂಗ್ರೆಸ್​ನ ಮೃದುಹಿಂದುತ್ವವಲ್ಲದೇ ಇನ್ನೇನೂ ಅಲ್ಲ.

    2025 ಮೇ 01 ರೌಡಿ ಶೀಟರ್ ಸುಹಾಸ್​ ಶೆಟ್ಟಿಯ ಹತ್ಯೆ ಮಾಡಲಾಯಿತು.  ಒರ್ವ ದಲಿತ ಯುವಕನ ಹತ್ಯೆ ಸೇರಿದಂತೆ ಹಲವು ಹಿಂದೂ ರೌಡಿಗಳ ಕೊಲೆ, ದರೋಡೆಯ ಪ್ರಮುಖ ಆರೋಪಿಯಾಗಿದ್ದ ರೌಡಿ ಶೀಟರ್ ಸುಹಾಸ್ ಶೆಟ್ಟಿ ಇತ್ತಿಚೆಗೆ ಅಮಾಯಕ ಮುಸ್ಲಿಂ ಯುವಕನನ್ನು ಕೊಲೆ ಮಾಡುವ ಮೂಲಕ ಹಿಂದುತ್ವವಾದಿ ಪದವಿಗೆ ಭಡ್ತಿ ಹೊಂದಿದ್ದ. ಇಂತಹ ರೌಡಿ ಶೀಟರ್ ಸುಹಾಸ್​ ಶೆಟ್ಟಿಯನ್ನು  ಮಂಗಳೂರಿನ ಬಜಪೆ ಕಿನ್ನಿ ಪದವು ಎಂಬಲ್ಲಿ ದುಷ್ಕರ್ಮಿಗಳು ತಲವಾರಿನಿಂದ ಕೊಚ್ಚಿ ಹತ್ಯೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆ ಬಳಿಕ ಕೇಂದ್ರ ಗೃಹ ಸಚಿವಾಲಯವು ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್​ಐಎಗೆ ವಹಿಸಿದೆ. ಈ ರೀತಿ ರಾಜ್ಯದ ಲಾ ಅ್ಯಂಡ್ ಆರ್ಡರ್ ವಿಷಯದಲ್ಲಿ ಕೇಂದ್ರದ ಗೃಹ ಇಲಾಖೆ ಮಧ್ಯ ಪ್ರವೇಶಿಸುವುದನ್ನು ಸಿದ್ದರಾಮಯ್ಯ ಸರ್ಕಾರ ವಿರೋಧಿಸಲಿಲ್ಲ. ಅಮಾಯಕ ಅಶ್ರಫ್​ ಕೊಲೆ ಆರೋಪಿಗಳಿಗೆ ತಿಂಗಳೊಳಗೆ ಜಾಮೀನು ಸಿಕ್ಕಿದರೆ ರೌಡಿಶೀಟರ್​ ಕೊಲೆ ಆರೋಪಿಗಳಿಗೆ ಜಾಮೀನು ಸಿಗುತ್ತಿಲ್ಲ !

    ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಇರಾಕೋಡಿ ಎಂಬಲ್ಲಿ 2025  ಮೇ 27ರಂದು ಕೊಳ್ತಮಜಲು ಅಬ್ದುಲ್‌ ರಹೀಂ ಹತ್ಯೆ ನಡೆಯಿತು.ಈ ಕೊಲೆ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಭಜರಂಗದಳದ ಭರತ್ ಕುಮ್ಡೇಲ್ ಸೇರಿ ಇತರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಈ ಮಧ್ಯೆ ಅಮಾಯಕ ರಹೀಂ ಕೊಲೆ ಭಜರಂಗದಳದ ಸಂಘಟಿತ ಕೃತ್ಯವಾದ್ದರಿಂದ ಕೋಕಾ‌ ಕಾಯ್ದೆ ದಾಖಲಿಸಬೇಕು ಎಂದು ಪ್ರಗತಿಪರ ಮನಸ್ಸುಗಳು ಆಗ್ರಹಿಸಿದ್ದವು. ಈ ಹಿನ್ನಲೆಯಲ್ಲಿ ಕೋಕಾ ಕಾಯ್ದೆ ದಾಖಲಿಸುವುದಾಗಿ ಜಿಲ್ಲಾ ಪೊಲೀಸರು ಪ್ರಕಟಿಸಿದರು. ‘ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಹಲವು ವರ್ಷಗಳಿಂದ ಕೊಲೆ, ಕೊಲೆ ಯತ್ನ, ಪ್ರಚೋದನಕಾರಿ ಭಾಷಣಗಳು ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದು, ಸಮಾಜದಲ್ಲಿ ಅಶಾಂತಿ ಮತ್ತು ಕೋಮು ಸಂಘರ್ಷಕ್ಕೆ ಕಾರಣರಾಗಿದ್ದಾರೆ. ಹೀಗಾಗಿ, ಅವರ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ-2000 (THE KARNATAKA CONTROL OF ORGANISED CRIME ACT- 2000) ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ’ ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು. ಆದರೆ ಸಮಯದ ವ್ಯಾಪ್ತಿಯನ್ನುಮೀರಿ ಕೋಕಾ ಕಾಯ್ದೆ ಅಳವಡಿಸಿದ್ದರಿಂದ ಮೈಸೂರಿನ ವಿಶೇಷ ನ್ಯಾಯಾಲಯವು ಕೋಕಾವನ್ನು ರದ್ದುಗೊಳಿಸಿತ್ತು. ಇದು ಕೋಕಾ ಹಾಕಿದಂತೆಯೂ ಆಗಬೇಕು, ಹಿಂದುತ್ವವಾದಿಗಳಿಗೆ ಕೋಕಾ ಕಾಯ್ದೆಯಡಿ  ಶಿಕ್ಷೆಯೂ ಆಗಬಾರದು  ಎಂಬ ನಿಲುವಿನಂತೆ ಕಾಣುತ್ತದೆ. ಒಂದೆಡೆ ಹಿಂದುತ್ವವಾದಿ ರೌಡಿಶೀಟರ್ ಕೊಲೆ ಪ್ರಕರಣವನ್ನು ಎನ್ಐಎ ತನಿಖೆ ನಡೆಸುತ್ತಿದ್ದರೆ, ಇನ್ನೊಂದೆಡೆ ಅಮಾಯಕ ಮುಸ್ಲಿಂ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೋಕಾ ಹಾಕುವ ಅವಕಾಶವನ್ನೂ ಸರ್ಕಾರದ ಬೇಜವಾಬ್ದಾರಿಯಿಂದ ಕಳೆದುಕೊಂಡಿತ್ತು.

    2025 ಅಕ್ಟೋಬರ್ 22 ರಂದು ಮುಂಜಾನೆ ‘ಅಕ್ರಮ ಗೋಸಾಗಾಟಗಾರರು’ ಎಂಬ ಕೇರಳದ ಕಾಸರಗೋಡು ಮೂಲದ ಅಬ್ದುಲ್ಲಾ ಎಂಬವರ ಮೇಲೆ ಪುತ್ತೂರು ಪೊಲೀಸರು ಗುಂಡು ಹಾರಿಸುತ್ತಾರೆ. ಆರೋಪಿಗಳು ಓಡಿ ಹೋದಾಗ ಗುಂಡು ಹಾರಿಸಲಾಯಿತು ಎಂದು ಪೊಲೀಸರು ಹೇಳಿದರು. ‘ಈಗ ಕಾಲಿಗೆ ಗುಂಡು ಹಾಕಲಾಗಿದೆ. ಇದೇ ರೀತಿ ಗೋಸಾಗಾಟ ನಡೆದರೆ ದೇಹದ ಬೇರೆ ಭಾಗಗಳಿಗೂ ಗುಂಡು ಬೀಳುತ್ತದೆ’ ಎಂದು ಪುತ್ತೂರಿನ ಕಾಂಗ್ರೆಸ್  ಶಾಸಕ ಅಶೋಕ್ ರೈ ಹೇಳಿಕೆ ಕೊಟ್ಟರು. ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಬಹುದು ಎಂಬ ಕಾರಣಕ್ಕಾಗಿ ಪೊಲೀಸರು ಗುಂಡು ಹಾರಿಸುವಂತಿಲ್ಲ. ಆತ್ಮರಕ್ಷಣೆಗಾಗಿ ಮಾತ್ರ ಗುಂಡು ಹಾರಿಸಬಹುದು. ಅಕ್ರಮ ಗೋಸಾಗಾಟ ಅಥವಾ ಗೋ ಕಳ್ಳತನ ಎಂಬುದು ಆರೋಪಿಗಳು ತಪ್ಪಿಸಿಕೊಂಡಾಗ ಗುಂಡು ಹಾರಿಸುವಂತಹ ಗಂಭೀರ ಪ್ರಕರಣವಲ್ಲ. ಹಾಗಾಗಿ ಪೊಲೀಸರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಬೇಕಿತ್ತು. ಈವರೆಗೂ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಆ ಬಳಿಕ ನಾವುಗಳು ಗುಂಡೇಟು ಬಿದ್ದ ಅಬ್ದುಲ್ಲರ ಕುಟುಂಬದವರನ್ನು ಮಾತನಾಡಿಸಿದಾಗ, ದನ ಸಾಗಾಟಕ್ಕೆ ಇರುವ ಅನುಮತಿ, ದನ ಖರೀಧಿಯ ರಶೀದಿಯನ್ನು ತೋರಿಸಿದ್ದರು. ಇನ್ನೂ ಅಬ್ದುಲ್ಲರಿಗೆ ನ್ಯಾಯ ಸಿಕ್ಕಿಲ್ಲ.

