- ನವೀನ್ ಸೂರಿಂಜೆ

ರೈತರ ಭಾರೀ ವಿರೋಧಕ್ಕೆ ಕಾರಣವಾಗಿರುವ ‘ಬಿಡದಿ ಟೌನ್ ಶಿಪ್ ಭೂಸ್ವಾಧೀನ’ ವಿರುದ್ಧ ಕರ್ನಾಟಕ ರಾಜ್ಯ ಪ್ರಾಂತ್ಯ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ರೈತರ ಯಾವ ಪ್ರತಿಭಟನೆಯನ್ನೂ ಗಣನೆಗೆ ತೆಗೆದುಕೊಳ್ಳದೇ, ಭೂಸ್ವಾಧೀನ ಮಾಡಿಯೇ ಸಿದ್ದ ಎಂದರ್ಥದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿಕೆಗಳನ್ನುಕೊಡುತ್ತಿದ್ದಾರೆ. ರೈತರ ವಿರುದ್ಧ ಡಿ ಕೆ ಶಿವಕುಮಾರ್ ಯುದ್ಧ ಸಾರಿರುವಂತೆ ಮಾತನಾಡುತ್ತಿದ್ದಾರೆ.
ಬಿಡದಿ ಟೌನ್ ಶಿಪ್ ಯೋಜನೆ ಹೆಚ್ ಡಿ ಕುಮಾರಸ್ವಾಮಿಯವರ ರಿಯಲ್ ಎಸ್ಟೇಟ್ ಯೋಜನೆಯಾಗಿತ್ತು. 3 ಫೆಬ್ರವರಿ 2006 ರಿಂದ 8 ಅಕ್ಟೋಬರ್ 2007 ಮಧ್ಯೆ ಮುಖ್ಯಮಂತ್ರಿಯಾಗಿದ್ದ ಹೆಚ್ ಡಿ ಕುಮಾರಸ್ವಾಮಿಯುವರು ಇಂತದ್ದೊಂದು ರೈತ ವಿರೋಧಿ ರಿಯಲ್ ಎಸ್ಟೇಟ್ ಯೋಜನೆಯನ್ನು ಪ್ರಸ್ತಾಪಿಸಿದರು. ಅಂದು ಸಾತನೂರು ಶಾಸಕರಾಗಿದ್ದ ಡಿ ಕೆ ಶಿವಕುಮಾರ್ ಅವರು ಬಿಡದಿ ಟೌನ್ ಶಿಪ್ ಯೋಜನೆಯನ್ನು ವಿರೋಧಿಸಿದ್ದರು. ರೈತರ ಭೂಮಿಯನ್ನು ಸ್ವಾಧೀನಪಡಿಸಿದರೆ ರೈತರು ಚುನಾವಣೆಯಲ್ಲಿ ಹೇಗೆ ಬುದ್ದಿ ಕಲಿಸುತ್ತಾರೆ, ಭೂಸ್ವಾಧೀನ ಮಾಡಿದ ನಾನೇ ಹೇಗೆ ಎಲೆಕ್ಷನ್ನಲ್ಲಿ ಢಮಾರ್ ಆಗಿದ್ದೆ ಎಂದು ಖುದ್ದು ಡಿ ಕೆ ಶಿವಕುಮಾರ್ ಅವರೇ ಅಂದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರಿಗೆ ವಿವರಿಸಿದ್ದರು. ಬಿಡದಿ ಭೂಸ್ವಾಧೀನ ವಿರೋಧಿಸಿ 31 ಜುಲೈ 2007 ರಂದು ಸದನದಲ್ಲಿ ಡಿ ಕೆ ಶಿವಕುಮಾರ್ ಮಾಡಿದ ಭಾಷಣದ ಆಯ್ದ ಭಾಗ ಇಲ್ಲಿದೆ:
ಡಿ.ಕೆ.ಶಿವಕುಮಾರ್ (ಸಾತನೂರು ಶಾಸಕರು):