    ಪೊಲೀಸರ ‘ಗುಂಡೇಟು ಕಾರ್ಯಾಚರಣೆ’ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಪೊಲೀಸರು ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ಬೆನ್ನಟ್ಟಿ ನಿಲ್ಲಿಸಿ, ದನಗಳನ್ನು ವಾಹನದಿಂದ ಇಳಿಸುವಾಗ ಸ್ಥಳದಲ್ಲಿ ಹಿಂದುತ್ವ ನಾಯಕ ಅರುಣ್ ಪುತ್ತಿಲರವರಿದ್ದರು. ದನವನ್ನು ವಾಹನದಿಂದ ಇಳಿಸುವ ಬಗ್ಗೆ ಅರುಣ್ ಪುತ್ತಿಲರವರು ಪೊಲೀಸ್ ಕಾನ್ಸ್​ಟೇಬಲ್​ಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು. ಹಾಗಾಗಿ ಹಿಂದುತ್ವವಾದಿಗಳ ಮಾರಲ್ ಪೊಲೀಸಿಂಗ್​ ಸ್ವರೂಪ ಬದಲಾಗಿದೆಯೇ ಎನ್ನುವ ಅನುಮಾನ ‘ಪುತ್ತೂರು ದನ ಸಾಗಾಟಗಾರರ ಮೇಲೆ ಫೈರಿಂಗ್​’ ಪ್ರಕರಣ ಅನುಮಾನ ಮೂಡಿಸಿತು. ಪೊಲೀಸ್ ಕಾರ್ಯಾಚರಣೆಯ ಮಧ್ಯೆ ಅರುಣ್ ಪುತ್ತಿಲ ಕಾಣಿಸಿಕೊಂಡಿದ್ದು ಹೇಗೆ ? ಇದು ಪೊಲೀಸ್ ಮತ್ತು ಹಿಂದುತ್ವದ ಜಂಟಿ ಕಾರ್ಯಾಚರಣೆಯೇ ? ಪೊಲೀಸರು ಆರೋಪಿಗಳಿಗೆ ಗುಂಡು ಹಾಕಿದ ಕೆಲವೇ ಕ್ಷಣಗಳಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ‘ಗೋಪೂಜೆಯಂದೇ ಗೋಹಂತಕರಿಗೆ ಗುಂಡೇಟು ನಡೆಸಿದ ಪೊಲೀಸ್ ಅಧಿಕಾರಿಗಳಿಗೆ ಅಭಿನಂದನೆಗಳು’ ಎಂದು ಪೋಸ್ಟ್ ಮಾಡಿದ್ದಲ್ಲದೇ, ತನ್ನ ಫೋಟೋದ ಜತೆ ಎಸ್ಪಿ ಅರುಣ್ ಕೆ, ಡಿವೈಎಸ್ಪಿ ಅರುಣ್ ನಾಗೇಗೌಡ, ಠಾಣಾಧಿಕಾರಿ ಜಂಬೂರಾಜ್ ಮಹಾಜನ್ ಫೋಟೋ ಹಾಕಿ ಅಭಿನಂದನೆಯ ಪೋಸ್ಟರ್ ತಯಾರಿಸಿ ಹಾಕಿಕೊಂಡಿದ್ದರು. ಪೋಸ್ಟರ್ ನಲ್ಲಿಯೂ ‘ಗೋಪೂಜೆಯಂದೇ ಗೋಹಂತಕರಿಗೆ ಗುಂಡೇಟು ನಡೆಸಿದ ಪೊಲೀಸ್ ಅಧಿಕಾರಿಗಳಿಗೆ ಅಭಿನಂದನೆಗಳು’ ಎಂದು ಫೋಟೋದ ಕೆಳಗೆ ಬರೆಯಲಾಗಿದೆ. ಅರುಣ್ ಕುಮಾರ್ ಪುತ್ತಿಲ ಅವರ ಈ ನಡೆಯು  ‘ಪೊಲೀಸರ ಕಾನೂನು ಕ್ರಮವನ್ನೇ ಒಂದು ಧಾರ್ಮಿಕ ಪ್ರತೀಕಾರ ಅಥವಾ ಕೋಮು ಆಕ್ರೋಶದ ಕ್ರಿಯೆಯಾಗಿ ಚಿತ್ರಿಸುವ ಪ್ರಯತ್ನ’ವಾಗಿತ್ತು‌. ಇದು ಸಂವಿಧಾನದ ಮೂಲಮೌಲ್ಯಗಳ ವಿರುದ್ಧದ ನಿಲುವು ಆಗಿದೆ. ಕಾನೂನಿನ ದೃಷ್ಟಿಯಿಂದಲೂ ಅರುಣ್ ಕುಮಾರ್ ಪುತ್ತಿಲ ಮಾಡಿರುವುದು ಅಪರಾಧವಾಗಿದೆ. (Bharatiya Nyaya Sanhita (BNS) ಸೆಕ್ಷನ್ 197: Provocation with intent to cause riot) ಯಾರು ಜನಾಂಗ, ಧರ್ಮ, ಜಾತಿ, ಅಥವಾ ಭಾಷೆಯ ಆಧಾರದ ಮೇಲೆ ದ್ವೇಷ ಅಥವಾ ಅಸಮಾಧಾನ ಉಂಟುಮಾಡುವ ಉದ್ದೇಶದಿಂದ ಹೇಳಿಕೆ ನೀಡುತ್ತಾರೆ, ಹಾಗಾಗಿ ಅವರು ಶಿಕ್ಷಾರ್ಹರು. ಇಷ್ಟಾದರೂ ಸರ್ಕಾರ ಕನಿಷ್ಠ ಅರುಣ್ ಪುತ್ತಿಲ ವಿರುದ್ಧವೂ ಕ್ರಮ ತೆಗೆದುಕೊಂಡಿಲ್ಲ.

    ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಅಕ್ರಮ ದನ ಸಾಗಾಟ ಮತ್ತು ದನ ಹತ್ಯೆಯ ಕುರಿತು ಮಸೀದಿಗಳಿಗೆ ಭೇಟಿ ನೀಡಿ ಕರ್ನಾಟಕ ಗೋವಧೆ ತಡೆ ಮತ್ತು ದನಗಳ ಸಂರಕ್ಷಣಾ ಕಾಯ್ದೆ’ ಜಾಗೃತಿ ಎಂಬ ಕಾರ್ಯಕ್ರಮದ ಅಸಂವಿಧಾನಿಕ, ತಾರತಮ್ಯದ ಕೃತ್ಯವನ್ನು ಸಿದ್ದರಾಮಯ್ಯರ ‘ಸಾವಿರದ ಸರ್ಕಾರ’ದಲ್ಲಿ ಮಾಡಿದರು. ಕಾಯ್ದೆಯೊಂದನ್ನು ಮುಸ್ಲಿಂ ಸಮುದಾಯಕ್ಕೆ ಸೀಮಿತಗೊಳಿಸಿ ಸಮುದಾಯವನ್ನು ಅವಮಾನಿಸುವ, ಧಾರ್ಮಿಕ ಕೇಂದ್ರವನ್ನು ಕ್ರಿಮಿನಲೈಸ್ ಮಾಡುವ ಕೆಲಸ ಸರ್ಕಾರದಿಂದಲೇ ನಡೆಯಿತು.  ರ್ಮಸ್ಥಳ ಪೊಲೀಸರು ಕೊಕ್ಕಡ ಮಸೀದಿಗೆ ಭೇಟಿ ನೀಡಿ ಜನಜಾಗೃತಿ ಹೆಸರಿನಲ್ಲಿ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಸುಳ್ಯ ವ್ಯಾಪ್ತಿಯ ಸುಳ್ಯ ಕೇಂದ್ರ ಜುಮ್ಮಾ ಮಸೀದಿ,  ಮೊಗರ್ಪಣೆ ಜುಮಾ ಮಸೀದಿ, ದುಗಲಡ್ಕ ಮಸೀದಿ, ಸುಣ್ಣಮೂಲೆ, ಕುಂಭಕ್ಕೋಡು, ಅರಂತೋಡು ಮಸೀದಿಗಳಲ್ಲಿ ಪ್ರಾರ್ಥನೆಗೆ ಬಂದ ಜನರನ್ನು ನಿಲ್ಲಿಸಿ ‘ಕರ್ನಾಟಕ ಗೋ ವಧೆ ತಡೆ ಮತ್ತು ದನಗಳ ಸಂರಕ್ಷಣಾ ಕಾಯ್ದೆ’ಯನ್ನು ವಿವರಿಸಿದ್ದಾರೆ. ಕಾಯ್ದೆ ಉಲ್ಲಂಘಿಸಿದವರ ಮನೆಗಳನ್ನು ಜಪ್ತಿ ಮಾಡಲಾಗುವುದು ಎಂದು ಪೋಲೀಸರು ಮಸೀದಿಯಲ್ಲಿ ಬೆದರಿಸಿದ್ದಾರೆ. ಇದು ಕರ್ನಾಟಕ ಗೋ ವಧೆ ತಡೆ ಮತ್ತು ದನಗಳ ಸಂರಕ್ಷಣಾ ಕಾಯ್ದೆಯನ್ನು ಮುಸ್ಲೀಮರು ಮಾತ್ರ ಉಲ್ಲಂಘಿಸುತ್ತಾರೆ ಎಂಬ ಸಂದೇಶ ನೀಡುತ್ತದೆ. ಕಾಯ್ದೆಯೊಂದನ್ನು ಒಂದು ಸಮುದಾಯದವರು ಮಾತ್ರ ಉಲ್ಲಂಘಿಸುತ್ತಾರೆ ಎಂದು ಹೇಳುವುದು ‘ಸಮುದಾಯವನ್ನು ಕ್ರಿಮಿನಲೈಸ್’ ಮಾಡುವ ಕೃತ್ಯವಾಗುತ್ತದೆ. ಬ್ರಿಟೀಷರು ಆದಿವಾಸಿ, ಅಲೆಮಾರಿ ಸಮುದಾಯವನ್ನು ‘ಕ್ರಿಮಿನಲ್ ಟ್ರೈಬ್ಸ್’ ಎಂದು ಘೋಷಿಸಿದಂತೆ ದಕ್ಷಿಣ ಕನ್ನಡ ಪೊಲೀಸರು ಮುಸ್ಲಿಂ ಸಮುದಾಯವನ್ನು ‘ಕ್ರಿಮಿನಲ್ ಕಮ್ಯೂನಿಟಿ’ ಎಂದು ಘೋಷಿಸಿದಂತಾಯಿತು.