ಈ ಸರ್ಕಾರ ರೈತರ ಜಮೀನನ್ನು ತೆಗೆದುಕೊಳ್ಳಲು ಯಾವ ರೀತಿಯಾಗಿ ಪ್ರಯತ್ನ ಮಾಡುತ್ತಿದೆ ಎನ್ನುವ ಈಗಾಗಲೇ ಮಲ್ಲಿಕಾರ್ಜುನ ಖರ್ಗೆ ಸಾಹೇಬರು, ಸಿದ್ದರಾಮಯ್ಯನವರು ಮಾತನಾಡಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಎಷ್ಟು ಭೂಮಿಯನ್ನು ಕೈಗಾರಿಕೆಗಳಿಗೆ, ಟೌನ್‌ಶಿಪ್‌ಗಳಿಗೆ ಮತ್ತು SEZ ನಂತಹ ಅನೇಕ ಯೋಜನೆಗಳಿಗೆ ತೆಗೆದುಕೊಂಡಿದ್ದಾರೆ ಎಂದು ಬಹಳ ವಿಸ್ತಾರವಾಗಿ ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ಧೈರ್ಯಕ್ಕೆ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ. ಏಕೆಂದರೆ, ಈ ಸರ್ಕಾರ ಬಂದ ದಿನದಿಂದಲೂ ಪ್ರತಿ ಹಂತದಲ್ಲಿಯೂ ಕೂಡ ನಮ್ಮದು ರೈತರ ಸರ್ಕಾರ, ರೈತರ ಪರವಾಗಿ ನಿಂತುಕೊಳ್ಳುತ್ತೇವೆ, ರೈತರ ಒಂದು ಎಕರೆ ಭೂಮಿಯೂ ಹೋಗಲಿಕ್ಕೆ ಬಿಡುವುದಿಲ್ಲ ಎಂದು ಅನೇಕ ಸಂದರ್ಭಗಳಲ್ಲಿ ಮಾಡಿರುವ ಭಾಷಣಗಳನ್ನು ನಾವು ಕೇಳಿದ್ದೇವೆ. ಹಿಂದೆ ನಮ್ಮ ಸರ್ಕಾರವಿದ್ದಂಥ ಸಂದರ್ಭದಲ್ಲಿ, ಅರ್ಕಾವತಿ ಲೇಔಟ್‌ಗಾಗಿ ಮತ್ತು ಬೇರೆ ಬೇರೆ ಯೋಜನೆಗಳಿಗೆ ಮತ್ತು ಕೆಲವು ಇಂಡಸ್ಟಿಗಳಿಗೆ ಜಮೀನು notification ಮಾಡುವಂಥ ಸಂದರ್ಭದಲ್ಲಿ, ಮೈಸೂರಿನಲ್ಲಿ Infosysಗೆ ಜಮೀನನ್ನು ಕೊಟ್ಟಾಗ, ಬೆಂಗಳೂರಿನಲ್ಲಿ ಜಮೀನು ಕೊಡಬೇಕು ಎಂದು ಪ್ರಯತ್ನ ಪಟ್ಟಾಗ ಬೇಕಾದಷ್ಟು ಟೀಕೆ ಟಿಪ್ಪಣಿಗಳು ಬಂದವು. ರೈತರಿಂದ ಪ್ರತಿಭಟನೆಗಳು ನಡೆದವು. ಅದರ ಫಲವಾಗಿ ಈಗ ರೈತರ ಪರವಾಗಿರುವ ಒಂದು ಸರ್ಕಾರ ಬಂದಿದೆ ಎಂದು ಜನರು ಅಂದುಕೊಂಡಿದ್ದಾರೆ. ಈ ಸರ್ಕಾರ ಎಲ್ಲಾ ಸಂದರ್ಭದಲ್ಲೂ ರೈತರ ಪರವಾಗಿ ನಿಲ್ಲುತ್ತದೆ ಎಂದು ಹೇಳುತ್ತಿದ್ದಾರೆ. ಜನ ಈ ಸರ್ಕಾರದ ಮೇಲೆ ಇಷ್ಟು ಅಪೇಕ್ಷೆಯನ್ನಿಟ್ಟುಕೊಂಡಿರುವಂತಹ ಸಂದರ್ಭದಲ್ಲಿ ಈ ರೀತಿ ರೈತರ ಜಮೀನನ್ನು ತೆಗೆದುಕೊಳ್ಳಲು ಹೊರಟಿದ್ದೀರಿ. ಬೆಂಗಳೂರು ಮತ್ತು ಬೆಂಗಳೂರು ನಗರ ಜಿಲ್ಲೆಯಲ್ಲಿ 1,50,000 ಎಕರೆ ಅಥವಾ 1,60,000 ಎಕರೆ ಜಮೀನನ್ನು ನೀವು ಭೂಸ್ವಾಧೀನ ಮಾಡಿಬಿಟ್ಟಿದ್ದೀರಿ ಎಂದು ಹೇಳಲಿಕ್ಕೆ ನಾನು ತಯಾರಿಲ್ಲ. ಆದರೆ, ಈ ಸರ್ಕಾರದ ಚಿಂತನೆ ಆ ರೀತಿ ಇದೆ.
ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾದ ಮೇಲೆ ಬರೀ ಟೌನ್‌ಶಿಪ್‌ಗೋಸ್ಕರ ಹಳ್ಳಿಗಳನ್ನು ನಿಗದಿ ಮಾಡಿ, ಉಪನಗರ ನಿರ್ಮಾಣಕ್ಕೋಸ್ಕರ ಹೊಸಕೋಟೆಯಲ್ಲಿ, ರಾಮನಗರದಲ್ಲಿ, ರಾಮನಗರದ ಕಸಬಾ, ಬಿಡದಿಯಲ್ಲಿ, ಸೋಲೂರಿನಲ್ಲಿ, ಸಾತನೂರಿನಲ್ಲಿ ಸುಮಾರು 6,961 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡು ಟೌನ್‌ಶಿಪ್ ಮಾಡಬೇಕು ಎಂದು ಚಿಂತನೆಯನ್ನು ನಡೆಸಿದ್ದೀರಿ. ಇದರಲ್ಲಿ ಸರ್ಕಾರದ ಭೂಮಿ 21 ಸಾವಿರ ಇದೆ, ಖಾಸಗಿ ಭೂಮಿ 39 ಸಾವಿರ ಎಕರೆ ಇದೆ. ಜೊತೆಗೆ,
ಕೈಗಾರಿಕಾ ಪ್ರದೇಶದ ಸ್ಥಾಪನೆಗೋಸ್ಕರ K.I.A.D.Bಯವರು ಮುಂದಿನ 25 ವರ್ಷದ ಬಗ್ಗೆ ಯೋಜನೆ ರೂಪಿಸಿ, ಏನಾದರೂ ಮಾಡಬೇಕೆಂದು ಹೇಳಿ, ಅನೇಕ ಹಳ್ಳಿಗಳನ್ನು ಗುರುತು ಮಾಡಿ, ಬೆಂಗಳೂರು ಉತ್ತರದಲ್ಲಿ, ಕನಕಪುರದಲ್ಲಿ, ಮಾಗಡಿಯಲ್ಲಿ, ನೆಲಮಂಗಲದಲ್ಲಿ, ಆನೇಕಲ್ಲುಗಳಲ್ಲಿ 57,334 ಎಕರೆ ಜಮೀನನ್ನು ಭೂಸ್ವಾಧೀನ ಮಾಡಬೇಕು ಎಂದು 28(1) ಭೂಸ್ವಾಧೀನ ಪ್ರಸ್ತಾವನೆ ಕಳುಹಿಸಿರುವಂತಹ ದಾಖಲೆ ನಮ್ಮ ಹತ್ತಿರ ಇದೆ.