    ಧರ್ಮಸ್ಥಳ ಪೊಲೀಸರು 2025  ನವೆಂಬರ್ 02 ರಂದು ಮಹಮ್ಮದ್ ಸಿನಾನ್, ಇಬ್ರಾಹಿಂ ಖಲೀಲ್, ಜೊಹಾರ ಎಂಬವರ ವಿರುದ್ದ ಅಕ್ರಮ ದನ ಸಾಗಾಟದ ಎಫ್ಐಆರ್  ದಾಖಲಿಸಿದ್ದರು.  ಎಫ್ಐಆರ್ ಪ್ರಕಾರ ಮಹಮ್ಮದ್ ಸಿನಾನ್ ಮತ್ತು ಇಬ್ರಾಹಿಂ ಖಲೀಲ್ ಅವರು ದನದ ಸಾಗಾಟಗಾರರಾಗಿದ್ದರೆ, ಜೊಹಾರ ಅವರು ದನದ ಮಾರಾಟಗಾರರು.  ಆದರೆ ಪೊಲೀಸರು ಎಫ್ಐಆರ್ ನಲ್ಲಿ ಹೆಸರು ಇಲ್ಲದೇ ಇರುವ ಸಾರಮ್ಮ ಅವರಿಗೆ ಜಪ್ತಿ ನೋಟಿಸ್ ಜಾರಿ ಮಾಡಿ ಮನೆಯನ್ನು ಜಪ್ತಿ ಮಾಡಿದ್ದರು. ಎಫ್ಐಆರ್ ನಲ್ಲಿ ಜೊಹಾರ ಎಂಬ ಹೆಸರಿದೆ. ಜೊಹಾರ ಮತ್ತು ಸಾರಮ್ಮ ಒಂದೇ ವ್ಯಕ್ತಿಗಳೇ ಎಂಬ ಸ್ಪಷ್ಟತೆ ಇಲ್ಲ. ಸಾರಮ್ಮ ಮತ್ತು ಜೊಹಾರ ಒಂದೇ ಆಗಿದ್ದರೆ, ಎಫ್ಐಆರ್ ಪ್ರಕಾರ ಅಪರಾಧದಲ್ಲಿ ಜೊಹಾರ ಅವರ ಪಾತ್ರ ಏನೆಂದರೆ, ದನ ಸಾಗಾಟಗಾರರಿಗೆ ದನವನ್ನು ಮಾರಾಟ ಮಾಡಿರುವುದು.‌ ದನದ ಹತ್ಯೆ ಜೊಹಾರ ಅವರಿಗೆ ಸೇರಿದ ಸ್ಥಳದಲ್ಲಿ ನಡೆದಿರುವ ಬಗ್ಗೆ ಎಫ್ಐಆರ್ ನಲ್ಲಿ ಮಾಹಿತಿ ಇಲ್ಲ. ಸಾಗಾಟವಾದ ದನ ಜೊಹಾರ ಅವರ ಮನೆಗೆ ಸಾಗಾಟವಾಗುತ್ತಿದ್ದರೆ ಅದು ವಧೆಗೆ ಎಂದು ಊಹಿಸಬಹುದಿತ್ತು. ದನವನ್ನು ಸಾಗಾಟಗಾರರಿಗೆ ಮಾರಾಟ ಮಾಡುವುದೇ ಸ್ಥಳವನ್ನು ಜಪ್ತಿ ಮಾಡುವಂತಹ ಅಪರಾಧವಾದರೆ ಸಾವಿರಾರು ರೈತರ ಜಮೀನು ಮನೆಗಳನ್ನು ಜಪ್ತಿ ಮಾಡಬೇಕಾಗುತ್ತದೆ. ಕೊನೆಗೆ ಬಿ ಎಂ ಭಟ್, ಮುನೀರ್ ಕಾಟಿಪಳ್ಳ ನೇತೃತ್ವದ ಪ್ರಗತಿಪರರ ತಂಡ ಮಧ್ಯಪ್ರವೇಶ ಮಾಡಿ   ಜಪ್ತಿಗೊಂಡ ಮನೆಯನ್ನು ಬಿಡಿಸಿಕೊಟ್ಟಿತ್ತು. ಮನೆ, ಮನೆಯ ಆವರಣ ಎನ್ನುವುದು ಯಾವುದೇ ಒಬ್ಬ ಆರೋಪಿಗೆ/ವ್ಯಕ್ತಿಗೆ ಸೇರಿರುವುದಿಲ್ಲ. ಆರೋಪಿಗಳ, ಕೃತ್ಯಗಳ ಅರಿವೇ ಇಲ್ಲದ ಮಕ್ಕಳು, ಮೊಮ್ಮಕ್ಕಳು, ತಾಯಂದಿರು ಮನೆಯಲ್ಲಿ ಇರುತ್ತಾರೆ. ಅಂತವರನ್ನು ಏಕಾಏಕಿ ಮಾಹಿತಿಯನ್ನೂ ನೀಡದೇ ಮನೆಯಿಂದ ಹೊರಹಾಕುವುದು ಆರೋಪಿಗಳಲ್ಲದವರಿಗೂ ಶಿಕ್ಷೆ ನೀಡಿದಂತಾಗುತ್ತದೆ. ಪೊಲೀಸರು ಕಾನೂನನ್ನು ಈ ರೀತಿ ಈ ಸರ್ಕಾರದಲ್ಲಿ ಬಳಸಿದ್ದರು.