ಮೂಲಭೂತವಾಗಿ, ಈ ಸರ್ಕಾರ ಅಧಿಕಾರಕ್ಕೆ ಬಂದದ್ದು, ‘ನಾವು ರೈತರನ್ನು ರಕ್ಷಣೆ ಮಾಡುತ್ತೇವೆ’ ಎನ್ನುವ ವಿಚಾರದಿಂದ. ಹಿಂದೆ ಅನೇಕ ಸಂದರ್ಭಗಳಲ್ಲಿ B.M.I.C ಬಗ್ಗೆ ವಾದ ಬಂದಂತಹ ಸಂದರ್ಭದಲ್ಲಿ, ರೈತನನ್ನು ಉಳಿಸಿಕೊಳ್ಳಬೇಕು, ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ನೀವು ವಾದ ಮಾಡುತ್ತಿದ್ದಿರಲ್ಲ, ಆ ವಾದಕ್ಕೂ ಈ ವಾದಕ್ಕೂ ಎಷ್ಟು ಬದಲಾವಣೆಯಾಗಿದೆ ಎನ್ನುವುದನ್ನು ನೀವು ಗಮನಿಸಿ. ಉದಾಹರಣೆಗೆ ಟೌನ್‌ಶಿಪ್ ವಿಷಯಕ್ಕೆ ಬರೋಣ. ಟೌನ್‌ಶಿಪ್‌ಗೆ ನಿಗದಿ ಮಾಡಿದಂಥ ಜಮೀನಿನ ಬೆಲೆ ಒಂದು ಎಕರೆಗೆ ಸುಮಾರು 30 ಲಕ್ಷ, 40 ಲಕ್ಷ, 50 ಲಕ್ಷ, ಕೋಟಿ ಕೋಟಿ ರೂಪಾಯಿಗಳಿಗೆ ಹೋಗಿರುವಂಥ ಸಂದರ್ಭದಲ್ಲಿ ಅಲ್ಲಿ ನೀವು ಜಾಗವನ್ನು ಆಯ್ಕೆ ಮಾಡಿದ್ದು ಯಾಕೆ? ನೀವು ರೆವಿನ್ಯೂ ಇಲಾಖೆಯವರನ್ನು ಕೇಳಿದ್ದೀರಿ. B.M.R.D.A. ಯವರನ್ನು ಕೇಳಿದ್ದೀರಿ. ರೆವಿನ್ಯೂ ಇಲಾಖೆಯ ಜಾಮ್‌ದಾರ್‌ರವರು ಏನು ಹೇಳಿದ್ದಾರೆ? ಅವರು ರೆವಿನ್ಯೂ ಇಲಾಖೆಯಿಂದ ಏನು ಪತ್ರ ಬರೆದಿದ್ದಾರೆ?
ನನಗೆ ತಿಳಿದ ಹಾಗೆ, ಮುಂದಿನ 10-15 ವರ್ಷಗಳಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಕುಡಿಯುವ ನೀರಿಗಾಗಿ ಒಂದು ದೊಡ್ಡ ಯುದ್ಧ ನಡೆಯುತ್ತದೆ. ಕುಡಿಯುವ ನೀರಿಗೇ ದೊಡ್ಡ ಸಮಸ್ಯೆ ಬರುತ್ತದೆ. ನಾವು BIA.P (Bangalore International Airport Project) ಮಾಡುವಂಥ ಸಂದರ್ಭದಲ್ಲಿ, ‘Airport ಪಕ್ಕದಲ್ಲಿ 3-4 ಸಾವಿರ ಎಕರೆಯನ್ನು ಮಾತ್ರ residential, commercial ಎಂದು propose ಮಾಡಿದ್ದೀರಲ್ಲ, ಉಳಿದ ಜಾಗದ ಪರಿಸ್ಥಿತಿ ಏನು?’ ಎಂದು ನಾನು ನಗರಾಭಿವೃದ್ದಿ ಸಚಿವನಾಗಿದ್ದ final notification ಮಾಡುವಂಥ ಸಂದರ್ಭದಲ್ಲಿ ಕೇಳಿದಾಗ ಅನೇಕ ಅಧಿಕಾರಿಗಳು, ‘ಇದು ಸಾಧ್ಯವೇ ಇಲ್ಲ, ಅಲ್ಲಿಗೆ ನೀರು ತೆಗೆದುಕೊಂಡು ಹೋಗಲು ಆಗುವುದಿಲ್ಲ, ನೀರು ಕೊಡುವುದಕ್ಕೆ ಆಗುವುದಿಲ್ಲ, sewerage problem ಆಗುತ್ತದೆ, ಅದಕ್ಕೆ ಅವಕಾಶ ಕೊಡುವುದಿಕ್ಕೆ ಆಗುವುದಿಲ್ಲ’ ಎಂದು ಹೇಳಿದ್ದರಿಂದ ಉಳಿದ ಎಲ್ಲ areaಗಳನ್ನು ನಾವು green zone ಆಗಿ ಇಟ್ಟೆವು. ಅದು agriculture zone, ಅಲ್ಲಿ airport ಒಂದು ಬಿಟ್ಟು ಬೇರೆ ಏನೂ ಅಭಿವೃದ್ಧಿಯಾಗಬಾರದು, ಆ 4,400 ಎಕರೆಯನ್ನು ಬಿಟ್ಟು ಉಳಿದ ಜಮೀನನ್ನೆಲ್ಲ ಹಾಗೆ ಹಸಿರಾಗಿ ಇಡಬೇಕು ಎಂದು ನಾವು ತೀರ್ಮಾನ ಮಾಡಿದೆವು. ಆದರೆ ತಾವು ಬಂದ ತಕ್ಷಣ ಏನು ಮಾಡಿದಿರಿ? ಬರೀ acquisition ಪ್ರಾರಂಭ ಮಾಡಿದಿರಿ. Airport ಪಕ್ಕವೇ industries component ಎಂದು ಹೇಳಿ hardware park ಮಾಡಿ, ಎಲ್ಲಿ ಏನು ಮಾಡಬಾರದು ಎಂದು ನಿಗದಿಯಾಗಿತ್ತೋ ಆ ಜಾಗವನ್ನು ನಿಮ್ಮ ಕೈಗಾರಿಕಾ ಇಲಾಖೆಯವರು notification ಅನ್ನು ನಿಮ್ಮ ಕ್ಷೇತ್ರದಲ್ಲೇ ಮಾಡಿದ್ದಾರೆ.
ಮುಖ್ಯಮಂತ್ರಿಗಳ ಧೈರ್ಯವನ್ನು ಮೆಚ್ಚುತ್ತೇನೆ ಎಂದು ನಾನು ಏಕೆ ಹೇಳಿದೆ ಎಂದರೆ, ನನ್ನ ಕ್ಷೇತ್ರದಲ್ಲಿ ಕಬ್ಬಾಳಮ್ಮ ದೇವಸ್ಥಾನ ಎನ್ನುವ ಒಂದು ದೇವಸ್ಥಾನವಿದೆ. ಭಕ್ತರಿಗೆ, ಊರಿನ ಜನರಿಗೆ ಅನುಕೂಲವಾಗಲಿ ಎಂದಿ ಕೆಲವು ಎಕರೆ ರೈತರ ಭೂಮಿಯನ್ನು ಭೂಸ್ವಾಧೀನ ಮಾಡಲು ಪ್ರಯತ್ನ ಪಟ್ಟೆ. ಅದೇ ರೀತಿ ಕೋಡಂಬಳ್ಳಿ ಎಂಬ ಊರಿನ ರಸ್ತೆಯನ್ನು ಅಗಲ ಮಾಡಬೇಕು ಎಂದು ಹೇಳಿ, ರಸ್ತೆ ಬದಿಯಲ್ಲಿದ್ದ ಮನೆಗಳನ್ನು ತೆರವು ಮಾಡಿ 10-12 ಅಡಿ ರಸ್ತೆ ಅಗಲ ಮಾಡಲು ಪ್ರಯತ್ನ ಪಟ್ಟೆ. ನಂತರ ಚುನಾವಣೆ ನಡೆಯಿತು. ಆ ಊರಿನಲ್ಲಿ ಜನ ನನಗೆ ಓಟು ಹಾಕುತ್ತಿದ್ದರು. ಆದರೆ ಮುಂದಿನ ಎಲೆಕ್ಷನ್ ನಲ್ಲಿ ಢಮಾರ್ ಎಂದು ಹೋದೆ. ನಾನು ನಿಲ್ಲಿಸಿದ್ದ ನನ್ನ ಪಕ್ಷದ ಅಭ್ಯರ್ಥಿಗೆ ನೂರು ಚಿಲ್ಲರೆ ಓಟುಗಳು, ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ನಾಲ್ಕು ನೂರಕ್ಕೂ ಅಧಿಕ ಓಟುಗಳು ಬಂದವು. ನಾನು ಭೂಸ್ವಾಧೀನ ಮಾಡಲು ಆರಂಭಿಸಿದ್ದಕ್ಕೆ ಹೀಗಾಯಿತು. ಕೋಡಂಬಳ್ಳಿಯಲ್ಲೂ ಅದೇ ಪರಿಸ್ಥಿತಿಯಾಯಿತು. ಎಲ್ಲಾ ಕಡೆಯಲ್ಲೂ ಗೆದ್ದಿದ್ದೇನೆ, ಆದರೆ ಆ ಪಂಚಾಯಿತಿಯಲ್ಲಿ ಮಾತ್ರ ನಾನು ಢಮಾರ್ ಆದೆ. ಆದರೆ ಮುಖ್ಯಮಂತ್ರಿಗಳು ತಮ್ಮ ಕ್ಷೇತ್ರದಲ್ಲಿ 25 ಸಾವಿರ ಎಕರೆಯ ಭೂಸ್ವಾಧೀನ ಪ್ರಸ್ತಾಪ ಮಾಡಿದ್ದಾರೆ, ನಿಜವಾಗಿಯೂ ಈ ಸಂದರ್ಭದಲ್ಲಿ ಅವರ ಧೈರ್ಯಕ್ಕೆ ನಾನು ಅಭಿನಂದನೆ ಸಲ್ಲಿಸದೇ ಹೋದರೆ ತಪ್ಪಾಗುತ್ತದೆ.