    ನಮ್ಮ ಸಕಾಲಿಕ ಮಧ್ಯಪ್ರವೇಶದಿಂದ ಜಪ್ತಿಕೊಂಡ ಅಮಾಯಕ ಸಾರಮ್ಮರ ಮನೆಯನ್ನು ಬಿಡಿಸಿಕೊಡಲಾಯಿತು. ಈ ರೀತಿ ಹಲವು ಮುಸ್ಲೀಮರ ಮನೆಗಳನ್ನು ದನದ ಕಾರಣಕ್ಕಾಗಿ ಜಪ್ತಿ ಮಾಡಲಾಗಿದೆ.  ವಿರೋಧ ಪಕ್ಷದಲ್ಲಿದ್ದಾಗ ಬಿಜೆಪಿ ಸರ್ಕಾರ ಜಾರಿಗೆ ತಂದ ಅಮಾನವೀಯ ಗೋ ಹತ್ಯೆ ನಿಷೇದ ಕಾಯ್ದೆಯನ್ನು ವಿರೋಧಿಸಿದ್ದ ಕಾಂಗ್ರೆಸ್, ಅವರ ಆಡಳಿತ  ಅವಧಿಯಲ್ಲಿ ಅದೇ ಕಾಯ್ದೆಯನ್ನು ಬಿಜೆಪಿಗಿಂತಲೂ ಉಗ್ರ ರೀತಿಯಲ್ಲಿ ಜಾರಿಗೆ ತರುತ್ತಿದೆ.

    ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿದ್ದ ಏಕೈಕ ವಧಾಗಾರವನ್ನು ರಿಪೇರಿಯ ನೆಪದಲ್ಲಿ ಉದ್ದೇಶಪೂರ್ವಕವಾಗಿ ಮುಚ್ಚಲಾಗಿದೆ. ಹಾಗಾಗಿ ಅಧಿಕೃತವಾಗಿ ಖರೀಧಿ ಮಾಡಿಕೊಂಡು ಬಂದ ಜಾನುವಾರುಗಳನ್ನು ಕಾನೂನುಬದ್ಧವಾಗಿ ಕಡಿಯುವ ಸ್ಥಳ ಇಲ್ಲವಾಗಿದೆ. ಆಡು/ಕುರಿಗಳನ್ನೂ ಶುಚಿಯಿಲ್ಲದ ಸ್ಥಳಗಳಲ್ಲಿ ಮಾಂಸವನ್ನಾಗಿ ಸಿದ್ದಪಡಿಸುವ ಸ್ಥಿತಿ ಇದೆ. ಸರ್ಕಾರದ ಈ ವಧಾಗಾರ  ಮುಚ್ಚಿರುವುದರಿಂದ ಹಲವು ಅಧಿಕೃತ ದನದ ವ್ಯಾಪಾರಿಗಳು ‘ಅಕ್ರಮ ದನದ ವ್ಯಾಪಾರಿ’ಗಳಾಗಿ ಪರಿವರ್ತನೆ ಹೊಂದಿ ಆರೋಪಿಗಳಾಗಿ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ.

    ದನ ಸಾಗಾಟವನ್ನೇ ಮಾಡದ, ಈವರೆಗೂ ಒಂದೇ ಒಂದು ಪ್ರಕರಣದಲ್ಲಿ ಆರೋಪಿಯಲ್ಲದ ‘ಮಾಂಸ ವರ್ತಕರ ಸಂಘ’ದ ಉಪಾಧ್ಯಕ್ಷ ಅಬ್ದುಲ್ ಖಾದರ್ ಅವರ ಪುತ್ರನನ್ನು ದನದ ಮಾಂಸ ಪತ್ತೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಖಾದರ್ ಪುತ್ರನ ವಿರುದ್ದ ಮೊದಲ ಬಾರಿ (ಸುಳ್ಳು?) ಪ್ರಕರಣ ದಾಖಲಾಗಿದ್ದರೂ ಅವರ ಮೇಲೆ ಕೋಕಾ ಕಾಯ್ದೆ ಹಾಕಲಾಗಿದೆ !  ಯಾವ ಸಂಘಟಿತ ಅಪರಾಧವನ್ನೂ ಮಾಡದ, ಮೊದಲ ಪ್ರಕರಣದಲ್ಲೇ ದನದ ವ್ಯಾಪಾರಿ ಎಂಬ ಒಂದೇ ಕಾರಣಕ್ಕೆ ಕೋಕಾ ಕಾಯ್ದೆ ಅಳವಡಿಸಿ ಜಾಮೀನು ಸಿಗದಂತೆ ಜೈಲಿನಲ್ಲಿ ಕೊಳೆಯುವಂತೆ ಮಾಡಿದ್ದು ‘ಸಿದ್ದರಾಮಯ್ಯರ ಕೋಮುವಾದದ ವಿರುದ್ಧ ಹೋರಾಟ’ವೇ ?

     ಮುಸ್ಲೀಮರ ವಿರುದ್ಧ ದ್ವೇಷ ಭಾಷಣ ಮಾಡಿದ್ದ 30 ಕ್ಕೂ ಹೆಚ್ಚು  ಪ್ರಕರಣಗಳಿಗೆ ಹೈಕೋರ್ಟ್​ ತಡೆಯಾಜ್ಞೆ ನೀಡಿದೆ. ಹೈಕೋರ್ಟ್​ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಜಾಮೀನು ಪಡೆಯುವುದು, ಜಾಮೀನು ನೀಡುವುದು ವ್ಯಕ್ತಿ ಮತ್ತು ನ್ಯಾಯಾಲಯದ ಸಂವಿಧಾನಿಕ ಹಕ್ಕು. ಆದರೆ, ಪ್ರಭಾಕರ ಭಟ್ ರೀತಿಯ ಹಲವು ಅಬಿಚ್ಯುವಲ್ ಅಫೆಂಡರ್ ಗಳು ಸುಲಭವಾಗಿ ಜಾಮೀನು ಪಡೆದುಕೊಂಡು ಧಕ್ಕಿಸಿಕೊಳ್ಳಬಾರದು ಎಂಬ ಕಾರಣಕ್ಕಾಗಿ ನಾವು ಒಂದು ಸಣ್ಣ ತಂಡವಾಗಿ ಹಲವು ದ್ವೇಷ ಭಾಷಣ ಪ್ರಕರಣಗಳ ಕಾನೂನು ಹೋರಾಟವನ್ನು ನಡೆಸುತ್ತಿದ್ದೇವೆ. ಸರ್ಕಾರ ಮಾಡಬೇಕಿರುವ ಕೆಲಸವಮ್ನು ನಮ್ಮ ತಂಡ ಒಂದು ರೂಪಾಯಿ ಖರ್ಚಿಲ್ಲದೆ ನಿಭಾಯಿಸುತ್ತಿದೆ. ಸಣ್ಣ ತಂಡಕ್ಕೆ ಸಾಧ್ಯವಾಗೋದು ಸಿದ್ದರಾಮಯ್ಯ ನೇತೃತ್ವದ ಘನ ಸರ್ಕಾರದಿಂದ ಯಾಕೆ ಸಾದ್ಯವಾಗಲಿಲ್ಲ ?

    ಈವರೆಗಿನ ಮುಖ್ಯಮಂತ್ರಿಗಳ  ಪೈಕಿ ಸಿದ್ದರಾಮಯ್ಯ ಉತ್ತಮರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಅವರು 2023-2026ರ ಅವಧಿಯ ಸರ್ಕಾರದಲ್ಲಿ ಕೋಮುವಾದದ ವಿರುದ್ಧ ಏನೇನೂ ಮಾಡಲಿಲ್ಲ ! ಬದಲಾಗಿ ಈ ಮೂರು ವರ್ಷದಲ್ಲಿ  ಕೋಮುವಾದ ಬೆಳೆಯಲು ಪೂರಕ ವಾತಾವರಣವನ್ನು ಅವರ ಆಡಳಿತ ವರ್ಗ ಸೃಷ್ಟಿಸಿತು. ಈಗಅಧಿಕಾರ  ಹೋದ ಬಳಿಕ ‘ಕೊನೆ ಉಸಿರು  ಇರುವವರೆಗೂ ಕೋಮುವಾದದ ವಿರುದ್ಧ ಹೋರಾಡುತ್ತೇನೆ’ ಎಂದುಹೇಳಿಕೆ ಕೊಟ್ಟರೆ ಏನು ಲಾಭ?

     

     

    ನವೀನ್ ಸೂರಿಂಜೆ

    Leave a Reply

    Your email address will not be published.