ಈಗಾಗಲೇ ರಾಜ್ಯದಲ್ಲಿ ಟೌನ್ ಶಿಪ್ ಗಳು ಬೆಳೆಯುತ್ತಿವೆ. ನೀರಿನ ಸಮಸ್ಯೆ ಆಗುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಿಡದಿ ಟೌನ್ಶಿಪ್ ಪ್ರಾರಂಭ ಮಾಡಿದ್ದಾರೆ. ನಾವು notification ಹೊರಡಿಸಿಲ್ಲವೆಂದು ಹೇಳುತ್ತಾರೆ. Notification ಮಾಡಿಲ್ಲ, area ಹಳ್ಳಿಗಳನ್ನು ನಿಗದಿ ಮಾಡಿದ್ದೀರಿ, ಒಂದು ಹೊಸ ಮಾದರಿಯ ಪರಿಹಾರ ಪ್ಯಾಕೇಜ್ ಕೊಟ್ಟಿದ್ದೀರಿ. ಆದರೆ, ಇಡೀ ಊರಿಗೆ ಊರನ್ನೇ ಭೂಸ್ವಾಧೀನ ಮಾಡಿ ಯಾವ ಪರಿಹಾರ ಕೊಟ್ಟರೆ ಏನು ? ರೈತರನ್ನು ಅವರ ಭೂಮಿಯಿಂದ displace ಮಾಡಿ, ಅವರಿಗೆ ಬೇರೆ ಕಡೆ ಮನೆ ಕಟ್ಟಿಕೊಟ್ರೆ ಏನರ್ಥ ? ಮನುಷ್ಯನಿಗೂ ಭೂಮಿಗೂ ಅಪಾರವಾದ ಸಂಬಂಧವಿದೆ. ನಾವು ಹುಟ್ಟಿದ ಮೇಲೆ ನಾವು ಬೇಡವೆಂದರೂ ಭೂಮಿ ನಮ್ಮನ್ನು ಬಿಡುವುದಿಲ್ಲ. ಕೊನೆಗೆ ನಾವು ಸತ್ತ ಮೇಲೆ ಆ ಭೂಮಿಗೇ ನಾವು ಹೋಗಬೇಕು. ಭೂಮಿ ಮೇಲೆ ಅಂಥ ಒಂದು ಅಪಾರವಾದ ಸಂಬಂಧ ಮನುಷ್ಯನಿಗೆ ಹುಟ್ಟಿನಿಂದ ಬಂದಿದೆ. ಭೂಮಿಯನ್ನು ಕರೆಯುವಾಗ ನಾವು ಭೂಮಿ ತಾಯಿ ಎಂದು ಹೇಳುತ್ತೇವೆ. BMRDA ಇಲಾಖೆಯವರು ಯಾವ ರೀತಿಯ ಆದೇಶ ಹೊರಡಿಸಿದ್ದಾರೆ ಎಂದರೆ, ಇಡೀ ಊರು ತನ್ನಲ್ಲಿರುವ ದೇವಸ್ಥಾನ, ಬದುಕು, ಸಂಸ್ಕೃತಿಯನ್ನು ಬಿಟ್ಟು, ಹಳೆಯ ಮನೆಗಳೆಲ್ಲ ಖಾಲಿ ಮಾಡಿಕೊಂಡು ಹೋಗಬೇಕು. ಹೀಗೆ ಮನೆ ಖಾಲಿ ಮಾಡಿದವರಿಗೆ Housing Board ಮೂಲಕ ಯಾವುದೋ ಒಂದು ಪ್ರದೇಶದಲ್ಲಿ ಒಂದಿಷ್ಟು ಮನೆಯನ್ನು ಹಂಚಲಾಗುತ್ತದೆ. 2-3 ಶತಮಾನಗಳಿಂದ ಬದುಕಿ ಬಾಳಿದಂತಹ ಮನೆಗಳನ್ನು ಖಾಲಿ ಮಾಡಿಕೊಂಡು ಬೇರೆ ಕಡೆ ಹೋಗಿ ಅಂದರೆ ಹೇಗೆ ? ಈ ಸರ್ಕಾರದಲ್ಲಿ ಒಂದು ವ್ಯವಸ್ಥೆ ಏಕೆ ಬಂತೋ? ಏಕೆ ಈ ತರಹ ಚಿಂತನೆಯನ್ನು ಮಾಡುತ್ತಿದ್ದಾರೆ? ಎಂಬುದು ನನಗಂತೂ ಅರ್ಥವಾಗುತ್ತಿಲ್ಲ. ಈ ಸರ್ಕಾರಕ್ಕೆ ಸೂಕ್ತ ಉತ್ತರವನ್ನು ಜನರೇ ಕೊಡುತ್ತಾರೆ.
ಇಲ್ಲಿ ಸರ್ಕಾರವೇ ಒಂದು ರಿಯಲ್ ಎಸ್ಟೇಟ್ ಕಂಪನಿ ರೀತಿಯಲ್ಲಿ ದಲ್ಲಾಳಿ ಕೆಲಸವನ್ನು ಮಾಡುತ್ತಿದೆ. ರೈತರೆಂದರೇನು? ರೈತನ ಜಮೀನು ಅಂದರೆ ಏನು? ಈ ರೈತ ಈ ಭೂಮಿಯಲ್ಲಿ ಹುಟ್ಟಿ ಸಮಾಜಕ್ಕೆ ಯಾವ ರೀತಿಯಾಗಿ ತ್ಯಾಗ ಮಾಡುತ್ತಿದ್ದಾನೆ? ಭೂಮಿಯಲ್ಲಿ ಅವನ ಒಡೆತನ ಏನು? ಎಂಬುದು ನಮಗೆ ಅರ್ಥವಾಗಬೇಕು. ಇದು ರೈತನ ಸ್ವಾಭಿಮಾನದ ಪ್ರಶ್ನೆ. ಬೆಂಗಳೂರು ಸುತ್ತಮುತ್ತ ಇರುವಂಥ ರೈತರ ಜಮೀನು ರಿಯಲ್ ಎಸ್ಟೇಟ್ ವ್ಯಾಪಾರಕ್ಕಿಲ್ಲ. ಟೌನ್ ಶಿಪ್ ಘೋಷಣೆ ಆಗ್ತಿದ್ದಂತೆ ನಮ್ಮ ಸ್ನೇಹಿತ ರಿಯಲ್ ಎಸ್ಟೇಟ್ ಏಜೆಂಟ್ ಗಳು ಬಿಡದಿ, ಸಾತನೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಅದಕ್ಕೆ ಸರ್ಕಾರ ಅವಕಾಶ ಮಾಡಿಕೊಡಕೂಡದು. ನಮ್ಮ ರೈತನ ಭೂಮಿಯನ್ನೂ, ಸ್ವಾಭಿಮಾನವನ್ನೂ ಕಾಪಾಡಲು ಈ ಸರ್ಕಾರ ಬದ್ಧವಾಗಬೇಕು. ನಮ್ಮದು ರೈತರ ಪರಸರ್ಕಾರ ಎಂದು ನೀಡಿದ್ದ ವಚನವನ್ನು ಈ ಸರ್ಕಾರ ಉಳಿಸಿಕೊಳ್ಳಬೇಕು.
(31 ಜುಲೈ 2007 ರಂದು ಸದನದಲ್ಲಿ ಡಿ ಕೆ ಶಿವಕುಮಾರ್ ಅವರು ಮಾಡಿದ ಧೀರ್ಘ ಭಾಷಣದ ಆಯ್ದ ಭಾಗ ಮಾತ್ರವಾಗಿದೆ. ಅವರ ಭಾಷಣದ ಸಾರಾಂಶವನ್ನು ಅರ್ಥ ವ್ಯತ್ಯಾಸವಾದಂತೆ, ಓದುಗರಿಗೆ ಅರ್ಥವಾಗುವಂತೆ ವಿಧಾನಸಭೆಯ ಕಡತದಿಂದ ಅಕ್ಷರ ರೂಪಕ್ಕೆ ಇಳಿಸಲಾಗಿದೆ – ನವೀನ್ ಸೂರಿಂಜೆ)

ನವೀನ್ ಸೂರಿಂಜೆ
Leave a Reply